ಬೆಂಗಳೂರು: ಕಂಠಪೂರ್ತಿ ಕುಡಿದು ಬಾರ್ ನಲ್ಲಿ ಕಿರಿಕ್ ಮಾಡಿದ ಕಿರುತೆರೆ ನಟ ಪ್ರಜ್ವಲ್ ವಿರುದ್ಧ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮೃತವರ್ಷಿಣಿ ಧಾರಾವಾಹಿಯಲ್ಲಿ ಅಭಿನಯಿಸಿದ್ದ ಅಣ್ಣ-ತಂಗಿ ಧಾರಾವಾಹಿಯಲ್ಲಿ ಇಂದ್ರನ ಪಾತ್ರ ಮಾಡುತ್ತಿರುವ ಪ್ರಜ್ವಲ್ ಮೂರು ದಿನಗಳ ಹಿಂದೆ ಆರ್ಆರ್ ನಗರದಲ್ಲಿರುವ ಅಮೃತಾ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಹೋಗಿದ್ದರು. ಅಲ್ಲಿ ತಮ್ಮ ಸ್ನೇಹಿತರೊಂದಿಗೆ ಕಂಠಮಟ್ಟ ಕುಡಿದಿದ್ದರು. ಅಲ್ಲಿಗೆ ಬಂದಿದ್ದ ಚೇತನ್ ಎಂಬುವರು ಪ್ರಜ್ವಲ್ ಜತೆಗೆ ಇದ್ದ ಮನು ಎಂಬಾತನನ್ನು ಕರೆದಿದ್ದಾರೆ. ಇಷ್ಟಕ್ಕೇ ಕೋಪಗೊಂಡ ಪ್ರಜ್ವಲ್ ಕೂಗಾಡಿದ್ದಾರೆ. ಪ್ರಜ್ವಲ್ ಮತ್ತು ಅವರ ಸಂಗಡಿಗರು ಸೇರಿ ಚೇತನ್ ಮೇಲೆ ಹಲ್ಲೆ ನಡೆಸಿದ್ದು, ಚೇತನ್ ಅವರು ನೀಡಿದ ದೂರನ್ನು ಆಧರಿಸಿ ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಾನು ನನ್ನ ಸ್ನೇಹಿತರನ್ನು ಭೇಟಿ ಮಾಡಲು ಅಮೃತಾ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಹೋಗಿದ್ದೆ. ಅಲ್ಲಿ ಪ್ರಜ್ವಲ್ ಮತ್ತು ಅವನ ಸ್ನೇಹಿತರ ಜತೆ ನನ್ನ ಗೆಳೆಯ ಮನು ಕುಳಿತಿದ್ದ. ನಾನು ಊಟ ಮುಗಸಿಕೊಂಡು ಹೊರಡುವಾಗ ಮನು ಬಳಿ ಹೋಗಿ ನನ್ನ ಜೊತೆ ಬರುವಂತೆ ಕರೆದೆ. ಆಗ ಪ್ರಜ್ವಲ್ ಸಿಟ್ಟಾದ. ಪ್ರಜ್ವಲ್ ಮತ್ತು ಅವನ ಸ್ನೇಹಿತರು ನಮ್ಮನ್ನು ಸುತ್ತುವರಿದು ಅತ್ಯಂತ ಕೆಟ್ಟದಾಗಿ ನಿಂದಿಸಿದರು. ಮನುವನ್ನು ನೀನ್ಯಾಕೆ ಕರೆಯುತ್ತಿಯಾ ಎಂದು ಕೂಗಾಡಿದ್ದಾರೆ. ಅಷ್ಟೇ ಅಲ್ಲ, ಬಾರ್ನಲ್ಲಿಯೇ ಇದ್ದ ಒಂದು ಮರದ ತುಂಡಿನಿಂದ ಹಲ್ಲೆಯನ್ನೂ ಮಾಡಿದ್ದಾರೆ ಎಂದು ಚೇತನ್ ದೂರಿನಲ್ಲಿ ಉಲ್ಲೇಖಿಸಿದ್ದು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.




