ಶ್ರೇಷ್ಠ ಪತ್ರಕರ್ತರ ಸಾಲಿಗೆ ಸೇರುವ ಪಿ.ರಾಮಯ್ಯನವರ “ನಾನು ಹಿಂದೂ ರಾಮಯ್ಯ”ಎಂಬ ಅವರ ಅರವತ್ತು ವರ್ಷಗಳ ಅನುಭವ ಕಥನವನ್ನು ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.ಕಾರ್ಯಕ್ರಮ ಮುಗಿದ ನಂತರ ಅಂದು ಸಂಜೆ ರಾಮಯ್ಯನವರು ನನಗೆ ಫೋನ್ ಮಾಡಿ”ನೀವೆಲ್ಲಾ ಸಮಾರಂಭಕ್ಕೆ ಬಂದಿದ್ದು ನನಗೆ ಸಂತೋಷವಾಯಿತು “ಎಂದರು.ನನ್ನಂತಹ ಕಿರಿಯನಿಗೆ ಹೀಗೆ ಫೋನ್ ಮಾಡಿ ಮಾತನಾಡಿದ್ದು ರಾಮಯ್ಯನವರ ದೊಡ್ಡ ಗುಣ.
ಗ್ರಾಮೀಣ ಬದುಕಿನ ಸೊಗಡು,ಶ್ರದ್ದೆ ಮತ್ತು ಧಾರ್ಮಿಕ ನಂಬಿಕೆಗಳೇ ಅವರ ಬದುಕಿನ ಭದ್ರ ಬುನಾದಿ.ಕನ್ನಡ ಮಾಧ್ಯಮದಲ್ಲಿ ಓದಿದ್ದ ಹಳ್ಳಿ ಗಾಡಿನ ಯುವಕನೊಬ್ಬ ರಾಷ್ಟ್ರೀಯ ಇಂಗ್ಲಿಷ್ ಪತ್ರಿಕೆಯೊಂದರ ಸಂಪಾದಕೀಯ ಮುಖ್ಯಸ್ಥರಾಗುವ ಸ್ಫೂರ್ತಿದಾಯಕ ಯಶೋಗಾಥೆಯಿದು.ಇಂಜಿನಿಯರಿಂಗ್ ಸೀಟು ದೊರೆಯುವುದು ವಿಳಂಬವಾದಾಗ ರಾಮಯ್ಯನವರು ಬೆಂಗಳೂರಿನಲ್ಲಿ ದಿ ಹಿಂದೂ ಪತ್ರಿಕೆಯ ಕಿರಿಯ ವರದಿಗಾರರಾಗಿ ಸೇರಿಕೊಳ್ಳುತ್ತಾರೆ.ಆಗ ಹಿಂದೂ ಕಚೇರಿ ಸಂಪೂರ್ಣ ತಮಿಳುಮಯವಾಗಿತ್ತು.ಅವರು ರಾಮಯ್ಯನವರ ಇಂಗ್ಲಿಷ್ ಜ್ಞಾನದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರು.ಆಗ ಸುರಕ್ಷಿತವಾದ ಸರ್ಕಾರೀ ಉದ್ಯೋಗ ಸುಲಭವಾಗಿ ಸಿಗುತ್ತಿತ್ತು.ಆದರೆ ರಾಮಯ್ಯನವರು ಈ ಕುಹಕದ ಮಾತುಗಳನ್ನೇ ಸವಾಲಾಗಿ ಸ್ವೀಕರಿಸಿದರು.ಸರ್ಕಾರೀ ಕೆಲಸಕ್ಕೆ ಸೇರುವ ಉದ್ದೇಶವನ್ನೇ ಕೈಬಿಟ್ಟು ಹಿಂದೂ ಪತ್ರಿಕೆಯಲ್ಲಿಯೇ ಮುಂದುವರಿಯಲು ನಿರ್ಧರಿಸಿದರು.ಉತ್ತಮ ಇಂಗ್ಲಿಷ್ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಹಗಲು ರಾತ್ರಿ ಕಷ್ಟಪಟ್ಟರು.ಲೈಬ್ರರಿಯಲ್ಲಿ ಟೈಮ್,ಟೆಲಿಗ್ರಾಫ್ ಮುಂತಾದ ವಿದೇಶಿ ಪತ್ರಿಕೆಗಳ ವರದಿಯ ತುಣುಕುಗಳನ್ನು ಸಂಗ್ರಹಿಸಿದರು.