ಕನ್ನಡ ಚಿತ್ರರಂಗದ ಮುಂಚೂಣಿಯಲ್ಲಿರುವುದು ಅಣ್ಣಾವ್ರು ಮತ್ತು ಅವರ ಕುಟುಂಬ: ದುನಿಯಾ ವಿಜಯ್

3 years ago

ಬೆಂಗಳೂರು: ಇವತ್ತು ಕನ್ನಡವಾಗಲಿ ಕನ್ನಡ ಚಿತ್ರರಂಗವಾಗಲಿ ಉತ್ತುಂಗ ಸ್ಥಾನದಲ್ಲಿದೆ ಎಂದರೆ ಅದಕ್ಕೆ ಕಾರಣ ಹಲವಾರು ಮಹಾನುಭಾವರು. ಅಂತಹವರ ಸಾಲಿನಲ್ಲಿ ಮಂಚೂಣಿಯಲ್ಲಿ ನಿಲ್ಲುವವರು ಅಂದ್ರೆ ನಮ್ಮ ಅಣ್ಣಾವ್ರು ಮತ್ತೆ ಅಣ್ಣಾವ್ರ ಕುಟುಂಬದವರು ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ನಟ ತೂಗುದೀಪ ದರ್ಶನ್ ಅವರ ಮೇಲೆ ನಡೆದ ದಾಳಿ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಅಸಹ್ಯಕರವಾದ ಪೋಸ್ಟ್ ಗಳ ಹಿನ್ನೆಲೆಯಲ್ಲಿ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ದುನಿಯಾ ವಿಜಯ್,  ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಒಬ್ಬನ ಅಚಾತುರ್ಯವನ್ನು ನೇರವಾಗಿ ಅಣ್ಣಾವ್ರ ಪುತ್ರ ಮತ್ತು ನಮ್ಮ ಕರುನಾಡಿನ ಹೆಮ್ಮೆಯ ಕುಡಿ ದಿವಂಗತ ಅಪ್ಪು ಅವರನ್ನು ಗುರಿಯಾಗಿಸುತ್ತಿದ್ದಾರೆ. ಇದು ಅತ್ಯಂತ ನೋವಿನ ಸಂಗತಿ ಎಂದಿದ್ದಾರೆ.

ಇಲ್ಲಿಗೇ ನಿಲ್ಲಿಸದೇ ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕೆಟ್ಟ ಭಾಷೆಯ ಪದಪ್ರಯೋಗಿಸುತ್ತಿದ್ದಾರೆ . ಇದಂತೂ ಯಾರೂ ಕ್ಷಮಿಸಲಾರದಂತಹ ಕೆಟ್ಟ ನಡೆ. ‘ಒಂದಂತು ಸತ್ಯ ನಾವು ಮನುಷ್ಯರಾಗಿ ಎಷ್ಟೇ ಜನುಮವೆತ್ತಿದರೂ ಆ ದೇವತಾಮನುಷ್ಯನ ಬಗ್ಗೆಯಾಗಲಿ ಅವರ ಕುಟುಂಬದವರ ಬಗ್ಗೆಯಾಗಲಿ ಮಾತಾಡೋ ಯೋಗ್ಯತೇನೂ ಇಲ್ಲದವರು ‘. ಇಂತಹ ಪರಿಸ್ಥಿತಿಯಲ್ಲಿ ಕಲಾವಿದರಾಗಿ ನಾವು ನಿಲ್ಲದೇ ಇದ್ದರೆ ಇದು ನಿಲ್ಲದೇ ಇನ್ನೊಂದು ಮಜಲನ್ನು ತಲುಪುವ ಅಪಾಯವಿದೆ ಎಂದಿದ್ದಾರೆ.

ನಾನು ದರ್ಶನ್ ಅವರಲ್ಲಿ ಕೇಳಿಕೊಳ್ಳುವುದು ಒಂದೇ ಮಾತು…. ಅಂತಹ ಪರಿಸ್ಥಿತಿಯಲ್ಲೂ ” ಪರ್ವಾಗಿಲ್ಲ ಬಿಡು ಚಿನ್ನ ” ಎಂಬ ಸಹನೆಯ ಮಾತಾಡಿ  ಹೃದಯವನ್ನೇ ಗೆದ್ದಿದ್ದೀರಿ. ಇನ್ನೊಂದು ಮಾತು  ನಿಮ್ಮನ್ನು ಇಷ್ಟಪಡುವ  ಮತ್ತು ನಿಮ್ಮ ಮಾತನ್ನು ಎಂದೂ ದಾಟದ ನಿಮ್ಮ ಅಭಿಮಾನಿಗಳಿಗೆ ಹೇಳಿದರೆ ಎಲ್ಲವೂ ಸರಿಹೋಗುತ್ತದೆ ಎಂದಿದ್ದಾರೆ.

Leave a Reply