ಅವರ ದಾರಿಯಲ್ಲಿ ನಡೆಯಲು ನಾವೆಲ್ಲ ಪಣ ತೊಡೋಣ
ಎಚ್.ಎಸ್.ದೊರೆಸ್ವಾಮಿಯವರನ್ನು ಬೆಂಗಳೂರಿನ ಜಯನಗರದ ಅವರ ನಿವಾಸದಲ್ಲಿ ಭೇಟಿಯಾಗಲು ಕಾರಣವಾದದ್ದು ಜನಸಂಸ್ಕೃತಿ ಮಾಸಿಕ. ಅದ್ಕಕೂ ಮುನ್ನ ಅನೇಕ ಕಾರ್ಯಕ್ರಮಗಳಲ್ಲಿ ಅವರ ಭಾಷಣಗಳನ್ನು ಕೇಳಿದ್ದೆನಾದರೂ ಅವರನ್ನು ವೈಯಕ್ತಿಕವಾಗಿ ಮಾತಾಡಿಸಲು ಮುಂದಾಗಿರಲಿಲ್ಲ. ಅದಕ್ಕೆ ಕಾರಣವೇನು ಎಂದು ಇದುವರೆಗೂ ನನಗೆ ಗೊತ್ತಿಲ್ಲ.
ಅದು ಜನಸಂಸ್ಕೃತಿ ಪತ್ರಿಕೆಗೆ ಒಂದು ರೂಪ ಕೊಡಲು ಸಂಸ ಸುರೇಶ್, ಪುರುಷೋತ್ತಮ್ ಮತ್ತು ನಾನು ಭಾರೀ ಯೋಚನೆಗಳು, ಯೋಜನೆಗಳನ್ನು ರೂಪಿಸುತ್ತಿದ್ದ ಸಮಯ. ಆಗ ಬೆಳಕು ತಜ್ಞ, ಕವಿ, ನಟ ಮಂಜುನಾರಾಯಣ್ ಕೆ.ಎಲ್. ಅವರ ನೆರವನ್ನು ನಾನು ಕೋರಿದ್ದೆ. ಒಬ್ಬ ಮಹತ್ವದ ವ್ಯಕ್ತಿಯ ಸಂದರ್ಶನ ಮಾಡಿಕೊಡಲು ಸಾಧ್ಯವೇ? ಎಂಬುದು ಅವರ ಬಳಿ ಇಟ್ಟಿದ್ದ ಸಹಾಯದ ಮೊರೆಯಾಗಿತ್ತು. ಅವರು ತುಸು ಸಮಯ ತೆಗೆದುಕೊಂಡು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿಯವರ ಸಂದರ್ಶನಕ್ಕೆ ಪ್ರಯತ್ನಿಸುವುದಾಗಿ ಹೇಳಿದರು.
ಆ ಹೊತ್ತಿಗಾಗಲೇ ನಾನು ಸಂಘಟಕ, ಪ್ರಕಾಶಕ ಸಂಸ ಸುರೇಶ್, ಕವಿ ನಾಗತಿಹಳ್ಳಿ ರಮೇಶ್, ವಿನ್ಯಾಸಕ ಪುರುಷೋತ್ತಮ್, ಛಾಯಾಗ್ರಾಹಕ ಹೇಮಂತ್ ಅವರ ನೆರವಿನಿಂದ ಮತ್ತೊಬ್ಬ ಗಾಂಧಿವಾದಿ ಮಲೆನಾಡ ಗಾಂಧಿ ಎಂದೇ ಖ್ಯಾತರಾಗಿದ್ದ ಎಚ್.ಜಿ.ಗೋವಿಂದೇಗೌಡರ ಸಂದರ್ಶನ ಮಾಡಿದ್ದೆ. ಅದು ಜನಸಂಸ್ಕೃತಿಯಲ್ಲಿ ಪ್ರಕಟವೂ ಆಗಿತ್ತು. ಮತ್ತೊಬ್ಬ ಹಿರಿಯ ಗಾಂಧಿವಾದಿಯ ಸಂದರ್ಶನ ಸಿಕ್ಕುವುದು ನನಗೆ ಖುಷಿಯ ವಿಚಾರವಾಗಿತ್ತು. ನುಡಿದಂತೆ ನಡೆದ ಮಂಜುನಾರಾಯಣ್ ಸಂದರ್ಶನ ಮಾಡಿಕೊಂಡು, ಅದನ್ನು ರೆಕಾರ್ಡ್ ಮಾಡಿ, ಕೇಳಿಕೊಂಡು, ಸ್ಕ್ರಿಪ್ಟ್ ಮಾಡಿ ನಮ್ಮಗಳ ಕೆಲಸವನ್ನು ಹಗುರಾಗಿಸಿದ್ದರು. ಸಂದರ್ಶನ ಪ್ರಕಟವಾಯಿತು. ಅದರ ಪ್ರತಿಯನ್ನು ಕೊಡಲು ಎಚ್.ಎಸ್.ದೊರೆಸ್ವಾಮಿಯವರ ಮನೆಗೆ ಮಂಜುನಾರಾಯಣ್ ಅವರೊಂದಿಗೆ ಹೋಗಿದ್ದೆ. ನಾನು ಅವರ ಮನೆಗೆ ಹೋದದ್ದು ಅದೇ ಮೊದಲು ಮತ್ತು ಅದೇ ಕೊನೆ.
