ಒಳ್ಳೆಯ ಪತ್ರಕರ್ತರಾಗುವುದು ಹೇಗೆ ಎಂದು ಪತ್ರಿಕೋದ್ಯಮದ ವಿದ್ಯಾರ್ಥಿಗಳು ನನ್ನನ್ನು ಕೇಳಿದಾಗೆಲ್ಲ ನಮ್ಮ ನಿತ್ಯಜೀವನದಲ್ಲಿ ಎದುರಾಗುವ ಎರಡು ದೃಶ್ಯಗಳನ್ನು ಉಲ್ಲೇಖಿಸಿ ನೀಡುವ ಉತ್ತರವನ್ನೇ ಇಲ್ಲಿ ಬರೆದಿದ್ದೇನೆ. ಇದನ್ನು ಒಳ್ಳೆಯ ಕವಿ,ಬರಹಗಾರ ಮಾತ್ರವಲ್ಲ ಒಳ್ಳೆಯ ಮನುಷ್ಯರಾಗುವುದು ಹೇಗೆ ಎಂಬ ಪ್ರಶ್ನೆಗೂ ಉತ್ತರ ಎಂದು ತಿಳಿದುಕೊಳ್ಳಬಹುದು.
ಮೊದಲನೆಯದು, “ ನೀವು ರಸ್ತೆಯಲ್ಲಿ ಹೋಗುತ್ತಿರುವಾಗ ಕಣ್ಣಿಗೆ ಬೀಳುವ 60-70 ವರ್ಷ ವಯಸ್ಸಿನ ಮಹಿಳೆ ನೆಲದಲ್ಲಿ ಹಣ್ಣು-ತರಕಾರಿ ಮಾರುತ್ತಿರುವ ದೃಶ್ಯ
ಎರಡನೆಯದು, ನೀವು ಚಹಾ ಕುಡಿಯಲೆಂದು ಹೊಟೇಲ್ ಗೆ ಹೋದಾಗ ಎಳೆಯ ಬಾಲಕನೊಬ್ಬ ನಿಮ್ಮ ಎದುರಿನ ಮೇಜು ಕ್ಲೀನ್ ಮಾಡುವ ಮತ್ತು ನೀವು ತಿಂಡಿ ತಿಂದ ಮೇಲೆ ಪ್ಲೇಟ್ ತೆಗೆಯುವ ದೃಶ್ಯ.
ಈ ದೃಶ್ಯಗಳನ್ನು ನೋಡಿದಾಗ, 60-70 ವರ್ಷದ ಆ ಮಹಿಳೆ ರಸ್ತೆ ಬದಿಯಲ್ಲಿ ಬಿಸಿಲು-ಮಳೆಯನ್ನೂ ಲೆಕ್ಕಿಸದೆ ಹಣ್ಣು ತರಕಾರಿ ಮಾರಾಟಕ್ಕೆ ರಸ್ತೆಗೆ ಬಂದಿದ್ದರೆ ಆಕೆಯ ಮನೆಯಲ್ಲಿ ಎಂತಹ ಕಷ್ಟಗಳಿರಬಹುದು? ಆಕೆಯ ಮಕ್ಕಳು ಎಂತಹವರಿರಬಹುದು? ಕನಿಷ್ಠ ಆಕೆಗೆ ವೃದ್ದಾಪ್ಯ ವೇತನವಾದರೂ ಸಿಗುತ್ತಿದೆಯೇ? ಎನ್ನುವ ಸರಳ ಪ್ರಶ್ನೆಗಳ ಜೊತೆಯಲ್ಲಿ ನಮ್ಮ ದೇಶದ ಸಾಮಾಜಿಕ ಭದ್ರತೆಯ ಸೌಲಭ್ಯಗಳ ಬಗ್ಗೆಯೂ ನಮ್ಮಲ್ಲಿ ಪ್ರಶ್ನೆಗಳನ್ನು ಹುಟ್ಟಿಸಬೇಕು.
ಅದೇ ರೀತಿ ಹೊಟೇಲ್ ನಲ್ಲಿ ಕೆಲಸ ಮಾಡುವ ಬಾಲಕನನ್ನು ಕಂಡ ಕೂಡಲೇ ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧ ಅಲ್ಲವೇ? ಸಂವಿಧಾನಕ್ಕೆ 2002ರಲ್ಲಿ ಮಾಡಿರುವ ತಿದ್ದುಪಡಿ ಪ್ರಕಾರ ಶಿಕ್ಷಣ ಮೂಲಭೂತ ಹಕ್ಕು ಅಲ್ಲವೇ? ಎನ್ನುವ ಪ್ರಶ್ನೆಗಳು ನಮ್ಮನ್ನು ಕಾಡಬೇಕು..
ಇದರ ಅರ್ಥ, ನೀವು ಆ ವಯಸ್ಸಾದ ಮಹಿಳೆ ಇಲ್ಲವೆ ಬಾಲಕಾರ್ಮಿಕನ ಪರವಾಗಿ ಸ್ಥಳದಲ್ಲಿಯೇ ದನಿ ಎತ್ತಿ ಹೋರಾಟಕ್ಕೆ ಇಳಿಯಬೇಕು ಎಂದಲ್ಲ. ಇಂತಹ ದೃಶ್ಯಗಳನ್ನು ನೋಡಿದಾಗ ಕನಿಷ್ಠ ನಿಮ್ಮ ಮನಸ್ಸು ಒಂದು ಕ್ಷಣವಾದರೂ ಕಲಕಬೇಕು. ನಿಮ್ಮ ಮನಸ್ಸು ‘ಅಯ್ಯೋ ಪಾಪ’ ಎಂದಾದರೂ ನಿಟ್ಟುಸಿರುಬಿಡಬೇಕು. ಆಗ ನಿಮ್ಮೊಳಗೆ ಒಬ್ಬ ಮನುಷ್ಯ ಇದ್ದಾನೆ ಎಂದರ್ಥ. ಅಷ್ಟಾದರೆ ಉಳಿದ ಕೆಲಸಗಳನ್ನು ನಿಮ್ಮ ಮನಸ್ಸು ನಿಮ್ಮಿಂದ ಮಾಡಿಸಿಬಿಡುತ್ತದೆ.
ಇಂತಹ ದೃಶ್ಯಗಳನ್ನು ನೋಡಿದಾಗ ನಿಮಗೆ ಏನೂ ಅನಿಸದೆ, ಇದೆಲ್ಲ ಮಾಮೂಲಿ ಎಂದು ಅನಿಸಿದರೆ, ಇವರೆಲ್ಲ ನಮ್ಮ ಕಣ್ಣಿಗೆ ಯಾಕೆ ಕಾಣಿಸ್ತಾರೋ ಎಂದೆಲ್ಲ ನಿಮ್ಮಲ್ಲಿ ರೇಜಿಗೆ ಹುಟ್ಟಿಕೊಂಡರೆ ನೀವು ಪತ್ರಕರ್ತ, ಕವಿ,ಲೇಖಕ ಮಾತ್ರವಲ್ಲ ಮನುಷ್ಯರಾಗಲೂ ನಾಲಾಯಕ್.
ನಾನು ದೆಹಲಿಯಲ್ಲಿದ್ದಾಗ ನಮ್ಮ ಕಚೇರಿ ಇದ್ದದ್ದು ಲೂಟಿನ್ಸ್ ಡೆಲ್ಲಿ ಎಂದು ಕರೆಯಲಾಗುವ ದೆಹಲಿಯ ಹೃದಯಭಾಗದಲ್ಲಿರುವ ಸಂಸತ್ ಭವನದ ಪಕ್ಕದಲ್ಲಿ. ಮನೆ ಇದ್ದದ್ದು ಪೂರ್ವ ದೆಹಲಿಯ ಯಮುನಾ ನದಿಯ ಆಚೆ ದಡದಲ್ಲಿ. ನಾನು ಮತ್ತು ಡಿ.ಉಮಾಪತಿ ಒಂದೇ ಅಪಾರ್ಟ್ ಮೆಂಟ್ ನಲ್ಲಿದ್ದದ್ದು ಮಾತ್ರವಲ್ಲ, ನಮ್ಮ ಕಚೇರಿ ಕೂಡಾ ಒಂದೇ ಕಟ್ಟಡದಲ್ಲಿತ್ತು. ಇಬ್ಬರೂ ಮನೆಯಿಂದ ಕಚೇರಿಗೆ ಒಟ್ಟಿಗೆ ಹೋಗಿ ಬರುತ್ತಿದ್ದೆವು.
