ಬೆಂಗಳೂರು: ಕನ್ನಡ ನಾಮಫಲಕಗಳ ವಿರುದ್ಧದ ಪ್ರತಿಭಟನೆ ಸಂಬಂಧದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡರನ್ನು ಪೋಲೀಸರು ವಿನಾಕರಣ ಬಂಧನಕ್ಕೆ ಒಳಪಡಿಸಿ ನ್ಯಾಯಾಂಗ ಬಂಧನಕ್ಕೆ ಕಾರಣವಾಗಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿಯವರು ಖಂಡಿಸಿದ್ದಾರೆ.
ಈ ಪ್ರತಿಭಟನೆಯು ವಾಣಿಜ್ಯೋದ್ಯಮ/ಬ್ಯಾಂಕ್/ಅಂಗಡಿಗಳು/ಮಾಲ್ ಗಳು /ಹೋಟಲ್ ಮೊದಲಾದ ಸಂಸ್ಥೆಗಳಲ್ಲಿ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆಯೇ ಇರಬೇಕು ಎನ್ನುವ ರಾಜ್ಯ ಸರ್ಕಾರದ ನಿಯಮದ ಜಾರಿಗಾಗಿ ಅವರು ಒತ್ತಾಯಿಸಿದ್ದು ಕಾನೂನು ಸಮ್ಮತವೇ ಆಗಿದೆ. ಈ ಪ್ರತಿಭಟನೆಯ ಕುರಿತು ಟಿ.ಎ.ನಾರಾಯಣ ಗೌಡರು ಸಾಕಷ್ಟು ಮುಂಚೆಯೇ ಸಾಮಾಜಿಕ ಜಾಲತಾಣ ಕರಪತ್ರ, ಜಾಹಿರಾತುಗಳ ಮೂಲಕ ಪ್ರಕಟಣೆಯನ್ನು ನೀಡಿದ್ದರು. ಹೀಗಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೆ ಪ್ರತಿಭಟನೆಯ ಅನಿವಾರ್ಯತೆಗೆ ಸಿಲುಕಿಸಿ ಈಗ ಬಂಧನಕ್ಕೆ ಕಾರಣವಾಗಿರುವುದು ಕನ್ನಡ ನಾಮ ಫಲಕಗಳನ್ನು ಹಾಕದೆ ಇದ್ದರೂ ನಡೆಯುತ್ತದೆ ಎನ್ನುವ ಪರಭಾಷಿಕರ ಉಡಾಫೆ ಧೋರಣೆಯನ್ನು ಬೆಂಬಲಿಸಿದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ವಿಷಯದಲ್ಲಿ ರಾಜ್ಯ ಸರ್ಕಾರವು ಮತ್ತು ಪೊಲೀಸರು ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಕಾರರ ವಿಷಯದಲ್ಲಿ ಸಂವೇದನಾಶೀಲವಾಗಿ ವರ್ತಿಸಬಹುದಾಗಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಇಲ್ಲವೆ ಕರ್ನಾಟಕ ರಾಜ್ಯ ವಾಣಿಜ್ಯ ಮಹಾಮಂಡಳಿಯ ನೇತೃತ್ವದಲ್ಲಿ ದುಂಡು ಮೇಜಿನ ಸಭೆಯನ್ನು ಮೊದಲೇ ನಡೆಸಿದ್ದರೆ ಕ.ರ.ವೇ ಪ್ರತಿಭಟನೆಯು ನಡೆಯುತ್ತಲೇ ಇರಲಿಲ್ಲ. ಆಗ ಸರ್ಕಾರವು ಸ್ಪಷ್ಟವಾಗಿ ಕನ್ನಡಿಗರ ಪರವಾಗಿದೆ ಎನ್ನುವ ಸಂದೇಶವು ಹೋಗುತ್ತಿತ್ತು. ಆದರೆ ಈ ದಾರಿಯನ್ನು ತುಳಿಯದೆ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ಬಂಧನಕ್ಕೆ ಮುಂದಾಗಿರುವುದರಿಂದ ಪರಭಾಷಿಕರ ಪುಂಡಾಟಕ್ಕೆ ಬೆಂಬಲ ನೀಡಿದಂತಾಗಿದೆ ಎಂದಿದ್ದಾರೆ.
ಕನ್ನಡಿಗರ ಆಕ್ರೋಶವು ಕಟ್ಟೆಯೊಡೆಯುವ ಮುನ್ನ ಸರ್ಕಾರವು ಟಿ.ಎ.ನಾರಾಯಣ ಗೌಡರನ್ನು ಮತ್ತು ಬಂಧಿತ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರನ್ನು ಕೂಡಲೇ ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ನಾಡೋಜ ಡಾ.ಮಹೇಶ ಜೋಶಿಯವರು ಆಗ್ರಹಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಸಹ ವಾಣಿಜ್ಯೋದ್ಯಮ ನಾಮಫಲಕಗಳಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ಸಿಗಬೇಕು ಎನ್ನುವ ಅಭಿಯಾನವನ್ನು ಬೆಂಬಲಿಸುವದರ ಜೊತೆಗೆ ಮುಂದಿನ ದಿನಗಳಲ್ಲಿ ಕನ್ನಡ ಬರಹಗಾರರು, ಎಲ್ಲಾ ಕನ್ನಡ ಸಂಘ ಸಂಸ್ಥೆಗಳು, ಹೋರಾಟಗಾರರು, ಚಲನಚಿತ್ರ ಕಲಾವಿದರು ಸಂಘಟನೆಗಳು ಹಾಗೂ ಎಲ್ಲಾ ಕನ್ನಡಿಗರನ್ನೂ ಸೇರಿಸಿಕೊಂಡು ಪ್ರತಿಭಟನೆಯ ನೇತೃತ್ವ ವಹಿಸಲಿದೆ ಎಂದಿದ್ದಾರೆ.
ವಾಣಿಜ್ಯೋದ್ಯಮಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆಗ್ರಸ್ಥಾನ ದೊರಕಬೇಕು ಎನ್ನುವ ವಿಷಯದಲ್ಲಿ ಸರ್ಕಾರವು ಸೂಕ್ತವಾಗಿ ಸ್ಪಂದಿಸದೆ ಹೋದರೆ ಕನ್ನಡ ಸಾಹಿತ್ಯ ಪರಿಷತ್ತು ಚಳುವಳಿಯ ನೇತೃತ್ವದ ನಾಯಕತ್ವ ವಹಿಸುವುದು ಅನಿವಾರ್ಯವಾಗುತ್ತದೆ. ಹೋಬಳಿ, ತಾಲ್ಲೂಕು, ಜಿಲ್ಲಾ ಘಟಕಗಳ ಜೊತೆಗೆ ಬೇರೆ ಕನ್ನಡ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕನ್ನಡಿಗರೆಲ್ಲರ ಮಾತೃ ಸಂಸ್ಥೆಯಾಗಿ ಗೋಕಾಕ್ ಚಳುವಳಿಯ ಮಾದರಿಯಲ್ಲಿ ಚಳುವಳಿಯನ್ನು ಸಂಘಟಿಸುವುದು ಅನಿವಾರ್ಯವಾಗಲಿದೆ ಎಂದು ಮೂಲಕ ಎಚ್ಚರಿಸಿದ್ದಾರೆ.
ಕನ್ನಡದ ಅಸ್ಮಿತೆಯ ವಿಷಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸದಾ ಮಂಚೂಣಿಯಲ್ಲಿ ಇರುತ್ತದೆ ಎನ್ನುವುದು ಸ್ಪಷ್ಟ ಸಂದೇಶವಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.