ಆಗ ಅವರ ಸರಳ ಜೀವನ, ನುಡಿದಂತೆಯೇ ಬದುಕುತ್ತಿದ್ದ ರೀತಿ, ಮನೆಗೆ ಬಂದವರೆಲ್ಲರನ್ನೂ ಒಂದೇ ರೀತಿ ಕಂಡು ಬರಮಾಡಿಕೊಳ್ಳುವುದು, ವಿಚಾರಗಳನ್ನು ಆಲಿಸುವುದು, ಪ್ರತಿಕ್ರಿಯಿಸುವುದು ಮೊದಲಾದ ಅಂಶಗಳ ವೈಶಿಷ್ಟ್ಯತೆಯನ್ನು ಹತ್ತಿರದಿಂದ ಕಂಡೆ. ದೂರವಾಣಿ ಕರೆಗೆ ಪ್ರತಿಕ್ರಿಯಿಸುವುದರಿಂದ ಮನೆಗೆ ಬಂದ ಅತಿಥಿಗಳವರೆಗೆ ಅವರದು ಒಂದೇ ರೀತಿಯ ಆದರವಾಗಿತ್ತು.
ಅನಂತರ ನಮ್ಮ ಕಾಯಂ ಅಡ್ಡೆಗಳ ಪೈಕಿ ಕೆಲವು ಸ್ಥಳಗಳಲ್ಲಿ ಅವರ ಭಾಷಣಗಳು, ಹೋರಾಟಗಳು, ಇತ್ಯಾದಿಗಳಲ್ಲಿ ಭಾಗವಹಿಸಿದ ನೆನಪುಗಳಿವೆ. ಅದರಲ್ಲು ಯಾವುದೇ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧದ ಯಾವುದೇ ಪ್ರತಿಭಟನೆಗಳಿಗೂ ಮೊದಲ ಸಾಲಿನ ವ್ಯಕ್ತಿಯಾಗಿ ಎಚ್.ಎಸ್.ದೊರೆಸ್ವಾಮಿಯವರು ನಿಲ್ಲುತ್ತಿದ್ದುದನ್ನು ಕಣ್ಣಾರೆ ಕಂಡ ನಾನು ಎಷ್ಟೋ ಬಾರಿ ನಾಚಿದ್ದಿದೆ. ಕೆಲವು ವಿಷಯಗಳಲ್ಲಿ ನಾವು ಮತ್ತು ನಮ್ಮಂತವರು ವ್ಯಕ್ತಿ, ಪಕ್ಷ, ಸಮಯ, ನಾವು ಇದನ್ನು ವಿರೋಧಿಸಿದರೆ ಯಾರಿಗೆ ಲಾಭ ಎಂಬ ಅನೇಕ ಲೆಕ್ಕಾಚಾರಗಳನ್ನು ಹಾಕಿ ಅನಂತರ ನಮ್ಮ ಪ್ರತಿಭಟನೆಯ ಮಾದರಿ, ಸ್ವರೂಪ ಇತ್ಯಾದಿಗಳು ನಿರ್ಧಾರಿತವಾಗುತ್ತವೆ. ಆದರೆ, ಈ ಯಾವ ಲೆಕ್ಕಾಚಾರಗಳೂ ಇಲ್ಲದೆ ಆತ್ಯಂತಿಕ ಮಟ್ಟದ ವಿರೋಧವನ್ನು ದಶಕಗಳಿಂದ ದಾಖಲಿಸುತ್ತ ಬಂದವರು ಎಚ್.ಎಸ್.ದೊರೆಸ್ವಾಮಿ.