ಆ ವರದಿಗಳಲ್ಲಿರುವ phrase(ನುಡಿ ಗಟ್ಟು)ಗಳನ್ನು ಅಭ್ಯಾಸ ಮಾಡಿದರು.ತಮ್ಮ ವರದಿಗಳಲ್ಲಿ ಅವುಗಳನ್ನು ಸೂಕ್ತವಾಗಿ ಬಳಸಿದರು.ಆದರೂ ಸಂಪಾದಕೀಯ ವಿಭಾಗದ ಕೆಲವರು ಆ ನುಡಿಗಟ್ಟುಗಳ ಬಳಕೆಯಲ್ಲಿಯೇ ತಪ್ಪುಗಳನ್ನು ಹುಡುಕಲು ಪ್ರಯತ್ನಿಸಿದರು.ಆಗ ಅದೇ ನುಡಿಗಟ್ಟುಗಳು ವಿದೇಶಿ ಇಂಗ್ಲಿಷ್ ಪತ್ರಿಕೆಗಳಲ್ಲಿ ಬಳಕೆಯಾಗಿರುವುದನ್ನು ರಾಮಯ್ಯನವರು ಅವರ ಗಮನಕ್ಕೆ ತಂದರು.ಆ ನಂತರ ಅವರೆಲ್ಲಾ ರಾಮಯ್ಯನವರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿದರು.ಕೇವಲ ಆರು ತಿಂಗಳಲ್ಲಿ ಪರಿಸ್ಥಿತಿ ಬದಲಾವಣೆಯಾಯಿತು.”ರಾಮಯ್ಯನವರೇ ನೀವು ತುಂಬಾ ಚೆನ್ನಾಗಿ ಬರೆಯುತ್ತೀರಿ.ಕೆಲವು ವರದಿಗಳನ್ನು ನೀವೇ ಎಡಿಟ್ ಮಾಡಿ”ಎಂದು ಹೇಳತೊಡಗಿದರು.ರಾಮಯ್ಯನವರ ಈ ಅನುಭವ ಇಂದಿನ ಯುವಕರಿಗೆ ಸ್ಫೂರ್ತಿದಾಯಕವಾಗಿದೆ.
ಸಂಪಾದಕೀಯ ತಂಡದಲ್ಲಿರುವ ಎಲ್ಲಾ ಉದ್ಯೋಗಿಗಗಳ ಕಾರ್ಯವೈಖರಿ ಮತ್ತು ಸಾಧನೆ ಬಗ್ಗೆ ಚೆನ್ನೈ ನಲ್ಲಿರುವ ಪ್ರಧಾನ ಕಚೇರಿಗೆ ನಿಯಮಿತವಾಗಿ ವರದಿಯನ್ನು ಕಳುಹಿಸುವ ಪರಿಪಾಠವಿತ್ತು.ಆದರೆ ರಾಮಯ್ಯ ನವರು ಮುಖ್ಯಸ್ಥರಾಗುತ್ತಿದ್ದಂತೆ ಅದನ್ನು ನಿಲ್ಲಿಸಿದರು.ಸಂಪಾದಕೀಯ ಮಂಡಳಿಯ ಪ್ರಮುಖರೊಬ್ಬರು” ನೀವು ಯಾಕೆ ಯಾರ ಬಗ್ಗೆಯೂ ವರದಿ ನೀಡುವುದಿಲ್ಲ.ಸಿಬ್ಬಂದಿಯ ಕೆಲಸ ತೃಪ್ತಿಕರವಾಗಿದೆಯೇ?ಇಲ್ಲವೇ?ಎನ್ನುವುದು ತಿಳಿಯುವುದು ಹೇಗೆ?”ಎಂದು ಪ್ರಶ್ನಿಸಿದರು.ಅದಕ್ಕೆ ರಾಮಯ್ಯನವರ ಪ್ರತಿಕ್ರಿಯೆ ಈ ರೀತಿ ಇತ್ತು:”ನೀವು ನನ್ನನ್ನು ಬೆಂಗಳೂರು ಸಂಪಾದಕೀಯ ವಿಭಾಗದ ಮುಖ್ಯಸ್ಥರಾಗಿ ನೇಮಿಸಿದ್ದೀರಿ.ತಂಡ ಸರಿಯಾಗಿ ಕೆಲಸ ಮಾಡುತ್ತಿಲ್ಲ ಅಥವಾ ತಂಡದ ಸದಸ್ಯರು ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ಅದಕ್ಕೆ ಹೊಣೆ ನಾನು ಮತ್ತು ಶಿಕ್ಷೆ ನನಗೇ ಆಗಬೇಕು”.
“ನಾನು ಎಂದೂ ಯಾರ ಬಗ್ಗೆಯೂ ಸಂಪಾದಕರಿಗೆ ಅಥವಾ ಮಾಲೀಕರಿಗೆ ದೂರು ಒಯ್ಯಲಿಲ್ಲ.ಯಾರಿಗೂ ಕೇಡು ಬಯಸಲಿಲ್ಲ.ಇದು ನಾನು ಆತ್ಮ ಸಾಕ್ಷಿಯಾಗಿ ಹೇಳುವ ಮಾತು” ಎಂದು ರಾಮಯ್ಯನವರು ಈ ಕೃತಿಯಲ್ಲಿ ನಿವೇದನೆ ಮಾಡಿಕೊಳ್ಳುತ್ತಾರೆ.ಇದನ್ನು ಓದುವಾಗ ನಮ್ಮ ಮನಸ್ಸು ತುಂಬಿ ಬರುತ್ತದೆ.ಇದು ನಾಯಕತ್ವದ ನಿಜವಾದ ಲಕ್ಷಣ ಕೂಡಾ.
ಪತ್ರಕರ್ತರಾಗಿ ರಾಮಯ್ಯನವರ ಕಾರ್ಯಕ್ಷಮತೆ ಬಗ್ಗೆ ಬೆಳಕು ಚೆಲ್ಲುವ ಒಂದು ಘಟನೆಯನ್ನು ಯಥಾವತ್ತಾಗಿ ಪ್ರಕಟಿಸಿದ್ದೇನೆ:”ವಿಶ್ವ ವಿಖ್ಯಾತ ಭೌತ ವಿಜ್ಞಾನಿ ಸರ್ ಸಿ ವಿ ರಾಮನ್ ಅವರನ್ನು ಒಮ್ಮೆ ಭೇಟಿ ಮಾಡಬೇಕಿತ್ತು.ಸಂದರ್ಭ:ಅವರ 80 ನೇ ವರ್ಷದ ಹುಟ್ಟು ಹಬ್ಬ. dr ರಾಮನ್ ಶಿಸ್ತಿಗೆ ಹೆಸರಾಗಿದ್ದರು.ವರದಿಗಳು ಸರಿಯಾಗಿಲ್ಲದಿದ್ದರೆ ತುಂಬಾ ಕೋಪ ಮಾಡಿಕೊಳ್ಳುತ್ತಿದ್ದರು.ನಾನು ಅವರನ್ನು ನೋಡಲು ಅವರಿದ್ದ ಭಾರತೀಯ ವಿದ್ಯಾ ಸಂಸ್ಥೆಯ ರಾಮನ್ institute ಗೆ ಹೋದೆ. ಅವರು ತಮ್ಮ ಕೊಠಡಿ ಹತ್ತಿರ ಹೋಗುತ್ತಿದ್ದಂತೆ ಒಳಗಡೆಯಿಂದ ಡಾ.ರಾಮನ್ ಅವರ ಹುಟ್ಟು ಹಬ್ಬ ಆಚರಿಸಬೇಕೆಂದಿದ್ದ ಕೆಲವರ ಬಗ್ಗೆ ಕೋಪಗೊಂಡಿದ್ದರು.ಅವರ ಆಪ್ತ ಕಾರ್ಯದರ್ಶಿ ಕೈ ಸಂಜ್ಞೆ ಮಾಡಿ ಒಳಗೆ ಹೋಗದಂತೆ ತಡೆದರು.ಸ್ವಲ್ಪ ಸಮಯದ ನಂತರ ಡಾ ರಾಮನ್ ಅವರು ಶಾಂತರಾದ ಮೇಲೆ ಮೆಲ್ಲನೆ ಒಳಗೆ ಇಣುಕಿದೆ. ಯಾರು?ಯಾಕೆ ಬಂದಿದ್ದೀರಿ?ಎಂದರು.ಇಲ್ಲೇ ನಮ್ಮ ಸಮಯ ಪ್ರಜ್ಞೆ ಕೆಲಸ ಮಾಡಿದ್ದು.”ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ನನ್ನ ಪತ್ರಿಕೆ ಪರವಾಗಿ ಮತ್ತು ವೈಯಕ್ತಿಕ ಶುಭಾಶಯಗಳನ್ನು ಹೇಳಲು ಬಂದೆ” ಎಂದೆ.ಡಾ ರಾಮನ್ ಅವರಿಗೆ ನನ್ನನ್ನು ಪತ್ರಕರ್ತನಾಗಿ ಬೆಳೆಸಿದ “ದಿ ಹಿಂದೂ “ಪತ್ರಿಕೆ ಬಗ್ಗೆ ತುಂಬಾ ಅಭಿಮಾನವಿತ್ತು.”ಸಂತೋಷ,ತಾವು ಹೋಗಬಹುದು.”ಎಂದರು ನಾನು ಇನ್ನೂ ನಿಂತಿದ್ದನ್ನು ನೋಡಿ,ಏನಾಗಬೇಕೆಂದು ಪ್ರಶ್ನಾರ್ಥಕವಾಗಿ ನನ್ನ ಕಡೆ ತಿರುಗಿ ನೋಡಿದರು. “ತಮ್ಮ ಹುಟ್ಟು ಹಬ್ಬದ ಸಂದರ್ಭದಲ್ಲಿ ದೇಶಕ್ಕೆ ಮತ್ತು ವಿಜ್ಞಾನಿಗಳ ಸಮುದಾಯಕ್ಕೆ ತಮ್ಮ ಸಂದೇಶವನ್ನು ಕೊಡಿ.ತಾವು ಇತ್ತೀಚೆಗೆ ಕೈಗೊಂಡಿರುವ ಸಂಶೋಧನೆಯನ್ನು ನಮ್ಮ ಓದುಗರಿಗೆ ತಿಳಿಸಲು ಈ ಸಂದರ್ಭ ಸೂಕ್ತ” ಎಂದೆ.” ಇಲ್ಲ, ಅದು ಈಗ ಸಾಧ್ಯವಿಲ್ಲ.”ಎಂದು ಡಾ ರಾಮನ್ ಖಡಾಖಂಡಿತವಾಗಿ ಹೇಳಿದರು.ನಾನು ತಮಿಳಿನಲ್ಲಿ ಮತ್ತೆ ಕೋರಿಕೆಯನ್ನು ಮುಂದಿಟ್ಟು “ನಾನು ಮಲ್ಲೇಶ್ವರದಲ್ಲಿ ನಿಮ್ಮ ಮನೆ ಹತ್ತಿರವೇ ವಾಸವಾಗಿದ್ದೇನೆ” ಎಂದೆ. ಅವರಿಗೆ ಏನನಿಸಿತೋ,ಸ್ವಲ್ಪ ಬದಲಾದಂತೆ ಕಂಡು ಬಂದು ಸುದ್ದಿಯ ಕುರಿತು ನನ್ನ ಉತ್ಕಟತೆಯನ್ನು ಗಮನಿಸಿ ತಮ್ಮ ಸಂಶೋಧನೆ ಬಗ್ಗೆ ಮಾತಾಡಲು ಮುಂದಾದರು. ಆಗ ಅವರು ಹೂವುಗಳಲ್ಲಿ ವಿವಿಧ ಬಣ್ಣಗಳು ಉಂಟಾಗಲು ಕಾರಣಗಳೇನು? ಅನ್ನುವುದರ ಬಗ್ಗೆ ಸಂಶೋಧನೆ ನಡೆಸುತ್ತಿದ್ದರು. ಸೂರ್ಯ ರಶ್ಮಿ ವಿಭಿನ್ನ ಕೋನಗಳಲ್ಲಿ ಪುಷ್ಪ ದಳಗಳನ್ನು ಹೊಕ್ಕಾಗ ಬೇರೆ ಬೇರೆ ಬಣ್ಣಗಳು ಉಂಟಾಗುತ್ತವೆ ಎಂಬುದು ಅವರ ಸಂಶೋಧನೆಯ ಸಾರಾಂಶ. ಅತಿ ಕ್ಲಿಷ್ಟವಾದ ವಿಜ್ಞಾನದ ಪದಗಳನ್ನು ಬಳಸಿ ಅವರು ಸಂಶೋಧನೆಯ ವಿವರಗಳನ್ನು ವೇಗವಾಗಿ ಹೇಳಲು ಆರಂಭಿಸಿದರು.ನಾನು ತಮಿಳಿನಲ್ಲಿ”ವರದಿ ಕರಾರುವಾಕ್ಕಾಗಿ ಇರಬೇಕು. ತಪ್ಪಾದರೆ ತಾವು ಕೋಪಗೊಳ್ಳುತ್ತೀರಿ”ಎಂದು ಹೆದರಿಕೊಂಡೇ ಹೇಳಿದೆ. ನನ್ನ ಕಡೆ ತೀವ್ರ ದೃಷ್ಟಿ ಬೀರಿ ಹುಸಿ ನಗೆಯೊಂದಿಗೆ ಪದಗಳನ್ನು ಸರಳೀಕರಿಸುತ್ತಾ ನಿದಾನವಾಗಿ ತಾವೇ ಸ್ಪಷ್ಟವಾಗಿ ಬರೆಸಿದರು. ಅಷ್ಟೇ ಅಲ್ಲದೆ “ವರದಿ ಬರೆದು ಓದಿ ಹೇಳುತ್ತೇನೆ. ಅದಕ್ಕೆ ಅವಕಾಶ ಮಾಡಿಕೊಡಿ”ಎಂದೆ. ಆಶ್ಚರ್ಯವೆಂದರೆ ಅವರು ನನ್ನ ಕರೆಗೆ ಕಾಯುತ್ತಿದ್ದರು. ಕಚೇರಿಗೆ ವಾಪಾಸ್ ಬಂದು ಇಡೀ ವರದಿಯನ್ನು ಬರೆದು ಅವರಿಗೆ ಓದಿ ಹೇಳಿದೆ.”ವರದಿ ಸರಿ ಇದೆ”ಎಂದರು. ಆ ವರದಿ ಪ್ರಕಟವಾದ ಮೇಲೆ ಅವರು ನನ್ನನ್ನು ಅಭಿನಂದಿಸಿದರು.”
