“ಸರ್,ಕೋರ್ಟ್ ಹೊರಗೆ ಕೇಸರಿ ಶಾಲು ಹಾಕಿಕೊಂಡ ಜನಾನೇ ತುಂಬ್ಕೊಂಡಿದಾರೆ. ಜೋಪಾನವಾಗಿ ಬನ್ನಿ” ಎಂದು ಶ್ರೀರಂಗಪಟ್ಟಣ 3ನೇ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದಲ್ಲಿದ್ದ ಹಲವು ಗೆಳೆಯರು ಕರೆ ಮಾಡಿ ಹೇಳಿದರು. ನಾವು ಅದಾಗಲೇ ಶ್ರೀರಂಗಪಟ್ಟಣದ ಟಿಪ್ಪು ಕೋಟೆಯ ದ್ವಾರ ದಾಟಿಯಾಗಿತ್ತು.
ನಾನು, ಹಿರಿಯ ವಕೀಲ ಎಸ್ ಬಾಲನ್, ಕನ್ನಡ ಹೋರಾಟಗಾರ ಬೈರಪ್ಪ ಹರೀಶ್ ಕುಮಾರ್, ದೂರುದಾರೆ ನಜ್ಮಾ ನಝೀರ್, ಕಾವ್ಯ ಅಚ್ಯುತ್ ಇದ್ದ ಕಾರು ಕೋರ್ಟ್ ಆವರಣದೊಳಗೆ ಪ್ರವೇಶಿಸುತ್ತಿದ್ದಂತೆ ಹಲವು ಕೇಸರಿಧಾರಿಗಳು ನಮ್ಮನ್ನು ಎದುರುಗೊಂಡರು. ನ್ಯಾಯಾಲಯದ ಎದುರು ಗುಂಪುಗುಂಪಾಗಿ ನಿಂತು ನಮ್ಮನ್ನು ಗುರಾಯಿಸಿದರು.
ದೇಶದ ಸಾಮಾಜಿಕ ಪರಿಸ್ಥಿತಿಯನ್ನು ನ್ಯಾಯಾಲಯಗಳ ಹೊರಗೆ ಗಮನಿಸಬಹುದು. ಅದಕ್ಕಾಗಿ ಅಲ್ಲಲ್ಲಿ ಗುಂಪುಗುಂಪಾಗಿ ನಿಂತ, ಕುಳಿತ ಜನರ/ಕಕ್ಷಿದಾರರ ಸಾಮಾಜಿಕ, ಕೌಟುಂಬಿಕ ಹಿನ್ನೆಲೆಯನ್ನು ಅವಲೋಕಿಸಬೇಕು. ಯಾವುದಾದರೂ ಕೋರ್ಟ್ ನಲ್ಲಿ ಪ್ರಭಾವಿ ಒಕ್ಕಲಿಗನೊಬ್ಬನ ಕೇಸ್ ನಡೆಯುತ್ತಿದ್ದರೆ ಕೋರ್ಟ್ ಹೊರಗೆ ಒಕ್ಕಲಿಗರ ದಂಡೇ ನೆರೆದಿರುತ್ತಿದೆ. ಪ್ರಭಾವಿ ಬಂಟನ ಕೇಸ್ ನಡೆಯುತ್ತಿದ್ದರೆ ಬಂಟರ ದಂಡೇ ಇರುತ್ತದೆ. ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದದ್ದು ಪ್ರಭಾಕರ ಭಟ್ ಬೇಲ್ ಅರ್ಜಿಯ ವಿಚಾರಣೆ. ಆದರೆ ಅದಕ್ಕಾಗಿ ಕೇಸರಿ ಶಾಲು ಹಾಕಿಕೊಂಡು ಕೋರ್ಟ್ ಗೆ ಬಂದವರಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣನಿರಲಿಲ್ಲ. ಹತ್ರತ್ರ ಐವತ್ತರಷ್ಟು ಹಿಂದುಳಿದ ವರ್ಗದ ಬಡ ಹುಡುಗರ ತಲೆಗೆ ಕೋಮುವಿಷ ತುಂಬಿ, ಹೆಗಲಿಗೊಂದು ಕೇಸರಿ ಶಾಲು ಹಾಕಿಸಿ ಪ್ರಭಾಕರ್ ಭಟ್ ಬೇಲ್ ವಿಚಾರಣೆ ಸಂದರ್ಭ ನಮ್ಮನ್ನು ಹೆದರಿಸಲು ಕಳುಹಿಸಿದ್ದರು.
