2019ರಲ್ಲಿ ಕಾಂಗ್ರೆಸ್ ಮೈತ್ರಿಯಲ್ಲಿ 7 ಸೀಟ್ ಪಡೆದಿದ್ದ ಜೆಡಿಎಸ್ ಗೆ ಬಿಜೆಪಿ ಜೊತೆಗೆ 3ಕ್ಕೆ ತೃಪ್ತಿ

2 years ago

ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನು ದೇಶದ ಪ್ರಧಾನಿ ಮಾಡಬೇಕು ಎಂಬ ಉದ್ದೇಶದೊಂದಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ರಾಜ್ಯದ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಮ್ಮತಿ ನೀಡಿದೆ.

ಸೀಟು ಹಂಚಿಕೆ ಮತ್ತು ಚುನಾವಣೆ ಕಾರ್ಯತಂತ್ರದ ಕುರಿತು ಪಕ್ಷದ ಹಿರಿಯ ನಾಯಕ ಅಮಿತ್ ಶಾ ಅವರೊಂದಿಗೆ ದೆಹಲಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಮಾಲೋಚನೆ ನಡೆಸಿ ಕ್ಷೇತ್ರಗಳ ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ.

ಜೆಡಿಎಸ್ ನ ತವರು ಹಾಸನ, ಮಂಡ್ಯ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಬಿಜೆಪಿ ಚಿನ್ಹೆಯಡಿ ಕಣಕ್ಕಿಳಿಯಲಿದ್ದಾರೆ.

ಮಾತುಕತೆಯ ಸಮಯದಲ್ಲಿ ಕುಮಾರಸ್ವಾಮಿಯವರು ಜೆಡಿಎಸ್ ಗೆ 6 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟು ಕೊಡುವಂತೆ ಮನವಿ ಮಾಡಿದರು. ಕೊನೆಗೆ 5 ಕ್ಷೇತ್ರಕ್ಕೆ ಪಟ್ಟು ಹಿಡಿದರು. ಆದರೆ ಸಂಪನ್ಮೂಲ ಸೇರಿದಂತೆ ಹಲವು ಕಾರಣಗಳನ್ನು ನೀಡಿ ಅಮಿತ್ ಶಾ ವಸ್ತುಸ್ಥಿತಿ ವಿವರಿಸಿದ ಪರಿಣಾಮ ಅಂತಿಮವಾಗಿ ಮೂರು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕುಮಾರಸ್ವಾಮಿ ಸಮ್ಮತಿಸಿದ್ದಾರೆ ಎನ್ನಲಾಗಿದೆ.

ಹಾಸನ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ, ಮಂಡ್ಯ ಕ್ಷೇತ್ರದಿಂದ ಮಾಜಿ ಸಂಸದ ಪುಟ್ಟರಾಜು ಇಲ್ಲವೇ ಎಚ್.ಡಿ.ಕುಮಾರಸ್ವಾಮಿ ಮತ್ತು ಕೋಲಾರದಿಂದ ನಿಸರ್ಗ ನಾರಾಯಣಸ್ವಾಮಿ ಜೆಡಿಎಸ್ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಡಾ. ಮಂಜುನಾಥ್ ಅವರು ಸ್ಪರ್ಧಿಸಬೇಕು ಎಂಬ ಬಗ್ಗೆ ಒತ್ತಡವಿದ್ದು, ಈ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಡಾ. ಮಂಜುನಾಥ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಬಗ್ಗೆ ರಾಜ್ಯಾದ್ಯಂತ ಜನರಲ್ಲಿ ಒಳ್ಳೆಯ ಭಾವನೆ ಇದೆ. ಅವರು ಸಹ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದಾಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಜನ ಕೂಡ ಒತ್ತಡ ಹಾಕುತ್ತಿದ್ದಾರೆ ಎಂದರು.

ಮಂಜುನಾಥ್ ಅವರು ಚುನಾವಣೆಗೆ ಸ್ಪರ್ಧಿಸುವ ವಿಚಾರದಲ್ಲಿ ಬಹಿರಂಗವಾಗಿ ಇದುವರೆಗೂ ಏನನ್ನೂ ಹೇಳಿಲ್ಲ. ರಾಜಕೀಯ ಪ್ರವೇಶ ಮಾಡುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಸಮಯ ಬಂದಾಗ ಈ ಎಲ್ಲಾ ವಿಚಾರ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಸ್ಥಾನ ಗೆಲ್ಲಬೇಕೆಂಬ ನಿಟ್ಟಿನಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೆಹಲಿ ಭೇಟಿ ಸಂದರ್ಭದಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಅಮಿತ್ ಶಾ ಅವರು ಸಹ ಹಲವು ಸಲಹೆ- ಸೂಚನೆಗಳನ್ನು ನೀಡಿದ್ದಾರೆ ಎಂದರು.

ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿ ಹೋರಾಟ ಮಾಡಲಿದ್ದು, ಏನೇ ತೀರ್ಮಾನ ಕೈಗೊಂಡರೂ ಉಭಯ ಪಕ್ಷಗಳ ನಾಯಕರು ಚರ್ಚಿಸಿ ಒಮ್ಮತದ ನಿರ್ಣಯ ಕೈಗೊಳ್ಳಲಾಗುವುದು. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಸೋಮವಾರ ಬಿಜೆಪಿ ಹಮ್ಮಿಕೊಳ್ಳಲಿರುವ ರಾಜಭವನ ಚಲೋ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗುತ್ತೇವೆ ಎಂದರು.

2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿಮಾಡಿಕೊಂಡಿದ್ದ ಜೆಡಿಎಸ್ 7 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಹಾಸನದಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಇತರ ನಾಯಕರು ಬಿಜೆಪಿ ಎದುರು ಸೋತಿದ್ದರು.

Leave a Reply