ಚಿಕ್ಕಬಳ್ಳಾಪುರ: ಬಿಜೆಪಿಯು ಜನರಿಗೆ ಯಾವುದೇ ಟೊಳ್ಳು ಭರವಸೆಗಳನ್ನು ನೀಡಿಲ್ಲ. ಆದರೆ ಭರವಸೆಯಲ್ಲಿ ಇಲ್ಲದ ಹೊಸ ಯೋಜನೆಗಳನ್ನು ಕೂಡ ನೀಡಲಾಗಿದೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದಿಂದ ನಂದಿ ಮೆಡಿಕಲ್ ಕಾಲೇಜು ಸೇರಿದಂತೆ ಅನೇಕ ಅಭಿವೃದ್ಧಿಗಳು ನಡೆಯುತ್ತಿವೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರದ ಅರೂರು ಗ್ರಾಮದಲ್ಲಿ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಭವ್ಯ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಸಚಿವ ಡಾ.ಕೆ.ಸುಧಾಕರ್, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ ಹೆಚ್ಚು ಅನುದಾನ ಬಂದು ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ. ಡಬಲ್ ಎಂಜಿನ್ ಸರ್ಕಾರದಿಂದ ರಾಜ್ಯಕ್ಕೆ ದೊಡ್ಡ ಅಭಿವೃದ್ಧಿಯ ಸ್ಪರ್ಶ ದೊರೆತಿದೆ. ರೈತರ ಮಕ್ಕಳು ಸೇರಿದಂತೆ 11 ಲಕ್ಷ ಮಕ್ಕಳಿಗೆ ಕಾಮನ್ ಮ್ಯಾನ್ ಸಿಎಂ ಬಸವರಾಜ ಬೊಮ್ಮಾಯಿಯವರು ವಿದ್ಯಾನಿಧಿ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶೌಚಾಲಯದ ಬಗ್ಗೆ ಮಾತನಾಡಿದಾಗ ಏನು ಮಹಾ ಎಂದು ಹಲವರು ಟೀಕಿಸಿದ್ದರು. ಆದರೆ 11 ಕೋಟಿ ಶೌಚಾಲಯಗಳನ್ನು ನಿರ್ಮಿಸಿ ಮಹಿಳೆಯರ ಘನತೆ ಎತ್ತಿ ಹಿಡಿಯಲಾಗಿದೆ. ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಿ ಅವರ ಕಷ್ಟ ತಪ್ಪಿಸಲಾಗಿದೆ ಎಂದರು.
ನಂದಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶೇ.60 ರಷ್ಟು ಕೇಂದ್ರ, ಶೇ.40 ರಷ್ಟು ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. 57 ಎಕರೆ ಪ್ರದೇಶದಲ್ಲಿರುವ ಈ ಕಾಲೇಜಿನಲ್ಲಿ ಸುಸಜ್ಜಿತ ಅಕಾಡೆಮಿಕ್ ಬ್ಲಾಕ್, ಹಾಸ್ಟೆಲ್ ಮೊದಲಾದ ಸೌಲಭ್ಯಗಳಿವೆ. ಚಿಕ್ಕಬಳ್ಳಾಪುರದಲ್ಲಿ ಸತ್ಯ ಸಾಯಿ ಮೆಡಿಕಲ್ ಕಾಲೇಜು ಕೂಡ ಆರಂಭವಾಗಿದೆ. ಎರಡು ಮೆಡಿಕಲ್ ಕಾಲೇಜುಗಳಿರುವ ಈ ಜಿಲ್ಲೆಯ ಜನರು ಅದೃಷ್ಟವಂತರು. ಕೋವಿಡ್ ಸಮಯದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಉತ್ತಮವಾಗಿ ಆಡಳಿತ ನೀಡಿದ್ದರು. ಹಾಗೆಯೇ ಈ ಕಾಲೇಜು ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡಿದ್ದರು. ಅವರಿಗೆ ಧನ್ಯವಾದಗಳು ಎಂದರು.
ಪ್ರತಿ ಕನ್ನಡಿಗರ ದೃಷ್ಟಿ ಸಮಸ್ಯೆ ಬಗೆಹರಿಸಲು ಉಚಿತ ಶಸ್ತ್ರಚಿಕಿತ್ಸೆ ಹಾಗೂ ಕನ್ನಡ ವಿತರಣೆ ಮಾಡುವ 360 ಕೋಟಿ ರೂ. ಮೊತ್ತದ ʼದೃಷ್ಟಿ ಯೋಜನೆʼ ನೀಡಲಾಗಿದೆ. ಈ ಸರ್ಕಾರ ಪ್ರಜೆಗಳ ಸರ್ಕಾರ. ಯಾವುದೇ ಟೊಳ್ಳು ಭರವಸೆಗಳನ್ನು ಬಿಜೆಪಿ ನೀಡಿಲ್ಲ. ಭರವಸೆಯಲ್ಲಿ ಇಲ್ಲದ ಹೊಸ ಯೋಜನೆಗಳನ್ನು ಕೂಡ ನೀಡಲಾಗಿದೆ. ಹಿಂದೆ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರು ಎತ್ತಿನಹೊಳೆ ಯೋಜನೆ ರೂಪಿಸಿದ್ದು ಅನೇಕರಿಗೆ ಗೊತ್ತೇ ಇಲ್ಲ. ಈ ಭಾಗದ ಜನರಿಗೆ ಕುಡಿಯುವ ನೀರು ನೀಡಲು ಇಂತಹ ಮಹತ್ವದ ಯೋಜನೆ ನೀಡಲಾಗಿದೆ ಎಂದರು.
ಕಟ್ಟಕಡೆಯ ವ್ಯಕ್ತಿಗೂ ಸೇವೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಚಿಕ್ಕಬಳ್ಳಾಪುರದಲ್ಲಿ ಮೆಡಿಕಲ್ ಕಾಲೇಜು ತರಲು ಡಾ.ಕೆ.ಸುಧಾಕರ್ ರಾಜೀನಾಮೆ ನೀಡಿದರು. ಅವರು ಸಚಿವರಾದ ಕೂಡಲೇ ಜಿಲ್ಲೆಗೆ ವೈದ್ಯಕೀಯ ಕಾಲೇಜು ತಂದರು. ಈ ಕಾಲೇಜು ಕಟ್ಟಕಡೆಯ ವ್ಯಕ್ತಿಗೂ ಉತ್ತಮ ಆರೋಗ್ಯ ಸೇವೆ ನೀಡಲಿದ್ದು, ಎಲ್ಲಾ ಶ್ರೇಯಸ್ಸು ಸುಧಾಕರ್‌ರಿಗೆ ಸಲ್ಲುತ್ತದೆ. ಹಾವೇರಿ, ಚಿಕ್ಕಮಗಳೂರು, ಯಾದಗಿರಿ ಜಿಲ್ಲೆಗಳಲ್ಲೂ ಮೆಡಿಕಲ್ ಕಾಲೇಜು ನಿರ್ಮಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ನಿಯಮಗಳಲ್ಲಿ ಬದಲಾವಣೆ ತಂದು, ಸುಲಭವಾಗಿ ಹೊಸ ಮೆಡಿಕಲ್ ಕಾಲೇಜು ನಿರ್ಮಿಸಲು ಕಾರಣರಾಗಿದ್ದಾರೆ ಎಂದರು.