ಇನ್ನೊಂದು ಪ್ರಸಂಗವನ್ನು ಸಂಕ್ಷಿಪ್ತವಾಗಿ ವಿವರಿಸುತ್ತೇನೆ. “ಬಿಜೆಪಿ ಯೊಂದಿಗೆ ಎಚ್ ಡಿ ಕುಮಾರಸ್ವಾಮಿ ಸರ್ಕಾರ ರಚಿಸಲು ನಿರ್ಧರಿಸಿದ್ದರು. ಈ ಬೆಳವಣಿಗೆ ದೇವೇ ಗೌಡರನ್ನು ಬಹಳ ನೋಯುವಂತೆ ಮಾಡಿತ್ತು. ಅವರ ಕುಟುಂಬದಲ್ಲಿ ಸ್ವಲ್ಪ ಭಿನ್ನಾಭಿಪ್ರಾಯಗಳನ್ನೂ ಉಂಟು ಮಾಡಿತು.ನಾನು ಮರುದಿನ ಗೌಡರ ಮನೆಗೆ ಏನಾದರೂ ಬೆಳವಣಿಗೆಯ ಸುದ್ದಿ ಸಿಗಬಹುದು ಎಂದು ಹೋದೆ.ನನ್ನನ್ನು ಕಂಡ ಅವರ ಮನೆಯವರು ಗೌಡರು ರೂಮಿನಲ್ಲಿ ಕೋಪದಿಂದ ಬಾಗಿಲು ಹಾಕಿಕೊಂಡಿದ್ದಾರೆ ಎಂದರು. ನಾನು ಧೈರ್ಯ ಮಾಡಿ ಮೆಲ್ಲಗೆ ಬಾಗಿಲು ತಟ್ಟಿ”ನಾನು ರಾಮಯ್ಯ”ಅಂದೆ. ಗೌಡರು ಬಾಗಿಲನ್ನೇನೋ ತೆರೆದರು. ನಾನು”ಕೋಪ ಮಾಡಿಕೊಳ್ಳಬೇಡಿ ಈಗ ಅದು ಮುಗಿದ ಹಂತ”ಎಂದೆ. ತಕ್ಷಣ ಅವರು ,”ನೀವೂ ಇದನ್ನೇ ಹೇಳಲು ಬಂದಿದ್ದೀರಾ?”ಎಂದು ಬಾಗಿಲು ಮುಚ್ಚಿದರು. ಆ ನಂತರ ಸ್ವಲ್ಪ ಸಮಯ ಕಾಯ್ದಿದ್ದು ಅವರನ್ನು ಪುನಃ ಭೇಟಿ ಮಾಡುವಲ್ಲಿ ಯಶಸ್ವಿಯಾದೆ. ಕಾಲಕ್ರಮೇಣ ಗೌಡರು ಆ ರಾಜಕೀಯ ಸ್ಥಿತ್ಯಂತರದ ಬಗ್ಗೆ ರಾಜಿಯಾದಂತೆ ಕಂಡರು.”
ಸುದ್ದಿ ಮೂಲಗಳ ವಿಶ್ವಾಸವನ್ನು ಗಳಿಸಿ ಅವುಗಳನ್ನು ಜತನದಿಂದ ಕಾಪಾಡಿಕೊಂಡು ಅವರು ಸುದ್ದಿ ಸಂಗ್ರಹಿಸುತ್ತಿದ್ದ ಇಂತಹ ಹಲವು ಪ್ರಸಂಗಗಳು ಈ ಕೃತಿಯ ಉದ್ದಕ್ಕೂ ಇವೆ.ತಮ್ಮ 91 ನೇ ವಯಸ್ಸಿನಲ್ಲಿ ಕೇವಲ ಜ್ಞಾಪಕ ಶಕ್ತಿಯಿಂದಲೇ ದಾಖಲಿಸಿದ್ದಾರೆ .
ರಾಜಕಾರಣಿಗಳು, ಅಧಿಕಾರಿಗಳು ಹಿರಿಯರು ಇರಲಿ ಕಿರಿಯರೇ ಇರಲಿ ಎಲ್ಲರೊಂದಿಗೆ ಸಮಾನ ಗೌರವದಿಂದ ಸೌಜನ್ಯ ದಿಂದ ನಡೆದುಕೊಳ್ಳುತ್ತಿದ್ದರು. ಒಮ್ಮೆ ಹಿರಿಯ ರಾಜಕಾರಣಿಯೊಬ್ಬರು “ರಾಮಯ್ಯನವರೇ ಹಿರಿಯ ಪತ್ರಕರ್ತರಾದ ನೀವು ನಮ್ಮೊಂದಿಗೆ ಗೌರವಯುತವಾಗಿ ನಡೆದುಕೊಳ್ಳುತ್ತೀರಿ. ಆದರೆ ನಿಮ್ಮ ಕೆಲವು ವರದಿಗಾರರು ನಮ್ಮ ಮುಂದೆ ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುತ್ತಾರೆ. ಸಿಗರೇಟಿನ ಹೊಗೆಯನ್ನು ನಮ್ಮ ಮುಖಕ್ಕೆ ಉಗಳುತ್ತಾರೆ” ಎಂದು ಬೇಸರ ವ್ಯಕ್ತಪಡಿಸಿದರು. “ಪತ್ರಕರ್ತರಿಗೆ ವಿಶೇಷ ಸ್ಥಾನಮಾನವೇನೂ ಇಲ್ಲ. ಸಮಾಜವೇ ನಮಗೊಂದು ಗೌರವದ ಸ್ಥಾನವನ್ನು ಕಲ್ಪಿಸಿದೆ. ಅದನ್ನು ಉಳಿಸಿಕೊಳ್ಳುವ ಹೊಣೆ ನಮ್ಮ ಮೇಲೆಯೇ ಇದೆ”ಎನ್ನುವುದು ರಾಮಯ್ಯನವರ ಖಚಿತ ಅಭಿಪ್ರಾಯ.
ಈ ಕೃತಿಯಲ್ಲಿ ಸಚಿವಾಲಯ ಮತ್ತು ವಿಧಾನಮಂಡಲ ಕಲಾಪ ವರದಿಗಾರಿಕೆ ಬಗ್ಗೆ ಎರಡು ಅಧ್ಯಾಯಗಳಿವೆ. ನಾನಂತೂ ಅವರ ಉತ್ಕೃಷ್ಟವಾದ ಅನುಭವ ಮತ್ತು ಜ್ಞಾನದ ನೇರ ಫಲಾನುಭವಿ. ನಾನು 1989/90 ರಿಂದ ವಿಧಾನಸೌಧ ವರದಿಗಾರಿಕೆಯಲ್ಲಿ ತೊಡಗಿಕೊಂಡೆ. ಆಗ ಕೆಲವು ಹಿರಿಯ ಪತ್ರಕರ್ತರು ನಮ್ಮಂತಹ ಗ್ರಾಮೀಣ ಮತ್ತು ವಿಭಿನ್ನ ಹಿನ್ನೆಲೆಯ ಯುವಕರನ್ನು