ಪ್ರೊ.ಅನ್ನದಾನಿ ಹಿರೇಮಠ ಅವರಿಗೆ ಗೌರವ ಡಿ.ಲಿಟ್.

4 years ago

ಬೆಂಗಳೂರು: ಹಿರಿಯ ಸಾಹಿತಿ, ಗದಗಿನ ಉಪನ್ಯಾಸಕ ಅನ್ನದಾನಿ ವೀ. ಹಿರೇಮಠ ಅವರಿಗೆ ಅಮೆರಿಕದ ಸೆಂಟ್ರಲ್ ಅಮೆರಿಕ ವಿಶ್ವವಿದ್ಯಾಲಯ ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.

ಹಿರೇಮಠ ಅವರು ಕಳೆದ 40 ವರ್ಷಗಳಿಂದ ಶಿಕ್ಷಣ, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ, ಡಾ.ಎಸ್.ರಾಧಾಕೃಷ್ಣನ್ ಟೀಚರ್ಸ್ ವೆಲ್‌ಫೇರ್ ಅಸೋಸಿಯೇಷನ್ ಆಫ್ ಇಂಡಿಯಾದ ಬೆಂಗಳೂರು ಮತ್ತು ಮುಂಬಯಿ ರಿಸರ್ಚ್ ಸೆಂಟರ್‌ನ ಅಧಿಕಾರಿಗಳು ಹಿರೇಮಠ ಅವರ ಹೆಸರನ್ನು ಗೌರವ ಡಿ.ಲಿಟ್.ಗೆ ಶಿಫಾರಸು ಮಾಡಿದ್ದರು. ಇವರ ಸೇವೆಯನ್ನು ಪರಿಗಣಿಸಿ ಸೆಂಟ್ರಲ್ ಅಮೆರಿಕ ವಿಶ್ವವಿದ್ಯಾಲಯ ಇವರನ್ನು ಗೌರವ ಡಿ.ಲಿಟ್.ಗೆ ಆಯ್ಕೆ ಮಾಡಿದೆ.

ಗದಗಿನ ನಗರಸಭಾ ಪಿ.ಯು. ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ ಹಿರೇಮಠ ಅವರು ಪ್ರಸ್ತುತ ನರಸಾಪುರದ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಪದವಿ ಪೂರ್ವ ಕಾಲೇಜು ಹಾಗೂ ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಅಭಿಮನ್ಯು’ ‘ನನ್ನ ಬದುಕಿನ ಕಾರಣ’ ಕವನ ಸಂಕಲನಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಸಾಹಿತ್ಯಿ ಕೃತಿಗಳನ್ನು ರಚಿಸಿರುವ ಹಿರೇಮಠ ಅವರು ಆಕಾಶವಾಣಿ-ದೂರದರ್ಶನಕ್ಕೆ  ಹಲವು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ನಟನೆ, ನಿರ್ದೇಶನ ಮತ್ತು ಕಲಾ ವಿಮರ್ಶೆಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಲವು ಕಲಾ ಸಂಸ್ಥೆಗಳ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗದಗಿನ ತೊಂಟದ ಸಿದ್ಧಲಿಂಗ ಸ್ವಾಮೀಜಿ ಸೇರಿದಂತೆ ಎಂಟು ಸಾಹಿತಿ-ಕಲಾವಿದ-ಸಾಧಕರ ಜೀವನ ಕುರಿತಾದ ಸಾಕ್ಷ್ಯಚಿತ್ರಗಳನ್ನೂ ತಯಾರಿಸಿದ್ದಾರೆ.

ನಾಡೋಜ ಡಾ.ಜ.ಅನ್ನದಾನೀಶ್ವರ ಮಹಾಸ್ವಾಮಿಗಳು ಹಾಗೂ ಅನ್ನದಾನೀಶ್ವರ ವಿದ್ಯಾ ಸಮಿತಿಯ ಆಡಳಿತಾಧಿಕಾರಿ ಡಾ.ಬಿ.ಜಿ.ಜವಳಿ ಅವರು ಹಿರೇಮಠರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply