ಕರ್ನಾಟಕದಲ್ಲಿ ದೇಶದಲ್ಲೇ ಮೊದಲ ಬಾರಿ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ

10 months ago

ಮಂಗಳೂರು: ರಾಜ್ಯ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿರುವ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿನ ಕೋಮು ಹಿಂಸಾಚಾರವನ್ನು ಹತ್ತಿಕ್ಕಲು ದೇಶದಲ್ಲೇ ಮೊದಲ ಬಾರಿಗೆ ಕೋಮು ಹಿಂಸೆ ನಿಗ್ರಹ ವಿಶೇಷ ಕಾರ್ಯಪಡೆ ಅಸ್ತಿತ್ವಕ್ಕೆ ಬಂದಿದೆ.

ಕರಾವಳಿ ಹಾಗೂ ಮಲೆನಾಡಿನ ಮೂರು ಜಿಲ್ಲೆಗಳಿಗೆ ಸೀಮಿತವಾಗಿ ರಚನೆಯಾಗಿರುವ ಈ ಕಾರ್ಯಪಡೆಯನ್ನು ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಇಡೀ ರಾಜ್ಯಕ್ಕೆ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ.

ಇಲ್ಲಿಯವರೆಗೆ ನಕ್ಸಲ್ ನಿಗ್ರಹ ಪಡೆಯಲ್ಲಿ ಕೆಲಸ ಮಾಡುತ್ತಿದ್ದ 656 ಸಿಬ್ಬಂದಿ ಪೈಕಿ 248 ಸಿಬ್ಬಂದಿಯನ್ನು ಈ ಕಾರ್ಯಪಡೆಗೆ ನಿಯೋಜಿಸಲಾಗಿದೆ. ಡಿಐಜಿ, ಡಿವೈಎಸ್ಪಿ, ಸಹಾಯಕ ಕಮಾಂಡೆಂಟ್, 4 ಇನ್ಸ್ ಸ್ಪೆಕ್ಟರ್, 16 ಪಿಎಸ್ಐ ಸೇರಿದಂತೆ ಒಟ್ಟು 248 ಸಿಬ್ಬಂದಿ ತಂಡದಲ್ಲಿದ್ದಾರೆ.

ಈ ತಂಡ ಸಂಭಾವ್ಯ ಕೋಮು ಹಿಂಸಾಚಾರ, ಕೋಮು ಗಲಭೆಯ ಸಂಚು, ಮೂಲಭೂತವಾದಿ ಚಟುವಟಿಕೆ ನಿಗ್ರಹ ಸೇರಿದಂತೆ ಗುಪ್ತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಲಿದೆ. ಆ ಮೂಲಕ ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ನಡೆಯುವ ಚಟುವಟುಕೆಗಳ ಮೇಲೂ ನಿಗಾ ವಹಿಸಲಿದೆ.

ಶಾಂತಿಯ ಸಂಕೇತವಾದ ಪಾರಿವಾಳದ ಚಿಹ್ನೆಯನ್ನೊಳಗೊಂಡ ವಿಶೇಷ ಕಾರ್ಯಪಡೆ ಲಾಂಛನ ಹಾಗೂ ಕೈಪಿಡಿ ಬಿಡುಗಡೆಗೊಳಿಸುವ ಮೂಲಕ ಗೃಹ ಸಚಿವ ಡಾ.ಪರಮೇಶ್ವರ್ ಕಾರ್ಯಪಡೆಗೆ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಆರು ತಿಂಗಳ ಹಿಂದೆ ಮಂಗಳೂರಿನಲ್ಲಿ ಒಂದು ಕೊಲೆಯಾಗಿತ್ತು. ಇದರಿಂದ ಸ್ವಾಭಾವಿಕವಾಗಿ ಆತಂಕ, ಭಯದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಆ ವೇಳೆ ಶಾಂತಿ ಸಹಬಾಳ್ವೆಯ ಪರಿಸ್ಥಿತಿಯನ್ನು ನಾನು ನೋಡಲೇ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಲೆ, ಸಂಸ್ಕೃತಿ, ಸಾಹಿತ್ಯ ಉಳಿಸುವಲ್ಲಿ ಕರಾವಳಿ ಜಿಲ್ಲೆಗಳ ಕೊಡುಗೆ ಅಪಾರವಾಗಿದೆ.  ರಾಜ್ಯದಲ್ಲೇ ಮೊದಲ ಖಾಸಗಿ ವೈದ್ಯಕೀಯ ಕಾಲೇಜುಗಳು ಮಂಗಳೂರಿನಲ್ಲಿ ಆರಂಭಿಸಲಾಗಿತ್ತು. ನಾಡಿನ ಅಭಿವೃದ್ಧಿಯಲ್ಲೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಆದರೆ ಕೋಮು ಸಂಘರ್ಷದ ಮೂಲಕ ಈ ಖ್ಯಾತಿಗೆ ಚ್ಯುತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಹಿಂದೆ ಮಂಗಳೂರಿನಲ್ಲಿ ಕೊಲೆಯಾಗಿದ್ದಾಗ ಇರುವ ಸಿಬ್ಬಂದಿಗಳನ್ನೇ ಬಳಸಿಕೊಂಡು ಆಗಿನ ಪೊಲಿಸ್ ಆಯುಕ್ತರು ವಿಶೇಷ ಕಾರ್ಯಪಡೆ ರಚನೆ ಮಾಡಿದ್ದರು. ಇದರಿಂದ ಸ್ಪೂರ್ತಿ ಪಡೆದು ಈಗ ಹೊಸದಾಗಿ ಸುಸಜ್ಜಿತ ಕಾರ್ಯಪಡೆ ರಚನೆ ಮಾಡಲಾಗಿದೆ ಎಂದರು.

ಮಂಗಳೂರಿನಲ್ಲಿ ಸಾಮರಸ್ಯ ಹಾಳಾಗಿದೆ. ಇದನ್ನು ಬಾಯಿ ಮಾತಿನಲ್ಲಿ ಸರಿಪಡಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ವಿಶೇಷ ಕಾರ್ಯಪಡೆ ರಚಿಸುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆ ನಿಂತು ಹೋಗಿವೆ. ಹೀಗಾಗಿ ಅದಕ್ಕಾಗಿ ರಚನೆಯಾಗಿದ್ದ ವಿಶೇಷ ಕಾರ್ಯಪಡೆ ರದ್ದುಗೊಳಿಸಲು ಚರ್ಚೆಯಾಗುತ್ತಿತ್ತು. ಆ ಪಡೆಯಲ್ಲಿ ಕೆಲಸ ಮಾಡಿದವರಿಗೆ ಯುದ್ಧ ಕೌಶಲ್ಯ ಹಾಗೂ ಮಾಹಿತಿ ಸಂಗ್ರಹ ಸೇರಿದಂತೆ ಹಲವು ರೀತಿಯ ತರಬೇತಿಗಳನ್ನು ನೀಡಲಾಗಿತ್ತು. ಅದನ್ನು ಬಳಸಿಕೊಂಡು ಕೋಮು ಹಿಂಸೆ ನಿಗ್ರಹ ಪಡೆ ರಚಿಸಲು ನಿರ್ಧರಿಸಲಾಯಿತು. ಇದು ದೇಶದಲ್ಲೇ ಮೊದಲ ಉಪಕ್ರಮ ಎಂದರು.

ಕೋಮುವಾದ ವಿಚಾರಧಾರೆಗಳನ್ನು ಪ್ರಚೋದಿಸುವುದು, ದ್ವೇಷದ ಭಾಷಣ ಮಾಡಿ ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವುದು, ಕಲುಷಿತ ವಾತಾವರಣ ನಿರ್ಮಿಸಿ ಸಹೋದರತ್ವ ಹಾಳು ಮಾಡುವ ವ್ಯಕ್ತಿಗಳು ಹಾಗೂ ಸಂಘಟನೆಗಳನ್ನು ಹತ್ತಿಕ್ಕುವ ಅಧಿಕಾರವನ್ನು ವಿಶೇಷ ಪಡೆಗೆ ನೀಡಲಾಗುವುದು. ಇವರಿಗೆ ಬೇರೆ ಯಾವುದೇ ಕೆಲಸ ಇಲ್ಲ. ಶಾಂತಿ ಕಾಪಾಡುವುದು ಪ್ರಮುಖ ಧ್ಯೇಯ ಎಂದರು.

