ಬೆಳಗಾವಿ: ಪೊಲೀಸರು ತಕ್ಷಣವೇ ನಾಸಿರ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದರು.
ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಹಾಕಿರುವುದು ಅತ್ಯಂತ ಅಕ್ಷಮ್ಯ ಅಪರಾಧ. ಇಂತಹ ಅಪರಾಧ ಎಸಗಿರುವ ಪಾತಕಿಗಳು ನಾಸಿರ್ ಹುಸೇನ್ ಅವರ ಬೆಂಬಲಿಗರು ಎಂದು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾಸೀರ್ ಹುಸೇನ್ ವಿರುದ್ಧವೂವು ಕ್ರಮ ಜರುಗಿಸಬೇಕು ಎಂದರು.
ಈ ಕುರಿತು ನಾಸಿರ್ ಹುಸೇನ್ ವಿರುದ್ಧ ತನಿಖೆ ಪೂರ್ಣಗೊಳ್ಳುವವರೆಗೆ ಅವರು ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಬಾರದು. ಅವರಿಗೆ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಬಾರದು ಎಂದು ರಾಜ್ಯಸಭೆ ಸಭಾಪತಿ ಹಾಗೂ ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರಿಗೆ ಪತ್ರ ಬರೆಯಲಾಗುವುದು ಎಂದರು.
ಪ್ರಕರಣ ಕುರಿತು ಎಫ್ ಎಸ್ ಎಲ್ ವರದಿಯನ್ನು ಸರ್ಕಾರ ಬಹಿರಂಗಪಡಿಸಬೇಕು. ಈ ಪ್ರಕರಣದಲ್ಲಿ ಯಾರು ಯಾರು ಶಾಮೀಲಾಗಿದ್ದಾರೆ ಎಂಬ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಎಲ್ಲರನ್ನೂ ಬಂಧಿಸಬೇಕು. ಪ್ರಕರಣದಲ್ಲಿ ನಿರ್ದೋಷಿ ಎಂದು ಸಾಬೀತಾಗುವವರೆಗೆ ನಾಸೀರ್ ಹುಸೇನ್ ಅವರು ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಬಾರದು ಎಂದರು.




