ಚೊಚ್ಚಲ ಡಿಜಿಟಲ್ ಪ್ರವೇಶ ಮತ್ತು ಇಕ್ಕಟ್ ಚಿತ್ರದ ಬಗ್ಗೆ ಅನಿಸಿಕೆ ಹಂಚಿಕೊಂಡ ನಟಿ
ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜುಲೈ 21ರ ಬುಧವಾರ ‘ಇಕ್ಕಟ್’ ಚಿತ್ರ ಬಿಡುಗಡೆಯಾಯಿತು. ಈ ಬಗ್ಗೆ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಭೂಮಿ ಶೆಟ್ಟಿ, ತಮ್ಮ ಪಾತ್ರದ ಬಗ್ಗೆ ಹಾಗೂ ಈ ಹಾಸ್ಯ ಚಿತ್ರದಲ್ಲಿ ‘ಲಾಕ್‌ಡೌನ್’ ಎನ್ನುವ ಅನನ್ಯ ಸೆಟ್ಟಿಂಗ್ ಬಗ್ಗೆ ಉತ್ಸುಕರಾಗಿದ್ದಾರೆ.
ಮಾಜಿ ಬಿಗ್ ಬಾಸ್ ಸ್ಪರ್ಧಿ ಭೂಮಿ ಶೆಟ್ಟಿ ಮತ್ತು ನಾಗಭೂಷಣ ಅಭಿನಯದ ಇಕ್ಕಟ್ ಚಿತ್ರವನ್ನು ಇಶಮ್ ಖಾನ್, ಹಸೀನ್ ಖಾನ್ ನಿರ್ದೇಶಿಸಿದ್ದಾರೆ. ವಿಚ್ಛೇದನ ಪಡೆಯುವ ಹಾದಿಯಲ್ಲಿರುವ ಅತೃಪ್ತ ದಂಪತಿಯ ಸುತ್ತ ಸುತ್ತುವ ಕಥೆಯಲ್ಲಿ ಲಾಕ್‌ಡೌನ್ ಮುಖ್ಯ ಪಾತ್ರ ವಹಿಸುತ್ತದೆ. ಸಾಂಕ್ರಾಮಿಕ ರೋಗದ ಕಾರಣ ರಾಷ್ಟ್ರವ್ಯಾಪಿ ಲಾಕ್‌ಡೌನ್ ಘೋಷಣೆಯಾದಾಗ ಮನಸ್ಸಿಲ್ಲದಿದ್ದರೂ ಪರಸ್ಪರ ಒಟ್ಟಿಗೇ ಸಮಯ ಕಳೆಯುವ ಜೋಡಿ ಅದನ್ನು ಹೇಗೆ ಅನುಭವಿಸುತ್ತಾರೆ ಎನ್ನುವ ಎಳೆಯನ್ನು ಕಥೆ ಒಳಗೊಂಡಿದೆ.
ಚಿತ್ರದಲ್ಲಿ ಈ ಪಾತ್ರವನ್ನು ಹೇಗೆ ಪಡೆದರು ಮತ್ತು ಚಿತ್ರದಲ್ಲಿ ಕೆಲಸ ಮಾಡಿದ ಒಟ್ಟಾರೆ ಅನುಭವ ಹೇಗಿತ್ತು ಎನ್ನುವುದರ ಬಗ್ಗೆ ಮಾತನಾಡಿದ ಭೂಮಿ ಶೆಟ್ಟಿ, ‘‘ಚಿತ್ರದ ಬಗ್ಗೆ ನನಗೆ ಕರೆ ಬಂದಾಗ, ಪ್ರಪಂಚದ ಎಲ್ಲಾ ಜನರಂತೆ ನಾನೂ ಸಹ ನನ್ನ ಮನೆಯಲ್ಲಿ ಬಂಧಿಯಾಗಿದ್ದೆ. ಮುಖ್ಯ ಪಾತ್ರಕ್ಕಾಗಿ ಆಡಿಷನ್ ನೀಡಲು ಕೇಳಿದರು. ಕಥಾವಸ್ತು ನನಗೆ ಬಹಳ ಆಸಕ್ತಿದಾಯಕವಾಗಿ ಕಂಡಿತು. ಮತ್ತು ಕೂಡಲೇ ನನ್ನ ಆಡಿಷನ್ ವೀಡಿಯೊ ಕಳುಹಿಸಿದೆ. ನಂತರ ಇಡೀ ತಂಡವನ್ನು ಭೇಟಿಯಾಗಲು ಬೆಂಗಳೂರಿಗೆ ಬರಲು ಹೇಳಿದರು. ಇಕ್ಕಟ್ ಪಾತ್ರವರ್ಗಕ್ಕೆ ಸೇರಲು ನಾನು ಬಹಳ ಉತ್ಸಾಹದಲ್ಲಿದ್ದೆ. ಇದು ನನ್ನ ಮೊದಲ ಚಿತ್ರ ಮತ್ತು ಈ ರೀತಿಯ ಅವಕಾಶವೊಂದು, ವಿಶೇಷವಾಗಿ ಈ ಲಾಕ್‌ಡೌನ್ ಸಮಯದಲ್ಲಿ ನನ್ನ ಹಾದಿಯಲ್ಲಿ ಬರಲಿದೆ ಎಂದು ನಾನು ನಿರೀಕ್ಷಿಸಿರಲಿಲ್ಲ’’ ಎಂದರು.
‘‘ನಾಗಭೂಷಣ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ನನಗೆ ಬಹಳ ಖುಷಿಯಾಗಿದೆ. ನಾನು ಅವರ ಚಲನಚಿತ್ರ ‘ಫ್ರೆಂಚ್ ಬಿರಿಯಾನಿ’ ನೋಡಿದ್ದೇನೆ ಮತ್ತು ಅದನ್ನು ಬಹಳ ಇಷ್ಟಪಟ್ಟಿದ್ದೇನೆ. ಅವರೊಂದಿಗೆ ಜೋಡಿಯಾಗಿ ಅಭಿನಯಿಸುವ ಅವಕಾಶ ಸಿಕ್ಕಿದ್ದು ಬಹಳ ಸಂತಸ ತಂದಿದೆ’’ ಎಂದರು.
ಚಿತ್ರದಲ್ಲಿ ‘ಜಾನ್ವಿ’ ಎಂಬ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅವರು, ‘‘ಈ ಚಿತ್ರ ಅನೇಕ ಛಾಯೆಗಳನ್ನು ಹೊಂದಿದೆ. ನಾನು ಜಾನ್ವಿಯಂತಹ ಪಾತ್ರವನ್ನು ನಿರ್ವಹಿಸುವಾಗ ಬಹಳ ಎಂಜಾಯ್ ಮಾಡಿದೆ. ಜಾನ್ವಿ ಹಳ್ಳಿಯ ಹುಡುಗಿಯಾಗಿದ್ದು, ಕೆಲವೊಮ್ಮೆ ಸಣ್ಣಸಣ್ಣ ಕಾರಣಗಳಿಗೆ ಕಿರಿಕಿರಿ ಮಾಡಿಕೊಳ್ಳುತ್ತಾಳೆ. ಅವಳು ನಗರ ಜೀವನವನ್ನು ಬಯಸುತ್ತಾಳೆ, ಅಲ್ಲಿ ತಾನು ಬಯಸಿದ ರೀತಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳಬಹುದು, ಸ್ಟೈಲಿಶ್ ಆಗಿ ಇರಬಹುದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಚೆನ್ನಾಗಿ ಕಾಣಿಸಬಹುದು ಎಂದುಕೊಂಡಿರುತ್ತಾಳೆ. ಅವಳ ಮತ್ತು ಅವಳ ಪತಿ ವಾಸು ನಡುವೆ ಪ್ರೀತಿ-ದ್ವೇಷದ ಸಂಬಂಧವಿದೆ, ಅವಳು ಅವನನ್ನು ಹೆಚ್ಚು ಹಚ್ಚಿಕೊಳ್ಳುವುದಿಲ್ಲ, ಆದರೆ ಒಳಗಿನಿಂದ ಅವನ ಮೇಲೆ ಸಾಕಷ್ಟು ಪ್ರೀತಿ ಹೊಂದಿರುತ್ತಾಳೆ. ಇದನ್ನು ಪ್ರೇಕ್ಷಕರು ಖಂಡಿತವಾಗಿಯೂ ಇಷ್ಟಪಡುತ್ತಾರೆ ಎಂದರು.
ಚಿತ್ರೀಕರಣವನ್ನು ಪ್ರಾರಂಭಿಸಿದ ನಂತರ, ನಾವು ಪಾತ್ರಗಳನ್ನು ನಿರ್ಮಿಸಲು ಪ್ರಾರಂಭಿಸಿದೆವು ಮತ್ತು ಸುಧಾರಿಸುತ್ತ ಹೋದೆವು. ಇಕ್ಕಟ್‌ನ ಇಡೀ ತಂಡವು ಸೂಪರ್ ಸಪೋರ್ಟಿವ್ ಆಗಿತ್ತು. ಇದು ಒಂದು ಸಣ್ಣ ತಂಡವಾಗಿತ್ತು ಮತ್ತು ನಾವು ಒಂದು ಕುಟುಂಬದವರಾಗಿದ್ದೇವೆ’’ ಎಂದರು.
ಇಂದು ಜುಲೈ 21, 2021ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇಕ್ಕಟ್‌ನೊಂದಿಗೆ ಆಸಕ್ತಿದಾಯಕ ಜಾಯ್‌ರೈಡ್‌ಗೆ ಸಿದ್ಧರಾಗಿ.