ಭೂರಹಿತರು, ಕೂಲಿಕಾರ್ಮಿಕರು, ಅಸಂಘಟಿತ ವಲಯ, ರೈತರು, ದಲಿತರು ಮೊದಲಾದ ಯಾವುದೇ ರೀತಿಯ ಹೋರಾಟದಲ್ಲಿ ಎಚ್.ಎಸ್.ದೊರೆಸ್ವಾಮಿಯವರು ಸಕ್ರಿಯವಾಗಿ ಪಾಲ್ಗೊಂಡಿರುತ್ತಿದ್ದರು. ಎಷ್ಟೋ ಬಾರಿ ನಮ್ಮಂತಹವರು ಹೋಗಲು ಹಿಂದೆಮುಂದೆ, ಅಥವಾ ತಪ್ಪಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೆವು. ಆದರೆ, ಯಾವುದೇ ಜನಪರ ಪ್ರತಿಭಟನೆಯಲ್ಲಿ ದೊರೆಸ್ವಾಮಿಯವರ ಪಾಲುಗಾರಿಕೆ ಖಂಡಿತ ಇರುತ್ತಿತ್ತು. ಅವರ ಹೋರಾಟ ಕೇವಲ ಕೋಮುವಾದಿ ಬಿಜೆಪಿ ವಿರುದ್ಧ ಮಾತ್ರವಲ್ಲದೆ, ಜಾತಿವಾದ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅನ್ಯಾಯ, ಅಕ್ರಮ, ಅಸಮಾನತೆಗಳ ವಿರುದ್ಧ ಕೂಡ ನಿರಂತರವಾಗಿ ನಡೆದಿತ್ತು.
ನಾನು ಅವರನ್ನು ಕಡೆಯ ಭಾರಿ ಭೇಟಿಯಾಗಿದ್ದು ಮಂಜುನಾರಾಯಣ್ ಅವರ ಮದುವೆಯ ದಿನದಂದು. ಅಂದು ಮಂತ್ರಮಾಂಗಲ್ಯದ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಡಲು ಮುಂದಾಗಿದ್ದ ಮುಂಜುನಾರಾಯಣ್ ಅವರು, ದೊರೆಸ್ವಾಮಿಯವರನ್ನು ಕರೆಸಿದ್ದರು. ಬಿ.ಸುರೇಶ್ ಮೊದಲಾದವರು ಸೇರಿದಂತೆ ಗೆಳೆಯ ಮಂಜುನಾರಾಯಣ್ ಅವರಿಗೆ ಶುಭಕೋರಲು ಅಂದು ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಸ್ಕೃತಿ, ಹೋರಾಟ ಮೊದಲಾದ ಹಿನ್ನೆಲೆಯ ನೂರಾರು ಜನ ನೆರೆದಿದ್ದರು.
ಅಂದು 2019ರ ಲೋಕಸಭೆ ಚುನಾವಣೆಯ ಟಿಕೆಟ್ ಹಂಚಿಕೆ ವಿಚಾರವನ್ನು ಪ್ರಸ್ತಾಪಿಸಿದ ದೊರೆಸ್ವಾಮಿಯವರು ಸ್ವಜನ ಪಕ್ಷಪಾತದ ವಿರುದ್ಧ ಕಿಡಿಕಾರಿದ್ದ ರೀತಿ ನನಗೆ ಇಂದಿಗೂ ನೆನಪಿದೆ. 28 ಕ್ಷೇತ್ರಗಳ ಪೈಕಿ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿ ಪ್ರಕಾರ 21 ಕ್ಷೇತ್ರಗಳಲ್ಲಿ ಕಾಂಗ್ರೆಸ್, 7 ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪರ್ಧಿಸಬೇಕಿತ್ತು. ಇವುಗಳ ಪೈಕಿ ಮಂಡ್ಯದಲ್ಲಿ ಅಂದಿನ ಸಿಎಂ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ, ಹಾಸನದಿಂದ ಅಂದಿನ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಮತ್ತು ತುಮಕೂರಿನಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪರ್ಧಿಸಿದ್ದರು. ಪ್ರಜ್ವಲ್ ಹೊರತುಪಡಿಸಿ ಜೆಡಿಎಸ್ ನಿಂದ ಮತ್ತು ಡಿ.ಕೆ.ಸುರೇಶ್ ಹೊರತುಪಡಿಸಿ ಕಾಂಗ್ರೆಸ್ ನಿಂದ ಯಾವೊಬ್ಬರೂ ಆಯ್ಕೆಯಾಗಲಿಲ್ಲ.
