ಚುನಾವಣೆ ಹತ್ತಿರವಾದ್ದರಿಂದ ಹಿಜಬ್ ವಿವಾದ ಸೃಷ್ಟಿ: ವಿನಾಯಕ ನಾವಲಗಟ್ಟಿ

4 years ago

ಬೆಳಗಾವಿ: ಚುನಾವಣೆ ಹತ್ತಿರ ಬಂದದ್ದರಿಂದ ಹಿಜಬ್ ವಿವಾದವನ್ನು ಸೃಷ್ಟಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾಧ್ಯಕ್ಷ ವಿನಾಯಕ ನಾವಲಗಟ್ಟಿ ಹೇಳಿದರು.
ಘಟಪ್ರಭದ ಡಾ.ಎನ್.ಎಸ್.ಹರ್ಡೀಕರ್ ರಾಷ್ಟ್ರೀಯ ಸೇವಾದಳದಲ್ಲಿ ನಡೆದ 5 ದಿನಗಳ ಸಮರ್ಥ್ ರಾಜ್ಯಮಟ್ಟದ ಮಹಿಳಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಜನರ ದಿಕ್ಕುತಪ್ಪಿಸುವ ಸಲುವಾಗಿ ಹಿಜಬ್ – ಶಾಲು ವಿವಾದವನ್ನು ಮುನ್ನೆಲೆಗೆ ತರಲಾಗಿದೆ. ಕೋಮುವಾದಿ ಶಕ್ತಿಗಳ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.
ನಾವು ಸೇವಾದಳದ ತರಬೇತಿ ಪಡೆಯುತ್ತಿದ್ದ ವೇಳೆಯಲ್ಲಿ ನಮಗೆ ಉಳಿಯಲು ಕೂಡ ವ್ಯವಸ್ಥೆ ಇರುತ್ತಿರಲಿಲ್ಲ. ಮಳೆಯಲ್ಲಿ ನೆನೆದುಕೊಂಡು ನಾವು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದೆವು. ಈಗ ಬಿ.ಕೆ.ಹರಿಪ್ರಸಾದ್ ಮತ್ತು ಸತೀಶ್ ಜಾರಕಿಹೊಳಿಯವರಿಂದ ಸುಸಜ್ಜಿತ ಸಭಾಂಗಣ, ಉಳಿಯಲು ಸೂಕ್ತ ವ್ಯವಸ್ಥೆ ಮತ್ತು ಊಟೋಪಚಾರದ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತಾಡಿದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವೀಂದ್ರ ನಾಯ್ಕರ್, ಬಟ್ಟೆ ಹಾಕಿಕೊಳ್ಳಲು ಕಂದಾಯ ಹೇರಿದ ಸಂತಾನದವರು ಇಂದು ಅಧಿಕಾರ ನಡೆಸುತ್ತಿರುವುದರಿಂದ ಹಿಜಬ್ ವಿವಾದ ಸೃಷ್ಟಿಯಾಗಿದೆ. ಇವರದು ಮಹಿಳೆಯರಿಗೆ ಶಿಕ್ಷಣ ಕೊಡಬಾರದು ಎಂಬ ದುರುದ್ದೇಶಪೂರಿತ ಮನಸ್ಥಿತಿ. ಇದರಿಂದಲೇ ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದರು.
