ಸಿಆರ್ ಪಿಎಫ್ ನೇಮಕಾತಿಯಲ್ಲೂ ಕೇಂದ್ರ ಸರ್ಕಾರ ಕೇವಲ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಪರೀಕ್ಷೆ ನಡೆಸಲು ಮುಂದಾಗುವ ಮೂಲಕ ಹಿಂದಿಯೇತರರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಿದೆ. ಸ್ವತಂತ್ರ ಭಾರತದಲ್ಲಿ ಹಿಂದಿಯೇತರರು ಸಮಾನತೆಯ ಹಕ್ಕು ಇಲ್ಲದಂತೆ ಬದುಕುವಂತಾಗಿದೆ.
ಕೇಂದ್ರೀಯ ಮೀಸಲು ಪಡೆಯಲ್ಲಿ ಖಾಲಿ ಇರುವ 9212 ಹುದ್ದೆಗಳ ನೇಮಕಾತಿಗೆ ನಡೆಸಲಿರುವ ಪರೀಕ್ಷೆಗಳು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ನಡೆಯಲಿದೆ ಎಂದು ನೋಟಿಫಿಕೇಷನ್ ನಲ್ಲಿ ತಿಳಿಸಲಾಗಿದೆ. ಎಲ್ಲ ಹುದ್ದೆಗಳನ್ನು ಹಿಂದಿಭಾಷಿಕರಿಗೆ ಮಾತ್ರ ನೀಡಲು ಈ ಕುತಂತ್ರ ನಡೆಸಲಾಗಿದೆ.
ಖಾಲಿ ಇರುವ ಹುದ್ದೆಗಳಲ್ಲಿ ಕರ್ನಾಟಕದಲ್ಲಿ ಖಾಲಿ ಇರುವ 466 ಹುದ್ದೆಗಳು ಸೇರಿವೆ. ಈ ಹುದ್ದೆಗಳಿಗೆ ಆಯ್ಕೆಯಾಗುವವರಿಗೆ ಹಿಂದಿ ಪರೀಕ್ಷೆ ಯಾಕೆ? ಕನ್ನಡದಲ್ಲಿ ಯಾಕೆ ಪರೀಕ್ಷೆ ಇಲ್ಲ? ಕನ್ನಡದ ಮಕ್ಕಳಿಗೆ ಸಲ್ಲಬೇಕಾದ ಹುದ್ದೆಗಳನ್ನು ಹಿಂದಿ ಭಾಷಿಕರಿಗೆ ಯಾಕೆ ನೀಡಲಾಗುತ್ತಿದೆ?
ಹಿಂದಿಯೂ ಕನ್ನಡದ ಹಾಗೆಯೇ ಒಂದು ಪ್ರಾದೇಶಿಕ ಭಾಷೆ. ಹಿಂದಿ ಭಾಷಿಕರಿಗೆ ಇರುವ ಅವಕಾಶಗಳು ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಇತರೆ ಭಾಷಿಕರಿಗೆ ಯಾಕೆ ನೀಡಲಾಗುತ್ತಿಲ್ಲ. ಈ ರೀತಿಯ ಅಸಮಾನತೆ ಸಂವಿಧಾನದ ಹದಿನಾಲ್ಕನೇ ವಿಧಿಯ ಉಲ್ಲಂಘನೆಯಲ್ಲವೇ?
ಕೇಂದ್ರ ಸರ್ಕಾರ ಕೂಡಲೇ ನೋಟಿಫಿಕೇಷನ್ ಹಿಂದಕ್ಕೆ ಪಡೆದು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ನಡೆಸಬೇಕು. ಆಯಾ ರಾಜ್ಯದ ಖಾಲಿ ಹುದ್ದೆಗಳನ್ನು ಆಯಾ ರಾಜ್ಯದ ಅಭ್ಯರ್ಥಿಗಳಿಗೆ ಮೀಸಲಾಗಿರಿಸಬೇಕು.
ಈಗಾಗಲೇ ತೆಲಂಗಾಣ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳು ಸಿಆರ್ ಪಿಎಫ್ ಪರೀಕ್ಷೆಗಳನ್ನು ಇತರ ಭಾರತೀಯ ಭಾಷೆಗಳಲ್ಲಿ ನಡೆಸದೇ ಇರುವುದನ್ನು ಖಂಡಿಸಿವೆ. ಕೇಂದ್ರ ಸರ್ಕಾರ ಕೂಡಲೇ ನೋಟಿಫಿಕೇಷನ್ ಹಿಂದಕ್ಕೆ ಪಡೆದು ಹಿಂದಿಯೇತರರಿಗೆ ಆಗುತ್ತಿರುವ ಅನ್ಯಾಯಗಳನ್ನು ತಡೆಗಟ್ಟಬೇಕು.
- ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ




