ಸಂಘಪರಿವಾರದಿಂದ ಹುಲಿಕುಂಟೆಮೂರ್ತಿ ಟಾರ್ಗೆಟ್: ಇದು ಸೈದ್ಧಾಂತಿಕ ಸಂಘರ್ಷ

3 years ago

#Hulikuntemurthy #Target #SanghParivar #ideological #conflict

ಹುಲಿಕುಂಟೆಮೂರ್ತಿಯವರು ಇಸ್ರೋ ವಿಜ್ಞಾನಿಗಳ ಅವೈಜ್ಞಾನಿಕ‌ ನಡೆಯನ್ನು ವಿಮರ್ಶಿಸಿ “ಚಂದ್ರಯಾನ‌ ಈ ಸಾರಿ ತಿರುಪತಿ ನಾಮವೇ ಅನ್ಸತ್ತೆ” ಎಂದಿದ್ದರು. ಈ ಫೇಸ್ ಬುಕ್ ಪೋಸ್ಟ್ ಅನ್ನು ಹಿಡಿದುಕೊಂಡು ಆರೆಸ್ಸೆಸ್-ಬಿಜೆಪಿ ಸಂಘಪರಿವಾರದವರು ಮೂರು‌ ದಿನದಿಂದ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಇವರ ಸಾಲಿಗೆ‌ ಇಂದು ಬಿಜೆಪಿಯ ಮಾಜಿ ಸಚಿವ ಸುರೇಶ್ ಕುಮಾರ್ ಸೇರಿಕೊಂಡಿದ್ದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಟಾರ್ಗೆಟ್ ಟೀಂನ ಭಾಗವಾಗಿದ್ದಾರೆ. ಮುಂದೆಯೂ‌ ಇನ್ನಷ್ಟು‌ ಜನರು ಆ ಸಾಲಿಗೆ ಸೇರುವ ಸಾಧ್ಯತೆಗಳಿವೆ. ಒಬ್ಬ ಅಂಬೇಡ್ಕರ್ ವಾದಿಯಾಗಿ ಹಾಗೂ ಬುದ್ಧ, ಬಸವಣ್ಣ, ಕುವೆಂಪು, ಫುಲೆಯವರ ಆದರ್ಶಗಳನ್ನು ಎದೆಗೆ ಹಾಕಿಕೊಂಡು ಬದುಕುತ್ತಿರುವ ಹುಲಿಕುಂಟೆ ಮೂರ್ತಿಯವರನ್ನು ಬಿಜೆಪಿ-ಆರೆಸ್ಸೆಸ್ ಟೀಂ ಈ ಪಾಟಿ ಟ್ರಾಲ್ ಮಾಡಲು ಕಾರಣ ಇಸ್ರೋ ವಿಜ್ಞಾನಿಗಳು ವಿಮರ್ಶಿಸಿದ ಪೋಸ್ಟ್ ಅಲ್ಲವೇ ಅಲ್ಲ. ಅದರ ಹಿಂದೆ ಸೈದ್ಧಾಂತಿಕ ಸಂಘರ್ಷವಿದೆ. ಸದಾ ದಲಿತರ ಪರ ಹಾಗೂ ನೊಂದವರ ಪರ ನಿಲ್ಲುವ ನೈಜ ಅಂಬೇಡ್ಕರ್ ವಾದಿಯೊಬ್ಬನ ಬಾಯಿ ಮುಚ್ಚಿಸುವ ಷಡ್ಯಂತ್ರವಿದೆ. ಹಾಗಾದರೆ, ಹುಲಿಕುಂಟೆಮೂರ್ತಿಯವರನ್ನು ಟಾರ್ಗೆಟ್ ಮಾಡಲು ಕಾರಣವೇನು? ಮುಖ್ಯ ಹಾಗೂ ತಕ್ಷಣದ ಎರಡು ಕಾರಣಗಳನ್ನು ಹೇಳುತ್ತೇನೆ ಕೇಳಿ.