ಕೇರಳದಲ್ಲಿ ಹೆಣ್ಣುಮಕ್ಕಳಿಗೆ ಸ್ತನ ತೆರಿಗೆಯನ್ನು ಹೇರಿದ್ದು ಇದೇ ಮನಸ್ಥಿತಿಯ ಜನ. ಸ್ತನದ ಗಾತ್ರವನ್ನು ಆಧರಿಸಿ ತೆರಿಗೆಯನ್ನು ವಿಧಿಸಲಾಗುತ್ತಿತ್ತು. ಇಲ್ಲಿನ ನಂಗೇಲಿ ಎಂಬ ಮಹಿಳೆ ರವಿಕೆ ತೊಟ್ಟ ವಿಷಯ ರಾಜನಿಗೆ ತಲುಪುತ್ತದೆ. ಕಂದಾಯ ವಸೂಲಿಗೆ ಮುಂದಾಗುತ್ತಾರೆ. ಆಗ ನಂಗೇಳಿ ತನ್ನ ಸ್ತನಗಳನ್ನೇ ಕತ್ತರಿಸಿ ಕೊಡುತ್ತಾಳೆ. ಒಮ್ಮೆ ಟಿಪ್ಪು ಈ ಮಾರ್ಗದಲ್ಲಿ ಚಲಿಸುತ್ತಿರುವಾಗ ಮಹಿಳೆಯರು ರವಿಕೆ ತೊಡದಿರುವುದನ್ನು ಗಮನಿಸಿ ವಿಚಾರಿಸುತ್ತಾನೆ. ಅನಂತರ ಇಂತಹವರು ಅಧಿಕಾರದಲ್ಲಿರಬಾರದು ಎಂದು ಸೋಲಿಸುತ್ತಾನೆ. ಜೊತೆಗೆ ಇನ್ನು ಮುಂದೆ ಎಲ್ಲರೂ ಗೌರವದಿಂದ ಬದುಕಬೇಕು ಎಂದು ಬಟ್ಟೆಯ ವ್ಯವಸ್ಥೆಯನ್ನು ಮಾಡುತ್ತಾನೆ. ನಮ್ಮ ಹೆಣ್ಣುಮಕ್ಕಳ ಗೌರವ ಕಾಪಾಡಿದ್ದರಿಂದಲೇ ಟಿಪ್ಪುವನ್ನು ಕಂಡರೆ ಸನಾತನವಾದಿಳಿಗೆ ಆಗುವುದಿಲ್ಲ ಎಂದರು.
ಮನುವಾದದ ಪ್ರಕಾರ ದೇಶದ ಶೂದ್ರರಿಗೆ, ಮಹಿಳೆಯರಿಗೆ ಗೌರವದ ಬದುಕು ಮತ್ತು ಶಿಕ್ಷಣ ಪಡೆಯುವ ಹಕ್ಕಿಲ್ಲ. ಇದಕ್ಕೆ ಪರ್ಯಾಯವಾಗ ಬುದ್ಧ, ಬಸವ, ಅಂಬೇಡ್ಕರ್ ಕೆಲಸ ಮಾಡಿದ್ದಾರೆ. ಅದಕ್ಕಾಗಿಯೇ ಅವರನ್ನು ಕಂಡರೆ ಮನುವಾದಿಗಳಿ ಆಗುವುದಿಲ್ಲ. ದೇಶದಲ್ಲಿ ಈಗ ತಪ್ಪುಗಳನ್ನು ಪ್ರಶ್ನಿಸುವವರು ದೇಶದ್ರೋಹಿಗಳಾಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮಾತಾಡಿದ ರಾಜ್ಯ ಸೇವಾದಳ ಉಸ್ತುವಾರಿ ಬಲರಾಮ್ ಸಿಂಗ್ ಬದೋರಿಯಾ, ಶಿಸ್ತಿನಿಂದ ನೀವೆಲ್ಲ ತರಬೇತಿ ಪಡೆದಿದ್ದೀರಿ. ತರಬೇತಿಯಲ್ಲಿ ಕಲಿತ ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಮತ್ತು ಸೇವಾದಳವನ್ನು ಇನ್ನಷ್ಟು ಬಲಪಡಿಸಿ ಎಂದು ಕರೆನೀಡಿದರು. ಜೊತೆಗೆ, ಶಿಬಿರವನ್ನು ನಿರ್ವಹಿಸಿದ ತರಬೇತಿದಾರರನ್ನು ಶ್ಲಾಘಿಸಿದರು.
ಇದೇ ವೇಳೆ ಮಾತಾಡಿದ ರಾಜ್ಯ ಮಹಿಳಾ ಸೇವಾದಳ ಅಧ್ಯಕ್ಷೆ ಸುಜಾತಾ ಉಲ್ಲಾಳ್, 5 ದಿನಗಳ ಕಾಲ ತರಬೇತಿಯನ್ನು ಪಡೆದ ಎಲ್ಲ ಶಿಬಿರಾರ್ಥಿಗಳಿಗೆ ಅಭಿನಂದನೆ ಸಲ್ಲಿಸಬೇಕು. ನಮ್ಮ ಕುಟುಂಬ ಇನ್ನಷ್ಟು ವಿಸ್ತಾರವಾಗಬೇಕು. ಇದಕ್ಕಾಗಿ ನೀವೆಲ್ಲ ಶ್ರಮಿಸಿ ಎಂದು ಕರೆದರು.
