ವಾರ್ಡ್, ಪಂಚಾಯ್ತಿಯಲ್ಲಿ ಗ್ಯಾರಂಟಿ ಸಮಾವೇಶ
ಗ್ಯಾರಂಟಿ ಯೋಜನೆಗಳನ್ನು ಕಾಂಗ್ರೆಸ್ ಪರ ಮತಗಳಾಗಿ ಪರಿವರ್ತಿಸಲು ಚಿಂತನೆ
ಬೆಂಗಳೂರು: ರಾಜ್ಯದ ಪ್ರತಿ ವಾರ್ಡ್, ಪಂಚಾಯ್ತಿಯಲ್ಲಿ ಗ್ಯಾರಂಟಿ ಸಮಾವೇಶ ಮಾಡುವುದರ ಬಗ್ಗೆ ಚರ್ಚಿಸುತ್ತಿದ್ದೇವೆ. ಆಮೂಲಕ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಬೆಂಗಳೂರು ನಗರದ ಗ್ಯಾರಂಟಿ ಸಮಿತಿ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಕಾರ್ಯಕ್ರಮಕ್ಕೆ ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಅಧ್ಯಕ್ಷರು, ಮಾಜಿ ಕೌನ್ಸಲರ್ ಗಳನ್ನು ಕರೆಸಿದ್ದು, ನೀವು ಈ ವಿಚಾರವಾಗಿ ಯಾವ ರೀತಿ ಕೆಲಸ ಮಾಡುತ್ತೀರಿ ಅದರ ಮೇಲೆ ನಿಮ್ಮ ಹಣೆಬರಹ ನಿರ್ಧಾರವಾಗಲಿದೆ ಎಂದರು.
ಈ ಗ್ಯಾರಂಟಿ ಸಮಿತಿಗಳು ಕೇವಲ ಪಂಚ ಗ್ಯಾರಂಟಿ ಯೋಜನೆಗೆ ಮಾತ್ರ ಸೀಮಿತವಲ್ಲ. ಸರ್ಕಾರದ ಎಲ್ಲಾ ಜನಪರ ಯೋಜನೆಗಳ ಬಗ್ಗೆ ಸರ್ಕಾರದ ಧ್ವನಿಯಾಗಬೇಕು. ಗ್ಯಾರಂಟಿ ಯೋಜನೆ, ಖಾತಾ ದಾಖಲೆ ಹಂಚಿಕೆ ಹೆಸರಿನಲ್ಲಿ ನೀವು ಜನರ ಮನೆ ಬಾಗಿಲಿಗೆ ಹೋಗಬಹುದು. ನೀವು ಮನೆ ಬಾಗಿಲಿಗೆ ಹೋಗಿ, ಜನರ ಮನ ಗೆಲ್ಲಬೇಕು. ಮುಂದೆ ಬರುವ ಪಾಲಿಕೆ ಚುನಾವಣೆಯಲ್ಲಿ ಐದು ಪಾಲಿಕೆಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದರು.
ಡಿ.ಕೆ. ಶಿವಕುಮಾರ್, ಹೆಚ್.ಎಂ ರೇವಣ್ಣ ಹಿಂದೆ ಗಿರಕಿ ಹೊಡೆದರೆ ಪಾಲಿಕೆ ಚುನಾವಣೆ ಟಿಕೆಟ್ ಸಿಗುತ್ತದೆ ಎಂದು ನೀವು ಭಾವಿಸಿದ್ದರೆ, ಅದನ್ನು ತಲೆಯಿಂದ ತೆಗೆದುಹಾಕಿ. ನೀವು ಸ್ಥಳೀಯ ಮಟ್ಟದಲ್ಲಿದ್ದು ಕೆಲಸ ಮಾಡಬೇಕು ಎಂದರು.
ಮಂಗಳೂರು ಭಾಗದಲ್ಲಿ ನಮಗೆ ಹೆಚ್ಚು ಸೋಲಾಗಿದೆ. ಆದರೆ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಫಲಾನುಭವಿಗಳು ಇದೇ ಭಾಗದವರಿದ್ದಾರೆ. ಹೀಗಾಗಿ ಗ್ಯಾರಂಟಿ ಟೀಕಿಸುವ ವಿರೋಧ ಪಕ್ಷದವರಿಗೆ ನಾನು ಸವಾಲು ಹಾಕಿದೆ. ಗ್ಯಾರಂಟಿ ಯೋಜನೆ ಬೇಡವಾದರೆ ಅದನ್ನು ನಿಮ್ಮವರಿಂದ ಬರೆದು ಕಳಿಸಿ ಎಂದು ಹೇಳಿದೆ. ಗ್ಯಾರಂಟಿ ಯೋಜನೆ ಫಲ ಅನುಭವಿಸಿ ಅದನ್ನೇ ಟೀಕೆ ಮಾಡಿದರೆ ಹೇಗೆ? ಎಂದು ಪ್ರಶ್ನಿಸಿದರು.
