ಭಿಕ್ಷಾಟನೆಯಿಂದ ಇಂದಿಗೂ ಜೀವಿಸುವ ವ್ಯವಸ್ಥೆಯನ್ನು ರೂಪಿಸಿರುವವರನ್ನು ಪ್ರಶ್ನಿಸಿ

4 years ago

ಯುವ ಚಲನಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ನಿರ್ದೇಶನದ ಕಾಳಿ KAALI ಎಂಬ ಸಾಕ್ಷ್ಯಚಿತ್ರದ ಸ್ಮೋಕಿಂಗ್ ಕಾಳಿ ಪೋಸ್ಟರ್ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. B-TV ಸುದ್ದಿ ವಾಹಿನಿ 07-07-2022ನಿನ್ನೆ ಗುರುವಾರ ಸಂಜೆ 07:00 ಗಂಟೆಗೆ ವಿವಾದಿತ ಸ್ಮೋಕಿಂಗ್ ಕಾಳಿ ಪೋಸ್ಟರ್  ಕುರಿತ ಚರ್ಚೆಗೆ ಕರ್ನಾಟಕ ಬೌದ್ಧ ಸಮಜಾಜದ ಹ.ರಾ.ಮಹೇಶ್, ವಿಶ್ವ ಸನಾತನ ಪರಿಷತ್ತಿನ ಎಸ್.ಭಾಸ್ಕರನ್ ಮತ್ತು ನನ್ನನ್ನು ಚರ್ಚೆಗೆ ಆಹ್ವಾನಿಸಿತ್ತು. ಈ ಸುದ್ದಿ ವಾಹಿನಿಯು ಚರ್ಚೆಗೆ ನೀಡಿರುವ ಶೀರ್ಷಿಕೆ  ಲೀನಾ ಅರೆಸ್ಟ್ ಯಾವಾಗ? ಎಂಬುದು. ಈ ಒಕ್ಕಣೆಯು  ಪೂರ್ವಾಗ್ರಹಪೀಡಿತವಾಗಿದ್ದು, ಸುದ್ದಿವಾಹಿನಿಯ ಪಕ್ಷಪಾತಿ ಧಾರ್ಮಿಕ ಸಿದ್ಧಾಂತವನ್ನು ತೋರಿಸುತ್ತದೆ. ಅಂದರೆ ಸುದ್ದಿವಾಹಿನಿಯೇ ಖುದ್ದಾಗಿ ಲೀನಾ ಮಣಿಮೇಕಲೈ ವಿರುದ್ಧ ಕಾನೂನು ಕ್ರಮಕ್ಕಾಗಿ ಆಗ್ರಹಿಸುತ್ತಿದೆ. ಮುಕ್ತ ಚರ್ಚೆಯೊಂದನ್ನು ಪ್ರಜಾಸತ್ತಾತ್ಮಕವಾಗಿರುವಂತೆ ನೋಡಿಕೊಂಡು ತಟಸ್ಥ ಧೋರಣೆ ತಳೆಯಬೇಕಾದ ಮಾಧ್ಯಮದ ಸಾಮಾಜಿಕ ಜವಾಬ್ದಾರಿಯ ಗೈರುಹಾಜರಿ ಈ ಶೀರ್ಷಿಕೆಯಲ್ಲಿ ಎದ್ದು ಕಾಣುತ್ತಿದೆ. ಈ ಶೀರ್ಷಿಕೆಯನ್ನು ಗಮನಿಸಿದ ಕೂಡಲೇ, Leena Manimekalais deliberately hurting Hindu sentiments with the smoking poster of Goddess Kaali… Legal action must be taken against Leena ಎಂಬ ಆಗ್ರಹವು ವಾಹಿನಿಯ ಮೂಲಕ ರವಾನಿಸುವುದು B-TV ಯ ಇಂಗಿತ ಎಂದು ಯಾರಿಗಾದರೂ ಅನ್ನಿಸದಿರದು.

ಪ್ರಸ್ತುತ ಕಾಳಿ KAALI ಎಂಬ ಸಾಕ್ಷ್ಯಚಿತ್ರದಲ್ಲಿ ಕಾಳಿ ಪಾತ್ರಧಾರಿಯಿಂದ ಸ್ಮೋಕಿಂಗ್ ಕಾಳಿ ಪಾತ್ರ ಪೋಷಣೆ ಮಾಡಿಸಿದ್ದು, ಕಾಳಿಯು ಸಿಗರೇಟ್ ಸೇದುವ ಪೋಸ್ಟರನ್ನು ಕೆನಡಾ ಫಿಲ್ಮ್ ಫೆಸ್ಟಿವಲ್​​ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್​​ ವೈರಲ್ ಆಗಿದ್ದು, ಹಿಂದೂ ಧರ್ಮೀಯ ಭಾವಿಕರಿಂದ ಸಾಮಾಜಿಕ ಜಾಲತಾಣದಲ್ಲಿ ಪರ- ವಿರೋಧಗಳ ಬಿಸಿ ಚರ್ಚೆಗೆ ಕಾರಣವಾಗಿದೆ. ಹಿಂದೂ ಮತೀಯವಾದಿಗಳು ಲೀನಾ ಮಣಿಮೇಕಲೈ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

