ʼಸಂದೇಶ ಸನ್ನಿಧಿʼಯಲ್ಲಿ ʼಸಿದ್ಧಸೂತ್ರʼ ಹೆಣೆದ ʼರಕ್ಕಸ ರಾಜಕಾರಣʼಕ್ಕೆ ಕೊನೆಗಾಲ: ಎಚ್.ಡಿ.ಕುಮಾರಸ್ವಾಮಿ

4 years ago

ಬೆಂಗಳೂರು: ಮಾಜಿ ಪ್ರಧಾನಿಗಳೊಬ್ಬರು ಹಾಲಿ ಪ್ರಧಾನಿಯನ್ನು ಭೇಟಿ ಮಾಡುವುದು ತಪ್ಪೇ? ಸಂಸತ್ ಕಲಾಪಕ್ಕೆ ತೆರಳಿದ್ದ ಹೆಚ್.ಡಿ.ದೇವೇಗೌಡರು ಅಲ್ಲಿಯೇ ಇದ್ದ ಪ್ರಧಾನಮಂತ್ರಿಗಳ ಕಚೇರಿಯಲ್ಲಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಆ ಭೇಟಿ ರಾಜಕೀಯ, ಸಂಕುಚಿತತೆಯ ಎಲ್ಲೆ ಮೀರಿದ್ದು ಎನ್ನುವುದನ್ನು ಆ ಇಬ್ಬರು ನಾಯಕರ ಭೇಟಿಯ ಚಿತ್ರಗಳೇ ಹೇಳುತ್ತವೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಅಸೂಯೆ, ದ್ವೇಷ, ಅಸಹನೆ, ಸರ್ವಾಧಿಕಾರಿ ಮನೋಭಾವದ ʼಸಿದ್ದಕಲೆʼಯ ನಿಪುಣನಿಗೆ ರಾಜಕೀಯದಲ್ಲಿ ವಿರಳಾತಿ ವಿರಳವಾಗಿ ಕಾಣುವ ಇಂಥ ಭೇಟಿಗಳನ್ನು ಅರಗಿಸಿಕೊಳ್ಳುವುದು ಹೇಗೆ ತಾನೇ ಸಾಧ್ಯ? ʼರಾಜಕೀಯ ರಕ್ಕಸತನʼಕ್ಕೆ ಅವರು ರಾಜಾಧಿರಾಜ. ʼರಾಜಕೀಯ ಆಶ್ರಯʼ ನೀಡಿದ ಕಾಂಗ್ರೆಸ್ ಪಕ್ಷವನ್ನೇ ಹೆಬ್ಬಾವಿನಂತೆ ನುಂಗಲು ಹೊರಟ ʼಸಿದ್ದಸೂತ್ರಧಾರʼನಿಗೆ ರಾಜಕೀಯ ಬದುಕು ಕೊಟ್ಟು ಬೆಳೆಸಿದ ಜೆಡಿಎಸ್ ಪಕ್ಷವನ್ನು ಮುಳುಗಿಸಿಬಿಡುವ ಹಗಲುಕನಸು ಬೇರೆ ಇದೆ ಎಂದು ಅವರು ಪರೋಕ್ಷವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.

ದೇವೇಗೌಡರು ಅವಕಾಶವಾದಿ ರಾಜಕಾರಣಿ ಎನ್ನುವ ಆ ನಾಲಗೆ, ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಂ ಎನ್ನುವ ಆ ನಾಲಗೆಯ ಮೇಲೆ ʼಪಕ್ಷನಿಷ್ಠೆʼ ಎನ್ನುವ ಪದ ಎಂದಾದರೂ ಬಂದಿದೆಯಾ? ಅದಕ್ಕೆ ಆ ಪದ ʼಪರಮ ಅಪಥ್ಯʼ ಎನ್ನುವುದು ಇಡೀ ರಾಜ್ಯದ ಜನರಿಗೆ ಗೊತ್ತು ಎಂದಿದ್ದಾರೆ.

ನನಗಿಲ್ಲದಿದ್ದರೆ ಯಾರಿಗೂ ಬೇಡ ಎನ್ನುವ ಸ್ವಾರ್ಥ ಮನೋಭಾವದಿಂದ ಸ್ವಪಕ್ಷವೂ ಇದ್ದ ಮೈತ್ರಿ ಸರಕಾರವನ್ನೇ ʼಸ್ವಾಹಾʼ ಮಾಡಿ ಆಪರೇಷನ್ ಕಮಲದ ಕೆಸರಿನಲ್ಲಿ ವಿಕೃತವಾಗಿ ಹೊರಳಾಡಿದವರು ಯಾರು ಎನ್ನುವುದು ಅವರ ಸ್ವಪಕ್ಷೀಯರಿಗೇ ಚೆನ್ನಾಗಿ ಗೊತ್ತು ಎಂದಿದ್ದಾರೆ.

ನಾಯಕರಿಗೆ ಗತಿ ಇಲ್ಲ, ಅಭ್ಯರ್ಥಿಗಳಿಗಂತೂ ದಟ್ಟ ದಾರಿದ್ರ್ಯ. ಇನ್ನು, ಪಕ್ಷದ ಬಗ್ಗೆ ಹೇಳುವುದೇ ಬೇಡ. ಅಧ್ಯಕ್ಷರಿಗೊಂದು ಕಾಂಗ್ರೆಸ್, ಪ್ರತಿಪಕ್ಷ ನಾಯಕರಿಗೊಂದು ಕಾಂಗ್ರೆಸ್. ಅಷ್ಟೇ ಅಲ್ಲ; ಜಿಲ್ಲೆಗಳಲ್ಲಿ ಎರಡೆರಡು ಕಾಂಗ್ರೆಸ್ʼಗಳು!! ʼಸಿದ್ದಸೂತ್ರಧಾರʼನಿಗೆ ಇದೆಲ್ಲ ಗೊತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಬಾಯಲ್ಲಿ ಜಾತ್ಯತೀತೆಯ ಜಪ ಮಾಡುತ್ತಲೇ ʼಸಂದೇಶ ಸನ್ನಿಧಿʼಯಲ್ಲಿ ʼಸಿದ್ಧಸೂತ್ರʼ ಹೆಣೆದ ʼರಕ್ಕಸ ರಾಜಕಾರಣʼಕ್ಕೆ ಕೊನೆಗಾಲ ಬಂದಿದೆ. ಆ ದಿನವೂ ಹತ್ತಿರದಲ್ಲೇ ಇದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

Leave a Reply