ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಉತ್ತರ ಪ್ರದೇಶ, ಬಿಹಾರದ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ‘ಇನ್ವೆಸ್ಟ್ ಕರ್ನಾಟಕ’ದ ಭಾಷಣದಲ್ಲೇ ಹೇಳಿದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೈಗಾರಿಕಾ ಸಚಿವರಾದಿಯಾಗಿ ಸರ್ಕಾರದ ಪ್ರತಿನಿಧಿಗಳು ದಿವ್ಯಮೌನ ತಾಳಿರುವುದು ಯಾಕೆ? ರಾಜನಾಥ ಸಿಂಗ್ ಅವರ ಈ ಅಪಾಯಕಾರಿ ಹೇಳಿಕೆಗೆ ರಾಜ್ಯ ಸರ್ಕಾರದ ಸಮ್ಮತಿ ಇದೆಯೇ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಕರ್ನಾಟಕದಲ್ಲಿ ಉದ್ಯಮಿಗಳು ಬಂಡವಾಳ ಹೂಡಿದಾಗ ಅದರ ಲಾಭ ಕರ್ನಾಟಕದ ಜನತೆಗೆ ಲಭಿಸಬೇಕು ಎಂಬುದು ನೈಸರ್ಗಿಕ ನ್ಯಾಯ. ಆದರೆ ರಾಜ್ಯ ಸರ್ಕಾರದ ಬದ್ಧತೆ ಏನು ಎಂಬುದನ್ನು ಮುಖ್ಯಮಂತ್ರಿಗಳು, ಸಚಿವರುಗಳು ಬಹಿರಂಗಪಡಿಸಬೇಕು. ರಾಜನಾಥ ಸಿಂಗ್ ಅವರ ಹೇಳಿಕೆಗೆ ಸರ್ಕಾರದ ಪ್ರತಿನಿಧಿಗಳು ಮೌನ ತಾಳಿದರೆ ಇದರಿಂದ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ತಿಳಿವಳಿಕೆ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲವೇ? ಅಥವಾ ಕರ್ನಾಟಕದ ಉದ್ಯಮಗಳಲ್ಲಿ ಉತ್ತರ ಭಾರತೀಯರೇ ತುಂಬಿಕೊಳ್ಳಲಿ, ನಮಗೇನಾಗಬೇಕು ಎಂಬ ಅಸಡ್ಡೆ ಇದೆಯೇ?
ರಾಜನಾಥ ಸಿಂಗ್ ಅವರು ಈ ಹೇಳಿಕೆ ನೀಡುವಾಗ ಸ್ಥಳದಲ್ಲಿಯೇ ನಮ್ಮ ಜನಪ್ರತಿನಿಧಿಗಳು ಪ್ರತಿಭಟಿಸಬೇಕಿತ್ತು. ಅದು ಸಾಧ್ಯವಾಗದೇ ಇದ್ದಲ್ಲಿ ನಂತರವಾದರೂ ಆ ಕುರಿತು ಪ್ರತಿಕ್ರಿಯೆ ನೀಡಬಹುದಿತ್ತು. ಆದರೆ ಯಾರಿಗೂ ಈ ಕುರಿತು ಆಸಕ್ತಿ ಇದ್ದ ಹಾಗೆ ತೋರುತ್ತಿಲ್ಲ. ಕನ್ನಡಿಗರ ಬದುಕಿನ ಕುರಿತು, ಕನ್ನಡದ ಮಕ್ಕಳಿಗೆ ಲಭಿಸಬೇಕಾದ ಉದ್ಯೋಗದ ಕುರಿತು ಇವರಿಗೆ ಇರುವ ತಾತ್ಸಾರ, ಉಪೇಕ್ಷೆ ಎದ್ದು ಕಾಣುತ್ತಿದೆ.
ಇನ್ವೆಸ್ಟ್ ಕರ್ನಾಟಕದಿಂದಾಗಿ 20 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಸಚಿವರುಗಳೇ ಹೇಳುತ್ತಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರೇ, ಈ ಉದ್ಯೋಗಗಳನ್ನು ಯಾರಿಗೆ ಕೊಡುತ್ತೀರಿ? ರಾಜನಾಥ ಸಿಂಗ್ ಹೇಳಿದಂತೆ ಯುಪಿ, ಬಿಹಾರಿ ಹಿಂದಿವಾಲಾಗಳಿಗಾ? ಅಥವಾ ಕನ್ನಡಿಗರಿಗಾ? ನೀವಾದರೂ ಸ್ಪಷ್ಟಪಡಿಸಿ. ಹಿಂದಿವಾಲಾಗಳಿಗೆ ಉದ್ಯೋಗ ಕೊಡುವುದಾದರೆ ಕರ್ನಾಟಕದ ರೈತರು ತಮ್ಮ ಬೆಲೆಬಾಳುವ ಜಮೀನನ್ನು ಯಾಕೆ ಸರ್ಕಾರಕ್ಕೆ ನೀಡಬೇಕು? ಕನ್ನಡಿಗರನ್ನು ಭಿಕಾರಿಗೊಳಿಸಿ, ಹಿಂದಿವಾಲಾಗಳನ್ನು ಉದ್ಧಾರ ಮಾಡುವ ನೀತಿಗೆ ನಮ್ಮ ಧಿಕ್ಕಾರವಿದೆ.
ನಮ್ಮ ಜನಪ್ರತಿನಿಧಿಗಳು ಈಗಲಾದರೂ ಬಾಯಿಬಿಟ್ಟು ಮಾತಾಡಬೇಕು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಬಾಯಿ ಬಿಡದಿದ್ದರೆ ಬಾಯಿ ಬಿಡಿಸುವ ಕಾರ್ಯವನ್ನು ನಾವು ಮಾಡಬೇಕಾಗುತ್ತದೆ.
ಕರ್ನಾಟಕದಲ್ಲಿ ಉದ್ಯಮಗಳನ್ನು ಸ್ಥಾಪಿಸುವುದು, ಕನ್ನಡಿಗರ ಒಳಿತಿಗಾಗಿಯೇ ಹೊರತು ಯುಪಿ, ಬಿಹಾರಿಗಳ ಅನುಕೂಲಕ್ಕಾಗಿ ಅಲ್ಲ ಎಂದು ಹೇಳುವ ಧೈರ್ಯ ಇಲ್ಲದ ಜನಪ್ರತಿನಿಧಿಗಳು ಇದ್ದರೇನು ಪ್ರಯೋಜನ? ಇಂಥ ಹೇಡಿ ರಾಜಕಾರಣವನ್ನು ಕನ್ನಡ ಜನತೆಯ ಮುಂದೆ ಬಯಲುಗೊಳಿಸುವ ಕಾರ್ಯವನ್ನು ನಾವು ಮಾಡುತ್ತೇವೆ.
– ಟಿ.ಎ.ನಾರಾಯಣಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಕ್ಷಣಾ ವೇದಿಕೆ




