ಹುಬ್ಬಳ್ಳಿ ಬಂಧನ ಪ್ರಕರಣ: ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ

2 years ago

ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಗೆ ಇಡೀ ದೇಶ ಸಜ್ಜುಗೊಂಡಿರುವ ಸಮಯದಲ್ಲಿ ಕರ್ನಾಟಕದ ಕಾಂಗ್ರೆಸ್ ನೇತೃತ್ವದ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯದ ಹಲವು ಪ್ರತಿಭಟನೆ ನಡೆಸಿತು.

ರಾಮಮಂದಿರ ಹೋರಾಟದ ಕರಸೇವೆಯಲ್ಲಿ ಪಾಲ್ಗೊಂಡಿದ್ದವರ ವಿರುದ್ಧ ದಾಖಲಾಗಿದ್ದ ಹಳೆಯ ಪ್ರಕರಣಗಳಿಗೆ ಮರು ಜೀವ ನೀಡಿ ಅವರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿದ ಬಿಜೆಪಿ ಕಾರ್ಯಕರ್ತರು ಅನೇಕ ಕಡೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪಕ್ಷದ ಅಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಆನಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ಇದೇ ವೇಳೆ ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ವಿಜಯೇಂದ್ರ, ಶ್ರೀನಗರದ ಲಾಲ್ಚೌಕದಲ್ಲಿ ಕಾರ್ಯಕರ್ತರು ಮುರಳಿ ಮನೋಹರ್ ಜೋಷಿಯವರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದೇವೆ. ರಾಜ್ಯ ಸರಕಾರದ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ ಎಂದರು.

ಹಳೆಯ ಪ್ರಕರಣದಲ್ಲಿ ಬಂಧಿಸಲಾಗಿರುವ ಶ್ರೀಕಾಂತ್ ಪೂಜಾರಿ ಅವರ ಬಿಡುಗಡೆಗೆ 48 ಗಂಟೆಗಳ ಗಡುವು ಕೊಡುತ್ತೇವೆ. ಅಷ್ಟರೊಳಗೆ ಬಿಡುಗಡೆ ಮಾಡದಿದ್ದರೆ, ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಮೊಘಲರ ಆಡಳಿತ, ತಾಲಿಬಾನ್ ಆಡಳಿತ ಇದೆ ಎಂದು ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ. ಹಿಂದೂ ಹಕ್ಕುಗಳನ್ನು ತುಳಿಯುವ ಕೆಲಸ, ಹಿಂದೂ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದರು.

ಪಿಎಫ್ಐ ವಿರುದ್ಧ ಇದ್ದ ಕೇಸುಗಳನ್ನು ರದ್ದುಮಾಡಲಾಗಿದೆ. ಡಿ.ಜೆ.ಹಳ್ಳಿ, ಕೆಜೆ ಹಳ್ಳಿ ಕೇಸುಗಳನ್ನು ಹಿಂದಕ್ಕೆ ಪಡೆಯಲು ಮುಂದಾಗಿದೆ. ಮತ್ತೊಂದೆಡೆ, ಕನ್ನಡ ಪರ ಹೋರಾಟಗಾರರು, ರೈತರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಈ ಸರಕಾರಕ್ಕೆ ತಕ್ಕ ಉತ್ತರ ಕೊಡುವ ಸಮಯ ಬಂದಿದೆ ಎಂದರು.

ಸಂಸದ ಡಿ.ವಿ.ಸದಾನಂದಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷದ ನೀತಿ ಕುಲಗೆಟ್ಟ ನೀತಿ. ಹಿಜಾಬ್ ಪರ, ಶ್ರೀರಾಮನ ವಿರುದ್ಧ ನೀತಿಯಾಗಿದೆ. ಇಂತಹ ನೀತಿಯ ಸರಕಾರದ ವಿರುದ್ಧ ರಾಜ್ಯದ ಜನ ಒಗ್ಗಟ್ಟಾಗಿದ್ದಾರೆ. ಹಿಂದೂಗಳು ತೂಕಡಿಕೆ ಬಿಡಬೇಕು. ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳನ್ನು ರಕ್ಷಿಸಲು ನಾವು ಹೋರಾಟ ನಡೆಸಬೇಕು ಎಂದರು.

ಆನಂತರ ಮುಖಂಡರು ನಿಯೋಗದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರದ ವಿರುದ್ಧದ ಮನವಿ ಪತ್ರ ಸಲ್ಲಿಸಿದರು.

Leave a Reply