ಬೆಂಗಳೂರು: ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರವ ಸರ್ಕಾರಗಳು ದಲಿತರ ಮೇಲಿನ ದೌರ್ಜನ್ಯ, ಜಾತಿ ತಾರತಮ್ಯವನ್ನು ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ. ಪ್ರತಿದಿನವೂ ಒಂದಲ್ಲ ಒಂದು ಪ್ರದೇಶದಲ್ಲಿ ದಲಿತರ ಮೇಲೆ ಹಲ್ಲೆ ದಾಳಿಗಳು ನಡೆಯುತ್ತಿಲೇ ಇವೆ ಎಂದು ದಲಿತ ಹಕ್ಕುಗಳ ಸಮಿತಿ-ಕರ್ನಾಟಕ(ಡಿಹೆಚ್ಎಸ್) ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಆರೋಪಿಸಿದರು.

ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ದಲಿತರ ಮೇಲೆ ನಿರಂತರವಾಗಿ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ ದಲಿತರು, ಕೃಷಿ ಕೂಲಿಕಾರರು, ಆದಿವಾಸಿಗಳು ದೇಶವ್ಯಾಪಿ ಪ್ರತಿಭಟನೆಯ ಕರೆಯ ಭಾಗವಾಗಿ ಬೆಂಗಳೂರು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿಗೆ ಕೋಲಾರ, ಹಾವೇರಿ, ಚಾಮರಾಜನಗರ, ಮಂಡ್ಯ ಸೇರಿದಂತೆ ಹಲವು ಕಡೆಗಳಲ್ಲಿ ದಲಿತರನ್ನು ಹೀನಾಯವಾಗಿ ನಡೆದುಕೊಳ್ಳಲಾಗುತ್ತಿದೆ. ಅಲ್ಲದೆ, ಹಲ್ಲೆ, ದೌರ್ಜನ್ಯ, ಬಹಿಷ್ಕಾರದಂತಹ ಪ್ರಕರಣಗಳು ಜರುಗುತ್ತಿವೆ ಎಂದರು.

ಅದೇ ರೀತಿ ಹಲವು ವರ್ಷಗಳ ಹೋರಾಟದ ಫಲವಾಗಿ ಜಾರಿಗೆ ಬಂದಿರುವ ಎಸ್ಸಿಪಿ/ಟಿಎಸ್ಪಿ ಉಪಯೋಜನೆಯೂ ದಲಿತ ಸಮುದಾಯದ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿಲ್ಲ. ಯೋಜನೆಯನ್ನು ಮರುಸ್ಥಾಪಿಸಿ, ಆದ್ಯತೆಯ ಪ್ರಶ್ನೆಗಳಾದ ಶಿಕ್ಷಣ, ಉದ್ಯೋಗ ಹಾಗೂ ವಸತಿ ಯೋಜನೆಗಳಿಗಾಗಿ ಕ್ರಮಗಳನ್ನು ಅನುಸರಿಸಬೇಕೆಂದು ಆಗ್ರಹಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯು) ರಾಜ್ಯಾಧ್ಯಕ್ಷ ಎಂ. ಪುಟ್ಟಮಾಧು ಮಾತನಾಡಿ, ಇಂದು ದೇಶದ ಎಲ್ಲಾ ಕಡೆಗಳಲ್ಲಿ ಏಕಕಾಲಕ್ಕೆ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಕೃಷಿರಂಗದಲ್ಲಿ ಕೂಲಿಕಾರರಾಗಿ ದುಡಿಮೆ ಮಾಡುವವರಲ್ಲಿ ದಲಿತರೇ ಹೆಚ್ಚಾಗಿದ್ದು ಅವರಲ್ಲಿ ಬಹುತೇಕರಿಗೆ ಒಂದಿಂಚೂ ಭೂಮಿ ಇಲ್ಲದೆ, ದುಡಿಮೆ ಮಾಡುತ್ತಿದ್ದಾರೆ. ಒಂದೆಡೆ ಕೇಂದ್ರದ ಬಿಜೆಪಿ ಸರ್ಕಾರ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗಾಗಿ ಮೀಸಲಿಟ್ಟ ಹಣವನ್ನು ವರ್ಷದಿಂದ ವರ್ಷಕ್ಕೆ ಕಡಿತ ಮಾಡುತ್ತಾ ಬಂದಿದೆ. ಇದರಿಂದ ಕೂಲಿ ದರ ಕಡಿತದೊಂದಿಗೆ ಉದ್ಯೋಗದ ವಂಚನೆಯೂ ಆಗುತ್ತಿದೆ. ಕೃಷಿ ಕೂಲಿಕಾರರ ಬದುಕು ಹೀನಾಯ ಸ್ಥಿತಿಗೆ ತಲುಪಿದೆ ಎಂದು ಆರೋಪಿಸಿದರು.

