ಕ್ಷಮೆ ಕೋರಿದ ನಾದಬ್ರಹ್ಮ ಹಂಸಲೇಖ

5 years ago

ಜಾಲತಾಣಗಳಲ್ಲಿ ಪರ – ವಿರೋಧ ಚರ್ಚೆ

ಪರ ವಿಚಾರಗಳನ್ನು ಮರೆತುಬಿಟ್ಟ ಮಾಧ್ಯಮಗಳು

ಅರ್ಹತೆ ಗಳಿಸಿಕೊಳ್ಳುವುದೊಂದೇ ಅಸ್ಪೃಶ್ಯತೆಯನ್ನು ಕೊಲ್ಲುವ ಆಯುಧ

ಅನಿಷ್ಟ ನಿವಾರಣೆಗೆ ಪ್ರಯತ್ನ ಮುಂದುವರೆಸುವೆ: ಹಂಸಲೇಖ

ಬೆಂಗಳೂರು: ಪೇಜಾವರ ಶ್ರೀಗಳ ಕುರಿತು ಆಡಿದ ಮಾತುಗಳನ್ನು ದೊಡ್ಡದು ಮಾಡಿದ ಬೆರಳೆಣಿಕೆಯಷ್ಟು ಜನ ಹಂಸಲೇಖ ಅವರು ಕ್ಷಮೆ ಕೋರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅವರ ಪರವಾಗಿ ವ್ಯಾಪಕವಾಗಿ ಜನಾಭಿಪ್ರಾಯ ವ್ಯಕ್ತವಾಗಿತ್ತು. ಈ ಸಂಗತಿಯನ್ನು ರಾಜ್ಯದ ಮಾಧ್ಯಮಗಳು ಬಿತ್ತರಿಸುವಲ್ಲಿ ಸೋತವು.

ಇವೆಲ್ಲ ಬೆಳವಣಿಗೆಗಳ ನಡುವೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಹಂಸಲೇಖ, ಮೊದಲನೆಯದಾಗಿ ಕ್ಷಮೆ ಇರಲಿ, ಎರಡನೆಯದಾಗಿ ಎರಡನೆಯದಾಗಿಯೂ ಕ್ಷಮೆ ಇರಲಿ. ನನಗೆ ಗೊತ್ತಿದೆ ಎಲ್ಲ ಮಾತುಗಳೂ ವೇದಿಕೆಗಲ್ಲ; ತಪ್ಪು. ಅಲ್ಲಿ ಪ್ರಶಸ್ತಿ ಪುರಸ್ಕಾರ ಸಭೆ ಅದು. ಅಲ್ಲಿ ನುಡಿದರೆ ಮುತ್ತಿನ ಹಾರದಂತಿರಬೇಕು ಅನ್ನೋದು ಇರಬೇಕಿತ್ತು. ನಾನು ಹಾಗೆ ಅಲಂಕರಿಸಬೇಕಿತ್ತು; ತಪ್ಪು. ಅಸ್ಪೃಶ್ಯತೆ ನಮ್ಮ ದೇಶಕ್ಕಂಟಿರುವ ಶಾಪ. ಇದು ನನ್ನ ಮಾತಲ್ಲ. ಜಿಡ್ಡು ಕೃಷ್ಣಮೂರ್ತಿಗಳ ಸ್ಟೇಟ್ ಮೆಂಟ್. ಈ ಅಸ್ಪಶ್ಯತೆಯ ಅನಿಷ್ಟವನ್ನು ತೊಡೆದುಹಾಕೋಕೆ ಪೇಜಾವರರಂತಹ ಎಲ್ಲ ಗುರುಹಿರಿಯರು ಪ್ರಯತ್ನ, ಸಂಧಾನಗಳನ್ನು ಮಾಡ್ತಾ ಇದಾರೆ. ಆ ಎಲ್ಲ ಪ್ರಯತ್ನ, ಸಂಧಾನಗಳ ಬಗ್ಗೆ ನನಗೆ ಅಪಾರವಾದ ಗೌರವವಿದೆ. ದಶಕಗಳ ಹಿಂದೆ ನಮ್ಮ ಕಲಾರಂಗದಲ್ಲಿ ಕೂಡ ಈ ಅಸ್ಪಶ್ಯತೆ ದಾಳಿ ದಟ್ಟವಾಗಿತ್ತು. ಮನುಷ್ಯವಶಾತ್ ಇಲ್ಲಿ ಅದು ಕರಗಿ ಮಾಯವಾಗಿದೆ. ಭಾರತದಲ್ಲಿಯೂ ಕೂಡ ಅದು ಕರಗಿ ಮಾಯವಾಗುವ ದಿನವಿದೆ. ಈಗ ಭಾರತದಲ್ಲಿ ನಿಧಾನವಾಗಿ ಸಂಭವಿಸ್ತಾ ಇದೆ. ಅದು ಶೀಘ್ರವಾಗಿ ಆಗಲಿ ಅಂತಾ ನಾನು ಹಾರೈಸ್ತೀನಿ. ನಾನು ಅಲ್ಲಿ ಆಡಿದ ಕೆಲವು ಮಾತುಗಳು ನನ್ನ ಹೆಂಡತಿಗೇ ಹಿಡಿಸಲಿಲ್ಲ. ಆಕೆ ಪ್ರತಿಭಟಿಸಿದಳು. ಆಕೆಯ ಕ್ಷಮೆ ಕೂಡ ಕೋರ್ತೇನೆ. ನಾನು ಸಂಗೀತಗಾರ. ನನಗ್ಯಾಕೆ ಟ್ರೋಲು ಇತ್ಯಾದಿಗಳು, ಕಂಟ್ರೋಲಾಗಿರೋದು ತಾನೇ ನಮ್ಮ ಕೆಲಸ. ನನಗೆ ಯಾರ ಮನಸನ್ನೂ ನೋಯಿಸುವ ಇಷ್ಟವಿಲ್ಲ. ನನ್ನ ಸಂಗೀತ ಹೇಗೆ ಎಲ್ಲರಿಗೂ ಸುಖ ಕೊಡುತ್ತೋ ನನ್ನ ಮಾತು ನನ್ನ ಬದುಕು ಕೂಡ ಸುಖ ಕೊಡಬೇಕು. ಇದು ನನ್ನ ಜೀವನದ ಗುರಿ. ಆದರೆ ಎಲ್ಲ ಅನಿಷ್ಟಗಳನ್ನು ಹೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರವೂ ಯಾವುದಾದರೂ ಮೂಲಕ ಇದ್ದರೆ ಅದನ್ನು ನಾನು ಮಾಡೇ ಮಾಡ್ತೀನಿ ಎಂದಿದ್ದಾರೆ. ವಿಡಿಯೋದ ಕಡೆಯಲ್ಲಿ ಅರ್ಹತೆ ಗಳಿಸಿಕೊಳ್ಳುವುದೊಂದೇ ಅಸ್ಪೃಶ್ಯತೆಯನ್ನು ಕೊಲ್ಲುವ ಆಯುಧ ಎಂಬ ಒಕ್ಕಣೆ ಇದೆ.

Leave a Reply