ಕಾರ್ಯಕ್ರಮದಲ್ಲಿ ಮಾತಾಡಿದ ಸೇವಾದಳ ಕರ್ನಾಟಕ ಘಟಕದ ಕಾರ್ಯಾಧ್ಯಕ್ಷ ವಿ.ವಿ.ತುಳಸಿಗೇರಿ, ಇಲ್ಲಿ ಪಡೆದ ತರಬೇತಿಯ ಸದುಪಯೋಗವನ್ನು ಪಡೆದುಕೊಳ್ಳಿ. ನಿಮ್ಮ ಕುಟುಂಬವನ್ನು ನಿರ್ಲಕ್ಷಿಸಿ ಕೆಲಸ ನಿರ್ವಹಿಸಿ ಎಂದು ನಾವು ಹೇಳುವುದಿಲ್ಲ. ಕುಟುಂಬದೊಂದಿಗೆ ಸಂಘಟನೆಯನ್ನೂ ಬಲಪಡಿಸಿ ಎಂದು ಕರೆನೀಡಿದರು.
ಇಲ್ಲಿನ ವ್ಯವಸ್ಥೆಯ ಅತ್ಯುತ್ತಮವಾಗಿದೆ. ನಮಗೆ ಮನೆಯಲ್ಲಿ ಕೂಡ ಸಿಗದಂತಹ ಊಟ ಮತ್ತು ವಸತಿ ವ್ಯವಸ್ಥೆಯನ್ನು ಇಲ್ಲಿ ಕಲ್ಪಿಸಲಾಗಿದೆ. ತರಬೇತಿ ಕೇಂದ್ರ ಸ್ಥಾಪನೆಗೆ ನೆರವಾದ ಬಿ.ಕೆ.ಹರಿಪ್ರಸಾದ್ ಅವರಿಗೂ ಮತ್ತು ಇಲ್ಲಿ ತರಬೇತಿ ನಿರ್ವಹಣೆಗೆ ಎಲ್ಲ ರೀತಿಯ ಸಹಕಾರ ನೀಡುತ್ತಿರುವ ಸತೀಶ್ ಜಾರಕಿಹೊಳಿಯವರಿಗೆ ಧನ್ಯವಾದಗಳು ಎಂದರು.
ಐದು ದಿನಗಳ ಕಾಲ ನೀವು ಶಿಬಿರದಲ್ಲಿ ಕಲಿತ ವಿಷಯಗಳನ್ನು ನಿಮ್ಮ ನೆರೆಹೊರೆಯವರಿಗೂ ತಿಳಿಸಿ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ಶಿಬಿರಾರ್ಥಿಗಳು ಕನಿಷ್ಠ 10 ಶಿಬಿರಾರ್ಥಿಗಳನ್ನು ಸಜ್ಜುಗೊಳಿಸಿ ತರಬೇತಿಗೆ ಕಳಿಸಿ. ಮುಂದಿನ ದಿನಗಳಲ್ಲಿ ಸುಜಾತ ಉಲ್ಲಾಳ ಅವರ ನೇತೃತ್ವದಲ್ಲಿ ಮಹಿಳಾ ಸೇವಾದಳ ಘಟಕ ಹೆಚ್ಚಿನ ಮಟ್ಟದ ತರಬೇತಿಗಳನ್ನು ನಡೆಸಲಿ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಹನುಮಂತ ರಾವ್ ಜವಳಿ, ಗೀತ್ ತುಕಡಿ ಉಸ್ತುವಾರಿ ವಿಜಯಕುಮಾರಿ, ಶಿಬಿರ ಸ್ಟಾಪ್ ಭಾರತಿ, ಜಯಕುಮಾರಿ, ಉಮಾ ತೋಟಪ್ಪ, ಡಾ.ವಿಶ್ವನಾಥ್ ಚಿಂತಾಮಣಿ, ಪಿ.ಎಂ.ಜಗತಾಪ್, ವಿಜಯಗೌಡ ಪಾಟೀಲ್, ರಾಜು ಪೂಜಾರಿ, ಶಿವಕುಮಾರ್ ಚರ್ಮ, ರಾಜು ಶಿಂಗೆ, ಡಾ.ಡಿ.ಎನ್.ಶಿಂಧೆ ಮೊದಲಾದವರು ಹಾಜರಿದ್ದರು. ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

Leave a Reply