ಕೊರೋನಾ ತುರ್ತು  ಪರಿಸ್ಥಿತಿ ಘೋಷಿಸಿ: ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಣಕ್ಕೆ ಪಡೆಯಲಿ

5 years ago

ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂ ಅಂತಾರಲ್ಲ ಹಾಗೆ ಈ ವಾರ್ ರೂಂ ಕಥೆ

ಕೃಷಿ ಇಲಾಖೆ ತೋಟಗಾರಿಕೆ ಇಲಾಖೆ ಮಾಡಿರುವ ವಾರ್ ರೂಮ್ ರೈತರಿಗೆ ಏನು ಪ್ರಯೋಜನ ಸಚಿವರೇ ತಿಳಿಸಲಿ

ಕೊರೋನಾ ತುರ್ತು  ಪರಿಸ್ಥಿತಿ ಘೋಷಿಸಿ ಆರು ತಿಂಗಳ ಕಾಲ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯಲಿ

ಬೆಂಗಳೂರು: ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಪಟ್ಟಭದ್ರರ ಹಿಡಿತದಲ್ಲಿರುವ ಕಾರಣ ಸರ್ಕಾರದ ಆದೇಶಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.

ಬಡವರಿಗೆ ಹಳ್ಳಿಗಾಡಿನ ಜನರಿಗೆ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ, ಹಾಸಿಗೆ ಅಮ್ಲಜನಕ ವೆಂಟಿಲೇಟರ್ ಇಲ್ಲಾ ಎನ್ನುತ್ತಾರೆ. ಕಷ್ಟಪಟ್ಟು ಆಸ್ಪತ್ರೆಗೆ ದಾಖಲಾದ ರೋಗಿಗಳಿಗೂ ಚಿಕಿತ್ಸೆ ಫಲಕಾರಿಯಾಗದೆ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.

ಆಸ್ಪತ್ರೆಗಳಲ್ಲಿ ಸೇವಾ ಮನೋಭಾವನೆ ಕಡಿಮೆಯಾಗಿ ಹಣ ದೋಚುವ ದಂಧೆ ಹೆಚ್ಚುತ್ತಿದೆ ಇದನ್ನು ಗಮನಿಸಿ ರಾಜ್ಯ ಸರ್ಕಾರ ಕೊರೋನಾ ತುರ್ತುಪರಿಸ್ಥಿತಿ ಜಾರಿ ಮಾಡಿ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರ ಕನಿಷ್ಠ 6 ತಿಂಗಳ ಕಾಲ ಸರ್ಕಾರದ ನಿಯಂತ್ರಣಕ್ಕೆ ಪಡೆದುಕೊಳ್ಳಬೇಕು. ಇದರಿಂದ  ಕೊರೋನಾ ಶಂಕಿತ ಜನರಿಗೆ ಬಡವರಿಗೆ ಸುಲಭವಾಗಿ ಚಿಕಿತ್ಸೆ ಕೊಡಿಸಲು ರೋಗಿಗಳಿಂದ ನಿರ್ದಿಷ್ಟ ಪಡಿಸಿದ ಹಣ ಪಡೆದುಕೊಳ್ಳುವುದು ಸಾಧ್ಯವಾಗುತ್ತದೆ ಎಂದಿದ್ದಾರೆ.

