ದೆಹಲಿ: ಸರ್ವೋಚ್ಛ ನ್ಯಾಯಾಲಯದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಉದಯ್ ಉಮೇಶ್ ಲಲಿತ್ ಅವರು ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧಿಕಾರದ ಗೌಪ್ಯತೆಯನ್ನು ಬೋಧಿಸಿದರು. ಸತ್ಯ, ನ್ಯಾಯ, ನಿಷ್ಠೆ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಪ್ರತಿಜ್ಞೆಯನ್ನು ಅವರು ಕೈಗೊಂಡರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಎನ್.ವಿ.ರಮಣ ಅವರ ಅಧಿಕಾರ ಅವಧಿ ನಿನ್ನೆಗೆ ಮುಕ್ತಾಯವಾಗಿತ್ತು. ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ಹಿರಿಯ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನು ಎನ್.ವಿ.ರಮಣ ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ನೇಮಿಸಲಾಗಿತ್ತು.
ಇಂದು ಅಧಿಕಾರ ವಹಿಸಿಕೊಂಡ ಯು.ಯು.ಲಲಿತ್ ಅವರ ಅಧಿಕಾರದ ಅವಧಿ ಕೇವಲ 74 ದಿನಗಳ ಕಾಲ ಇರಲಿದೆ. ಏಕೆಂದರೆ ಅವರು ನವೆಂಬರ್ 8ರಂದು 65ನೇ ವರ್ಷಕ್ಕೆ ಕಾಲಿಡಲಿದ್ದು, ನ್ಯಾಯಮೂರ್ತಿಗಳ ನಿವೃತ್ತಿ ವಯೋಮಿತಿ ತಲುಪುವುದರಿಂದ ಅವರು ನಿವೃತ್ತಿಯಾಗುತ್ತಾರೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗುವುದಕ್ಕೆ ಮೊದಲು ಅವರು ವಕೀಲರಾಗಿ ಸೇವೆ ಸಲ್ಲಿಸಿದ್ದರು. 2014ರಲ್ಲಿ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರನ್ನು ನೇರವಾಗಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿ ಸ್ಥಾನಕ್ಕೆ ಶಿಫಾರಸು ಮಾಡಿತ್ತು. ಸುಪ್ರೀಂ ಕೋರ್ಟ್ ಇತಿಹಾಸದಲ್ಲಿ ಇದುವರೆಗೆ ಕೇವಲ 8 ವಕೀಲರು ಮಾತ್ರ ಈ ಮಾದರಿಯಲ್ಲಿ ನೇರವಾಗಿ ಸುಪ್ರೀಂಕೋರ್ಟ್ನ ನ್ಯಾಯಮೂರ್ತಿಯಾಗಿ ನೇಮಕವಾಗಿ ದಾಖಲೆ ಬರೆದಿದ್ದಾರೆ. ಇನ್ನು 2014ರ ಬಳಿಕ ಈ ಮಾದರಿಯಲ್ಲಿ ನೇಮಕವಾದ 4ನೇ ನ್ಯಾಯಮೂರ್ತಿ ಎಂಬ ದಾಖಲೆಯೂ ಇವರ ಹೆಸರಿನಲ್ಲಿದೆ.
1983ರ ಜೂನ್ನಲ್ಲಿ ಬಾರ್ ಕೌನ್ಸಿಲ್ಗೆ ಸೇರಿದ ಇವರು, 1986ರಲ್ಲಿ ಭಾರತದ ಸುಪ್ರೀಂ ಕೋರ್ಟ್ನಲ್ಲಿ ವಕೀಲಿಕೆಅಭ್ಯಾಸ ಆರಂಭಿಸಿದರು. 1986 ರಿಂದ 1992 ರವರೆಗೆ, ಅವರು ಭಾರತದ ಮಾಜಿ ಅಟಾರ್ನಿ ಜನರಲ್ ಸೋಲಿ ಸೊರಾಬ್ಜಿ ಅವರೊಂದಿಗೆ ಕೆಲಸನಿರ್ವಹಿಸಿದ್ದರು. 29 ಏಪ್ರಿಲ್ 2004 ರಂದು, ಲಲಿತ್ ಅವರನ್ನು ಸುಪ್ರೀಂ ಕೋರ್ಟ್ನ ಹಿರಿಯ ವಕೀಲರಾಗಿ ನೇಮಿಸಲಾಗಿತ್ತು.
ತ್ರಿವಳಿ ತಲಾಖ್ ತೀರ್ಪು ನೀಡಿದ ಐವರು ಸದಸ್ಯರ ಸಾಂವಿಧಾನಿಕ ಪೀಠದ ನ್ಯಾಯಮೂರ್ತಿಗಳಲ್ಲಿ ಯುಯು ಲಲಿತ್ ಒಬ್ಬರಾಗಿದ್ದರು. ಇವರ ಪೀಠವು, 3-2 ಮತಗಳಿಂದ ತ್ರಿವಳಿ ತಲಾಖ್ ಎನ್ನುವುದು ಅಸಾಂವಿಧಾನಿಕ ಎಂದಿತ್ತು. 13 ಜುಲೈ 2020ರಂದು ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತದ ಹಕ್ಕು ವಿಚಾರದಲ್ಲಿ ತಿರುವಾಂಕೂರು ರಾಜಮನೆತನದ ಹಕ್ಕನ್ನು ಎತ್ತಿಹಿಡಿದ ದ್ವಿಸದಸ್ಯ ಪೀಠದಲ್ಲಿ ಇವರು ಇದ್ದರು. ಇನ್ನು 2019ರ ಜನವರಿ 10ರಂದು, ಅಯೋಧ್ಯೆ ವಿವಾದದ ಪ್ರಕರಣದ ವಿಚಾರಣೆಗಾಗಿ ರಚಿಸಲಾದ ಐದು ನ್ಯಾಯಮೂರ್ತಿಗಳ ಪೀಠದಿಂದ ನ್ಯಾಯಮೂರ್ತಿ ಲಲಿತ್ ಅವರು ಹಿಂದಕ್ಕೆ ಸರಿದಿದ್ದರು.
ನೂತನ ಮುಖ್ಯ ನ್ಯಾಯಮೂರ್ತಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಹಾಗೂ ಸುಪ್ರೀಂಕೋರ್ಟ್ನ ಹಿರಿಯ ನ್ಯಾಯಮೂರ್ತಿಗಳು, ವಕೀಲರು ಮತ್ತು ಇತರ ಗಣ್ಯರು ಪಾಲ್ಗೊಂಡಿದ್ದರು.