ಸ್ಮೋಕಿಂಗ್ ಕಾಳಿ ಪೋಸ್ಟರನ್ನು ಲೀನಾ ಮಣಿಮೇಕಲೈ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಿಂದ ರಿಮೂವ್ ಮಾಡಿದ್ದಾರೆಂದೂ, ಆ ಬಳಿಕ ಶಿವ ಪಾರ್ವತಿ ವೇಷಧಾರಿಗಳು ಬೀದಿಯಲ್ಲಿ ಬೀಡಿ ಸೇದಿಕೊಂಡು ಹೋಗುತ್ತಿರುವ ಫೋಟೋ ಒಂದನ್ನು ಅಪ್ಲೋಡ್ ಮಾಡಿದ್ದಾರೆಂದೂ ಹೇಳಲಾಗುತ್ತಿದೆ. ಇದು ಹಿಂದೂವಾದಿಗಳ ಮತ್ತಷ್ಟು ಆಕ್ರೋಶಕ್ಕೆ ಕಾರಣ ಮಾಡಿಕೊಟ್ಟಿದೆ. ಇದರಿಂದ ನಾನು ಗ್ರಹಿಸಿದ್ದೇನೆಂದರೆ ಲೀನಾ ಮಣಿಮೇಕಲೈ ಅವರು ತಮ್ಮ ಕಾಳಿ KAALI ಸಾಕ್ಷ್ಯಚಿತ್ರದ ಮೂಲಕ ಅಲೆಮಾರಿ ಹಗಲುವೇಷದ ಕಲಾವಿದರು ಕುರಿತ ಸಾಕ್ಷ್ಯಚಿತ್ರ ನಿರ್ಮಿಸಿರಬಹುದು.

ಹೀಗೆ ಗ್ರಹಿಸುತ್ತಾ ಈ ಸಂದರ್ಭದಲ್ಲಿ ನಾನು B-TV ದೂರದರ್ಶನ ವಾಹಿನಿಯ ಮೂಲಕ, ಅಲೆಮಾರಿ ಕಲಾವಿದರನ್ನು ಕುರಿತು ಹಂಚಿಕೊಳ್ಳಲು ಪ್ರಯತ್ನಿಸಿದ ಸಾಮಾಜಿಕ ವಾಸ್ತವಾಂಶಗಳೆಂದರೆ, ಹಗಲುವೇಷ ಧರಿಸಿ ಬೀದಿಗಳಲ್ಲಿ ರಾಮ ಲಕ್ಷ್ಮಣ ಸೀತೆಯರಾಗಿ ರಾಮಾಯಣ ಕಾವ್ಯವನ್ನು ಜನರಿಗೆ ಮುಟ್ಟಿಸುತ್ತಾ ಹೊಟ್ಟೆ ಹೊರೆಯುವ ಹಗಲುವೇಷದ ಅಲೆಮಾರಿ ಕಲಾವಿದರ ಮನೆತನದವರು, ವೇಷಧಾರಿಗಳಾಗಿ ಊರುಕೇರಿ ಸುತ್ತಾಡುವಾಗ ಬೀಡಿ ಸಿಗರೇಟು ಬ್ರಾಂಡಿ ಸೇವನೆ ಮಾಡುವುದು ಅತ್ಯಂತ ಸಹಜ ಮತ್ತು ಸಾಮಾನ್ಯ ಸಂಗತಿಯಾಗಿದೆ. ನಮ್ಮ ದೇಶಿ ಜಾನಪದ ರಂಗಭೂಮಿಯ ವಂಶಪಾರಂಪರ್ಯ ಕಲಾವಿದರಾದ ಸಿಂದ್ ಮಾದಿಗರು, ಮಾಲ ದಾಸರಿ, ದೊಂಬಿದಾಸರು ಮುಂತಾದವರು ಇದೇ ರಾಮಾಯಣ ಮಹಾಭಾರತದ  ರಾಮ ಕೃಷ್ಣ ಆಂಜನೇಯ ಮುಂತಾದ ಪಾತ್ರಗಳ ವೇಷಗಳನ್ನು ಧರಿಸಿಕೊಂಡಿರುವಾಗಲೇ ಬೀಡಿ ಸಿಗರೇಟು ಮದ್ಯಪಾನ ಸೇವಿಸುತ್ತಾರೆ. ಈ ಕಲಾವಿದರು  ರಾಮ ಕೃಷ್ಣ ಶಿವ ಪಾರ್ವತಿ ಕಾಳಿ ಮುಂತಾದ ಪಾತ್ರಗಳನ್ನು ಶ್ರದ್ಧೆಯಿಂದ ಅಭಿನಯಿಸಿ ತೋರಿಸುತ್ತಾರೆ. ಇದು ಅವರ ದಿನನಿತ್ಯದ ಹೊಟ್ಟೆಪಾಡಿನ ಕಲಾನೆಲೆಯಾಗಿದೆ. ಇಂದಿಗೂ ವಸತಿಹೀನರಾಗಿ ಟೆಂಟುಗಳಲ್ಲಿ ವಾಸಿಸುತ್ತಾ ಭಿಕ್ಷಾಟನೆ ಮಾಡಿ ಬದುಕುತ್ತಿರುವ ನಿರ್ಗತಿಕ ಅಲೆಮಾರಿಗಳ ದಾರುಣ ಬದುಕು ಸಾಮಾಜಿಕ ಮುಖ್ಯವಾಹಿನಿಯ ಜನರಿಗೇಕೆ ಕಾಣಿಸುತ್ತಿಲ್ಲ?

ಕೇಸರಿ ಭಗವಾಧ್ವಜಗಳನ್ನು ಹಿಡಿದುಕೊಂಡು ಜೈ ಶ್ರೀರಾಮ್ ಎಂದು ಕೇಕೆ ಹಾಕುವ ಜನರ ಕಣ್ಣುಗಳಿಗೆ, ರಾಮಾಯಣ ಮಹಾಭಾರತದ ಪಾತ್ರಗಳನ್ನು ಹಾಕಿಯೇ ಬೀದಿಗಳಲ್ಲಿ ಭಿಕ್ಷಾಟನೆ ಮಾಡಿ ಬದುಕುವ ಅಲೆಮಾರಿಗಳ ಬದುಕನ್ನು ಹಸನು ಮಾಡಲು ಇವರೇಕೆ ಮುಂದೆ ಬರುತ್ತಿಲ್ಲ? ‘ನಮ್ಮ ಜನಾಂಗದ ಹಗಲುವೇಷದ ಕಲಾವಿದರು ಈ ಹಿಂದೆ ಆಡಿದ ಹಗಲುವೇಷದ ಪುರಾಣದ ನಾಟಕಗಳು ನಮಗೆ ಅನ್ನ ಬಟ್ಟೆ ಕೊಟ್ಟವು.  ಈಗಲೂ ಇಂತಹ ವೇಷಗಳಿಂದಲೇ ಹೊಟ್ಟೆಪಾಡಿಗೆ ಬದುಕುತ್ತಿರುವ ಜನ ನಾವು.  ರಾಮಾಯಣ  ಮಹಾಭಾರತ ನಾಟಕ ಪ್ರದರ್ಶನಗಳು  ಜನರಿಗೆ ಮನರಂಜನೆ ನೀಡುತ್ತಲೇ ನಮಗೆ ಅನ್ನ ಬಟ್ಟೆಗೆ ಆಧಾರವಾಗಿವೆ. ಬದುಕಿನ ಆಧಾರ ಸೂತ್ರವಾಗಿರುವ ರಾಮಾಯಣ ಮಹಾಭಾರತ ಕಾವ್ಯಗಳ ಪಾತ್ರಗಳಿಂದಲೇ ನಾವು ನಮ್ಮ ಮಕ್ಕಳನ್ನು ಸಾಕಿ ಬೆಳೆಸುತ್ತಿದ್ದೇವೆ” ಎಂದು ಹೇಳಿಕೊಳ್ಳುವ ಅಲೆಮಾರಿಗಳು ನಮ್ಮ ನಡುವೆಯೇ ಇದ್ದಾರೆ. ವಾಸ್ತವ ಸ್ಥತಿ ಹೀಗಿರುವಾಗ ಇಡೀ ನಾಗರಿಕ ಸಮಾಜ ಉತ್ತರಿಸುವ ಹೊಣೆ ಹೊರಬೇಕಾಗಿದೆ. ನಾವು ಪ್ರಶ್ನಿಸಬೇಕಿರುವುದು ಸ್ಮೋಕಿಂಗ್ ಕಾಳಿ ಪೋಸ್ಟರ್ ರೂಪಿಸಿರುವ ಲೀನಾ ಮಣಿಮೇಕಲೈ ಅವರನ್ನಲ್ಲ. ರಾಮ ಕೃಷ್ಣ ಶಿವ ಪಾರ್ವತಿ ವೇಷ ಧರಿಸಿಯೂ ಯಾವುದೇ ಪವಿತ್ರ – ಅಪವಿತ್ರ ಅಥವಾ ಶೀಲ – ಅಶ್ಲೀಲತೆಯ ಗೋಜಿಗೆ ಹೋಗದೆ ಬೀಡಿ ಸಿಗರೇಟು ಮದ್ಯ ಸೇವಿಸುವ ಕಲಾವಿದರನ್ನೂ ನಾವು ಪ್ರಶ್ನಿಸಬೇಕಿಲ್ಲ. ಬದಲಾಗಿ ಇಂತಹ ಕಲಾವಿದರಿಗೆ ಶಿಕ್ಷಣ ಅನ್ನ ಆಶ್ರಯ ಸೌಕರ್ಯಗಳನ್ನು ಒದಗಿಸದೆ ನಿರ್ಗತಿಕರಾಗಿ ಭಿಕ್ಷಾಟನೆಯಿಂದಲೇ ಜೀವಿಸಿಕೊಂಡು ಇಂದಿಗೂ ಅಲೆಮಾರಿಗಳನ್ನಾಗಿಸಿರುವ ವ್ಯವಸ್ಥೆಯನ್ನು ಪ್ರಶ್ನಿಸಬೇಕು.

ಸನಾತನಿಗಳು ತಮ್ಮ ಪುರಾಣ ಕಾವ್ಯಗಳನ್ನು ಪ್ರಸಾರ ಮಾಡಲು ತಳ ಸಮುದಾಯಗಳನ್ನು ಜೀತಕ್ಕೆ ಹಚ್ಚಿದ್ದರು. ಕ್ರಮೇಣವಾಗಿ ಹೊಟ್ಟೆ ಪಾಡಿಗಾಗಿಯೇ ಇದು ಭಿಕ್ಷಾಟನೆಯ ವೃತ್ತಿಯಾಯಿತು. ಇಂತಹ ಜೀತದ ಬದುಕು ಯಾರಿಗೆ ಬೇಕು?  ಅಂಬೇಡ್ಕರ್ ದೊರಕಿಸಿಕೊಟ್ಟಿರುವ ಮೀಸಲಾತಿಗೂ ಸಂಚಕಾರ ತರುವ ಮೂಲಕ ವ್ಯವಸ್ಥೆ ಈ ಅಲೆಮಾರಿಗಳನ್ನು ವಂಚಿಸುತ್ತಿದೆ. ಶಿಕ್ಷಣ ನೌಕರಿ ಮುಂತಾದ ಬದುಕಿನ ಸಾಧ್ಯತೆಗಳನ್ನು ತೋರಿಸಿದ ಮೀಸಲಾತಿ ಅಂಚಿನಲ್ಲಿರುವ ಈ ಜನರಿಗೆ ಇಂದಿಗೂ ಸರಿಯಾಗಿ ತಲುಪಿಲ್ಲ. ಹೀಗಿರುವಾಗ ನಾವು ಪ್ರಶ್ನಿಸಬೇಕಿರುವುದು ವ್ಯವಸ್ಥೆಯನ್ನೇ ಹೊರತು ಸ್ಮೋಕಿಂಗ್ ಕಾಳಿ ಪೋಸ್ಟರನ್ನು ರೂಪಿಸಿರುವ ಚಲನಚಿತ್ರ ನಿರ್ದೇಶಕಿ ಲೀನಾ ಮಣಿಮೇಕಲೈ ಅವರನ್ನಲ್ಲ.

ರಾಮ ಕೃಷ್ಣ ಸೀತೆ ಶಿವ ಪಾರ್ವತಿ ಹೀಗೆ ಹಲವಾರು ವೇಷ ಧರಿಸಿಕೊಂಡು ಬೀಡಿ ಸಿಗರೇಟ್ ಮದ್ಯಪಾನ ಸೇವಿಸಿಕೊಂಡು ಊರುಕೇರಿಯ ಬೀದಿ ರಸ್ತೆಗಳಲ್ಲಿ ಸಂಚರಿಸುವ  ಅಥವಾ ನಾಟಕದ ಪರದೆಯ ಹಿಂದೆ ನಿಂತು ಬೀಡಿ ಸಿಗರೇಟು ಸೇದುವುದನ್ನು ನೀವೂ ಸಹ ನೋಡಿರಬಹುದು. ಪ್ರಶ್ನಿಸಬೇಕಾಗಿರುವುದು ಲೀನಾ ಮಣಿಮೇಕಲೈ ರೀತಿಯ ಸೃಜನಶೀಲ ನಿರ್ದೇಶಕಿಯನ್ನಲ್ಲ, ಬದಲಾಗಿ  ಧಾರ್ಮಿಕ ಯಥಾಸ್ಥಿತಿವಾದಿ ಮನಸ್ಸುಗಳನ್ನು.

  • ಡಾ.ವಡ್ಡಗೆರೆ ನಾಗರಾಜಯ್ಯ, ಹಿರಿಯ ಸಾಹಿತಿಗಳು

Leave a Reply