ನಾವು ದಿನ ರಾತ್ರಿ ಸಂಸತ್ ಭವನದ ಸಮೀಪದಿಂದ ಸಿಟಿಬಸ್ ಹತ್ತಿ ಲಕ್ಷ್ಮಿನಗರದ ಮದರ್ ಡೇರಿ ಸ್ಟಾಪ್ ನಲ್ಲಿ ಬಂದು ಇಳಿಯುತ್ತಿದ್ದೆವು. ಅಲ್ಲಿಂದ ನಮ್ಮ ಅಪಾರ್ಟ್ ಮೆಂಟ್ ಗೆ ಹೋಗಲು ನಾವು ಒಂದು ಸ್ಲಮ್ ದಾಟಿ ಹೋಗಬೇಕಾಗಿತ್ತು. ಯುಪಿ,ಬಿಹಾರ, ರಾಜಸ್ತಾನಗಳಿಂದ ವಲಸೆ ಬಂದು ಇಲ್ಲಿ ಸೈಕಲ್ ರಿಕ್ಷಾ ಓಡಿಸುತ್ತಾ, ಮನೆ ಕೆಲಸ ಮಾಡುತ್ತಾ ಇರುವ ಬಡ ಕುಟುಂಬಗಳು ಗುಡಿಸಲು ಕಟ್ಟಿಕೊಂಡು ಇರುವ ಸ್ಲಮ್ ಅದು. ನಾವು ಹಗಲಿಡೀ ನೋಡುತ್ತಿದ್ದ ಪ್ರಪಂಚಕ್ಕಿಂತ ಭಿನ್ನವಾದ ಲೋಕ ಅದು.
ಪ್ರತಿದಿನ ರಾತ್ರಿ ಹೊತ್ತು ಐದು ನಿಮಿಷಗಳ ನಮ್ಮ ನಡಿಗೆಯಲ್ಲಿ ನಾವು ನೋಡುತ್ತಿದ್ದ ಆ ಸ್ಲಮ್ ಬದುಕು, ಹಗಲು ಹೊತ್ತು ನಾವು ಕಾಣುತ್ತಿದ್ದ ಲೂಟಿನ್ಸ್ ಡೆಲ್ಲಿಯ ಕನಸಿನ ಲೋಕವನ್ನು ಛಿದ್ರಗೊಳಿಸಿ ನಮ್ಮನ್ನು ವಾಸ್ತವಕ್ಕೆ ಎಳೆದು ತರುತ್ತಿತ್ತು ಮತ್ತು ನಾವು ಮನುಷ್ಯರಾಗಿ ಯೋಚನೆ ಮಾಡಲು ಪ್ರೇರೆಪಿಸುತ್ತಿತ್ತು.
ಇಂದಿಗೂ ನಮ್ಮ ಯೋಚನೆ ಮತ್ತು ಬರವಣಿಗೆಯಲ್ಲಿ ಮನುಷ್ಯತ್ವದ ಪಸೆ ಕಾಣಿಸಿಕೊಂಡಿದ್ದರೆ ಅದರಲ್ಲಿ ಇಂತಹ ಅನುಭವಗಳ ಋಣ ಇದೆ ಎಂದು ನಾನು ನಂಬಿದ್ದೇನೆ. ಈಗ ಹೇಳಿ ಯಾರಿಗೆ ಯಾರು ಋಣಿಗಳಾಗಿರಬೇಕು.
– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು



