ಬೆಂಗಳೂರು: ರಾಜ್ಯದ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ಏಳನೇ ವೇತನ ಆಯೋಗದ ವರದಿಗೆ ಕಾಯದೆ ಮಧ್ಯಂತರ ಪರಿಹಾರವಾಗಿ ವೇತನ ಹೆಚ್ಚಳ ಹಾಗೂ ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ ಹಳೆಯ ವ್ಯವಸ್ಥೆಯನ್ನೇ ಮುಂದುವರೆಸುವ ಸಂಬಂಧ ಅಧ್ಯಯನ ನಡೆಸಲು ಉನ್ನತಾಧಿಕಾರ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ನೌಕರರ ಸಂಘ ತಕ್ಷಣದಿಂದಲೇ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ನೌಕರರಿಗೆ ಮನವಿ ಮಾಡಿದೆ.
ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸರ್ಕಾರಿ ನೌಕರರು ಕಚೇರಿ ಬಂದ್ ಮಾಡಿ ಅರ್ನಿಷ್ಟಾವ ಮುಷ್ಕರ ಆರಂಭಿಸಿದ್ದರು. ಇದರಿಂದಾಗಿ ಸರ್ಕಾರಿ ಸೇವೆಗಳಲ್ಲಿ ವ್ಯತ್ಯಯವಾಗಿತ್ತು.
ಮುಷ್ಕರ ನಿರತರೊಂದಿಗೆ ಸರ್ಕಾರದ ಹಿರಿಯ ಅಧಿಕಾರಿಗಳು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ಸುತ್ತಿನ ಮಾತುಕತೆ ನಡೆಸಿ, ಹಲವಾರು ರಾಜಿ ಸೂತ್ರಗಳನ್ನು ನೀಡಿದರೂ
ಜಗ್ಗದ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗಿ ಬೇಡಿಕೆ ಈಡೇರುವವರೆಗೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.
ಅಂತಿಮವಾಗಿ, ಸರ್ಕಾರ ಮಧ್ಯಂತರ ಪರಿಹಾರ ಹಾಗೂ ಹಳೆಯ ಪಿಂಚಣಿ ಪದ್ಧತಿ ಮರು ಜಾರಿ ಕುರಿತು ಅಧ್ಯಯನಕ್ಕೆ ಉನ್ನತ ಮಟ್ಟದ ಸಮಿತಿ ನೇಮಿಸಲು ಸರ್ಕಾರ ಆದೇಶ ಹೊರಡಿಸಿತು.
ಹಣಕಾಸು ಇಲಾಖೆ ಆದೇಶ ಹೊರಡಿಸಿದ ಬಳಿಕ ಸಂಘದ ಪದಾಧಿಕಾರಿಗಳು ಮತ್ತು ನೌಕರರ ವಿವಿಧ ಸಂಘಟನೆಗಳ ಪ್ರಮುಖರ ಜತೆ ಸಭೆ ನಡೆಸಿದ ಬಳಿಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಮುಷ್ಕರ ಅಂತ್ಯಗೊಳಿಸುವ ಘೋಷಣೆ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಂತರ ಪರಿಹಾರವಾಗಿ ಶೇಕಡ 17ರಷ್ಟು ವೇತನ ಹೆಚ್ಚಳ ಮತ್ತು ಎನ್ಪಿಎಸ್ ಮರು ಜಾರಿ ಕುರಿತು ಅಧ್ಯಯನಕ್ಕೆ ಸಮಿತಿ ನೇಮಿಸುವ ತೀರ್ಮಾನವನ್ನು ಒಪ್ಪಿಕೊಂಡು ಮುಷ್ಕರ ಅಂತ್ಯಗೊಳಿಸುತ್ತಿದ್ದೇವೆ ಎಂದರು.
ಶೇ 40ರಷ್ಟು ವೇತನ ಹೆಚ್ಚಳ ಸೇರಿದಂತೆ ಎಲ್ಲ ಬೇಡಿಕೆಗಳು ಈಡೇರಬೇಕು. ಈಗ ತಾತ್ಕಾಲಿಕವಾಗಿ ಮುಷ್ಕರ ಸ್ಥಗಿತವಾಗಲಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟ ಆರಂಬಿಸಲಾಗುವುದು ಎಂದರು.
ಈ ಬೆಳಿಗ್ಗೆ ನೌಕರರ ಮುಷ್ಕರದಿಂದಾಗಿ ವಿಧಾನಸೌಧದ ಎಲ್ಲಾ ಕಚೇರಿಗಳು, ಸಚಿವಾಲಯದ ಕಛೇರಿಗಳು, ಬಿಬಿಎಂಪಿ ಕಚೇರಿ, ಬೆಸ್ಕಾಂ, ಬಿಡಬ್ಲ್ಯೂಎಸ್‍ಎಸ್ ತಾಲೂಕು ಕಚೇರಿ, ಜಿಲ್ಲಾಧಿಕಾರಿಗಳ ಕಛೇರಿ, ಪುರಸಭೆ ಕಛೇರಿ, ಗ್ರಾಮ ಪಂಚಾಯಿತಿ, ಸರ್ಕಾರಿ ಶಾಲೆಗಳು, ಸರ್ಕಾರಿ ಆಸ್ಪತ್ರೆ (ಐಸಿಯು, ಎಂಐಸಿಯು ಹೊರತುಪಡಿಸಿ), ಕಂದಾಯ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪುರಸಭೆ, ಸರ್ಕಾರಿ ಹಾಸ್ಟೆಲ್‍ಗಳು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಜಲಮಂಡಳಿ, ಬಿಬಿಎಂಪಿ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬಂದ್ ಆಗಿದ್ದವು. ಮುಷ್ಕರ ಕರೆ ವಾಪಸ್ ಪಡೆದ ಬೆನ್ನಲ್ಲೇ ಎಲ್ಲ ಸೇವೆಗಳು ಎಂದಿನಂತೆ ಆರಂಭವಾದವು.