ನನಗೆ ಯುವಕರು ಹಾಗೂ ಮಹಿಳೆಯರ ಮೇಲೆ ಹೆಚ್ಚು ನಂಬಿಕೆ. ಹೀಗಾಗಿ ನಮ್ಮ ಗ್ಯಾರಂಟಿ ಯೋಜನೆಗಳು ಈ ವರ್ಗದವರ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಗ್ಯಾರಂಟಿ ಸಮಿತಿಯಲ್ಲಿ ಮಹಿಳೆಯರಿಗೆ ಜವಾಬ್ದಾರಿ ನೀಡಲಾಗಿದೆ. ನಮ್ಮ ಸರ್ಕಾರದ ಕೆಲಸಗಳನ್ನು ವಿರೋಧ ಪಕ್ಷಗಳು ಟೀಕೆ ಮಾಡುತ್ತಾರೆ. ಅವರು ಏನು ಬೇಕಾದರೂ ಟೀಕೆ ಮಾಡಲಿ. ಅವರ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯವರಿಗೆ ನಿಮ್ಮ ಬೆಲೆ ಏನು ಎಂಬುದು ಅರ್ಥವಾಗಿಲ್ಲ. ನೀವು ಸರ್ಕಾರದ ಪ್ರತಿನಿಧಿಗಳು. ಕರ್ನಾಟಕದ, ಸರ್ಕಾರದ ದನಿ. ನಿಮಗೆ ಸರ್ಕಾರದ ಚಿಹ್ನೆ ನೀಡಲಾಗಿದೆ, ಅಧ್ಯಕ್ಷರುಗಳಿಗೆ ಕಚೇರಿ ನೀಡಲಾಗಿದೆ. ವಿಪಕ್ಷಗಳು ಸದನದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿಗಳ ವಿರುದ್ದ ಕೋಲಾಹಲ ಎಬ್ಬಿಸಿದರು. ಶಾಸಕರ ಕಾರ್ಯಪ್ರಗತಿ ಮಾಡಲು ನೀವುಗಳು ಯಾರು ಎಂದು ಪ್ರಶ್ನೆ ಮಾಡಿದರು. ಇವರುಗಳನ್ನು ನಮ್ಮ ಕೆಳಗೆ ಉಪಾಧ್ಯಕ್ಷರನ್ನಾಗಿ ಮಾಡಿ ಎಂದರು. ಶಾಸಕರ ಸ್ಥಾನಕ್ಕೆ ಕುತ್ತು ತಂದಿದ್ದೀರಿ ಎಂದರು. ನಮ್ಮ ಪಕ್ಕ ಕುರ್ಚಿ ಹಾಕಿದ್ದೀರಿ ಎಂದೆಲ್ಲ ಹೇಳಿದರು ಅವರ ಮಾತುಗಳಿಗೆ ನಾವು ಬಗ್ಗಲಿಲ್ಲ ಎಂದರು.
ನಮ್ಮ ಕಾರ್ಯಕರ್ತರಿಗೆ ನಾವು ಶಕ್ತಿ ತುಂಬುವುದು ನಮ್ಮ ಕರ್ತವ್ಯ. ನಮ್ಮನ್ನು ಅಧಿಕಾರಕ್ಕೆ ತಂದ ನಿಮಗೆ ಅಧಿಕಾರ ನೀಡಿದ್ದೇವೆ. ಆಸ್ಪತ್ರೆ, ಬಗರ್ ಹುಕುಂ ಸೇರಿದಂತೆ ಅನೇಕ ಸಮಿತಿಗಳಲ್ಲಿ ನಿಮಗೆ ಅವಕಾಶ ನೀಡಿದ್ದೇವೆ. ನಾನು ಸಹಕಾರ ಮಂತ್ರಿಯಾಗಿದ್ದಾಗ, ವಿದ್ಯುತ್ ಸಚಿವನಾಗಿದ್ದಾಗ ಸಮಿತಿಗಳಲ್ಲಿನ ಸದಸ್ಯರ ಸಂಖ್ಯೆ ಹೆಚ್ಚಳ ಮಾಡಿದ್ದೆ. ಪ್ರತಿ ಕ್ಷೇತ್ರದಲ್ಲಿ ಪಕ್ಷಕ್ಕಾಗಿ ದುಡಿದ ಎಲ್ಲಾ ವರ್ಗದ 15 ಜನರನ್ನು ಗುರುತಿಸಿ ನಿಮಗೆ ಅಧಿಕಾರ ನೀಡಲಾಗಿದೆ ಎಂದರು.