ತಿರಸ್ಕಾರದಿಂದ ನೋಡುತ್ತಿದ್ದರು. ನಮ್ಮನ್ನು ವಿಶ್ವಾಸದಿಂದ ಮಾತನಾಡಿಸುತ್ತಿದ್ದವರು ರಾಮಯ್ಯನವರು ಮತ್ತು ಸಂಯುಕ್ತ ಕರ್ನಾಟಕದ ರಾಜಾರಾಯರು. ಸುದ್ದಿ ಪಡೆಯಲು ಹೇಗೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು, ಪ್ರಶ್ನೆಗಳು ಹೇಗಿರಬೇಕು, ಯಾವುದು ಸುದ್ದಿ? ಯಾವುದು ಸುದ್ದಿಯಲ್ಲ ಎಂದು ನಮಗೆ ಪ್ರೀತಿಯಿಂದ ರಾಮಯ್ಯನವರು ಮಾರ್ಗದರ್ಶನ ಮಾಡುತ್ತಿದ್ದರು ಮತ್ತು ತಿದ್ದಿ ತೀಡುತ್ತಿದ್ದರು. ಅವರು ನಮ್ಮನ್ನು ನಡೆಸಿಕೊಳ್ಳುತ್ತಿದ್ದ ರೀತಿ ನಮ್ಮ ಬಗ್ಗೆಯೇ ನಮಗೆ ವಿಶ್ವಾಸ ಮೂಡಿಸುವಂತಿತ್ತು. ನಮ್ಮ ವೃತ್ತಿ ಜೀವನದ ಏಳಿಗೆಗೆ ಅವರು ವಿಶೇಷ ಕೊಡುಗೆಯನ್ನು ನೀಡಿದ್ದಾರೆ.(1992 ರಲ್ಲಿ ಹಿಂದೂ ಕರ್ನಾಟಕ ಆವೃತ್ತಿಯಲ್ಲಿ ವರದಿಗಾರರ ಹುದ್ದೆಗೆ ಚನ್ನೈ ಪ್ರಧಾನ ಕಚೇರಿಯಲ್ಲಿ ಸಂಪಾದಕೀಯ ಮಂಡಳಿಯ ಎನ್ ರವಿ ಮತ್ತು ಮಾಲಿನಿ ಪಾರ್ಥಸಾರಥಿ ಸಂದರ್ಶನ ನಡೆಸಿದರು. ಅದರಲ್ಲಿ ಭಾಗವಹಿಸಲು ನನ್ನನ್ನೂ ಕೂಡ ರಾಮಯ್ಯನವರು ಚನ್ನೈ ಗೆ ಕಳುಹಿಸಿದ್ದರು. ಆದರೆ ಅಲ್ಲಿ ನನ್ನ ಆಯ್ಕೆಯಾಗಲಿಲ್ಲ. ನಂತರ ರಾಮಯ್ಯನವರು ತುಮಕೂರು ಜಿಲ್ಲಾ ಪ್ರತಿನಿಧಿಯಾಗಿ ಸ್ವಲ್ಪ ದಿನ stringer ಆಗಿ ಕೆಲಸ ಮಾಡಿ.ಮುಂದೆ ಒಳ್ಳೆಯದಾಗುತ್ತದೆ ಎಂದು ನನಗೆ ಸಲಹೆ ಮಾಡಿದರು.ಆದರೆ ನಾನು ಸ್ವಲ್ಪ ಹಿಂಜರಿದೆ.ಹೀಗೆ ನನ್ನನ್ನು ಗುರ್ತಿಸಿ ಅವಕಾಶ ನೀಡಲು ಪ್ರಯತ್ನಿಸಿದ ರಾಮಯ್ಯನವರನ್ನು ನಾನು ತಂಪು ಹೊತ್ತಿನಲ್ಲಿ ನೆನೆಯುತ್ತೇನೆ).ಅವರು ನನ್ನಂತಹ ಹಲವು ಯುವಕರಿಗೆ ಅವರು ದ್ರೋಣಾಚಾರ್ಯರಂತೆ .
