ನಮ್ಮ ನೆಲದ ಮೊಟ್ಟ ಮೊದಲ ಅರ್ಥಶಾಸ್ತ್ರಜ್ಞ ಮೈಲಾರಪಟ್ಟಣದ ಶಂಕರಲಿಂಗೇಗೌಡರು

3 years ago

ಕನ್ನಡದ ನೆಲದಲ್ಲಿ ಅದರಲ್ಲೂ ಮಂಡ್ಯದ ನೆಲದಲ್ಲಿ ಜನಿಸಿದ ಓರ್ವ ಅದ್ವಿತೀಯ ಅರ್ಥಶಾಸ್ತ್ರಜ್ಞರೊಬ್ಬರು ಭಾರತದ ಆರ್ಥಿಕ ಸ್ಥಿತಿ ಗತಿಗಳ ಕುರಿತಂತೆ ಹಾಗೂ ಇಲ್ಲಿನ ಕೃಷಿ ಮತ್ತು ಜಾನುವಾರುಗಳು ಗ್ರಾಮಭಾರತದ ಅಭಿವೃದ್ಧಿಗೆ ಮೂಲ ಕಾರಣ ಎಂದು ನಂಬಿಕೊಂಡು ಮೈಸೂರು ಸಂಸ್ಥಾನ, ಬರೋಡ ಸಂಸ್ಥಾನ ಹಾಗೂ ತಮಿಳುನಾಡಿನ ಪಿತಾಪುರಂ ಸಂಸ್ಥಾನಕ್ಕೆ ಆರ್ಥಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದ ಇತಿಹಾಸ ಓದುತ್ತಿದ್ದರೆ ಆಶ್ಚರ್ಯವಾಗುತ್ತದೆ. ಜೊತೆಗೆ ಇಂತಹ ಮಹಾನುಭಾವರ ಬಗ್ಗೆ ಏನೂ ತಿಳಿದಿರಲಿಲ್ಲವೆಂಬ ಪಾಪ ಪ್ರಜ್ಞೆಯೂ ನನ್ನನ್ನು ಕಾಡುತ್ತಿದೆ.

ಸುಮಾರು ಹದಿನೈದು ವರ್ಷದ ಹಿಂದೆ ನನ್ನ ಮಿತ್ರರಾಗಿದ್ದ ಹುಬ್ಬಳ್ಳಿ ನಗರದ ಆಗರ್ಭ ಶ್ರೀಮಂತರು ಹಾಗೂ ಪ್ರಸಿದ್ಧ ವ್ಯಾಪಾರಿಗಳು ಮತ್ತು ಹುಬ್ಬಳ್ಳಿಯ ಛೇಂಬರ್ಸ್ ಆಫ್ ಕಾಮರ್ಸ್ ಸಂಸ್ಥೆಯ ಅಧ್ಯಕ್ಷರಾಗಿದ್ದ ಶ್ರೀ ಮದನ್ ದೇಸಾಯಿ ಎಂಬುವರ ಮನೆಗೆ ಹೋಗಿದ್ದೆ. ಅವರ ತಂದೆಯವರು 96 ವರ್ಷದ ಬಿಂದು ದೇಸಾಯಿ ಸಹ ಇದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಗುಜರಾತಿನಿಂದ ಹುಬ್ಬಳ್ಳಿಗೆ ಬಂದು ಹತ್ತಿ ಮಿಲ್ ಗಳು, ಟಾಟಾ ಕಂಪನಿಯ ವಾಹನಗಳ ವಿತರಕರಾಗಿ ಮತ್ತು ಹಲವಾರು ಕಂಪನಿಗಳ ಒಡೆಯರಾಗಿದ್ದ ಬಿಂದು ದೇಸಾಯಿ ಅವರು ಕರ್ನಾಟಕ ಬ್ಯಾಂಕಿನ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು.

ಮದನ್ ದೇಸಾಯಿ ರವರು ನನ್ನನ್ನು ಅವರ ತಂದೆಗೆ ಪರಿಚಯಿಸುವಾಗ, ಇವರು ಮಂಡ್ಯ ಜಿಲ್ಲೆಯವರು ಎಂದು ಹೇಳಿದರು. ಕೂಡಲೇ ಆ ಹಿರಿಯ ಜೀವ ನಿನಗೆ ಶಂಕರಲಿಂಗೇಗೌಡ ಗೊತ್ತೇನಪ್ಪಾ? ಎಂದರು. ಇಲ್ಲ ಸಾರ್ ಎಂದು ನಾನು ಹೇಳಿದಾಗ, ನನ್ನನ್ನು ಪಕ್ಕಕ್ಕೆ ಕೂರಿಸಿಕೊಂಡು, ಶಂಕರಲಿಂಗೇಗೌಡರು ಭಟ್ಕಳ ಬಂದರು ಅಭಿವೃದ್ಧಿ ಮಾಡುವ ವಿಷಯದಲ್ಲಿ ಕಂಡಿದ್ದ ಕನಸುಗಳು ಮತ್ತು ಇಲ್ಲಿನ ಉತ್ತರ ಕರ್ನಾಟಕದ ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ ಸೇರಿದಂತೆ ಹತ್ತಿ ಬೆಳೆಯುತ್ತಿದ್ದ ಜಿಲ್ಲೆಗಳ ರೈತರ ಹತ್ತಿಯನ್ನು ಬಂದರು ಪ್ರದೇಶಕ್ಕೆ ಸಾಗಿಸಲು ಉತ್ತಮ ರಸ್ತೆಗಳಿಗಾಗಿ ಅಂದಿನ ಬಾಂಬೆ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನದ ಜೊತೆ ವ್ಯವಹರಿಸಿ ಕಾರವಾರ ಮತ್ತು ಭಟ್ಕಳ ರಸ್ತೆ ಅಭಿವೃದ್ಧಿ ಪಡಿಸಿದ ಸಂಗತಿಗಳನ್ನು ವಿವರಿಸುತ್ತಾ, ಆ ಪುಣ್ಯಾತ್ಮನಿಂದ ನಾವುಗಳು ವ್ಯಾಪಾರದಲ್ಲಿ ಮುಂದೆ ಬಂದವು ಹೇಳಿ ಭಾವುಕರಾದರು. ಸ್ವಾತಂತ್ರ್ಯಪೂರ್ವದ ಮೈಸೂರಿನ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿದ್ದ ಶಂಕರಲಿಂಗೇಗೌಡರು ಸ್ವಾತಂತ್ರ್ಯಾನಂತರದ ಭಾರತದಲ್ಲಿ 1952 ರಲ್ಲಿ ಸಾರ್ವಜನಿಕ ಚುನಾವಣೆಯಲ್ಲಿ ಮೈಸೂರು ವಿಧಾನ ಸಭೆಗೆ ನಾಗಮಂಗಲ ಕ್ಷೇತ್ರದಿಂದ ಆಯ್ಕೆಯಾಗಿ ಕೇವಲ ಒಂಬತ್ತು ತಿಂಗಳು ಸೇವೆ ಸಲ್ಲಿಸಿ ನಿಧನರಾದ ಸಂಗತಿಯನ್ನು ವಿವರಿಸಿದರು. ಅವರ ಕುಟುಂಬಕ್ಕೆ ಶಂಕರಲಿಂಗೇಗೌಡರು ಆತ್ಮೀಯರಾಗಿದ್ದ ಕಾರಣ ಅವರ ಕುರಿತು ಅಧಿಕಾರಯುತವಾಗಿ ಬಿಂದು ದೇಸಾಯಿ ಮಾತನಾಡಿದರು. ಜೊತೆಗೆ 1930ರಿಂದ 40 ರ ದಶಕದ ನಡುವೆ ಹನ್ನೆರೆಡಕ್ಕೂ ಹೆಚ್ಚು ಅರ್ಥಶಾಸ್ತ್ರದ ಕೃತಿಗಳನ್ನು ರಚಿಸಿದ್ದು ಇವೆಲ್ಲವೂ ಮದ್ರಾಸ್ ನಗರದಲ್ಲಿ ಪ್ರಿಂಟ್ ಆಗಿದ್ದು ವೈಸ್ ರಾಯ್ ಅವರಿಗೂ ತಲುಪಿದ್ದವು ಎಂದು ಹೇಳಿದಾಗ ನಾಡಿನ ಇತಿಹಾಸದ ಬಗ್ಗೆ ನಮಗೆ ಆವರಿಸಿಕೊಂಡಿರುವ ಅವಜ್ಞೆಯನ್ನು ನೆನದು ಮುಜುಗರವಾಯಿತು.