ಈ ವಿಷಯವನ್ನು ಆಧರಿಸಿ ಅವರು ಅಂದು ಆಡಿದ ಮಾತು ನಿಜಕ್ಕೂ ಸ್ವಜನಪಕ್ಷಪಾತವನ್ನು ಎಸಗುವವರಿಗೆಲ್ಲ ಮಾದರಿಯಾಗಿತ್ತು. ಅಂದು ಮದುವೆ ಸಮಯದಲ್ಲಿ ಮಾತಾಡಿದ್ದ ದೊರೆಸ್ವಾಮಿಯವರು, 28 ಸೀಟುಗಳಲ್ಲಿ 7 ಸೀಟುಗಳು ಜೆಡಿಎಸ್ ಗೆ ಎಂದು ಒಪ್ಪಂದವಾಯಿತು. ಸರಿ. ಆದರೆ, 7 ಸೀಟುಗಳಲ್ಲಿ 3 ಒಂದೇ ಕುಟುಂಬಕ್ಕೆ ಯಾಕೆ? ಎಂದು ಪ್ರಶ್ನಿಸಿದ್ದರು.
ನಿಜಕ್ಕೂ ಅವರು ರಾಜಕಾರಣದಿಂದ ಸಮಸ್ತ ಜೀವನ ಶುದ್ಧಿಯಾಗಬೇಕು ಎಂದು ಬಯಸಿದ್ದರೆ ಹೊರತು ಇದರಲ್ಲಿ ಇನ್ನಾವುದೇ ರೀತಿಯ ವೈಯಕ್ತಿಕ ಲಾಭಾಕಾಂಕ್ಷೆ, ಈರ್ಷೆ, ದ್ವೇಷ, ಅಸೂಯೆಗಳಿಗೆ ಅವರಲ್ಲಿ ಸ್ಥಳವೇ ಇರಲಿಲ್ಲ. ಅದೇಕೋ ಅಂದು ಅವರ ಮಾತುಗಳನ್ನು ಕೇಳಿದ ನಂತರ ಮತ್ತೆ ಅವರ ಮಾತುಗಳನ್ನು ಖುದ್ದಾಗಿ ಕೇಳುವ ಅವಕಾಶ ಸಿಗಲಿಲ್ಲ. ಇದೀಗ ಇನ್ನೆಂದೂ ಅವಕಾಶವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹಿರಿಯ ಸೇನಾನಿ ಹೋರಾಟ ನಿಲ್ಲಿಸಿದ್ದಾರೆ. ನಾವೆಲ್ಲರೂ ಅವರ ಜಾತ್ಯತೀತ, ಭ್ರಷ್ಟಾಚಾರ ರಹಿತ, ಸ್ವಜನಪಕ್ಷಪಾತ ರಹಿತ, ಅನ್ಯಾಯ ರಹಿತ, ಅಕ್ರಮ ರಹಿತ ಸಮಾಜ ನಿರ್ಮಾಣದ ಕನಸನ್ನು ಈಡೇರಿಸಲು ಪಣತೊಡಬೇಕಿದೆ. ನಮ್ಮ ಜೀವನದಲ್ಲಿ ಇದನ್ನು ಸಾಧ್ಯವಾಗಿಸಲು ಪ್ರಾಮಾಣಿಕ ಪ್ರಯತ್ನಪಡಬೇಕಿದೆ. ದೊರೆಸ್ವಾಮಿ ಸರ್ ನಿಮಗೆ ವಂದನೆಗಳು. ನಿಮ್ಮ ದಾರಿಯಲ್ಲಿ ನಾವು ನಡೆಯುತ್ತೇವೆ.
ಡಾ. ಪ್ರದೀಪ್ ಮಾಲ್ಗುಡಿ, ಸಂಶೋಧಕ