ನೀರಾವರಿ, ವಿದ್ಯುತ್, ಕೃಷಿ, ಸಮಾಜ ಕಲ್ಯಾಣ, ಅಂತಾರಾಜ್ಯ ವಿವಾದಗಳು ಮುಂತಾದ ಕ್ಷೇತ್ರಗಳ ವರದಿಗಾರಿಕೆಗೆ ಅವರು ಸಿದ್ದ ಹಸ್ತರಾಗಿದ್ದರು. ಅವರ ವರದಿಗಳನ್ನು ಅಧಿಕಾರಸ್ಥರು ಮತ್ತು ನೀತಿ ನಿರೂಪಕರು ಆಕರ ವಸ್ತುವಾಗಿ ಬಳಸುತ್ತಿದ್ದರು. ಈ ಎಲ್ಲಾ ಸಂಗತಿಗಳು ಕೃತಿಯಲ್ಲಿ ಹಾಸು ಹೊಕ್ಕಾಗಿವೆ. ಈ ಮೂಲಕ ಅವರು ನವ ಕರ್ನಾಟಕ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.ತಮ್ಮ 60 ವರ್ಷಗಳ ಸುಧೀರ್ಘ ಸಾರ್ವಜನಿಕ ಬದುಕಿನಲ್ಲಿ ಅವರು ರಾಜ್ಯದ ಹಲವು ಸಾಮಾಜಿಕ, ರಾಜಕೀಯ, ಅಧಿಕಾರದ ಸ್ಥಿತ್ಯಂತರಗಳಿಗೆ ಸಾಕ್ಷಿಯಾಗಿದ್ದಾರೆ. ತೆರೆಮರೆಯ ಕಸರತ್ತುಗಳು, ಬೃಹನ್ನಾಟಕಗಳು, ವಿಶ್ವಾಸಘಾತುಕತನಗಳು, ಷಡ್ಯಂತ್ರಗಳು ಮತ್ತು ಕ್ರೌರ್ಯಗಳನ್ನು ಹತ್ತಿರದಿಂದ ನೋಡಿದವರು.ಕ್ಷಣ ಕ್ಷಣಕ್ಕೆ ಬಣ್ಣ ಬದಲಾಯಿಸುವವರು, ಪಡಪೋಶಿಗಳು, ಹಗಲು ವೇಷಧಾರಿಗಳು, ಬೆನ್ನಿಗೆ ಚೂರಿ ಹಾಕುವವರು,ಎದುರಿನಿಂದಲೇ ಚೂರಿ ಹಾಕಿ ಪರಾರಿಯಾಗುವ ನಂಬಿಕೆ ದ್ರೋಹಿಗಳನ್ನು ಕೂಡ ರಾಮಯ್ಯನವರು ನೋಡಿದ್ದಾರೆ. ಈ ಎಲ್ಲಾ ರೋಚಕ ಅಥವಾ ಮಸಾಲೆ ಸಂಗತಿಗಳನ್ನು ಹೊಟ್ಟೆಯಲ್ಲಿಯೇ ಇಟ್ಟುಕೊಂಡು, ವಿಷವನ್ನು ನುಂಗಿ ಕೇವಲ ಅಮೃತವನ್ನೇ ನೀಡಿದ ವಿಷಕಂಠನಂತೆ, ರಾಮಯ್ಯನವರು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದಾದ ಸಂಗತಿಗಳನ್ನು ಮಾತ್ರ ಬರೆದಿದ್ದಾರೆ. ಇದೊಂದು ಸಮಚಿತ್ತದ, ಸದ್ಭಾವನೆಯ ಪರಿಪೂರ್ಣ ಕೃತಿ. ಮೊನ್ನೆ ಅದನ್ನು ಓದಿ ಮುಗಿಸುತ್ತಿದ್ದಂತೆ ರಾಮಯ್ಯನವರಿಗೆ ಫೋನ್ ಮಾಡಿ ನನ್ನ ಸಂತೋಷವನ್ನು ಹಂಚಿಕೊಂಡೆ. “ಸರ್ ಇದೊಂದು ಕೇವಲ ಕೃತಿಯಲ್ಲ; ವಿಶೇಷವಾದ ಅನುಭವದ ಮೂಟೆ; ಯುವ ಪೀಳಿಗೆಗೆ ದಾರಿ ದೀಪ ” ಎಂದು ಬಣ್ಣಿಸಿದೆ.ಅವರು “ಇದರಲ್ಲಿ ಏನಾದರೂ ದೋಷಗಳು, ನ್ಯೂನತೆಗಳು ಹಾಗೂ ಕೊರತೆಗಳಿವೆಯೇ? ಸ್ವಲ್ಪ ವಿಮರ್ಶಾತ್ಮಕವಾದ ಅಭಿಪ್ರಾಯವನ್ನು ಹೇಳಿ” ಎಂದರು. “ಇಲ್ಲ ಸರ್ , ಯಾವ ನ್ಯೂನತೆಗಳೂ ಇಲ್ಲ; ಇದೊಂದು ಪರಿಪೂರ್ಣವಾದ ಕೃತಿ” ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ರಾಮಯ್ಯನವರು ನೂರು ಕಾಲ ಸುಖವಾಗಿ ಬಾಳಲಿ ಎಂದು ಪ್ರಾರ್ಥಿಸುತ್ತೇನೆ.
– ರುದ್ರಪ್ಪ ಚನ್ನಬಸಪ್ಪ, ಹಿರಿಯ ಪತ್ರಕರ್ತರು
(ಕೃಪೆ: ಫೇಸ್‌ಬುಕ್ ಬರಹ)



