ಸಿದ್ದರಾಮಯ್ಯ ಭಾವಿ ಸಿಎಂ ಎಂದ ಜಮೀರ್ ಅಹಮದ್ ಖಾನ್
ಕಾಂಗ್ರೆಸ್ ನಾಯಕ ರಾಹಲ್ ಗಾಂಧಿ ಹುಟ್ಟುಹಬ್ದ ಪ್ರಯುಕ್ತ ಅಕ್ಕಿ ವಿತರಣೆ
ಬೆಂಗಳೂರು: ಬಡವರಿಗೆ ಸೇವೆ ಮಾಡುವ ಮಾನವೀಯ ಗುಣವನ್ನ ಜಮೀರ್ ಅಹಮದ್ ಖಾನ್ ಬೆಳೆಸಿಕೊಂಡಿದ್ದಾರೆ. ಸ್ವಂತ ಹಣದಿಂದ ಬಡವರಿಗೆ ಆಹಾರ ಕಿಟ್ ಮತ್ತು ಧನಸಹಾಯ ಹಾಗೂ ಆರೋಗ್ಯ ಚಿಕಿತ್ಸೆ ವೆಚ್ಚವನ್ನು ಜಮೀರ್ ಅಹಮದ್ ಖಾನ್ ಭರಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಕೋವಿಡ್ ಎರಡನೆ ಅಲೆ ಬಗ್ಗೆ ತಜ್ಞರು 2020ರ ನವಂಬರ್ ನಲ್ಲಿ ವರದಿ ಕೊಟ್ಟಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀರ್ಲಕ್ಷ್ಯದಿಂದ ಸಾವಿರಾರು ಕೊವಿಡ್ ಸೋಂಕಿತರು ಬೆಡ್ ಸಿಗದೇ, ಚಿಕಿತ್ಸೆ ಸಿಗದೆ ಜನ ಸಾವನ್ನಪ್ಪಿದರು ಎಂದರು.
ಬಿ.ಪಿ.ಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಹತ್ತು ಸಾವಿರ ರೂಪಾಯಿ ಪರಿಹಾರ ಕೊಟ್ಟು ಲಾಕ್ ಡೌನ್ ಮಾಡಿದ್ದರೆ ಜನ ಬದುಕುತ್ತಿದ್ದರು. ಆದರೆ ಸರ್ಕಾರ ಗಮನಹರಿಸಲಿಲ್ಲ ಎಂದರು.
ವೈರಸ್ ಬರದಂತೆ ತಡೆಯುವಲ್ಲಿ ಸರ್ಕಾರ ವಿಫಲವಾಗಿದೆ. ಭಾರತದ 130 ಕೋಟಿ ಜನರಿಗೆ ಕೊವಿಡ್-19 ಲಸಿಕೆ ಹಾಕಬೇಕು. ಆದರೆ ಸರ್ಕಾರ ಮುಂಜಾಗ್ರತೆ ವಹಿಸಲಿಲ್ಲ. ವಿದೇಶಕ್ಕೆ ಆರೂವರೆ ಕೋಟಿ ಲಸಿಕೆ ನೀಡಿದರು. ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಅನ್ನುವಂತೆ ಕೇಂದ್ರ ಸರ್ಕಾರದ ಪರಿಸ್ಥಿತಿಯಾಗಿದೆ ಎಂದರು.
ಸತ್ತವರ ಸಂಖ್ಯೆ ಸುಳ್ಳು ಹೇಳಿದರು, ಶವಸಂಸ್ಕಾರ ಮಾಡಲು ವ್ಯವಸ್ಥೆ ಇಲ್ಲ ಮತ್ತು ಆಕ್ಸಿಜನ್ ಇಲ್ಲದೆ ಚಾಮರಾಜನಗರದಲ್ಲಿ ಮತ್ತು ರಾಜ್ಯದ ವಿವಿಧಡೆ ನೂರಾರು ಜನ ಸತ್ತರು. ರಾಜ್ಯ ಸರ್ಕಾರ ಸತ್ಯ ಹೇಳುವ ಎದೆಗಾರಿಕೆ ತೋರಬೇಕು. ಪ್ರತಿಯೊಬ್ಬರಿಗೂ ಕೊವಿಡ್-19ಲಸಿಕೆ ಉಚಿತವಾಗಿ ಹಾಕಬೇಕು. ಮುಂದಿನ ಬಾರಿ ನಮ್ಮ ಸರ್ಕಾರದಲ್ಲಿ ಪ್ರತಿ ಕುಟುಂಬಕ್ಕೆ ಉಚಿತವಾಗಿ 10 ಕೆ.ಜಿ. ಅಕ್ಕಿ ವಿತರಿಸಲಾಗುವುದು ಎಂದರು.