ಮೊದಲ ಕಾರಣ, ದಲಿತರನ್ನು ಒಡೆದು ಆಳಲು ಅಧಿಕೃತವಾಗಿ ದಲಿತರೊಳಗೆ ನುಸುಳಿದ ಆರೆಸ್ಸೆಸ್ minded ವಾದಿರಾಜ ಸಾಮರಸ್ಯನನ್ನು ಎದುರು ಹಾಕಿಕೊಂಡದ್ದು. ಹೌದು ಒಳ ಮೀಸಲಾತಿ ವಿಚಾರದಲ್ಲಿ ವಾದಿರಾಜ ಹೂಡಿದ ತಂತ್ರಗಳನ್ನ ನೇರವಾಗಿ ಎದುರಿಸಿ ಆತನಿಗೆ ಮಣ್ಣು ಮುಕ್ಕಿಸಿದ್ದರಲ್ಲಿ ಮುಖ್ಯ ಪಾತ್ರವನ್ನು ಹುಲಿಕುಂಟೆ ಮೂರ್ತಿ ವಹಿಸಿದರು. ಎಡ-ಬಲ ಎಂದು ವಿಭಜನೆ ಮಾಡಲು ಹೊರಟಿದ್ದ ವಾದಿರಾಜನಿಗೆ ತಕ್ಕ ಪಾಠ ಕಲಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಾದಿರಾಜನನ್ನು ಸರಿಯಾಗಿ‌ ತರಾಟೆಗೆ ತೆಗೆದುಕೊಂಡಿದ್ದ ಹುಲಿಕುಂಟೆಮೂರ್ತಿಯವರು ಅಂದಿನಿಂದ ಆರೆಸ್ಸೆಸ್-ಬಿಜೆಪಿ‌ ಟ್ರಾಲ್ ಗುಂಪಿಗೆ ಟಾರ್ಗೆಟ್ ಆದರು. ನೆನಪಿರಲಿ ಒಳಮೀಸಲಾತಿ ವಿಚಾರದಲ್ಲಿ ವೈಜ್ಞಾನಿಕವಾದ ಮಾಹಿತಿಯನ್ನು ಸಮುದಾಯಕ್ಕೆ ತಲುಪಿಸುವ ಶ್ರಮದಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು ಹುಲಿಕುಂಟೆಮೂರ್ತಿ. ಪಕ್ಷ ರಾಜಕಾರಣದ ಬಗ್ಗೆ ಎಂದಿಗೂ ತಲೆಕೆಡಿಸಿಕೊಳ್ಳದ ಅವರು ಮಾಡಿದ್ದು ಸಂವಿಧಾನ ಬದ್ಧ ಸತ್ಯವನ್ನು ನುಡಿಯುವ ಕೆಲಸವಷ್ಟೆ.

ಎರಡನೆಯ ಕಾರಣ ಇತ್ತೀಚಿನದ್ದು. ವಿರೋಧ ಪಕ್ಷದ ನಾಯಕರಿಲ್ಲದ ಬಗ್ಗೆ ಪ್ರಿಯಾಂಕ್ ಖರ್ಗೆಯವರು ಒಂದು ಪೋಸ್ಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಮತ್ತದೇ ಆರೆಸ್ಸೆಸ್-ಬಿಜೆಪಿ ಟ್ರಾಲ್ ತಂಡ ಪ್ರಿಯಾಂಕ್ ಖರ್ಗೆಯವರನ್ನು ‘ಕರ್ರಗೆ’ ಎಂದು ಮೂದಲಿಸಿ ಪ್ರಚಾರ ಮಾಡಿತ್ತು. ಮಾನವೀಯ ಮೌಲ್ಯವಿರುವ ಎಂತಹವರೇ ಆಗಲಿ ವರ್ಣ, ಜಾತಿ, ಲಿಂಗ ತಾರತಮ್ಯವನ್ನು ಖಂಡಿಸಿಯೇ ಖಂಡಿಸುತ್ತಾರೆ. ದಲಿತ ಸಮುದಾಯದಿಂದ ಬಂದು ಸತತವಾಗಿ ಮುಖ್ಯಮಂತ್ರಿಯಾಗುವ ಅವಕಾಶಗಳನ್ನು ತ್ಯಾಗ ಮಾಡಿ ಭೀಷ್ಮನಂತೆ ಬದುಕುತ್ತಿರುವ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಅವರ ಮಗ ಪ್ರಿಯಾಂಕ್ ಖರ್ಗೆಯವರು ದೇಶಕ್ಕಾಗಿ ಮತ್ತು ನಾಡಿಗಾಗಿ‌ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವಾಗ ಅಂತಹವರನ್ನುದ್ದೇಶಿಸಿ ರಾಜಕೀಯ ದ್ವೇಷದಿಂದ “ಕರ್ರಗೆ” ಎಂದು ಕಿಚಾಯಿಸಿದರೆ ಯಾವ ದಲಿತರ/ಪ್ರಗತಿಪರರ ಮೆದುಳು ಸುಮ್ಮ‌ನಿರುತ್ತದೆ? ಹುಲಿಕುಂಟೆಮೂರ್ತಿಯವರು ಆ ಜಾತಿವಾದಿ ಆರೆಸ್ಸೆಸ್-ಬಿಜೆಪಿ ತಂಡಕ್ಕೆ ಸರಿಯಾದ ಪ್ರತಿಕ್ರಿಯೆ ನೀಡಿದರು. ಅವರು ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ವರ್ಣ-ಜಾತಿ ಪಾಠ ಮಾಡಿದರು. ದಲಿತ ಸಮುದಾಯದಿಂದ ಈ ಎತ್ತರ ಏರಿದ ದಲಿತ ಖರ್ಗೆ ಕುಟುಂಬದ ಸಾಧನೆಯನ್ನು ಸಹಿಸದ ಆರೆಸ್ಸೆಸ್-ಬಿಜೆಪಿ ಮಬ್ಬಕ್ತರಿಗೆ ಕ್ಲಾಸ್ ತೆಗೆದುಕೊಂಡರು. ಇಲ್ಲಿ ಹುಲಿಕುಂಟೆಮೂರ್ತಿಯವರು ನಿಜಕ್ಕೂ‌ ದಲಿತತ್ವ ಮೆರೆದರು.

ಎಲ್ಲವನ್ನೂ ಬಲ್ಲವರಂತೆ ಫೋಸು ಕೊಡುವ ಈ ಹೆಜಮನಿ‌ ಮನಸ್ಥಿತಿಯುಳ್ಳ ಆರೆಸ್ಸೆಸ್-ಬಿಜೆಪಿ ಸಾಮಾಜಿಕ‌ ಜಾಲತಾಣದ ಮುಕೇಡಿಗಳು ದಲಿತನೊಬ್ಬನು ತಮಗೆ ಮಾಡಿದ‌ ನೀತಿ‌ ಪಾಠವನ್ನು ಸಹಿಸಿಕೊಳ್ಳುವರೇ? ಇಲ್ಲವೇ ಇಲ್ಲ. ಹುಲಿಕುಂಟೆಮೂರ್ತಿಯವರ ಮೇಲೆ ಕಣ್ಣಿಟ್ಟರು. ಅದರ ಪರಿಣಾಮವೇ ಸುರೇಶ್ ಕುಮಾರ್ ಅವರ ಪತ್ರ!

ಹುಲಿಕುಂಟೆಮೂರ್ತಿಯವರಿಗೆ ಈ ಟ್ರಾಲ್ ಟೀಮ್ ಬಗ್ಗೆ ತಿಳಿದಿಲ್ಲವೆಂದೆ? ತಿಳಿದಿತ್ತು. ಆದರೆ ಅವರು‌ ನಮ್ಮಂತಲ್ಲ. ದಲಿತರಿಗಾಗುವ ಅನ್ಯಾಯವನ್ನು ಕಿಂಚಿತ್ತೂ‌ ಸಹಿಸದ ದಿಟ್ಟ ಜೀವ. ಅಸಹ್ಯ ಕಮೆಂಟುಗಳಿಗೆ ಹೆದರಲಿಲ್ಲ. ಫೇಕ್ ಬೆದರಿಕೆಗೆ ಬೆದರಲಿಲ್ಲ. ಆಗ ಆರೆಸ್ಸೆಸ್-ಬಿಜೆಪಿ ಟ್ರಾಲ್ ತಂಡಕ್ಕೆ ಸಿಕ್ಕಿದ್ದೇ ಈ ವಿಜ್ಞಾನಿಗಳ ಅವೈಜ್ಞಾನಿಕ‌ ನಡೆಯ ಬಗ್ಗೆ ಅವರು ಮಾಡಿದ ಪೋಸ್ಟ್. ಮುಂದಿನದ್ದೆಲ್ಲ ನಿಮಗೆ ತಿಳಿದಿದೆ.

