ಬೆಂಗಳೂರು: ಜೆಡಿಎಸ್ ವಿಸರ್ಜನೆ ಮಾಡುವುದಾಗಿ ಆ ಪಕ್ಷದ ಮುಖ್ಯಸ್ಥರು ಆಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಇದರಿಂದ ಆ ಪಕ್ಷದ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ. ಅಂತಹವರಿಗೆ ನಾನೀದ್ದೇನೆ, ಕಾಂಗ್ರೆಸ್‍ಗೆ ಬನ್ನಿ ಎಂದು ಕರೆಯುತ್ತಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಈ ಕರೆಯಿಂದಾಗಿ ಕನಕಪುರ ಸೇರಿದಂತೆ ಎಲ್ಲಾ ಕ್ಷೇತ್ರಗಳಿಂದಲೂ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು.
ಜೆಡಿಎಸ್ ವಿಷಯದಲ್ಲಿ ನನಗೆ ಯಾವ ಮೃಧು ದೋರಣೆಯೂ ಇಲ್ಲ. ಹಾಗೇ ನೋಡಿದರೆ ಜೆಡಿಎಸ್‍ನಿಂದ ಹೆಚ್ಚು ಕಾರ್ಯಕರ್ತರು ಈ ಅವಧಿಯಲ್ಲೇ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ಒಂದು ರಾಜಕೀಯ ಪಕ್ಷಕ್ಕೆ ವಿಸರ್ಜನೆ ಎಂಬ ಪದ ಗೋತ್ತಿರುವುದಿಲ್ಲ. ಆದರೆ ಕುಮಾರಸ್ವಾಮಿ ಹೇಳಿಬಿಟ್ಟಿದ್ದಾರೆ. ಜೆಡಿಎಸ್‍ನ ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಿದ್ದಾರೆ ಎಂದರು.
ಜೆಡಿಎಸ್ ಗೆಲ್ಲುವುದಿಲ್ಲ ಎಂದು ನಾನು ಹೇಳುವುದಿಲ್ಲ. ಅವರು ಒಂದು ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ರಾಜಕೀಯವಾಗಿ ಅವರು ಇರಬೇಕು ಎಂಬುದು ನಮ್ಮ ನಿಲುವು. ಅದನ್ನು ಮೃಧು ದೋರಣೆ ಎಂದರೆ ಹೇಗೆ? ದಿನಾ ಬೆಳಗ್ಗೆ ನಾನು ಅವರ ಜೊತೆ ಕುಸ್ತಿ ಮಾಡಬೇಕಾ ಎಂದು ಪ್ರಶ್ನಿಸಿದರು.
ಪಿಎಸ್‍ಐ ಹಗರಣದಲ್ಲಿ ಸರ್ಕಾರದ ಬೆಂಬಲ ಇರುವುದು ಖಚಿತ, ಈ ಸರ್ಕಾರ ನೇಮಕಾತಿ, ವ್ಯಾಸಂಗ ಹಾಗೂ ಪರೀಕ್ಷೆಗಳಲ್ಲೂ ಭ್ರಷ್ಟಚಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಪಿಎಸ್‍ಐ ಹಗರಣದ ಆರೋಪಿಗಳು ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿದ್ದಾರೆ. ಸರ್ಕಾರದ ಬೆಂಬಲ ಇಲ್ಲದೆ ಅವರಿಗೆ ಜಾಮೀನು ಸಿಗಲು ಸಾಧ್ಯವಿರಲಿಲ್ಲ. ಸರ್ಕಾರದ ಎಲ್ಲಾ ಪ್ರಮುಖರು ಇದರಲ್ಲಿ ಹೊಣೆಯಾಗಿದ್ದಾರೆ ಎಂದರು.



