ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಪಂಚಾಯಿತಿ CEO ಮಾರ್ಗದರ್ಶನದಂತೆ ಆದಿಶಕ್ತಿ ನಗರದ ಬುಡ್ಗ ಜಂಗಮ ಜನಾಂಗದ ಅಲೆಮಾರಿಗಳಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ವಿತರಣೆ ಮಾಡಲಾಯಿತು.
ಚಿತ್ರದುರ್ಗದ ಚಿನ್ಮಯ ಟ್ರಸ್ಟ್ ವತಿಯಿಂದ ರೇಷನ್ ಕಿಟ್ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಟ್ರಸ್ಟ್ ಅಧ್ಯಕ್ಷ್ಯೆ ಗೀತಾ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿ ಲಾಕ್ ಡೌನ್ ಸಂದರ್ಭದಲ್ಲಿ ಬಡವರು, ಅಲೆಮಾರಿಗಳು ಹಸಿವಿನಿಂದ ನರಳಬಾರದು ಎಂದು ಚಿನ್ಮಯ ಟ್ರಸ್ಟ್ ವತಿಯಿಂದ ಆಹಾರ ಧಾನ್ಯಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.
ಆಹಾರ ಧಾನ್ಯಗಳ ಕಿಟ್ ವಿತರಣೆಯನ್ನು ನೆರವೇರಿಸಿದ ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ಹಾಗೂ ಕೋವಿಡ್ -19 ನೊಡೇಲ್ ಅಧಿಕಾರಿ ರೇಖಾ ಮಾತನಾಡಿ, ಅಲೆಮಾರಿ ಸಮುದಾಯವರು ಕೋವಿಡ್, ಕೊರೋನಾ ಇರುವ ಕಾರಣ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೇಷನ್ ಗಳನ್ನು ಬಳಕೆ ಮಾಡುವುದು ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಂಡು ಕೊರೋನಾ ಸಾಂಕ್ರಾಮಿಕ ರೋಗದಿಂದ ದೂರ ಇರಬೇಕೆಂದು ಸಲಹೆ ನೀಡಿದರು.
ಕರ್ನಾಟಕ ಶಾಂತಿ & ಸೌಹಾರ್ದ ವೇದಿಕೆ ಪರವಾಗಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿ, ಅಲೆಮಾರಿ ಬುಡ್ಗ ಜಂಗಮ ಜನಾಂಗದ ಮುಖಂಡ ಮಾರೇಪ್ಪ ಅವರು ಫೋನ್ ಕರೆಮಾಡಿ ನೆರವು ಕೇಳಿದಾಗ ನಿಜಕ್ಕೂ ಬೇಸರವಾಯ್ತು. ಏಕೆಂದರೆ ಸಣ್ಣಪುಟ್ಟ ಕೆಲಸ, ವ್ಯಾಪಾರ ಮಾಡಿ ದುಡಿದು ತಿನ್ನುವ ಜನರು ಭಿಕ್ಷೆ ಬೇಡುವ ಪರಿಸ್ಥಿತಿ ಲಾಕ್ ಡೌನ್ ನಿಂದಾಗಿ ಬಂದಿದೆ. ಬದುಕು ಕಷ್ಟವಾಗುತ್ತಿದೆ ಎಂದು ಹೇಳಿದಾಗ ಚಿನ್ಮಯ ಟ್ರಸ್ಟ್ ಅಧ್ಯಕ್ಷರಿಗೆ ಸಂಪರ್ಕ ಮಾಡಿ ನೆರವು ನೀಡುವಂತೆ ಕೋರಲಾಗಿದ್ದು, ಅವರು ತಮ್ಮ ಸಂಸ್ಥೆಯ ಮೂಲಕ ನೆರವು ನೀಡಿದ್ದಾರೆ. ನಿಜಕ್ಕೂ ಈ ಸಮುದಾಯಗಳಿಗೆ ಸಹಾಯವಾಗಿದೆ ಎಂದರು
ಇದೇ ಸಂದರ್ಭದಲ್ಲಿ ಟ್ರಸ್ಟ್ ನ ಚಿನ್ಮಯಾ, ಮುಸ್ಲಿಂ ಕಲ್ಚರಲ್ ಅಕಾಡೆಮಿ ಅಧ್ಯಕ್ಷ ಹನೀಫ್ ಕೋಟೆ, ಮಾರೇಪ್ಪ, ವಸಂತ ಮುಂತಾದವರು ಹಾಜರಿದ್ದರು.



