ದೆಹಲಿ: ಜೂನ್ 2020 ರಲ್ಲಿ ಸುಗ್ರೀವಾಜ್ಞೆ ಮೂಲಕ ತಂದ ಎಲ್ಲಾ ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಪ್ರಧಾನಿ ನರೇಂದ್ರ ಮೋದಿ ಗುರು ನಾನಕ್ ಜಯಂತಿ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ.
ಈ ನಿರ್ಧಾರವನ್ನು ಸ್ವಾಗತಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ, ಸೂಕ್ತ ಸಂಸದೀಯ ಪ್ರಕ್ರಿಯೆಗಳ ಮೂಲಕ ಪ್ರಕಟಣೆ ಜಾರಿಗೆ ಬರುವುದನ್ನು ಕಾಯುವುದಾಗಿ ಹೇಳಿದೆ. ಇದು ಜಾರಿಗೆ ಬಂದಲ್ಲಿ, ಭಾರತದಲ್ಲಿ ಒಂದು ವರ್ಷದಿಂದ ನಡೆಯುತ್ತಿರುವ ರೈತ ಆಂದೋಲನದ ಒಂದು ಐತಿಹಾಸಿಕ ವಿಜಯವಾಗಲಿದೆ ಎಂದು ವರ್ಣಿಸಿದೆ.
ಆದರೆ, ಈ ಹೋರಾಟದಲ್ಲಿ ಸುಮಾರು 700 ರೈತರು ಹುತಾತ್ಮರಾಗಿದ್ದಾರೆ. ಲಖಿಂಪುರ ಖಿರಿ ಹತ್ಯಾಕಾಂಡ ಸೇರಿದಂತೆ ಈ ಸಾವುಗಳನ್ನು ತಪ್ಪಿಸಬಹುದಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರದ ಹಟವೇ ಹೊಣೆಯಾಗಿದೆ ಎಂದೂ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.
ರೈತರ ಈ ಚಳುವಳಿಯು ಮೂರು ಕರಾಳ ಕಾಯಿದೆಗಳನ್ನು ರದ್ದುಪಡಿಸಲು ಮಾತ್ರವಲ್ಲದೆ ಎಲ್ಲಾ ಕೃಷಿ ಉತ್ಪನ್ನಗಳಿಗೆ ಕಾನೂನಾತ್ಮಕ ಬೆಲೆ ಖಾತ್ರಿ ಮತ್ತು ಎಲ್ಲಾ ರೈತರಿಗೆ ಲಾಭದಾಯಕ ಬೆಲೆ ಪಡೆಯುವುದಕ್ಕಾಗಿ ಕೂಡ ಆಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನಿಗಳಿಗೆ ನೆನಪಿಸಿದೆ. ರೈತರ ಈ ಮಹತ್ವದ ಬೇಡಿಕೆ ಇನ್ನೂ ಬಾಕಿ ಇದೆ. ಅದೇ ರೀತಿ ವಿದ್ಯುತ್ ತಿದ್ದುಪಡಿ ಮಸೂದೆಯನ್ನೂ ಹಿಂಪಡೆಯಬೇಕಿದೆ. ಸಂಯುಕ್ತ ಕಿಸಾನ್ ಮೋರ್ಚಾ ಶೀಘ್ರದಲ್ಲೇ ಸಭೆ ನಡೆಸುತ್ತದೆ, ಎಲ್ಲಾ ಘಟನೆಗಳನ್ನು ಪರಿಗಣಿಸಿ ಯಾವುದಾದರೂ ಮುಂದಿನ ನಿರ್ಧಾರಗಳಿದ್ದಲ್ಲಿ ಅವನ್ನು ಪ್ರಕಟಿಸುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್, ಡಾ. ದರ್ಶನ್ ಪಾಲ್, ಗುರ್ನಾಮ್ ಸಿಂಗ್ ಚಧುನಿ, ಹನ್ನನ್ ಮೊಲ್ಲಾ, ಜಗಜಿತ್ ಸಿಂಗ್ ದಲ್ಲೆವಾಲ್, ಜೋಗಿಂದರ್ ಸಿಂಗ್ ಉಗ್ರಹಾನ್, ಶಿವಕುಮಾರ್ ಶರ್ಮಾ (ಕಾಕ್ಕಾ ಜಿ) ಮತ್ತು ಯುಧ್ವೀರ್ ಸಿಂಗ್ ಜಂಟಿಯಾಗಿ ನೀಡಿರುವ ಈ ಹೇಳಿಕೆಯಲ್ಲಿ ಹೇಳಿದ್ದಾರೆ.




