ಕೊಪ್ಪಳ: ಕಾರಟಗಿ ತಾಲೂಕಿನ ಬರಗೂರು ಗ್ರಾಮದ ದಾನಪ್ಪ ಮತ್ತು ಕಕ್ಕರಗೋಳ ಗ್ರಾಮದ ದಲಿತ ಯುವಕರ ಕೊಲೆಗಳಿಗೆ ನ್ಯಾಯ ಸಿಗಲೇಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ತಾವರಗೇರ ಪಟ್ಟಣದ ಹರಿಜನ ವಾರ್ಡ್ ಮತ್ತು ವಿಠ್ಲಾಪುರ ರಸ್ತೆಯ ಅಂಬೇಡ್ಕರ್ ಪ್ರತಿಮೆ ಮುಂದೆ ಕಾರ್ಯಕ್ರಮ ನಡೆಯಿತು. ಇಬ್ಬರು ಯುವಕರ ಕೊಲೆ ಸೇರಿದಂತೆ ಕೊಪ್ಪಳ ಜಿಲ್ಲೆಯಲ್ಲಿ ದಲಿತ, ದಮನಿತರ, ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಮೂರು ದಿನಗಳಿಂದ ಜನಜಾಗೃತಿ ಜಾಥಾ ನಡೆಸಲಾಗುತ್ತಿದೆ.
ದಲಿತ ದಮನಿತರ ಒಕ್ಕೂಟ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಜನಜಾಗೃತಿ ಜಾಥಾ ಸಿದ್ಧಾಪುರ, ಮೆಣದಾಳ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆಸಿ ತಾವರಗೇರ ಪಟ್ಟಣ ತಲುಪಿದೆ.
ಒಕ್ಕೂಟದ ಸಂಚಾಲಕ ಮತ್ತು ಕರ್ನಾಟಕ ರೈತ ಸಂಘ (AIKKS) ದ ರಾಜ್ಯಾಧ್ಯಕ್ಷ ಡಿ.ಹೆಚ್.ಪೂಜಾರ ಮಾತನಾಡಿ, ದಲಿತರ ಮೇಲೆ ನಡೆಯುವ ದೌರ್ಜನ್ಯ ಮತ್ತು ಕೊಲೆಗೆ, ಮೋದಿ ಸರ್ಕಾರದ ತಿದ್ದುಪಡಿ ಕಾಯ್ದೆಗಳಿಗೆ ನೇರ ಸಂಬಂಧವಿದೆ. ಜಾತಿ ದ್ವೇಷ ಜಾತಿ ಸಂಘರ್ಷ ಹೆಚ್ಚು ಮಾಡಿ ಜನರ ಐಕ್ಯತೆಯನ್ನು ಛಿದ್ರಗೊಳಿಸಲಾಗುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ಕಾಯ್ದೆಗಳ ತಿದ್ದುಪಡಿ ಮತ್ತು ಪೆಟ್ರೋಲ್, ಡೀಸೆಲ್ ಅಗತ್ಯ ವಸ್ತುಗಳ ಬೆಲೆ ಹೇರಿಕೆ ವಿಷಯಗಳನ್ನು ಮರೆ ಮಾಚಲು ಜಾತಿ ಜಗಳ ಮಾಡಿಸಲಾಗುತ್ತಿದೆ ಎಂದರು.
ಮಾದಿಗ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕರಿಯಪ್ಪಗುಡಿಮನಿ ಮಾತನಾಡಿ, ತಾವರಗೇರ ಭಾಗದಲ್ಲಿ ನಡೆದ ಕೊಲೆಗಳ ಕುರಿತು ಪ್ರಸ್ತಾಪಿಸಿದರು. ಕರಡು ಚಿಲುಮೆ ಗ್ರಾಮದ ಹರಿಜನ ಯುವತಿಯ ಮೇಲೆ ಅತ್ಯಾಚಾರ ನಡೆದಿತ್ತು. ಮದುವೆ ಮಾಡಿಕೊಳ್ಳುಲು ಮೇಲ್ ಜಾತಿಯ ಕುಟುಂಬಕ್ಕೆ ಒತ್ತಾಯಸಿದರೆ, 30 ಸಾವಿರ ಹಣ ಕೊಡುವ ಮಾತಗಳನ್ನಾಡಿದ್ದರು. ಕಳೆದ ಮೂರು ತಿಂಗಳ ಹಿಂದೆ ತಾವರಗೇರ ಪಟ್ಟಣದಲ್ಲಿ ಭಜಂತ್ರಿ ಜಾತಿಯ ಗೃಹಿಣಿಯನ್ನು ಕೊಲೆ ಮಾಡಲಾಯಿತು. ಜಿಲ್ಲೆಯ ಪೋಲಿಸ್ ಅಧಿಕಾರಿಗಳ ಭ್ರಷ್ಟಾಚಾರ ಮತ್ತು ಬೇಜವಾಬ್ದಾರಿಯಿಂದ, ದಲಿತರಿಗೆ ದಮನಿತರಿಗೆ, ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ದಿನಾಂಕ 19/07/2021ರಂದು ನಡೆಯುವ ಕೊಪ್ಪಳ ಚಲೋ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸಿ ಎಂದು ಅವರು ಕರೆ ನೀಡಿದರು.
ಅಖಿಲ ಭಾರತ ಗ್ರಾಮೀಣ ಕೃಷಿ ಕಾರ್ಮಿಕರ ಸಂಘದ ಅಧ್ಯಕ್ಷ ಸಣ್ಣಹನುಮಂತಪ್ಪ, ಹುಲಿ ಹೈದರ ಪ್ರಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮಹದೇವ, ಹನುಮಂತ ವಿರುಪಾಪುರ, ನಿರುಪಾದಿ ಸಿದ್ದಪೂರ, DSS ಪರಶುರಾಮ ಚೌಡಕಿ, ಮಹಿಳಾ ಸಂಘದ ಅಧ್ಯಕ್ಷೆ ದ್ಯಾಮಮ್ಮ ಚೌಡಕಿ, ವಿಠಲ್ ದುರ್ಗೇಶ ಇತರರು ಭಾಗವಹಿಸಿದ್ದರು.
ದಿನಾಂಕ 12/07/2021ರಿಂದ ಬರಗೂರು ಗ್ರಾಮದಿಂದ ಜನ ಜಾಗೃತಿ ಜಾಥಾ ಪ್ರಾರಂಭಗೊಂಡಿದೆ. ದಿನಾಂಕ 13/07/2021 ರಂದು ಕಾರಟಗಿ ಪಟ್ಟಣದ ಹರಿಜನ ವಾರ್ಡಿನಲ್ಲಿ ಮತ್ತು ತಾಲ್ಲೂಕಿನ ಹಗೇದಾಳ, ಕನಕಗಿರಿ ತಾಲೂಕಿನ ಜೀರಾಳು, ಉಮಳಿ ಕಾಟಾಪುರ, ಹೊಸಗುಡ್ಡ ಗ್ರಾಮಗಳಲ್ಲಿ ಕಾರ್ಯಕ್ರಮ ನಡೆದಿವೆ.