ಎಸ್.ಸಿ./ಎಸ್.ಟಿ. ಸರ್ಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯ ಅಧ್ಯಕ್ಷ ಟಿ. ಶಿವಶಂಕರ್ ಮಾತನಾಡಿ, ಲಕ್ಷಾಂತರ ಪ್ರಮಾಣದಲ್ಲಿ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿವೆ. ಸರ್ಕಾರವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮವಹಿಸುತ್ತಿಲ್ಲ. ಲಕ್ಷಾಂತರ ವಿದ್ಯಾವಂತ ಯುವಜನತೆ ಉದ್ಯೋಗಕ್ಕಾಗಿ ಅಲೆದಾಡುವ ಧಾರುಣ ಸ್ಥಿತಿ ಎದುರಾಗಿದೆ. ದಲಿತ ಸಮುದಾಯದ ಸರ್ಕಾರಿ ನೌಕರರಲ್ಲಿ ಜಾತಿ ತಾರತಮ್ಯದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ನೌಕರರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇಂಥವುಗಳು ಜರುಗದಂತೆ ತಡೆಯುವ ನಿಟ್ಟಿನಲ್ಲಿ ಕಾಯ್ದೆಗಳನ್ನು ಬಲಪಡಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮಗಳು ಜರುಗಿಸಬೇಕೆಂದು ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ (ಭೀಮಾವಾದ) ರಾಜ್ಯ ಅಧ್ಯಕ್ಷ ಆರ್. ಮೋಹನ್ ರಾಜ್ ಮಾತನಾಡಿ, ಜಾತಿ ತಾರತಮ್ಯ ಮತ್ತು ದೌರ್ಜನ್ಯದಂತಹ ಪ್ರಕರಣಗಳಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ. ದಾಳಿ ದೌರ್ಜನ್ಯಗಳು ಪ್ರತಿದಿನ ಜರುಗುತ್ತಿದ್ದರೂ, ಆರೋಪಿಗಳ ಮೇಲೆ ಸೂಕ್ತ ಕ್ರಮಜರುಗಿಸದೇ ಅವರ ರಕ್ಷಣೆಗೆ ಸರ್ಕಾರವೇ ನಿಂತಂತೆ ಕಾಣುತ್ತಿದ್ದು, ಇದಕ್ಕೆ ಬಿಜೆಪಿ ಸರ್ಕಾರದ ಕುಮ್ಮಕ್ಕೆ ಕಾರಣ ಎಂದರು.

ಕರ್ನಾಟಕ ರಾಜ್ಯ ಕೃಷಿಕೂಲಿಕಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಮಾತನಾಡಿ, ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳು ಹೋರಾಟದ ಫಲದಿಂದ ಕೇಂದ್ರದ ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆದಿದ್ದರೂ ಸಹ ಕಾಯ್ದೆಯಲ್ಲಿ ಅಡಕವಾಗಿರುವ ಕೆಲವು ಅಂಶಗಳು ಬೇರೆ ಬೇರೆ ಮಾದರಿಯಲ್ಲಿ ಜಾರಿಯಾಗುತ್ತಿವೆ. ಇದರಿಂದ ರೈತರು ಕೂಲಿಕಾರರು ರಕ್ಷಣೆ ಇಲ್ಲವಾಗುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ಭೂ ಸುಧಾರಣೆ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ಇತ್ಯಾದಿ ಜನವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದ್ದು ಇದು ಮುಂದಿನ ದಿನಗಳಲ್ಲಿ ಮಾರಕ ಪರಿಣಾಮ ಬೀರಲಿದೆ ಎಂದರು.
ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯ ಮುಖಂಡರಾದ ನಿರ್ಮಲ ಮಾತನಾಡಿ, ಜಾತಿ ವ್ಯವಸ್ಥೆಗೆ ಒಳಪಟ್ಟ ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದರು.
ಸರ್ಕಾರದ ಪರವಾಗಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಭಾಗವಹಿಸಿ ಮನವಿ ಸ್ವೀಕರಿಸಿದರು. ಯಾವುದೇ ಸಮಸ್ಯೆಗಳಿದ್ದರೂ ನೇರವಾಗಿ ಇಲಾಖೆಯನ್ನು ಭೇಟಿ ಮಾಡಬಹುದು ಎಂದ ಅವರು, ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು. ಮುಂಬರುವ ದಿನದಲ್ಲಿ ಕೂಡಲೇ ಎಲ್ಲಾ ಸಂಘಟನೆಗಳು ಒಳಗೊಂಡ ಸಭೆಯೊಂದನ್ನು ನಿಗದಿಪಡಿಸಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿ ರಾಜ್ಯ ಮುಖಂಡರಾದ ಎನ್. ನಾಗರಾಜ್, ಎನ್. ರಾಜಣ್ಣ, ಹೆಚ್.ಜಿ. ನಾಗಣ್ಣ, ಕೃಷ್ಣ(ಮಂಡ್ಯ), ಮಂಗಳ, ಕವಿತಾ, ಕೃಷಿ ಕೂಲಿಕಾರರ ಸಂಘಟನೆಯ ನಿತ್ಯಾನಂದಸ್ವಾಮಿ, ಜಿ.ಎನ್.ನಾಗರಾಜ್, ಹನುಮೇಗೌಡ, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಮುಖಂಡರಾದ ಎಸ್.ವೈ.ಗುರುಶಾಂತ್, ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ(ಎಐಎಆರ್ಎಲ್ಎ) ಮುಖಂಡರಾದ ನಾಗರಾಜ ಪೂಜಾರ್, ನಿರ್ಮಲ, ಎಐಎಸ್ಎ ರಾಜ್ಯ ಅಧ್ಯಕ್ಷ ಸಾಯಿ ಬಾಲಾಜಿ, ಮತ್ತಿತರರು ಭಾಗವಹಿಸಿದ್ದರು. ಮಾಗಡಿ, ಕೆ.ಆರ್.ಪುರ, ಮಂಡ್ಯ, ಬಾಗೇಪಲ್ಲಿ ಸೇರಿದಂತೆ ವಿವಿಧ ಭಾಗಗಳಿಂದ ದಲಿತರು, ಕೃಷಿ ಕೂಲಿಕಾರರು, ದಲಿತ ಹಕ್ಕುಗಳ ಸಮಿತಿ-ಕರ್ನಾಟಕ(ಡಿಎಸ್ಎಂಎಂ), ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಯು), ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ(ಎಐಡಿಆರ್ಎಂ), ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘ(ಎಐಎಆರ್ಎಲ್ಎ), ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ), ದಲಿತ ಸಂಘರ್ಷ ಸಮಿತಿ(ಭೀಮಾವಾದ), ಎಸ್.ಸಿ./ಎಸ್.ಟಿ. ಸರ್ಕಾರಿ ನೌಕರರ ಸಮನ್ವಯ ಸಮಿತಿ, ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳು ಸಮನ್ವಯ ಸಮಿತಿ ಸಂಘಟನೆಯ ಮುಖಂಡರು ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಿದ್ದರು.