ಬಡವರ ಮಕ್ಕಳು ಹಿಂದೂ ಸಂಘಟನೆಯಲ್ಲಿ ಇರಬಾರದೇ ? ಅವರಿಷ್ಟ..! ಆದರೆ ಸ್ವಾಭಿಮಾನ, ಅರಿವುಗಳೊಂದಿಗೆ ಯಾವ ಸಂಘಟನೆಯಲ್ಲಾದರೂ ಇರಬಹುದು. ಮೇಲ್ವರ್ಗದ ಕಾಲಾಳುಗಳಾಗಿ ದಯನೀಯ ಸ್ಥಿತಿಯಲ್ಲಿ ಬಳಕೆಯಾಗುವುದು ಕಂಡಾಗ ಹೊಟ್ಟೆಯುರಿಯುತ್ತದೆ.
ನಮ್ಮ ಕಾರು ಕೋರ್ಟ್ ಒಳಗೆ ಪ್ರವೇಶಿಸುತ್ತಿದ್ದಂತೆ ಸ್ಥಳೀಯ ಚಿಂತಕರು, ಹೋರಾಟಗಾರರು, ಮಹಿಳಾ ಹೋರಾಟಗಾರ್ತಿಯರು ನಮ್ಮನ್ನು ಸೇರಿಕೊಂಡರು. ನಾವು ಅಷ್ಟೂ ಜನ ಕೋರ್ಟ್ ಒಳಗೆ ಹೋಗಿ ಕುಳಿತುಕೊಂಡು ಸುಮಾರು 3 ಗಂಟೆಗಳ ಕಾಲ ಕೋರ್ಟ್ ಕಲಾಪ ನೋಡಿದೆವು. ಪ್ರಭಾಕರ್ ಭಟ್ ಪರವಾಗಿ ಬಂದಿದ್ದ ಕೇಸರಿಧಾರಿ ಹಿಂದುತ್ವವಾದಿ ಹುಡುಗರು ಕೋರ್ಟ್ ಒಳಗೆ ಬಂದು ಕೂರಲೂ ಧೈರ್ಯ ಮಾಡಿಲ್ಲ. ಕೋರ್ಟ್ ಬಾಗಿಲಿನಲ್ಲಿ ನಿಂತುಕೊಂಡು ಕೋರ್ಟ್ ಒಳಗೆ ಇಣುಕುತ್ತಿದ್ದರು. ಸ್ವಾಭಿಮಾನ, ಧೈರ್ಯ, ಅರಿವು ಮೂಡಿಸಿಕೊಳ್ಳದೇ ಕೇವಲ ಕಾಲಾಳುಗಳಾಗಿ ಈ ರೀತಿ ಹಿಂದುಳಿದ ವರ್ಗದ ಹುಡುಗರು ಬಳಕೆಯಾಗುವುದು ಎಷ್ಟು ಸರಿ?
ಕೋರ್ಟ್ ಪೂರ್ತಿ ಓಡಾಡುತ್ತಾ ನಮ್ಮನ್ನು ಗುರಾಯಿಸುತ್ತಿದ್ದ ಹಿಂದುತ್ವವಾದಿ ಹುಡುಗರನ್ನು ಕಂಡಾಗ ನಮಗೆ ಕೋಪ ಬಂದಿಲ್ಲ, ಬದಲಾಗಿ ಅಯ್ಯೋ ಅನ್ನಿಸಿತು.
ಅಲ್ಲಾ… ಕೇಸರಿ ಶಾಲು ಹಾಕಿಕೊಂಡು ಬಂದರೆ ನಾವು ಭಯಪಡ್ತೀವಾ? ನಾವು ಬೆಂಗಳೂರಿನಿಂದ ಐದೇ ಜನ ಹೋಗಿರಬಹುದು. ಆದರೆ ಶ್ರೀರಂಗಪಟ್ಟಣದಲ್ಲಿ ನಮಗೆ ಜೊತೆಯಾದ ಅಂಬೇಡ್ಕರ್, ಟಿಪ್ಪು, ಮಾರ್ಕ್ಸ್, ಬುದ್ಧ ಬಸವಣ್ಣರ ಕುಡಿಗಳೆಷ್ಟು? ಶ್ರೀರಂಗಪಟ್ಟಣದ ಪ್ರೀತಿ, ಸೌಹಾರ್ದತೆಯ ಸಮಾಜಕ್ಕಾಗಿ ತುಡಿಯುವ ಇಂತಹ ಪ್ರಗತಿಪರರ ಮಧ್ಯೆ ಕೋಮುವಾದಿಗಳ ಆಟ ಹೆಚ್ಚು ನಡೆಯಲು ಸಾಧ್ಯವಿಲ್ಲ.
- ನವೀನ್ ಸೂರಿಂಜೆ, ಹಿರಿಯ ಪತ್ರಕರ್ತರು




