ಐಶ್ವರ್ಯ ಗೌಡ ವಿರುದ್ಧದ ವಂಚನೆ ಕೃತ್ಯಗಳು ಒಂದೊಂದಾಗಿ ಬಯಲು 

1 year ago

ಬೆಂಗಳೂರು: ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು ಗೋಲ್ಡ್ ವಂಚನೆ ಕೇಸ್ನಲ್ಲಿ ಜೈಲು ಸೇರಿರುವ ಐಶ್ವರ್ಯ ಗೌಡ ವಿರುದ್ಧದ ವಂಚನೆ ಕೃತ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಈಕೆಯಿಂದ ಕೋಟಿಗಟ್ಟಲೆ ವಂಚನೆಗೊಳಗಾದ ಮತ್ತೊಬ್ಬ ವ್ಯಕ್ತಿ ದೂರು ನೀಡಲು ಮುಂದಾಗಿದ್ದಾರೆ.

ಮಾಜಿ ಸಂಸದ ಡಿ.ಕೆ.ಸುರೇಶ್ ನನ್ನ ಸಹೋದರ ಎಂದು ಹೇಳಿಕೊಂಡು ಕೋಟಿಗಟ್ಟಲೇ ವಂಚನೆ ನಡೆಸಿರುವ ವಂಚಕಿ ಐಶ್ವರ್ಯ ಗೌಡಳನ್ನು ಪೊಲೀಸರು ಬಂಧಿಸಿದ್ದಾರೆ. ವನಿತಾಗೆ ಮಾತ್ರವಲ್ಲ ಹಲವು ಜನರಿಗೆ ಐಶ್ವರ್ಯ ಗೌಡ ಉರುಫ್ ನವ್ಯಶ್ರೀ ಕೋಟಿಗಟ್ಟಲೇ ಮಹಾದೋಖಾ ಮಾಡಿರುವ ಸಂಗತಿಗಳು ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಬಿಲ್ಡರ್, ಚಿನ್ನದ ವ್ಯಾಪಾರಿ ಕಮ್ ಕಾಂಗ್ರೆಸ್ ಮುಖಂಡನಿಗೂ ಸಹ ಕೋಟ್ಯಂತರ ರೂ. ಟೋಪಿ ಹಾಕಿರುವುದು ಬೆಳಕಿಗೆ ಬಂದಿದ್ದು, ಆ ಉದ್ಯಮಿ ತನ್ನ ಹೆಸರು ಬಹಿರಂಗಪಡಿಸಬೇಡಿ ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ವಾಸವಿರುವ ಉದ್ಯಮಿ ಮೈಸೂರು, ಮಂಡ್ಯ, ಬೆಂಗಳೂರಿನಲ್ಲಿ ಉದ್ಯಮ ನಡೆಸುತ್ತಾ ಆತ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾನೆ. ಐಶ್ವರ್ಯ ಗೌಡ ಈ ವ್ಯಕ್ತಿಯಿಂದ 6.5 ಕೋಟಿ ಹಣ ಹಾಗೂ ಚಿನ್ನಾಭರಣಗಳನ್ನು ಪಡೆದಿದ್ದಾಳೆ ಎನ್ನಲಾಗಿದೆ.

ಒಂದೂವರೆ ವರ್ಷದ ಹಿಂದೆ  ಉದ್ಯಮಿಯಾಗಿರುವ ಕಾಂಗ್ರೆಸ್ ಮುಖಂಡನಿಗೆ ಐಶ್ವರ್ಯ ಗೌಡ ಪರಿಚಯವಾಗಿದ್ದಾಳೆ. ಐಷಾರಾಮಿ ಕಾರು, ಬೌನ್ಸರ್, ಗನ್ಮ್ಯಾನ್ ಜೊತೆಗೆ ಬಂದು ಆ ಉದ್ಯಮಿಯನ್ನು ಪರಿಚಯ ಮಾಡಿಕೊಂಡಿದ್ದಾಳೆ. ನಂತರ ಇವರಿಬ್ಬರು ಸೇರಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿದ್ದಾರೆ.

ಆರಂಭದಲ್ಲಿ ಎಲ್ಲಾ ವ್ಯವಹಾರ ಸರಿಯಾಗಿ ವಂಚಕಿ ಐಶ್ವರ್ಯ ಗೌಡ ಮಾಡಿದ್ದಾಳೆ. ಇದಾದ ಬಳಿಕ ಆ ವ್ಯಕ್ತಿಯಿಂದ ಚಿನ್ನ ಹಾಗೂ ನಗದು ರೂಪದಲ್ಲಿ 6.5 ಕೋಟಿ ಹಣವನ್ನು ಪಡೆದಿದ್ದಾಳೆ. ಬಳಿಕ ಹಣವನ್ನು ಆತ ಕೇಳಿದರೆ ಇಂದು, ನಾಳೆ ಎಂದು ಕಥೆ ಹೇಳುತ್ತಾ ಬಂದಿದ್ದಾಳೆ. ಆಗ ರಾಜ್ಯದ ಪ್ರಭಾವಿ ರಾಜಕಾರಣಿ ಮಧ್ಯಸ್ಥಿಕೆ ವಹಿಸಿ ಸಮಯ ನೀಡುವಂತೆ ಹೇಳಿದ್ದಾರೆ.

ಇದೀಗ ಈಕೆಯ 9 ಕೋಟಿ ಗೋಲ್ಡ್ ದೋಖಾ ಕಹಾನಿ ಹೊರಬಂದ ಬಳಿಕ ಉದ್ಯಮಿ ಕಮ್ ಕಾಂಗ್ರೆಸ್ ಮುಖಂಡನಿಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ಆತ ಐಶ್ವರ್ಯ ಗೌಡ ವಿರುದ್ಧ ಮಂಡ್ಯ ಇಲ್ಲವೇ ಬೆಂಗಳೂರಿನಲ್ಲಿ ದೂರು ದಾಖಲು ಮಾಡಲು ದಾಖಲೆ ಸಮೇತ ಸಿದ್ಧತೆ ನಡೆಸಿದ್ದಾರೆ.

Leave a Reply