ತಿಂಗಳ ಅಂತ್ಯದೊಳಗೆ ಹೊಸ ಬಿಪಿಎಲ್, ಎಪಿಎಲ್ ಕಾರ್ಡ್ಗಳನ್ನು ವಿತರಣೆ: ಕೆ.ಎಚ್.ಮುನಿಯಪ್ಪ

3 years ago

#Distribution #new #BPL #APL #cards #end #month #KHMuniappa

ಬೆಂಗಳೂರು: ಹೊಸದಾಗಿ ಕಾರ್ಡ್ ಕೋರಿ ಅರ್ಜಿ ಸಲ್ಲಿಸಿದ ಎಲ್ಲರಿಗೂ ಈ ತಿಂಗಳ ಅಂತ್ಯದೊಳಗೆ ಹೊಸ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ಗಳನ್ನು ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ. ಈ ಮೂಲಕ ಹೊಸದಾಗಿ ಬಿಪಿಎಲ್ ಕಾರ್ಡಿಗಾಗಿ ಕೋರಿಕೆ ಸಲ್ಲಿಸಿ, ಹಲವಾರು ತಿಂಗಳುಗಳಿಂದ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದವರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸದಾಗಿ ಪಡಿತರ ಚೀಟಿ ಕೋರಿ 2,95,986 ಅರ್ಜಿ ಸಲ್ಲಿಸಿದ್ದಾರೆ. ಈ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅರ್ಹರಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಡಿತರ ಚೀಟಿಯಲ್ಲಿರುವ ಮೃತರ ಹೆಸರು ತೆಗೆಯಲು, ಹೊಸದಾಗಿ ಕುಟುಂಬ ಸದಸ್ಯರನ್ನು ಸೇರಿಸಿಕೊಳ್ಳುವುದು ಸೇರಿದಂತೆ ಅಗತ್ಯ ತಿದ್ದುಪಡಿಗಾಗಿ ಒಂದು ತಿಂಗಳು ಅವಕಾಶ ನೀಡಲಾಗಿದೆ. ಇದರಿಂದಾಗಿ ಹೊಸ ಕಾರ್ಡ್ಗಳನ್ನು ನೀಡಲು ಅಧಿಕಾರಿಗಳು ಈಗಾಗಲೇ ಕಾರ್ಯಪ್ರವೃತ್ತರಾಗಿದ್ದಾರೆ ಎಂದರು.

ನೆರೆಯ ಆಂಧ್ರಪ್ರದೇಶದಲ್ಲಿರುವಂತೆ ಪಡಿತರ ಪಡೆಯುವವರಿಗೆ ಎ ಕಾರ್ಡ್, ವೈದ್ಯಕೀಯ ಸೇವೆಗಾಗಿ ಪಡಿತರ ಹೊಂದಿರುವವರಿಗೆ ಬಿ ಕಾರ್ಡ್ ನೀಡಲು ಚಿಂತನೆ ನಡೆಸಿದ್ದೇವೆ. ಅದರಂತೆ ನಮ್ಮ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿ ಅಧ್ಯಯನ ಮಾಡಿ ವರದಿ ಬಂದ ನಂತರ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಈವರೆಗೆ ಆಧಾರ್ ಜೋಡಣೆ ಮಾಡಿಕೊಂಡಿರುವ 1,9,27,226 ಕಾರ್ಡ್ಗಳ ಪರಿಶೀಲನೆ ನಡೆದಿದೆ. ನ್ಯಾಯಬೆಲೆ ಅಂಗಡಿಗಳನ್ನು ವಿಂಗಡಿಸಿ ಆಹಾರ ಧಾನ್ಯಗಳನ್ನು ಪಡಿತರದಾರರಿಗೆ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈಗಾಗಲೇ 25 ಲಕ್ಷ ಬಿಪಿಎಲ್ ಕುಟುಂಬದವರಿಗೆ ಪಡಿತರ ವಿತರಿಸಲಾಗುತ್ತಿದೆ. ಪಡಿತರ ಕಾರ್ಡ್ ಹೊಂದಿದ್ದರೂ ಹಲವು ತಿಂಗಳುಗಳಿಂದ ಪಡಿತರ ಪಡೆಯದವರ ಬಗ್ಗೆಯೂ ತನಿಖೆ ನಡೆಸಲಾಗುವುದು. ಇದಕ್ಕೆ ಕಾರಣ ಏನು ಎಂಬುದರ ಬಗ್ಗೆ ತಿಳಿದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಳೆದ ಮೂರು ತಿಂಗಳಿನಿಂದ ಪಡಿತರ ಪಡೆಯದ 5,32,349 ಲಕ್ಷ ಅಂತ್ಯೋದಯ ಪಡಿತರದಾರರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ. ಇದರಲ್ಲಿ ಮೂವರು ಸದಸ್ಯರಿರುವ ಫಲಾನುಭವಿಗಳು 3,40,425 ಇದ್ದಾರೆ ಎಂದರು.

ಪ್ರತಿ ಕ್ವಿಂಟಾಲ್ ರಾಗಿಗೆ 5 ಸಾವಿರ, ಜೋಳಕ್ಕೆ 4.5 ಸಾವಿರ ರೂ. ಬೆಂಬಲ ಬೆಲೆ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಪಡಿತರ ವ್ಯವಸ್ಥೆಯಲ್ಲಿ 8 ಲಕ್ಷ ಟನ್ ರಾಗಿ ಹಾಗೂ 3 ಲಕ್ಷ ಟನ್ ಜೋಳ ಖರೀದಿಸಲು ಚಿಂತಿಸಲಾಗಿದೆ ಎಂದರು.

ರಾಜ್ಯ ಸರ್ಕಾರ 14 ಲಕ್ಷ ಬಿಪಿಎಲ್ ಕುಟುಂಬದವರಿಗೆ 20 ಸಾವಿರ ಮೆಟ್ರಿಕ್ ಟನ್ ಆಹಾರ ಧಾನ್ಯಗಳನ್ನು ಕೇಂದ್ರ ಸರ್ಕಾರಿ ಸ್ವಾಮ್ಯದಿಂದ ಪಡೆದು ವಿತರಿಸಲಾಗುತ್ತಿದೆ ಎಂದರು.

ಬ್ಯಾಂಕ್ ಖಾತೆ: ಅನ್ನಭಾಗ್ಯ ಯೋಜನೆಯಡಿ ಬ್ಯಾಂಕ್ ಖಾತೆ ಹೊಂದಿಲ್ಲದ ಬಿಪಿಎಲ್ ಪಡಿತರದಾರರಿಗೆ ನಗದು ಹಣ ವರ್ಗಾವಣೆ ಯೋಜನೆಯಡಿ ಬಾಕಿ ಹಣವನ್ನು ಕೊಡಲು ಸಾಧ್ಯವಿಲ್ಲ. ಅವರು ಬ್ಯಾಂಕ್ ಖಾತೆ ಹೊಂದಿದ ದಿನದಿಂದ ಹಣವನ್ನು ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ ಯೋಜನೆಗೆ ಚಾಲನೆ ದೊರೆತು 25 ದಿನಗಳಾಗಿದ್ದು, ಅತಿ ಕಡಿಮೆ ಸಮಯದಲ್ಲಿ ಆಹಾರ ಇಲಾಖೆಯು 1 ಕೋಟಿ ಕುಟುಂಬಗಳಿಗೆ 566 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿದೆ. ಇದು ದಾಖಲೆ. ಉಳಿದಂತೆ 28 ಲಕ್ಷ ಕುಟುಂಬಗಳ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆಯಾಗಿಲ್ಲ. ಹಾಗಾಗಿ ಇವರಿಗೆ ಹಣ ವರ್ಗಾವಣೆಯಾಗಿಲ್ಲ ಎಂದರು.

ಬ್ಯಾಂಕ್ ಖಾತೆ ಹೊಂದದೆ ಇರುವ ಪಡಿತರದಾರರಿಗೆ ಖಾತೆಗಳನ್ನು ತೆರೆಯಲು ಇಲಾಖೆಯಿಂದಲೇ ನೆರವು ನೀಡಲಾಗುತ್ತಿದೆ. ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಶಿಬಿರಗಳನ್ನು ಏರ್ಪಡಿಸಿ ಖಾತೆ ತೆರೆಯಲಾಗುತ್ತಿದೆ. ಇದುವರೆಗೂ 1,19,503 ಹೊಸ ಬ್ಯಾಂಕ್ ಖಾತೆ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಬಿಪಿಎಲ್ ಕಾರ್ಡ್ದಾರರಿಗೆ 5 ಕೆ.ಜಿ. ಅಕ್ಕಿಯನ್ನು ಹೆಚ್ಚುವರಿಯಾಗಿ ವಿತರಿಸಲು ಅಕ್ಕಿ ಸಿಗದ ಕಾರಣ ಈಗ ಪ್ರತಿ ಫಲಾನುಭವಿಗೆ 5 ಕೆ.ಜಿ. ಬೆಲೆ 170 ರೂಪಾಯಿಯನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಇದು ಎರಡು ತಿಂಗಳು ಮಾತ್ರ. ಸೆಪ್ಟೆಂಬರ್ನಿಂದ ಅಕ್ಕಿಯನ್ನೆ ವಿತರಣೆ ಮಾಡುತ್ತೇವೆ ಎಂದರು.

ಅಕ್ಕಿ ಖರೀದಿ ಸಂಬಂಧ ಆಂಧ್ರ ಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಆಹಾರ ಸಚಿವರುಗಳ ಜತೆ ಚರ್ಚೆ ನಡೆಸಿದ್ದೇವೆ. ಕೇಂದ್ರ ಸರ್ಕಾರದ ದರದಂತೆ ಪ್ರತಿ ಕೆ.ಜಿ. ಅಕ್ಕಿಗೆ 34 ರೂಪಾಯಿ ನೀಡಿ ಅಕ್ಕಿ ಖರೀದಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ. ನಮ್ಮ ಬೆಲೆಗೆ ಈ ರಾಜ್ಯಗಳು ಅಕ್ಕಿ ನೀಡಲು ಒಪ್ಪಿದರೆ ಬಹುಶಃ ಸೆಪ್ಟೆಂಬರ್ನಿಂದಲೇ ಅನ್ನಭಾಗ್ಯ ಯೋಜನೆಯಡಿ ಹಣ ನೀಡುವುದನ್ನು ಸ್ಥಗಿತಗೊಳಿಸಿ ಅಕ್ಕಿಯನ್ನೆ ವಿತರಿಸುತ್ತೇವೆ. ಇನ್ನೊಂದು ವಾರದೊಳಗೆ ಎಲ್ಲವೂ ಅಂತಿಮವಾಗಲಿದೆ ಎಂದು ಅವರು ಹೇಳಿದರು.

Leave a Reply