ಕ್ರೌರ್ಯವೆಂದರೆ ಹುಲಿಕುಂಟೆಮೂರ್ತಿಯವರ ಪತ್ನಿಯ FB ಅಕೌಂಟಿಗೆ ಲಗ್ಗೆ ಹಾಕಿದ ಟಾರ್ಗೆಟ್ ಟೀಂ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅಸಹ್ಯವಾಗಿ ಹಾಗೂ ಅಶ್ಲೀಲವಾಗಿ ಕಮೆಂಟ್ ಮಾಡಿದೆ. ಹುಲಿಕುಂಟೆಮೂರ್ತಿಯವರಿಗೆ ಒಬ್ಬ ಮಬ್ಬಕ್ತನಂತೂ ‘ನೀನು ಎಡವೋ ಬಲವೋ ನಿನ್ನ ಹುಡುಕಿಕೊಂಡು ಬಂದು ಹೊಡೆಯುತ್ತೇನೆ’ ಎಂದು ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ.

ಇಲ್ಲಿಗೆ ‌ನಿಮಗೆಲ್ಲ ಅರ್ಥವಾಗಿರಬೇಕು. ಹುಲಿಕುಂಟೆಮೂರ್ತಿಯವರನ್ನು ಆರೆಸ್ಸೆಸ್-ಬಿಜೆಪಿ ಟಾರ್ಗೆಟ್ ಮಾಡಿರುವುದು ‘ವಿಜ್ಞಾನಿಗಳನ್ನು  ವಿಮರ್ಶೆ’ ಮಾಡಿದ ಕಾರಣಕ್ಕಲ್ಲವೆಂದು. ಅದರ ಹಿಂದೆ  ಸೈದ್ಧಾಂತಿಕ ಕಾರಣವಿದೆ. ಅಂಬೇಡ್ಕರ್ ವರ್ಸಸ್ ಸಾವರ್ಕರ್ ಸಿದ್ಧಾಂತದ ಕಾರಣವಿದೆ.

ನನಗೆ ತಿಳಿದಿರುವಂತೆ ಆ ಮನುಷ್ಯ ಇಂತಹ ವಿಚಾರಗಳಿಗೆ ಕುಗ್ಗುವರಲ್ಲ. ಎದೆಯೊಡ್ಡಿ ನಿಲ್ಲುವವರು.  ಆದರೆ ಟಾರ್ಗೆಟ್ ಟೀಂ ಇಷ್ಟಕ್ಕೆ ನಿಲ್ಲುವವರಲ್ಲ. ನಾವೀಗ ಹುಲಿಕುಂಟೆಮೂರ್ತಿಯವರ ಪರವಾಗಿ ದನಿ ಎತ್ತಲೇಬೇಕಿದೆ.

ಕೊನೆಯದಾಗಿ, ಕರ್ನಾಟಕ ಸರ್ಕಾರವವನ್ನೂ ಒಳಗೊಂಡಂತೆ ನಾವು ಯಾವ ಸಿದ್ಧಾಂತದ ಪರ ಎಂಬುದು ತೀರ್ಮಾನವಾದರೆ ಈ ಷಡ್ಯಂತ್ರದ ಫಲಿತಾಂಶ ತಿಳಿಯುತ್ತದೆ.

– ಸಾಕ್ಯ ಸಮಗಾರ

Leave a Reply