ಮೊದಲು ಸ್ನೇಹಿತರಾಗೋಣ

5 years ago

ಮೊದಲು ಸ್ನೇಹಿತರಾಗೋಣ

ಸ್ನೇಹ ದಿನಾಚರಣೆಯ ಶುಭಾಶಯಗಳು ನಿಮಗೆ

ನಿಲ್ಲು ನೀ ದೂರದಿ ನಿಜವ ಅರಿಯುವ ತನಕ.

ನಾ ಹಿಂದು ನೀ ಮುಸ್ಲಿಂ ಆತ ಕ್ರೈಸ ಎಂದು ಹೊಡೆದಾಡುವವರೆಲ್ಲ ಸತ್ತ ಮೇಲೆ ಹೋಗುದೆಲ್ಲಿ ಒಂದೆ ಕಡೆಗೆ, ಬೂದಿ ಮಣ್ಣಾಗಿ, ಈ ಭೂಮಿಯಲಿ ಕರಗಿ. ಅಲ್ಲಿಹುದೆ ಪರಿಭೇದ, ಜಾತಿ ಧರ್ಮದ ಗೋಡೆ, ಎಲ್ಲರೊಂದೆ ಅಲ್ಲಿ, ಸತ್ತ ಮನುಷ್ಯ ದೇಹ ಹೆಣವಾಗಿ.

ಇರುವವರಿಗೆ ಹೊಡೆದಾಟ ಇದ್ದಾಗ ಬಡಿದಾಟ, ಸೋಲು ಗೆಲುವಿನ ತಿಕ್ಕಾಟ. ಸತ್ತ ಬಳಿಕೆಲ್ಲರಿಗೂ ಸಿಗುದೊಂದೆ ಶಾಶ್ವತ ಶಾಂತಿಯ ತೋಟ.

ಇದ್ದಾಗ ಆ ಪಕ್ಷ ಗೆದ್ದಾಗ ಈ ಪಕ್ಷ ಸೋತು ಗೆದ್ದವರ ಮಧ್ಯ ತಾತ್ವಿಕದ ತುಮುಲಾಟ ಬರುವರೇನಯ್ಯ ಅವರು ನಮ್ಮ ಎಡೆಗೆ ನಮ್ಮ ಹಿತಕೆ. ಅವರ ಕಡೆಗೆ ಬೆಂಬಲಿಸಿ ನಮ್ಮ ನಡೆ ಕಂಗೆಡೆಸಿ, ವೈರಿಗಳಾದೆವು ನಾವು ನಮ್ಮ ಜನರೊಡನೆ, ಸ್ನೇಹ ತೊರೆದು, ಮಾನ ಕಳೆದು‌.

ನಮ್ಮ ಸಂಕಷ್ಟಗಳಿಗೆ ಗೆದ್ದವರು ಸೋತವರು ದೂರ ನಿಂತು ನಗುವರು ಚಪ್ಪಾಳೆ ಹೊಡೆದು, ಅವರು ಕೈಕೈಯ್ಯ ಹಿಡಿದು, ನಮಗೆ ಬೀಗ ಜಡಿದು, ತಮ್ಮ ಸ್ವಾರ್ಥಕ್ಕೆ ಪಕ್ಷ ಬದಲಿಸಿ, ಜನರ ಕುರಿಮಾಡಿ, ತಾವು ನರಿಯಾಗಿ.

ನಮ್ಮ ಪಕ್ಷವ ಬೈಯ್ಯೆ, ನಮ್ಮ ಧರ್ಮವ ಹೊಯ್ಯೆ ನಮ್ಮ ಮುಖ ಎಲ್ಲ ಕೆಂಡ ಮಂಡಲವಾಗೆ, ನಾವು ರಕ್ತಪಾತವ ನಡೆಸಿ, ಬಾಳ ಹಾಳಗೈದೊಡೆ ಬರುವವರು ಯಾರಿಹರು ನಮ್ಮ   ಹಿಡಿದೆತ್ತಲು, ಸುಖ ಬಿತ್ತಲು. ನಮ್ಮ ಕಷ್ಟಕೆ. ಬರಬೇಕು ಬಂಧು ಮಿತ್ರರು ಮಾತ್ರ ನಮ್ಮ ಎಡೆಗೆ, ನಮ್ಮ ನೆರೆಗೆ. ಪಕ್ಷ, ಧರ್ಮದ ನೆಪದಿ, ನಮ್ಮ ಬಡಿದಾಡಿಸಿ, ನಮ್ಮ ಮನಕೆ ಕಿಚ್ಚಹಚ್ಚಿ,  ಭಾವನೆಯ ಕೆರಳಿಸಿ, ದ್ವೇಶವ ಹೊತ್ತಿಸಿ, ತಮ್ಮ ಲಾಭಕೆ ಬಳಸಿ, ಸ್ವಾರ್ಥದ ಲಾಲಸೆಗೆ ನಮ್ಮ ದಾಳವ ಮಾಡಿದರಯ್ಯ.

ಅತಿ ಮೂರ್ಖರು ನಾವಿವೆಹು, ತಿಳಿಯದೆಮಗೆ ಪಕ್ಷ, ಜಾತಿ, ಧರ್ಮದ ಕುಹಕ, ನಾಯಕರ ನಯವಂಚನೆಯ, ಕುಟಿಲ ತಂತ್ರದ ಸಂಚ, ನಾವು ಬಲಿಯಾಗುವ ತನಕ. ದೇಶ ಹಾಳು ಗೆಡೆಯವತನಕ.

ನೋಡು ನೀ ಧರ್ಮಗಳ ಸಂಸ್ಕೃತಿಯಾಗಿ, ಕಟ್ಟದಿರು ಶಾಸ್ತ್ರದ ಅಡ್ಡಗೋಡೆ. ಪಕ್ಷ ನಿಷ್ಠೆಯಲ್ಲಿಲ್ಲ ಜನತೆಯ ನಿಷ್ಠೆ. ಮಾನವತೆ ನಮ್ಮ ದೇಶ ನಿಷ್ಠೆ.

ಮತಿಯು ನಮಗಿರಲಿ, ಗತಿಯ ಕೆಡಿಸದಿರಲಿ, ಅತಿ ಭಾವುಕ ಸ್ಥಿತಿ ಇರದಿರಲಿ ನಿಲ್ಲು ನೀ ದೂರದಿ ನಿಜವ ಅರಿಯುವ ತನಕ. ಒಂದಾಗಿ ಬಾಳು ನೀ ಬಂಧು ಮಿತ್ರ ನೆರೆಹೊರೆ ಜನರೊಡನೆ, ಪಕ್ಷ, ಧರ್ಮ, ಜಾತಿ ತೊರೆದು, ಪ್ರೀತಿ, ಸ್ನೇಹ, ದಯದಿ ಜಗದ ಮಾನವರಾಗಿ. ಅದೇ ನಮ್ಮ ಬಾಳ ಗುರಿ, ಅದೇ ದೆಮಗೆಬಾಳ ಗರಿ, ಕೂಡಿ ಬಾಳುವು ದೊಂದೆ ಮನುಜ ಬಾಳಿನ ಅರಿವಿನಪರಿ.

– ಪ್ರೊ. ಎ.ಎಸ್. ನಟರಾಜ್, ವಿಚಾರವಾದಿಗಳು

Leave a Reply