ಬೆಂಗಳೂರು: ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗುವುದು. ಮೊದಲ ವಾರ ಎರಡು ಗಂಟೆಗಳ ಕಾಲ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ. ತಜ್ಞರ ವರದಿ ಆಧರಿಸಿ ಅಂಗನವಾಡಿ ಕೇಂದ್ರ ತೆರೆಯಲಾಗುವುದು. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ ಹಾಲಪ್ಪ ಆಚಾರ್ ಹೇಳಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಅಂಗನವಾಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ನವಂಬರ್ 8 ರಿಂದ ಅಂಗನವಾಡಿ ಕೇಂದ್ರಗಳು ತೆರಯಲಿವೆ. ಮೊದಲ ಹಂತದಲ್ಲಿ ಪ್ರತಿ ದಿನಕ್ಕೆ 2 ಗಂಟೆಗಳ ಕಾಲ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ.
ಬಾರ್, ರೆಸ್ಟೋರೆಂಟ್, ಚಿತ್ರಮಂದಿರ, ಮಾಲ್, ಮಂದಿರ, ಮಸೀದಿ, ಚರ್ಚ್ ಮತ್ತು ಇತರ ಕೇಂದ್ರಗಳನ್ನು ತೆರೆಯಲು ಅನುಮತಿ ನೀಡಿದ್ದ ಸರ್ಕಾರಗಳು ಪ್ರಾಥಮಿಕ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಶಿಕ್ಷಣ ತಜ್ಞರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ, ಕೊರೊನಾ ನಂತರ ಸುಮಾರು ಶೇ.35ರಷ್ಟು ಮಕ್ಕಳು ಡ್ರಾಪ್ ಔಟ್ ಸಮಸ್ಯೆಗೆ ಗುರಿಯಾಗುತ್ತಾರೆ ಎಂಬ ವರದಿಗಳು ಪ್ರಕಟವಾಗಿದ್ದವು. ಇದು ನಿಜಕ್ಕೂ ಆತಂಕಕಾರಿಯಾಗಿದ್ದು, ದೇಶದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮೊದಲಾದ ವಿಷಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು.
ರಾಜ್ಯ ಸರ್ಕಾರ ನವೆಂಬರ್ 25ರಿಂದ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಅನುಮತಿ ನೀಡಿದ್ದು, ಇದೀಗ ಅಂಗನವಾಡಿಗಳನ್ನು ತೆರೆಯಲು ಹಸಿರು ನಿಶಾನೆ ತೋರಿದೆ. ಒಟ್ಟಿನಲ್ಲಿ ರಾಜ್ಯದ ಎಳೆಯ ಮಕ್ಕಳು ಎರಡು ವರ್ಷಗಳಿಂದ ಮನೆಯಲ್ಲಿ ಬಂಧಿಯಾಗಿದ್ದವರಿಗೆ ಇದೀಗ ಬಿಡುಗಡೆಯ ಭಾವ ಮತ್ತು ನಿರಾಳತೆ ಕಂಡುಬರುತ್ತಿರುವುದು ಸುಳ್ಳಲ್ಲ.