ಈ ಘಟನೆ ನಡೆದ ತಿಂಗಳೊಳಗೆ ನಾನು ಮಂಡ್ಯಕ್ಕೆ ಬಂದಾಗ ನಾಗಮಂಗಲದ ನನ್ನ ಮಿತ್ರರಾದ ಅಲ್ಲಿನ ಪ್ರಸಿದ್ಧ ಇತಿಹಾಸಕಾರರಾದ ಮಹಮ್ಮದ್ ಕಲೀಂಉಲ್ಲಾ ಅವರನ್ನು ಭೇಟಿಯಾಗಿ ಈ ವಿಷಯವನ್ನು ಅವರಿಗೆ ತಿಳಿಸಿದೆ. ಈಗಿನ ನಾಗಮಂಗಲದ ಪ್ರವಾಸಿ ಮಂದಿರ ಇರುವ ಟಿ.ಬಿ.ಸರ್ಕಲ್ ಇರುವ ಪ್ರದೇಶವೇ ಮೈಲಾರ ಪಟ್ಟಣವೆಂದು ತಿಳಿಸಿದ ಕಲೀಂಉಲ್ಲಾ, ಹಿರಿಯ ನಿವೃತ್ತ ಐ.ಎ.ಎಸ್. ಅಧಿಕಾರಿ ಶಂಕರಲಿಂಗೇಗೌಡ ಅವರು ಮೊಮ್ಮಗ ( ಪುತ್ರಿಯ ಮಗ) ಎಂದು ತಿಳಿಸಿದರು. ಜೊತೆಗೆ ಹೆಚ್.ಡಿ.ದೇವೇಗೌಡರ ಬೀಗರೂ ಮತ್ತು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಡಿ.ಸಿ.ತಮ್ಮಣ್ಣನವರ ಪತ್ನಿ ಕೂಡಾ ಶಂಕರಗೌಡರ ಮೊಮ್ಮಗಳು ಎಂದು ತಿಳಿಸಿದರಲ್ಲದೆ ಅವರ ಕುರಿತು ಹಲವಾರು ಸ್ವಾರಸ್ಯಕರ ಸಂಗತಿಗಳನ್ನು ನನಗೆ ಹೇಳಿದರು. ಶಂಕರಲಿಂಗೇಗೌಡರ ಕುರಿತು ಕೃತಿ ರಚಿಸುವಂತೆ ಮಹಮ್ಮದ ಕಲೀಂಉಲ್ಲಾ ಅವರಿಗೆ ಕಳೆದ ಹತ್ತು ಹನ್ನೆರೆಡು ವರ್ಷಗಳಿಂದ ಬೆನ್ನು ಬಿದ್ದಿದ್ದೆ. ಕಳೆದ ವರ್ಷ ಶಂಕರಲಿಂಗೇಗೌಡರ ಕುರಿತು ಅದ್ಭುತವಾದ ಮಾಹಿತಿಯುಳ್ಳ ಕೃತಿ ರಚನೆ ಮಾಡಿದ್ದಾರೆ. ಇತಿಹಾಸದ ಗರ್ಭದಲ್ಲಿ ಹೂತು ಹೋಗಿದ್ದ ಈ ಅಪರೂಪದ ಮಹಾತ್ಮನನ್ನು ಆಧುನಿಕ ಜಗತ್ತಿಗೆ ಪರಿಚಯಿಸಿದ ಕಲೀಂಉಲ್ಲಾ ಅವರ ಬದ್ಧತೆಯನ್ನು ಅತ್ಯಂತ ಕೃತಜ್ಞಾಪೂರ್ವಕವಾಗಿ ಸ್ಮರಿಸುತ್ತೇನೆ.

