ಬೆಂಗಳೂರು: ಪರ ಭಾಷಿಕರ ಹಾವಳಿ ನಿಲ್ಲಬೇಕು, ಕನ್ನಡ ಶಾಲೆ ಉಳಿಸಬೇಕು ಮತ್ತು ಕನ್ನಡ ಪರ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿರುವ ಹಾಕಿರುವ ಕೇಸ್ ಗಳನ್ನು ಹಿಂಪಡೆಯಬೇಕು ಮತ್ತು ರಾಜ್ಯ ಸರ್ಕಾರ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಸಮ್ಮೇಳನಾಧ್ಯಕ್ಷ ಪಾಲನೇತ್ರ ಒತ್ತಾಯಿಸಿದರು.
ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ಕನ್ನಡ ನುಡಿ ಸಮ್ಮೇಳನ ಕಾರ್ಯಕ್ರಮವನ್ನು ನಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ಕನ್ನಡ ಚಳುವಳಿ, ಕನ್ನಡ ಭಾಷೆ ಉಳಿವಿಗಾಗಿ ಹಲವಾರು ಸಾಹಿತಿಗಳು, ಹೋರಾಟಗಾರರ ಶ್ರಮದಿಂದ ಉಳಿದಿದೆ. ಕನ್ನಡ ಮಾತೃ ಭಾಷೆ. ನಮ್ಮ ಹಿರಿಯರು ಅಕ್ಷರ ಜ್ಞಾನವಿಲ್ಲದೇ ಇದ್ದರು ಕನ್ನಡ ಭಾಷೆಯನ್ನ ಸಾಂಸ್ಕೃತಿಕವಾಗಿ ಬೆಳೆಸಿದರು. ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು, ರಾಜ್ಯದಲ್ಲಿರುವ ಆನ್ಯ ಭಾಷಿಕರು ಕನ್ನಡ ಭಾಷೆ ಕಲಿಯಬೇಕು ಎಂದರು.
ಕನ್ನಡ ಪರ ಹೋರಾಟಗಾರರ ಮೇಲೆ ಪೋಲಿಸ್ ರು ಹಾಕಿರುವ ಕೇಸ್ ಗಳನ್ನು ಹಿಂಪಡೆಯಬೇಕು. ಬೆಂಗಳೂರಿನಲ್ಲಿ ಪರಭಾಷಿಕರ ಹಾವಳಿ ಹೆಚ್ಚಾಗಿದೆ. ನಮ್ಮ ಸಂಸ್ಕೃತಿಗೆ ಧಕ್ಕೆಯಾಗುವ ಪರಿಸ್ಥಿತಿ ಬಂದಿದೆ. ಕನ್ನಡ ಶಾಲೆ ಉಳಿಸಬೇಕು, ನಾಮಫಲಕಗಳಲ್ಲಿ ಕನ್ನಡ ಭಾಷೆಯಲ್ಲಿ ಇರಬೇಕು. ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ, ಸರ್ಕಾರದ ಸೌಲಭ್ಯಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು. ಬೆಂಗಳೂರಿನಲ್ಲಿ ಇಮ್ಮಡಿ ಪುಲಕೇಶಿ ಪ್ರತಿಮೆ ಸ್ಥಾಪನೆ ಹಾಗೂ ಮಾಜಿ ಮುಖ್ಯಮಂತ್ರಿ ನಿಜಲಿಂಗಪ್ಪರವರ ಹೆಸರಿನಲ್ಲಿ ಅಧ್ಯಯನ ಪೀಠ ಮತ್ತು ರಾಷ್ಟಕವಿ ಕುವೆಂಪು ಸಮಗ್ರ ಸಾಹಿತ್ಯ, ಬದುಕು ರಾಷ್ಟೀಯ ಉತ್ಸವ, ಕನ್ನಡ ಶಾಲೆಗಳಿಗೆ ಉತ್ತೇಜನ ನೀಡಬೇಕು, ಸರ್ಕಾರ ಕನ್ನಡ ಭಾಷೆಗೆ ಉಳಿಸಿ, ಬೆಳಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷ್ಯೆ ಶೈಲಜ ಸೋಮಣ್ಣ ಮಾತನಾಡಿ, ಕನ್ನಡ, ಕನ್ನಡಿಗ ಉಳಿಯಬೇಕಾದರೆ ಮನೆ ಮತ್ತು ಆಡಳಿತ ವ್ಯವಹಾರದಲ್ಲಿ ಸಂಪೂರ್ಣವಾಗಿ ಕನ್ನಡ ಭಾಷೆಯನ್ನು ಬಳಸಬೇಕು ಎಂದು ಕರೆನೀಡಿದರು.
ಕನ್ನಡ, ಕನ್ನಡಿಗ ಉಳಿಯಬೇಕು ಎಂದರೆ ಪ್ರತಿಯೊಬ್ಬರು ಮನೆಗಳಲ್ಲಿ ಕನ್ನಡ ಭಾಷೆ ಬಳಸಬೇಕು ಮತ್ತು ಆಡಳಿತ ವ್ಯವಹಾರ ಸಹ ಸಂಪೂರ್ಣ ಕನ್ನಡ ಬಳಸಬೇಕು. ಆಗ ಮಾತ್ರ ಮಾತೃ ಭಾಷೆ ಉಳಿಯಲು ಸಾಧ್ಯ. ಇಂದಿನ ಯುವಕರು ವಿದೇಶಿ ಭಾಷೆಗೆ ಅತಿಯಾದ ವ್ಯಾಮೋಹ ಕೊಡುತ್ತಿದ್ದಾರೆ. ಅದರ ಬದಲಿಗೆ ಮಾತೃ ಭಾಷೆಗೆ ಗೌರವಿಸಿ. ಅನ್ಯ ರಾಜ್ಯಗಳಿಂದ ಬಂದು ನೆಲೆಸಿರುವವರು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಯಬೇಕು. 8 ಜ್ಞಾನಪೀಠ ಪ್ರಶಸ್ತಿ ಪಡೆದ ನಮ್ಮ ಭಾಷೆ ಸರಳ, ಸುಂದರ ಭಾಷೆಯಾಗಿದೆ ಎಂದರು.
ಮಲ್ಲೇಪುರಂ ಜಿ. ವೆಂಕಟೇಶ್ ಮಾತನಾಡಿ, 21ನೇ ಶತಮಾನದಲ್ಲಿ ಕನ್ನಡ ಭಾಷೆ ಉಳಿಸಲು ಆಂಗ್ಲ ಭಾಷೆ ಮತ್ತು ಅನ್ಯ ಭಾಷೆಗಳ ನಡುವೆ ಕನ್ನಡ ಭಾಷೆ ಉಳಿಸಲು ಹೋರಾಟ ಮಾಡಬೇಕಿದೆ. ಕನ್ನಡದಲ್ಲಿ ಪಂಪನಿಂದ ಹಂಪಾವರೆಗೆ ವೈವಿಧಮಯ್ಯ ಕನ್ನಡ ಭಾಷೆ ನೋಡಬಹುದು. ಕನ್ನಡ ಭಾಷೆ ಸಂವರ್ಧನೆ, ವಿಸ್ತರಣೆಯಾದರೆ ಮಾತ್ರ ಭಾಷೆ ಉಳಿಯುತ್ತದೆ ಎಂದರು.
ಸಮ್ಮೇಳನಾಧ್ಯಕ್ಷ ಪಾಲನೇತ್ರ ಮತ್ತು ಹಿರಿಯ ಸಾಹಿತಿ ಡಾ.ಮಲ್ಲೇಪುರಂ ವೆಂಕಟೇಶ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ ಮತ್ತು ಅಧ್ಯಕ್ಷ ಸುರೇಶ್ ಜೀವನ್ಮುಖಿ, ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ದೀಪ ಬೆಳಗಿಸಿ ಕನ್ನಡ ನುಡಿ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಚಲನಚಿತ್ರ ನಟ, ನಿರ್ಮಾಪಕ, ನಿರ್ದೇಶಕ ಬಿ.ಸುರೇಶ್, ನಿವೃತ್ತ ಕೆ.ಎ.ಎಸ್. ಅಧಿಕಾರಿ ಶಿವರಾಮು ಮತ್ತು ಶಿಕ್ಷಣ ತಜ್ಞ ದೊಡ್ಡರಸಿನಕೆರೆ ಮಾಯಪ್ಪ, ಸಾಹಿತಿ ಸುಜಾತ, ಆಡಳಿತ ಕ್ಷೇತ್ರ – ಶೋಭಾ, ವಾಣಿಜ್ಯ ಕ್ಷೇತ್ರ – ಗೀತಾ, ಮಾಧ್ಯಮ ಕ್ಷೇತ್ರ – ಶಿವಕುಮಾರ್ ಬೆಳ್ಳಿತಟ್ಟೆ, ಪರಿಸರ ಕ್ಷೇತ್ರ – ಸತ್ಯನಾರಾಯಣ, ಸಂಘಟನಾ ಕ್ಷೇತ್ರ – ಮೋಹನ್ ಕುಮಾರ್, ಸಮಾಜ ಸೇವೆ – ರಾಮಾಂಜಿನಿ ಅವರಿಗೆ ಕನ್ನಡ ನುಡಿ ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.




