ಜನಕವಿ ಜನಾರ್ದನ ಕೆಸರಗದ್ದೆ ಅವರಿಗೆ ಒಡನಾಡಿಗಳ ಗೌರವ…

4 years ago

ಬೆಂಗಳೂರು: ಜನ ಕವಿತಾ ವೆಬ್ ಸೈಟ್ ಬಿಡುಗಡೆ ಜೊತೆಗೆ ಮಾತು, ಹಾಡು, ಪ್ರೀತಿ ಮತ್ತು ಗೌರವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ದು.ಸರಸ್ವತಿ, ಮಾವಳ್ಳಿ ಶಂಕರ್, ನಾಗೇಶ್ ಹೆಗಡೆ, ಮತ್ತು ಸಿ.ಜಿ.ಲಕ್ಷ್ಮೀಪತಿ ಪಾಲ್ಗೊಳ್ಳಲಿದ್ದಾರೆ. 07.01.2022ರಂದು ಸಂಜೆ 4.00 ರಿಂದ 7.00 ಗಂಟೆಯವರೆಗೆ ಬೆಂಗಳೂರಿನ ನ್ಯಾಷನಲ್ ಕಾಲೇಜು, ಬಸವನಗುಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ.

ಜನಕವಿ ಜನಾರ್ದನ ಕೆಸರಗದ್ದೆ ಅವರಿಗೆ ಒಡನಾಡಿಗಳ ಗೌರವ… ಕಾರ್ಯಕ್ರಮದ ಕುರಿತು

ಕಳೆದ ಮೂರು ದಶಕಗಳಿಂದ ಜನಾರ್ದನ್ ಕೆಸರಗದ್ದೆ ಅವರ ಒಡನಾಟದಲ್ಲಿ ನಡೆಯುತ್ತಿರುವ ನಾವುಗಳು ಅವರ ಕಾರ್ಯಗಳನ್ನು ಸ್ಮರಿಸುತ್ತಾ, ಅಭಿನಂದಿಸುವ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೇವೆ. ಜಾತಿ, ಧರ್ಮ ಮತ್ತು ಲಿಂಗ ತಾರತಮ್ಯಗಳು ಕಾಲಿಗೆ ಚುಚ್ಚುವ ಮುಳ್ಳುಗಳ ಹಾಗೆ ಮುಂದಡಿಯಿಡಲು ಬಿಡದ ಭಾರತದಂತಹ ದೇಶದಲ್ಲಿ ನಮ್ಮ ಸುತ್ತಲಿನ ಸಮಾಜವನ್ನು ಸಹ್ಯಗೊಳಿಸಿಕೊಂಡು, ಮನುಷ್ಯ ಪ್ರೇಮವನ್ನು ನಾವು ಹಚ್ಚಿಕೊಂಡ ಕೆಲಸಗಳ ಮೂಲಕವೇ ಪಸರಿಸುವ ಕಸುಬು ಹೇಳಿಕೊಟ್ಟವರು ಜನಾರ್ದನ್. ಹೊಟ್ಟೆ ತುಂಬಿದವರ ತೆವಲಾಗಿದ್ದ ಸಮಾಜ ಕಾರ್ಯವನ್ನು ನಾವು ನಿಭಾಯಿಸಲೇಬೇಕಾದ ಜವಾಬ್ದಾರಿಯೆಂದು ಅವರು ಅರ್ಥ ಮಾಡಿಸಿದ ಕಾರಣಕ್ಕೆ ಅವರ ಸುತ್ತಲಿನ ಅದೆಷ್ಟೋ ಮನಸ್ಸುಗಳು ಸರೀಕರ ಕುರಿತೂ ಚಿಂತಿಸುವ ಹಕ್ಕಿಗೂಡುಗಳಾಗಿ ಮಾರ್ಪಾಡಾದವು.

ಜನಾರ್ದನ್ ಬರೆದು, ರಾಗ ಹಾಕಿ ನಮಗೆ ಕಲಿಸಿಕೊಟ್ಟ ಹಾಡುಗಳು ನಮ್ಮದೆಯೊಳಗೆ ಸದಾ ಹರಿಯುವ ಮಾನವ ಪ್ರೀತಿಯ ತೊರೆಯನ್ನು ಹರಿಸುತ್ತಿವೆ. ನಾಡಿನ ಎಲ್ಲಾ ಜೀವಪರ, ಜನಮುಖಿ ಹೋರಾಟಗಾರರು ಇಂದು ಅದೇ ಹಾಡುಗಳನ್ನು ಎದೆಯಲ್ಲಿಟ್ಟುಕೊಂಡು ತಿರುಗುತ್ತಿದ್ದಾರೆ.

ಯಾವ ಕೀರ್ತಿ, ಪ್ರಶಸ್ತಿ, ವೇದಿಕೆಗಳನ್ನೂ ಇಷ್ಟಪಡದ ಜನಾರ್ದನ್ ಅವರ ಕಾರ್ಯಗಳನ್ನು ಶ್ಲಾಘಿಸುವ ಮೂಲಕ ನಾವೊಂದಷ್ಟು ಜನ ನಮ್ಮ ನಂಬಿಕೆಯನ್ನೇ ನಮ್ಮ ನಡಿಗೆಯನ್ನೇ ಗೌರವಿಸಿಕೊಳ್ಳುತ್ತಿದ್ದೇವೆ.

ಬನ್ನಿ.. ನಮ್ಮೊಂದಿಗಿರಿ, ಪ್ರೀತಿಯ ಗಾಳಿ ಬೀಸುವ ಹಾಡು ಬರೆದ ಕವಿ ಜನಾರ್ದನ್ ಅವರೊಂದಿಗೆ ಅರ್ಧ ದಿನ ಕಳೆಯೋಣ.

ಸುತ್ತಲಿನ ಸರೀಕರ ನೆತ್ತರ ವಾಸನೆ ದಟ್ಟವಾಗುತ್ತಿರುವಾಗಲೇ ಯಾವುದ್ಯಾವುದೋ ಖಾಯಿಲೆಗಳು ಸಹಜೀವಿಗಳನ್ನು ಮುಟ್ಟಿಸಿಕೊಳ್ಳದೆ, ಒಂಟಿತನದಲ್ಲೇ ಸಾವನ್ನಪ್ಪುವ ಹೊಸ ಅಸ್ಪೃಶ್ಯತೆಯ ಮಾದರಿಗಳನ್ನು ಶಾಪವೆಂಬಂತೆ ಸೃಷ್ಟಿಸುತ್ತಿವೆ. ಇಂಥಾ ಕಾಲಘಟ್ಟದಲ್ಲಿ ಮುಟ್ಟಿಸಿಕೊಂಡು ಬದುಕುವ ಜನಕವಿತೆಗಳನ್ನು ಹಾಡೋಣ.

ಬನ್ನಿ ಜತೆಯಾಗಿ….

Leave a Reply