ಬೆಂಗಳೂರು: ಜನರ ಪ್ರಾಣ ಉಳಿಸುವ ಉದ್ದೇಶದಿಂದ ಸರ್ಕಾರ ತೆಗೆದುಕೊಂಡಿರುವ ಲಾಕ್ ಡೌನ್ ನಿರ್ಧಾರಕ್ಕೆ ಕಾಂಗ್ರೆಸ್ ಪಕ್ಷದ ಪೂರ್ಣ ಬೆಂಬಲವಿದೆ. ಆದರೆ, ಸರ್ಕಾರ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, 10 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುತ್ತೇವೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಹೇಳಿದರು.
ರಾಜ್ಯ ಸರ್ಕಾರ ಮೇ 10ರಿಂದ 15 ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರ ನಂಜಯ್ಯನ ಮಠ ಮತ್ತು ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರೊಂದಿಗೆ ಸುದ್ದಿ ಗೋಷ್ಠಿ ನಡೆಸಿದ ಉಗ್ರಪ್ಪ 10 ಬೇಡಿಕೆಗಳನ್ನು ಇಟ್ಟರು. 1. ಬಡವರಿಗೆ ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಆಹಾರ ಪೂರೈಸಬೇಕು 2. ಲಾಕ್ ಡೌನ್ ಅವಧಿಯಲ್ಲಿ ಬಡ ಕೂಲಿಕಾರ್ಮಿಕರಿಗೆ ಒಂದು ಬಾರಿ ಪ್ರತಿ ಕುಟುಂಬಕ್ಕೆ 5,000 ರೂ.ಗಳನ್ನು ನೀಡಬೇಕು. 3 ಸರ್ಕಾರ ಎಲ್ಲರಿಗೂ ಉಚಿತವಾಗಿ ಯುದ್ಧೋಪಾದಿಯಲ್ಲಿ ವ್ಯಾಕ್ಸಿನ್ ನೀಡಬೇಕು. 4. ಎಲ್ಲ ಕೊರೊನಾ ರೋಗಿಗಳಿಗೆ ಉಚಿತವಾಗಿ ಆಕ್ಸಿಜನ್ ಕೊಡಬೇಕು, ಉಚಿತವಾಗಿ ಬೆಡ್, ಐಸಿಯು ಮತ್ತು ಇನ್ನಿತರ ಆರೋಗ್ಯ ಸೇವೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಒದಗಿಸಬೇಕು. 5. ರೈತರ ಹಣ್ಣು, ತರಕಾರಿ, ಹೂವು ಇನ್ನಿತರ ಬೆಳೆಗಳಿಗೆ ಮಾರುಕಟ್ಟೆ ಒದಗಿಸಬೇಕು ಅಥವಾ ಸರ್ಕಾರವೇ ಕೊಂಡು ವಿತರಣೆ ಮಾಡಬೇಕು ಅಥವಾ ರೈತರಿಗೆ ಪರಿಹಾರ ನೀಡಬೇಕು. 7. ಪ್ರತಿ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಆಸ್ಪತ್ರೆಗಳ ಜೊತೆಗೆ ಕನಿಷ್ಠ 500 ಬೆಡ್ ಸಾಮರ್ಥ್ಯದ ಆಸ್ಪತ್ರೆಗಳನ್ನು ನಿರ್ಮಿಸಬೇಕು. ಹೋಟೆಲ್ ರೂಂ ಗಳಲ್ಲಿ ಬಾಡಿಗೆ ಆಧಾರದಲ್ಲಿ ಆಸ್ಪತ್ರೆಗಳ ನಿರ್ಮಾಣ ಮಾಡಬೇಕು. 8. ಬಡವರು, ಮಧ್ಯಮ ವರ್ಗದವರು, ಇತರ ವರ್ಗದವರಿಗೆ ಲಾಕ್ ಡೌನ್ ಕಾರಣದಿಂದ ಆದಾಯವಿರುವುದಿಲ್ಲ. ಆದ್ದರಿಂದ ವಿವಿಧ ಬಿಲ್ ಕಟ್ಟಲು ಸಾಧ್ಯವಿಲ್ಲ. ಆದ್ದರಿಂದ ಇವುಗಳನ್ನು ಮುಂದೂಡಬೇಕು. 9. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕೊರೊನಾದಿಂದ ಸಂಪಾದನೆ ಶೂನ್ಯವಾಗಿದೆ. ಅವರಿಗೆ ಇಎಂಐ ಕಟ್ಟಲಾಗದಂಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್ ಡೌನ್ ಅವಧಿಯಲ್ಲಿ ಈ ಉದ್ದಿಮೆಗಳು ಇಎಂಐ ಕಟ್ಟಲು ವಿನಾಯಿತಿ ಕೊಡಬೇಕು. 10. ಕೋವಿಡ್ ಕಾರಣದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾದವರ ಅಂತ್ಯಕ್ರಿಯೆಯನ್ನು ಗೌರವಯುತವಾಗಿ ನಡೆಸಬೇಕು. ಸರ್ಕಾರ ಮತ್ತು ಇನ್ನಿತರ ಸಂಸ್ಥೆಗಳು ಕ್ರಮ ಕೈಗೊಳ್ಳಬೇಕು ಎಂದು ಅವರು ಕಾಂಗ್ರೆಸ್ ಪಕ್ಷದಿಂದ ಒತ್ತಾಯಿಸಿದರು.