ಬೆಂಗಳೂರು ವಿಜಯನಗರದಲ್ಲಿ ವಾಸವಾಗಿರುವ ಡಿ.ಸಿ. ತಮ್ಮಣ್ಣನವರಿಗೆ ಒಮ್ಮೆ ಫೋನ್ ಮಾಡಿ ಅವರ ಮನೆಗೆ ಹೋಗಿ ಅವರ ಪತ್ನಿಯವರನ್ನು ಭೇಟಿ ಮಾಡಿ ಅವರ ಬಳಿ ಇದ್ದ ಇಂಗ್ಲೀಷ್ ಕೃತಿಗಳನ್ನು ನೋಡಿ ಬಂದೆ. ಸೂಕ್ತ ಎನಿಸಿದರೆ, ಕನ್ನಡಕ್ಕೆ ಅನುವಾದ ಮಾಡಬೇಕು ಎಂಬ ಕನಸಿತ್ತು. ಆದರೆ, ಅಂದಿನ ಭಾರತದ ಸ್ಥಿತಿಗತಿ ಮತ್ತು ಆರ್ಥಿಕ ವಿಚಾರಗಳ ಅಂಶಗಳು ಇದ್ದುದರಿಂದ ಯೋಜನೆಯನ್ನು ಕೈ ಬಿಟ್ಟೆ. 1936 ರಲ್ಲಿ ಅವರು ರಚಿಸಿರುವ ಇಂಡಿಯನ್ ಎಕನಾಮಿಕ್ಸ್ ಸೈನ್ಸ್ ಎನ್ನುವ 475 ಪುಟಗಳ ಬೃಹತ್ ಆರ್ಥಿಕ ಚಿಂತನೆಯ ಕೃತಿಯನ್ನು ಗಮನಿಸಿದಾಗ, ಇಡೀ ದೇಶಕ್ಕೆ ಮಾಡರಿಯಾದ ಹಾಗೂ ಗಾಂಧಿ ಚಂತನೆಯನ್ನು ಒಳಗೊಂಡಿದ್ದ ಒಬ್ಬ ಮಹಾನ್ ಅರ್ಥಶಾಸ್ತ್ರಜ್ಞ ನಮ್ಮ ಕರ್ನಾಟಕದಲ್ಲಿ ಜನಿಸಿರುವುದಕ್ಕೆ ಹೆಮ್ಮೆಯಾಯಿತು.

ನಾಗಮಂಗಲದ ಮೈಲಾರ ಪಟ್ಟಣದ ಶ್ರೀ ಲಿಂಗೇಗೌಡರ ಪುತ್ರನಾಗಿ 1891 ರಲ್ಲಿ ಜನಿಸಿದ ಶಂಕರಗೌಡರು, ಅವರ ತಂದೆ ಬ್ರಿಟೀಷ್ ಸರ್ಕಾರದ ರವಿನ್ಯೂ ಇಲಾಖೆಯಲ್ಲಿ ಷೇಕ್ ದಾರ್ ಅಂದರೆ, ಇಂದಿನ ರವಿನ್ಯೂ ಇನ್ಸ್ ಪೆಕ್ಟರ್ ಹುದ್ದೆಯಲ್ಲಿದ್ದ ಕಾರಣ, ಕುಣಿಗಲ್, ಬೆಂಗಳೂರು ಮತ್ತು ಮದ್ರಾಸ್ ನಗರದಲ್ಲಿ ವಿದ್ಯಾಭ್ಯಾಸ ಪದವಿ ಪಡೆದರು. ಅತ್ಯಂತ ಶಿಸ್ತು ಮತ್ತು ಮುಂಗೋಪಿಯಾಗಿದ್ದ ಗೌಡರ ಕುರಿತಾಗಿ ಕಲೀಂಉಲ್ಲಾ ಹೇಳಿದ್ದ ಎರಡು ಘಟನೆಗಳು ಇಂದಿಗೂ ನನ್ನ ನೆನಪಿನಲ್ಲಿವೆ. ( ಕೃತಿಯಲ್ಲೂ ಕೂಡ ದಾಖಲಾಗಿವೆ) ಒಮ್ಮೆ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ನಾಗಮಂಗಲಕ್ಕೆ ಬಂದಿದ್ದಾಗ, ಶಾಸಕರಾಗಿದ್ದ ಶಂಕರಲಿಂಗೇಗೌಡರು ಸಭೆಯ ಅಧ್ಯಕ್ಷತೆ ವಹಿಸಿದ್ದರಂತೆ. ಅಲ್ಲಿನ ಜನತೆ ಬರಪೀಡಿತ ನಾಗಮಂಗಲ ತಾಲ್ಲೂಕಿಗೆ ನೆರವು ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದಾಗ, ಸಿಟ್ಟಿಗೆದ್ದ ಗೌಡರು ಮಾತನಾಡುತ್ತಾ, ನಾಗಮಂಗಲ ತಾಲ್ಲೂಕಿನ ಪ್ರದೇಶಕ್ಕೆ ಬೀಳುವ ವಾರ್ಷಿಕ ಮಳೆಯ ಪ್ರಮಾಣವನ್ನು ಹಾಗೂ ಇಲ್ಲಿನ ರೈತರ ಮನೆಯಲ್ಲಿರುವ ಕುರಿ, ಮೇಕೆ, ಮತ್ತು ಜಾನುವಾರುಗಳ ಸಂಖ್ಯೆಯನ್ನು ನಿಖರವಾದ ಅಂಕಿ ಅಂಶಗಳ ಮೂಲಕ ವಿವರಿಸಿ, ಅಲ್ಲಿನ ಜನತೆ ಇತರೆಡೆ ವಲಸೆ ಹೋಗುವುದನ್ನು ಖಂಡಿಸಿ ಬರ ಬಂದಿರುವುದು ನಾಗಮಂಗಲದ ಭೂಮಿಗಲ್ಲ, ಇಲ್ಲಿನ ಜನತೆಯ ಎದೆಗೆ ಬರ ಬಡಿದಿದೆ ಎಂದು ಹೇಳಿದ್ದರಂತೆ.

ಎರಡನೆಯ ಘಟನೆಯೆಂದರೆ, ವಿಧಾನಸೌಧ ನಿರ್ಮಾಣವಾಗಿರಲಿಲ್ಲ ಆದ್ದರಿಂದ ಇಂದಿನ ಬೆಂಗಳೂರು ಟೌನ್ ಹಾಲ್ ನಲ್ಲಿ ಮೈಸೂರು ಶಾಸನ ಸಭೆಯ ಕಾರ್ಯಕಲಾಪಗಳು ನಡೆಯುತ್ತಿದ್ದವು. ಒಮ್ಮೆ ಅವರು ಸದನಕ್ಕೆ ಹೋದಾಗ ಅವರಿಗೆ ಮೀಸಲಾಗಿದ್ದ ಕುರ್ಚಿಯಲ್ಲಿ ಬೇರೊಬ್ಬ ಸದಸ್ಯರು ಕುಳಿತಿದ್ದುದನ್ನು ನೋಡಿ ಸಿಟ್ಟಿಗೆದ್ದ ಗೌಡರು ವಿಧಾನ ಸಭಾಧ್ಯಕ್ಷರಿಗೆ ದೂರು ಸಲ್ಲಿಸಿ, ಮತ್ತೊಮ್ಮೆ ಇಂತಹ ಘಟನೆ ಜರುಗಿದರೆ, ನ್ಯಾಯಾಲಯದಿಂದ ಆದೇಶ ತರುತ್ತೀನಿ ಎಂದು ಬೆದರಿಕೆ ಹಾಕಿದ್ದಂತೆ. ಅಂದಿನಿಂದ ಯಾವೊಬ್ಬ ಸದಸ್ಯರು ಶಂಕರಲಿಂಗೇಗೌಡರ ಕುರ್ಚಿಯಲ್ಲಿ ಕೂರುವುದು ಇರಲಿ ಅದನ್ನು ಮುಟ್ಟಲು ಹೆದರುತ್ತಿದ್ದ ಸಂಗತಿ ನಿಜಕ್ಕೂ ಅವರ ವ್ಯಕ್ತಿತ್ವ ಎಂತಹದ್ದು ಎಂಬುದು ನಮಗೆ ಅರಿವಾಗುತ್ತದೆ. ಗೌಡರಿಗೆ ಹಲವು ಹೆಣ್ಣು ಮಕ್ಕಳ ಜನನದ ನಂತರ ಇಬ್ಬರು ಪುತ್ರರು ಜನಿಸಿದರು. ಅವರು ನಿಧನರಾಗುವ ವೇಳೆಗೆ ಅವರಿಬ್ಬರೂ ಬಾಲಕರು. ಹಾಗಾಗಿ ಈಗ ಅವರ ಮೊಮ್ಮಕ್ಕಳಲ್ಲಿ ಒಬ್ಬಾತ ನಾಗಮಂಗಲದಲ್ಲಿ ವಾಟರ್ ಮೆನ್ ಕೆಲಸದಲ್ಲಿದ್ದರೆ, ಮತ್ತೊಬ್ಬ ಮೊಮ್ಮಗ ಮಂಡ್ಯ ನಗರದಲ್ಲಿ ಆಟೋ ಓಡಿಸುತ್ತಿರುವ ಸಂಗತಿಯನ್ನು ಕಲೀಂಉಲ್ಲಾ ದಾಖಲಿಸಿದ್ದಾರೆ. ಇಂದಿನ ರಾಜಕಾರಣಿಗಳು ಮತ್ತು ಅವರ ಮಕ್ಕಳ ಅವತಾರಗಳನ್ನು ಗಮನಿಸುತ್ತಿರುವ ನಮಗೆ ಅಂದಿನ ರಾಜಕಾರಣಿಗಳ ಬದುಕು ನೆನೆದರೆ ಆಶ್ಚರ್ಯದ ಜೊತೆಗೆ ನೋವು ಮತ್ತು ಗೌರವ ಒಟ್ಟಿಗೆ ಮೂಡುತ್ತದೆ.

ಶಂಕರಲಿಂಗೇಗೌಡರ ಆರ್ಥಿಕ ಚಿಂತನೆಗಳು, ಮುನ್ನೋಟ ಮತ್ತು ಬರೋಡ ಸಂಸ್ಥಾನಕ್ಕೆ ಹಾಗೂ ಇತರೆ ಸಂಸ್ಥಾನಗಳಿಗೆ ಅವರು ನೀಡಿರುವ ಸಲಹೆಗಳನ್ನು ಓದುತ್ತಿದ್ದರೆ, ಗಾಂಧಿ ಅರ್ಥಶಾಸ್ತ್ರದ ರೂವಾರಿ ಜೆ.ಸಿ. ಕುಮಾರಪ್ಪನವರ ಮಾದರಿಯ ಒಬ್ಬ ಅರ್ಥಶಾಸ್ತ್ರಜ್ಞ ನಮ್ಮ ನೆಲದಲ್ಲಿಯೂ ಇದ್ದರು ಎಂಬ ಹೆಮ್ಮೆ ಮೂಡುತ್ತದೆ. ಮರೆತುಹೋಗಿದ್ದ ಇಂತಹ ಮಹಾನುಭವರನ್ನು ಮತ್ತೇ ಮುನ್ನೆಲೆಗೆ ತಂದ ಮಿತ್ರ ಮಹಮ್ಮದ್ ಕಲೀಂಉಲ್ಲಾ ಅವರಿಗೆ ಧನ್ಯವಾದಗಳನ್ನು ಅರ್ಪಿಸುವುದು ಕೃತಕ ಎನಿಸತೊಡಗಿದೆ. ಈ ಕೃತಿಯು ಆದಿಚುಂಚನಗಿರಿ ವಿ.ವಿ.ಯ ಪ್ರಸಾರಂಗದಿಂದ ಪ್ರಕಟವಾಗಿದ್ದು ಕೃತಿಗಾಗಿ ಬೆಂಗಳೂರಿನ ವಿಜಯ ನಗರದಲ್ಲಿರುವ ಅವರ ಪುಸ್ತಕದ ಮಳಿಗೆಯನ್ನು ಸಂಪರ್ಕಿಸಬಹುದು- ಮೊಬೈಲ್ ನಂ-9449803737( ನಾಗಭೂಷಣ್)

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply