ಇಸ್ರೋ ವಿಜ್ಞಾನಿಗಳಿಗೆ ರಾಜ್ಯ ಸರ್ಕಾರದಿಂದ ವಿಶೇಷ ಗೌರವ ಸಲ್ಲಿಸಲಾಗುವುದು: ಸಿದ್ದರಾಮಯ್ಯ

3 years ago

#chandrayaan3 #ISRO #scientists #special #honor #state #govt #Siddaramaiah

ಬೆಂಗಳೂರು: ಯಶಸ್ವಿ ಚಂದ್ರಯಾನದ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಇಸ್ರೋದ ವಿಜ್ಞಾನಿಗಳಿಗೆ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ಸನ್ಮಾನಿಸುವ ಮೂಲಕ ವಿಶೇಷ ಗೌರವ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ತೆರಳಿ ಎಲ್ಲಾ ವಿಜ್ಞಾನಿಗಳು, ತಂತ್ರಜ್ಞರು ಸೇರಿದಂತೆ ಇತರೆ ಸಿಬ್ಬಂದಿಯನ್ನು ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಅವರು, ಐತಿಹಾಸಿಕ ಸಾಧನೆ ಮಾಡಿರುವ ಇವರುಗಳನ್ನು ಸತ್ಕರಿಸುವುದು ನಮ್ಮ ಹೆಮ್ಮೆ ಇದಕ್ಕಾಗಿ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಿ ಇಸ್ರೋ ವಿಜ್ಞಾನಿಗಳನ್ನು ಗೌರವಿಸಲಾಗುತ್ತದೆ ಎಂದರು.

ವಿಜ್ಞಾನಿಗಳು ಹಗಲು ಇರುಳು ಎನ್ನದೆ ಇದಕ್ಕಾಗಿ ಶ್ರಮಿಸಿದ್ದಾರೆ. ದೇಶದ ಒಟ್ಟು ಒಂದು ಸಾವಿರ ವಿಜ್ಞಾನಿಗಳು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನಿಂದಲೇ 500 ಜನ ಪಾಲ್ಗೊಂಡಿದ್ದಾರೆ. ಸೆಪ್ಟೆಂಬರ್ 02 ರ ನಂತರ ಸನ್ಮಾನ ಕಾರ್ಯಕ್ರಮದ ದಿನಾಂಕ ನಿಗದಿಯಾಗಲಿದೆ ಎಂದು ಹೇಳಿದರು.

ಇಸ್ರೋ ಸಾಧನೆಯಿಂದ ಇಡೀ ಜಗತ್ತು ಭಾರತದ ಕಡೆಗೆ ನೋಡುವಂಥ ಕೆಲಸವಾಗಿದೆ. ಜಗತ್ತಿನಲ್ಲಿಯೇ ರಷ್ಯಾ, ಅಮೆರಿಕ, ಚೈನಾ ದೇಶಗಳನ್ನು ಬಿಟ್ಟರೆ ಚಂದ್ರನ ದಕ್ಷಿಣ ಭಾಗದಲ್ಲಿ ಕಾಲಿರಿಸಿರುವ ನಾಲ್ಕನೇ ದೇಶ ಭಾರತ. ನಾವೆಲ್ಲರೂ ಇಸ್ರೋ ಸಾಧನೆಯನ್ನು ಮೆಚ್ಚಿ ಅಭಿನಂದಿಸಬೇಕು ಎಂದು ತಿಳಿಸಿದರು.

ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿದಂತೆ ಕರ್ನಾಟಕದ 500 ವಿಜ್ಞಾನಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಅವರೆಲ್ಲರನ್ನೂ ಸನ್ಮಾನಿಸಲಾಗುವುದು. 3 ಲಕ್ಷ 84 ಕಿಮೀ ಪ್ರಯಾಣ ಮಾಡಿರುವ ವಿಕ್ರಂ ಸಾಧನೆ ಕಡಿಮೆಯಲ್ಲ. ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಸುರಕ್ಷಿತವಾಗಿ ಇಳಿದಿರುವುದು ಐತಿಹಾಸಿಕ ಸಾಧನೆ ಇಸ್ರೋ ವಿಜ್ಞಾನಿಗಳ ಎಲ್ಲಾ ಪ್ರಯತ್ನಕ್ಕೆ ಸರ್ಕಾರದ ಬೆಂಬಲ ಇರಲಿದೆ. ಇದು ದೇಶದ ಹೆಮ್ಮೆ ಎಂದರು.

ನಮ್ಮ ಹೆಮ್ಮೆ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, 60 ರ ದಶಕದಲ್ಲಿ ಸಣ್ಣ ಶೆಡ್‌ನಲ್ಲಿ ಪ್ರಾರಂಭವಾಗಿ ಇಂದು ಬೃಹದಾಕಾರವಾಗಿ ಬೆಳೆದಿರುವ ಇಸ್ರೋ ಶ್ರಮಕ್ಕೆ ನಾವೆಲ್ಲ ಅಭಿನಂದಿಸುತ್ತೇವೆ. ಇದರೊಂದಿಗೆ ದೇಶದ ಮೊದಲ ಪ್ರಧಾನಿಗಳಾದ ಜವಹರಲಾಲ್ ನೆಹರು ಅವರು ಕಂಡ ಕನಸು ಇಂದು ನನಸಾಗಿರುವುದಕ್ಕೆ ಭಾರತೀಯನಾಗಿ ನನಗೆ ಹೆಮ್ಮೆಯಾಗುತ್ತಿದೆಎಂದು ಸಂತಸ ವ್ಯಕ್ತಪಡಿಸಿದರು.

ಈ ಚಂದ್ರಯಾನದ ಯಶಸ್ಸಿನಲ್ಲಿ ದಕ್ಷಿಣ ಭಾರತದ ಹಾಗೂ ಭಾರತದ ಎಲ್ಲಾ ಭಾಗಗಳಿಂದ ಬಂದಂತಹ ವಿಜ್ಞಾನಿಗಳ ಪರಿಶ್ರಮವಿದೆ. ಭಾರತ ಮತ್ತೊಮ್ಮೆ ಜಗತ್ತಿಗೆ ತನ್ನ ಶಕ್ತಿ ಸಾಮರ್ಥ್ಯವನ್ನು ಪರಿಚಯಿಸಿದೆ. ಕನ್ನಡಿಗರ ಪರಿಶ್ರಮ ಇದರಲ್ಲಿ ಹೆಚ್ಚಿದ್ದು, ಕನ್ನಡಿಗನಾಗಿ ನನಗೆ ಹೆಮ್ಮೆಯ ವಿಚಾರ ಎಂದು ಹೇಳಿದರು.

Leave a Reply