ಈ ಕಾರ್ಯಪಡೆ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ತಮಗಿದೆ. ಈವರೆಗೂ ಒಳ್ಳೊಳ್ಳೆಯ ಮಾತುಗಳನ್ನಾಡಿ ಮೃದು ಧೋರಣೆಯಲ್ಲಿ ತಿಳಿ ಹೇಳುವ ಪ್ರಯತ್ನ ಮಾಡಿದ್ದೆವು. ಅದು ಅವರಿಗೆ ಮನವರಿಕೆಯಾಗಿಲ್ಲ. ಹೀಗಾಗಿ ಬಲಪ್ರಯೋಗ ಅನಿವಾರ್ಯವಾಗಿದೆ. ಮಂಗಳೂರಿನ ಜನ ಈ ಪಡೆಗೆ ಹೆಚ್ಚಿನ ಕೆಲಸ ಕೊಡದಂತೆ ಸ್ವಯಂ ಪ್ರೇರಿತವಾಗಿ ಸೌಹಾರ್ದತೆ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಒಂದು ವೇಳೆ ನಿಮ್ಮ ಪ್ರವೃತ್ತಿಯನ್ನು ಮುಂದುವರೆಸಿದರೆ ಕಾರ್ಯಪಡೆಯ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಶಾಂತಿ ಮರುಸ್ಥಾಪನೆಗೆ ಎಲ್ಲರ ಸಹಕಾರ ಬೇಕು. 2023ರ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ಸಿದ್ಧಗೊಳಿಸುವಾಗ ತಾವು ಮಂಗಳೂರಿಗೆ ಬಂದು ವಿವಿಧ ಸಂಘಟನೆಗಳ ಜೊತೆ ಚರ್ಚೆ ನಡೆಸಿದ್ದು, ಕಾನೂನು ಸುವ್ಯವಸ್ಥೆ ಕಾರಣಕ್ಕೆ ಬಂಡವಾಳ ಹೂಡಿಕೆ ಮಾಡಲು ಹಿಂದೇಟು ಹಾಕುವಂತಹ ವಾತಾವರಣವಿದೆ. ಮಕ್ಕಳನ್ನು ಇಲ್ಲಿ ಓದಿಸಲಾಗುತ್ತಿಲ್ಲ. ಬೆಂಗಳೂರಿಗೆ ಕಳುಹಿಸಬೇಕಾದ ಪರಿಸ್ಥಿತಿಯಿದೆ. ಇಲ್ಲಿ ಶಾಂತಿಪಾಲನೆಗೆ ಆದ್ಯತೆ ನೀಡಿ ಎಂದು ಜನ ಮನವಿ ಮಾಡಿದರು ಎಂದು ಸ್ಮರಿಸಿದರು.

ಈ ಪಡೆಯ ಬಗ್ಗೆ ಅನೇಕ ಜನ ಟೀಕೆ ಮಾಡುತ್ತಾರೆ. ಪಡೆಯ ಅಗತ್ಯವಿತ್ತು. ಕರಾವಳಿಯಲ್ಲಿ ಶಾಂತಿ ನೆಲೆಸಿದರೆ ರಾಜ್ಯದಲ್ಲೂ ಶಾಂತಿಯ ವಾತಾವರಣ ಇರುತ್ತದೆ. ಅಗತ್ಯಬಿದ್ದರೆ ವಿಶೇಷಪಡೆಯ ಸಂಖ್ಯೆಯನ್ನು ಹೆಚ್ಚು ಮಾಡಲಾಗುವುದು. ಧರ್ಮ ಹಾಗೂ ಜಾತಿಯ ಹೆಸರಿನಲ್ಲಿ ಭೇದಭಾವ ಹಾಗೂ ಹಿಂಸೆ ಮಾಡುವವರು ಸಂವಿಧಾನ ವಿರೋಧಿಗಳು. ಇದನ್ನು ತಮ ಸರ್ಕಾರ ಸಹಿಸುವುದಿಲ್ಲ. ಅಗತ್ಯಬಿದ್ದರೆ ಈ ಕಾರ್ಯಪಡೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ತಮ್ಮ ಸರ್ಕಾರ ಸಿದ್ಧವಿದೆ ಎಂದರು.

Leave a Reply