ಯಾವುದೇ ಆಸ್ಪತ್ರೆಗಳಲ್ಲಿ  ಚಿಕಿತ್ಸೆ ಫಲಕಾರಿಯಾಗದೆ  ಮರಣ ಹೊಂದಿದ  ರೋಗಿಯ ಹಣ ಪಾವತಿ  ಮನ್ನಾ ಮಾಡಲು ಸರ್ಕಾರ ನಿರ್ಧಾರ ಕೈಗೊಳ್ಳಲಿ. ಗ್ರಾಮೀಣ ಭಾಗದಲ್ಲಿ ಕೋರೋನ ಶಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ತಾಲೂಕು ಮಟ್ಟದಲ್ಲಿರುವ ಕೋವಿಡ್ ಕೇಂದ್ರಗಳು ಸಾಕಾಗುತ್ತಿಲ್ಲ. ಆದ್ದರಿಂದ ಹಳ್ಳಿಗಾಡಿನ ಜನ  ನಗರ ಪ್ರದೇಶಗಳಿಗೆ ಬಂದು ಚಿಕಿತ್ಸೆ ಪಡೆದುಕೊಳ್ಳಲು ಆಸ್ಪತ್ರೆಗಾಗಿ ಹುಡುಕಾಡುತ್ತಿದ್ದಾರೆ. ಆಸ್ಪತ್ರೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದಕಾರಣ ತಾಲೂಕು ಮಟ್ಟದಲ್ಲಿ ಹೆಚ್ಚುವರಿಯಾಗಿ ಕೋವಿಡ್ ಕೇಂದ್ರಗಳನ್ನು ಹಾಗೂ ತಾಲೂಕು ಮಟ್ಟದ ವಾರ್ ರೂಮ್ ತುರ್ತಾಗಿ ತೆರೆಯಬೇಕು. ಈ ಕೇಂದ್ರಗಳಿಗೆ ನಿವೃತ್ತ ವೈದ್ಯರ ಸೇವೆಯನ್ನ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಹಳ್ಳಿಗಳಲ್ಲಿ ಕರೋನಾ ಪೀಡಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಹಳ್ಳಿ ಜನರು ಕರೋನ ಬಗ್ಗೆ ಭಯ ಪಡುತ್ತಿದ್ದಾರೆ. ಆದ್ದರಿಂದ ಸಮರೋಪಾದಿಯಲ್ಲಿ ಕೊರೋನಾ ಪರೀಕ್ಷೆಗಳನ್ನು ನಡೆಸುವಂತಾಗಬೇಕು. ಕೋವಿಡ್ ಕೇಂದ್ರಗಳನ್ನು ತೆರೆಯಲು ಸಮುದಾಯ ಭವನಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯಾದ್ಯಂತ ಜನಪ್ರತಿನಿಧಿಗಳು ಇಂತಹ ಸಂಕಷ್ಟದ ಸಮಯದಲ್ಲಿ ಟೀಕೆ-ಟಿಪ್ಪಣಿಗಳನ್ನು ಬಿಟ್ಟು ಜನರಿಗೆ ತಪ್ಪು ಮಾಹಿತಿ ನೀಡುವುದನ್ನು ನಿಲ್ಲಿಸಿ, ಮಾದರಿಯಾಗಿ  ಕಾರ್ಯನಿರ್ವಹಿಸುತ್ತಿರುವ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜನಪ್ರತಿನಿಧಿ ಶಾಸಕರು ಗೋಪಾಲಯ್ಯನವರ ಸೇವಾಕಾರ್ಯವನ್ನು ಮಾದರಿಯಾಗಿ ಬಳಸಿಕೊಂಡು, ರಾಜ್ಯಾದ್ಯಂತ ಆಯಾ ಕ್ಷೇತ್ರದ ಶಾಸಕರು ಸ್ವಯಂ ಪ್ರೇರಿತವಾಗಿ ಇದೇ ರೀತಿ ಕಾರ್ಯ ನಡೆಸುವ ಮೂಲಕ ಅವರ ಕ್ಷೇತ್ರದ ಮತದಾರರ ರಕ್ಷಣೆಗೆ ನಿಲ್ಲಬೇಕು ಎಂದಿದ್ದಾರೆ.

ರೈತರ ಕೃಷಿ ಉತ್ಪನ್ನಗಳಿಗೆ ಖರೀದಿದಾರರು ಇಲ್ಲದೆ ಬೆಲೆ ಕುಸಿತವಾಗುತ್ತಿರುವ ಕಾರಣ ಸರ್ಕಾರವೇ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸುವಂಥ ವ್ಯವಸ್ಥೆ ಆಗಬೇಕು. ಈ ಮೂಲಕ ರೈತರ ರಕ್ಷಣೆ ಮಾಡಬೇಕು. ಸರ್ಕಾರಕ್ಕೆ ಇದು ಸಾಧ್ಯವಾಗದಿದ್ದರೆ  ಕೃಷಿಕ್ಷೇತ್ರವನ್ನು ಲಾಕ್ಡೌನ್ ವ್ಯಾಪ್ತಿಗೆ ಸೇರಿಸದೆ, ಕೃಷಿ ಚಟುವಟಿಕೆ  ನಿಲ್ಲಿಸಿ ರೈತರು ಮತ್ತಷ್ಟು ಅಪಾಯಕ್ಕೆ ಸಿಲುಕುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೊರೋನಾ ರೋಗಿಗಳಿಗೆ ನೀಡುವ ಚಿಕಿತ್ಸೆಯಲ್ಲಿ ಹೆಚ್ಚಿನ ಶ್ರಮ ವಹಿಸುತ್ತಿರುವ ಸೇವಾ ಸಿಬ್ಬಂದಿ ಶುಶ್ರೂಕಿಯರು, ಆಯಾಗಳು, ಸ್ವಚ್ಛತಾಕರ್ಮಿಗಳ ಸಂಬಳವನ್ನು ಹೆಚ್ಚುವರಿಯಾಗಿ ಬೋನಸ್ ನೀಡುವ ಮೂಲಕ ಪ್ರೋತ್ಸಾಹಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Leave a Reply