ಸಿದ್ದರಾಮಯ್ಯರವರನ್ನು ಮಾಜಿ ಸಿಎಂ ಎನ್ನಲು ನನಗೆ ಮನಸ್ಸು ಬರುತ್ತಿಲ್ಲ. ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಲು ಇಷ್ಟಪಡುತ್ತೇನೆ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಹೇಳಿದರು.
ಕೊವಿಡ್ -19 ಸಾಂಕ್ರಮಿಕ ರೋಗ ತಡೆಗಟ್ಟಲು ಒಂದೂವರೆ ವರ್ಷದಿಂದ ಜನರ ಸೇವೆ ಮಾಡುತ್ತಿದ್ದೇನೆ. ಈ ವರ್ಷ ಕೊರೋನದಿಂದ ಲಕ್ಷಾಂತರ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ ಎಂದರು.
ಕೊವಿಡ್ ತಜ್ಞರ ಸಮಿತಿ ಎಚ್ಚರಿಕೆ ನೀಡಿದರೂ ಸರ್ಕಾರ ಕಡೆಗಣಿಸಿತು ಮತ್ತು ಸೂಕ್ತ ಸಮಯದಲ್ಲಿ ಸೋಂಕಿತರಿಗೆ ಚಿಕಿತ್ಸೆ ಸಿಗದೇ ಇರುವುದರಿಂದ ಸಾವು ಸಂಭವಿಸಿತು. ಆಕ್ಸಿಜನ್ ಇಲ್ಲದೇ ಚಾಮರಾಜನಗರದಲ್ಲಿ 24 ಜನರ ಸಾವು ಸಂಭವಿಸಿತು. ಜನರಿಗೆ ಆಕ್ಸಿಜನ್, ಬೆಡ್ ಸಿಗಬೇಕು ಎಂದು ಚಾಮರಾಜಪೇಟೆಯ ವಿವಿಧ ಕಡೆಗಳಲ್ಲಿ 350 ಆಕ್ಸಿಜನ್ ಬೆಡ್ ಆಸ್ಪತ್ರೆ ನಿರ್ಮಿಸಲಾಯಿತು. ಉಚಿತವಾಗಿ ಔಷಧಿ ಮಾತ್ರೆ ವಿತರಿಸಲಾಯಿತು ಎಂದರು.
1,750 ಕೋಟಿ ರೂಪಾಯಿ ವಿವಿಧ ಕಾರ್ಮಿಕರಿಗೆ ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಆದರೆ ಸರ್ಕಾರ ಆ್ಯಪ್ ಕಾರ್ಯನಿರ್ವಹಿಸುತ್ತಿಲ್ಲ. ಪೆಟ್ರೋಲ್, ಡೀಸಲ್ ಬೆಲೆ ಏರಿಕೆಯಾಗಿದೆ ಇದೇನಾ ಆಚ್ಚೆದಿನ್ ಎಂದು ಪ್ರಶ್ನಿಸಿದರು.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರ ಕಛೇರಿ ಎದುರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜನ್ಮದಿನಾಚರಣೆ ಪ್ರಯುಕ್ತ ಸವಿತಾ ಸಮಾಜ, ಮಂಗಳಮುಖಿಯರು ಮತ್ತು ಅಂಧರು, ಸಂಡೇ ಬಜಾರ್ ಬೀದಿ ವ್ಯಾಪಾರಿಗಳು, ಕೊವಿಡ್ ಕೇರ್ ಸಿಬ್ಬಂದಿ ಹಾಗೂ ಆಟೋ ಚಾಲಕರು, ದಿನ ಪತ್ರಿಕೆ ವಿತರಕರು, ಬಿ.ಬಿ.ಎಂ.ಪಿ. ಹೊರಗುತ್ತಿಗೆ ಶಿಕ್ಷಕರು, ಹೌಸ್ ಕೀಪಿಂಗ್ ಕಾರ್ಮಿಕರು ಹಾಗೂ ಆನಂದ್ ಪುರಂ ಸ್ಲಂ ನಿವಾಸಿಗಳಿಗೆ 2000 ರೂಪಾಯಿ ಸಹಾಯಧನ ಮತ್ತು ಆಹಾರ ಕಿಟ್ ಮತ್ತು ಸ್ಟೀಮರ್ (ಹಬೆ ಯಂತ್ರ)ಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸ್ಥಳೀಯ ಶಾಸಕ ಜಮೀರ್ ಅಹಮದ್ ಖಾನ್, ಶಾಸಕ ಅಜಯಸಿಂಗ್ ವಿತರಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡರಾದ ಆಲ್ತಾಫ್ ಖಾನ್, ಚಂದ್ರಶೇಖರ್, ಡಿ.ಸಿ.ರಮೇಶ್, ಬಿ.ಬಿ.ಎಂ.ಪಿ. ಸದಸ್ಯರಾದ ಜಿ.ಕೃಷ್ಣಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು.