ಜನರಿಗೆ ನೆರವಾಗಲು ಯಶಸ್ವಿನಿ ಯೋಜನೆ ತರಲಾಗಿದೆ. ವಿದ್ಯಾನಿಧಿಯನ್ನು ರೈತ ಕಾರ್ಮಿಕರು, ಮೀನುಗಾರರು, ಚಾಲಕರ ಮಕ್ಕಳಿಗೂ ವಿಸ್ತರಿಸಿ, ದುಡಿಯುವ ವರ್ಗಕ್ಕೆ ನೆರವು ನೀಡಲಾಗಿದೆ. ಲಂಬಾಣಿ ತಾಂಡಾಗಳಿಗೆ ಆಸ್ತಿ ನೋಂದಣಿ ಮಾಡಿಕೊಡಲಾಗಿದೆ. ಆದರೆ ಹಿಂದೆ ಆಡಳಿತದಲ್ಲಿದ್ದವರು ಕಡುಬು ತಿನ್ನುತ್ತಿದ್ದರಾ? ಇವರಿಗೆ ಬಡವರ ಬಗ್ಗೆ ಕಾಳಜಿ ಇತ್ತಾ? ಬಡವರ ಬಗ್ಗೆ ದೊಡ್ಡ ಭಾಷಣ ಮಾಡುವವರು, ಸಣ್ಣ ಹಕ್ಕುಪತ್ರ ಕೊಡಲು ಸಾಧ್ಯವಾಗದವರಿಗೆ ನಾಚಿಕೆ ಆಗಬೇಕು ಎಂದರು.
ಹಿಂದಿನವರದ್ದು ಕಮಿಟಿ ಮಾಡುವುದೇ ದೊಡ್ಡ ಸಾಧನೆ. ನಮ್ಮ ಸರ್ಕಾರಕ್ಕೆ ಬದ್ಧತೆ ಇರುವುದರಿಂದ ಕಟ್ಟಕಡೆಯ ಜನರ ಬದುಕನ್ನು ಹಸನು ಮಾಡುವ ಕೆಲಸ ಮಾಡಿದ್ದೇವೆ. ಆದರೆ ಹಿಂದಿನ ಸರ್ಕಾರ ಮಹಿಳೆಯರಿಗೆ, ದಲಿತರಿಗೆ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಸ್ವಾರ್ಥಕ್ಕಾಗಿ ಅಧಿಕಾರ ಮಾಡಿದ್ದರು. ಜನರನ್ನು ಬಡವರಾಗಿಯೇ ಇರಿಸಿ, ಮತಬ್ಯಾಂಕ್ ಆಗಿ ಪರಿವರ್ತಿಸಿ ಅವರನ್ನು ಬಾವಿಯಲ್ಲಿಡುತ್ತಿದ್ದರು. ಚುನಾವಣೆ ಬಂದಾಗ ಅವರನ್ನು ಮೇಲೆತ್ತಿ ಮತ ಪಡೆದು ಮತ್ತೆ ಬಾವಿಗೆ ತಳ್ಳುತ್ತಿದ್ದರು. ಆದರೆ ಈಗ ಜನರು ಜಾಗೃತರಾಗಿದ್ದಾರೆ ಎಂದರು.
ಆಯುಷ್ಮತಿ ಕ್ಲಿನಿಕ್‌ನ ಫಲಾನುಭವಿ ಮಾತು
ರಾಯಚೂರಿನ ಆಯುಷ್ಮತಿ ಕ್ಲಿನಿಕ್‌ನ ಸೇವೆ ಪಡೆದ ಶೋಭಾ ಅವರೊಂದಿಗೆ ಸಚಿವ ಡಾ.ಕೆ.ಸುಧಾಕರ್ ಆನ್‌ಲೈನ್‌ನಲ್ಲಿ ಮಾತನಾಡಿದರು.
ಈ ಕ್ಲಿನಿಕ್‌ನಿಂದ ಬಡವರಿಗೆ ಬಹಳ ನೆರವಾಗಿದೆ ಎಂದು ಶೋಭಾ ಹೇಳಿದರು. ಹಾವೇರಿಯ ಆಯುಷ್ಮತಿ ಕ್ಲಿನಿಕ್‌ನಿಂದ ರತ್ನ ಮಾತನಾಡಿ ಉತ್ತಮ ಯೋಜನೆ ಎಂದು ಶ್ಲಾಘಿಸಿದರು.
1 ರೂ. ಕಳುಹಿಸಿದರೆ ಹಳ್ಳಿಗಳಿಗೆ 15 ಪೈಸೆ ತಲುಪುತ್ತದೆ ಎಂದು ಮಾಜಿ ಪ್ರಧಾನಿ ರಾಜೀವ್‌ಗಾಂಧಿ ಹೇಳಿದ್ದರು. ಆದರೆ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ 100 ರೂ. ಕಳುಹಿಸಿದರೆ ಸಂಪೂರ್ಣವಾಗಿ 100 ರೂ. ತಲುಪುತ್ತಿದೆ.
-ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ : ಚಿಕ್ಕಬಳ್ಳಾಪುರದ ಅರೂರು ಗ್ರಾಮದಲ್ಲಿ 2019 ರ ನವೆಂಬರ್ 8 ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿದ್ದರು. 525 ಕೋಟಿ ರೂ. ವೆಚ್ಚದಲ್ಲಿ ಕಾಲೇಜು ನಿರ್ಮಾಣವಾಗಿದ್ದು, 4 ಬೋಧನಾ ಕೊಠಡಿ, ಡಿಜಿಟಲ್ ಗ್ರಂಥಾಲಯಗಳು, ಲ್ಯಾಬ್‌ಗಳು, ಪರೀಕ್ಷಾ ಕೊಠಡಿ, ಸಿಬ್ಬಂದಿ ಕೊಠಡಿ, 330 ಹಾಸಿಗೆಗಳ ಒಳರೋಗಿ ವಿಭಾಗ, ಐಸಿಯು ಲಭ್ಯವಿದೆ. 373 ವಿದ್ಯಾರ್ಥಿಗಳಿಗೆ, 373 ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ಇದೆ.
ವಿವಿಧ ಕಾರ್ಯಕ್ರಮ, ಯೋಜನೆಗಳಿಗೆ ಚಾಲನೆ
STEMI: ST Elevation Myocardial lnfarction : ಹೃದಯ ರೋಗಿಗಳ ನೆರವಿಗಾಗಿ ಈ ಬಗೆಯ ಚಿಕಿತ್ಸಾ ಮಾದರಿ ಪರಿಚಯಿಸಲಾಗಿದೆ. ಬೆಂಗಳೂರು, ಮೈಸೂರು ಹಾಗೂ ಕಲಬುರ್ಗಿಯ ಜಯದೇವ ಆಸ್ಪತ್ರೆಗಳು, ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆ, ಆಂಬ್ಯುಲೆನ್ಸ್‌ಗಳಲ್ಲಿ ಈ ಸೌಲಭ್ಯ ತರಲಾಗಿದೆ.
AB-PMJAY-ArK : ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆಯಡಿ, 22 ಲಕ್ಷ ಕಾರ್ಡ್‌ಗಳ ವಿತರಣೆಗೆ ಚಾಲನೆ ನೀಡಲಾಗಿದೆ. ಏಪ್ರಿಲ್ ಒಳಗಾಗಿ ಇಷ್ಟು ಕಾರ್ಡ್ ವಿತರಿಸಲಾಗುತ್ತದೆ. ಸದ್ಯ 1.37 ಕೋಟಿ ಕಾರ್ಡ್‌ಗಳನ್ನು ಜನರೇಟ್ ಮಾಡಿದ್ದು, 21.79 ಲಕ್ಷ ಕಾರ್ಡ್‌ಗಳು ಮುದ್ರಣಗೊಂಡು ವಿತರಣೆಗೆ ಸಿದ್ಧವಾಗಿದೆ. ರಾಜ್ಯದಲ್ಲಿ ಒಟ್ಟು 5.09 ಕೋಟಿ ಫಲಾನುಭವಿಗಳಿಗೆ 2023 ರ ಆಗಸ್ಟ್ ಒಳಗಾಗಿ ಕಾರ್ಡ್ ವಿತರಿಸುವ ಗುರಿ ಇದೆ.
*WOMEN WELLNESS CLINICS-AYUSHMATHI CLINICS: ಮಹಿಳೆಯರಿಗಾಗಿ ಮೀಸಲಾದ ಮಹಿಳಾ ಸ್ವಾಸ್ಥ್ಯ ಕ್ಲಿನಿಕ್-ಆಯುಷ್ಮತಿ ಕ್ಲಿನಿಕ್‌ಗಳಿಗೆ ಚಾಲನೆ ದೊರೆತಿದ್ದು, ಎನ್‌ಎಚ್‌ಎಂ ಹಾಗೂ 15 ನೇ ಹಣಕಾಸು ಆಯೋಗದ ಕಾರ್ಯಕ್ರಮದಡಿ ಈ ಯೋಜನೆ ಜಾರಿಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 57 ಹಾಗೂ ಇತರೆ ಜಿಲ್ಲೆಗಳಲ್ಲಿ 71 ಸೇರಿದ ಒಟ್ಟು 128 ಕ್ಲಿನಿಕ್‌ಗಳು ಆರಂಭವಾಗಿವೆ. ತಜ್ಞ ವೈದ್ಯರ ಸೇವೆ, 30 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಕ್ಯಾನ್ಸರ್ ಮೊದಲಾದ ಅಸಾಂಕ್ರಾಮಿಕ ರೋಗಗಳ ತಪಾಸಣೆ, ಆಪ್ತ ಸಮಾಲೋಚನೆ, ಲ್ಯಾಬ್ ಪರೀಕ್ಷೆ, ಉಚಿತ ಔಷಧಿ, ಯೋಗ ಮತ್ತು ಧ್ಯಾನ, ರೆಫರಲ್ ಸೇವೆಗಳು ಉಚಿತವಾಗಿ ಲಭ್ಯವಿದೆ.
ಕಾಕ್ಲಿಯರ್ ಇಂಪ್ಲಾಂಟ್ : ಶ್ರವಣದೋಷ ಮುಕ್ತ ಕರ್ನಾಟಕ ನಿರ್ಮಣಕ್ಕೆ ಈ ಯೋಜನೆ ಜಾರಿಯಾಗಿದ್ದು, 32 ಕೋಟಿ ರೂ. ಮೀಸಲಿಡಲಾಗಿದೆ. 500 ಮಕ್ಕಳಿಗೆ ಈ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. 5 ಕೋಟಿ ರೂ. ವೆಚ್ಚದಲ್ಲಿ 92 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಕ್ಕೂ ಹಿಂದೆಯೇ ಎಸ್‌ಸಿಪಿ/ಟಿಎಸ್‌ಪಿ ಅಡಿ 67 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದು ಸೇರಿ ಒಟ್ಟು 159 ಮಕ್ಕಳು ಯೋಜನೆಯ ಲಾಭ ಪಡೆದಿದ್ದಾರೆ. ಈ ವರ್ಷದ 500 ರ ಗುರಿಯಲ್ಲಿ 92 ಆಗಿದ್ದು, ಇನ್ನೂ 408 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಬೇಕಿದೆ. 528 ಮಕ್ಕಳಿಗೆ ತಪಾಸಣೆ ಮಾಡಲಾಗಿದೆ.
ನಮ್ಮ ಕ್ಲಿನಿಕ್: ರಾಜ್ಯದಲ್ಲಿ ಒಟ್ಟು 438 ʼನಮ್ಮ ಕ್ಲಿನಿಕ್ʼ (ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ) ಆರಂಭಿಸಲು ಯೋಜನೆ ಜಾರಿಯಾಗಿದ್ದು, ಈಗಾಗಲೇ 298 ಕಾರ್ಯಾರಂಭವಾಗಿದೆ. ಉಳಿದ ಕ್ಲಿನಿಕ್‌ಗಳ ಆರಂಭಕ್ಕೆ ಚಾಲನೆ ನೀಡಲಾಗಿದೆ.




