ಉದ್ಯಮಿಗಳೊಂದಿಗೆ ಚರ್ಚಿಸಿ ರಫ್ತಿಗೆ ಉತ್ತೇಜನ ನೀಡುವಂತಹ ಅಂಶಗಳಿಗೆ ಒತ್ತು: ಸಿದ್ದರಾಮಯ್ಯ

3 years ago

#Discussion #businessmen #emphasis #factors #boost #exports #Siddaramaiah

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಕೈಗಾರಿಕೆ ನೀತಿ ರೂಪಿಸುವಾಗ ಉದ್ಯಮಿಗಳೊಂದಿಗೆ ಚರ್ಚಿಸಿ ರಫ್ತಿಗೆ ಉತ್ತೇಜನ ನೀಡುವಂತಹ ಅಂಶಗಳಿಗೆ ಒತ್ತು ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ರಾಜ್ಯ ಶ್ರೇಷ್ಠ ರಫ್ತು ಪ್ರಶಸ್ತಿಗಳ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಫ್ತು ಉದ್ಯಮದಲ್ಲಿ ಕರ್ನಾಟಕ 3ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮತ್ತು ತಮಿಳುನಾಡು ಮೊದಲ ಸ್ಥಾನದಲ್ಲಿವೆ ಮುಂದಿನ ದಿನಗಳಲ್ಲಿ ಕರ್ನಾಟಕವನ್ನು ರಫ್ತಿನಲ್ಲಿ ನಂ.1 ಸ್ಥಾನಕ್ಕೇರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

1980ರಿಂದಲೂ ರಾಜ್ಯದಲ್ಲಿ ಕೈಗಾರಿಕಾ ನೀತಿಗಳು ಜಾರಿಗೆ ಬಂದಿವೆ. ಈ ಹಿಂದೆ ತಮ್ಮ ಸರ್ಕಾರ ದೇಶದಲ್ಲೇ ಪ್ರಗತಿಪರ ಎಂದು ಭಾವಿಸಲಾದ ಕೈಗಾರಿಕಾ ನೀತಿಯನ್ನು ರೂಪಿಸಿತ್ತು. ಮುಂದಿನ ದಿನಗಳಲ್ಲಿ ಹೊಸ ನೀತಿ ರೂಪಿಸುವಾಗ ರಫ್ತಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.

ಕೈಗಾರಿಕೆಗಳಿಗೆ ಬೇಡಿಕೆ ಇರುವಂತಹ ಕೌಶಲ್ಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಹಿಂದೆ ತಮ್ಮ ಸರ್ಕಾರ ಕೌಶಲ್ಯ ಅಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿತ್ತು. ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಅದಕ್ಕೆ ಬೆಂಬಲ ನೀಡಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಕೌಶಲ್ಯಾಭಿವೃದ್ಧಿಗೆ ಒತ್ತು ನೀಡಲಿದೆ ಎಂದರು.

ಬಂಡವಾಳ ಹೂಡಿಕೆಯಿಂದ ರಾಜ್ಯದ ಅಭಿವೃದ್ಧಿಯಾಗಲಿದೆ. ಕೈಗಾರಿಕೆಗಳ ಸ್ಥಾಪನೆಯಿಂದ ನಿರುದ್ಯೋಗ ನಿವಾರಣೆಯಾಗಿ ಜಿಡಿಪಿ ಬೆಳವಣಿಗೆಯಾಗಲಿದೆ. ತನ್ಮೂಲಕ ದೇಶದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಲಿದೆ. ಹೂಡಿಕೆಗೆ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವುದು ಅಗತ್ಯ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಚ್ಚರಿಕೆ ವಹಿಸಲಿದೆ ಎಂದು ಹೇಳಿದರು.

ರಫ್ತು ಉದ್ಯಮದಲ್ಲಿ ಯಶಸ್ಸು ಸಾಧಿಸಿದ ಉದ್ಯಮಿಗಳನ್ನು ಜಿಲ್ಲಾಮಟ್ಟದಿಂದಲೂ ಗುರುತಿಸಲಾಗಿದೆ. ಇದಕ್ಕಾಗಿ ಕೆಲಸ ಮಾಡುವ ಸಮಿತಿ ರಾಜ್ಯಾದ್ಯಂತ 68 ಕಂಪನಿಗಳನ್ನು ಗುರುತಿಸಿ ಶಿಫಾರಸ್ಸು ಮಾಡಿದೆ. ಈ ಪ್ರಶಸ್ತಿ ನೀಡುವುದರಿಂದ ಇತರ ಉದ್ಯಮಿಗಳು ರಫ್ತು ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಸೂರ್ತಿ ದೊರೆಯಲಿದೆ ಎಂದರು.

ಕಾರ್ಮಿಕರು ಶಕ್ತರಾಗಬೇಕು:
ಸಮಾರಂಭದಲ್ಲಿ ಉಪಸ್ಥಿತರಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಕಾರ್ಮಿಕರನ್ನು ಸದೃಢಗೊಳಿಸಿದರೆ, ಸದೃಢ ಸರ್ಕಾರ ಇರುತ್ತದೆ, ಸದೃಢ ಸರ್ಕಾರದಿಂದ ಸದೃಢ ಉದ್ಯೋಗ ಅವಕಾಶಗಳು ಇರುತ್ತದೆ, ಸದೃಢ ಆರ್ಥಿಕತೆ ಇರುತ್ತದೆ ಎಂದು ಹೇಳಿದರು.

ಕೇರಳಕ್ಕೆ ಅಷ್ಟಾಗಿ ಉದ್ದಿಮೆಗಳು ಹೋಗುವುದಿಲ್ಲ, ಅದರೆ ತಮಿಳುನಾಡು, ತೆಲಂಗಾಂಣ, ಆಂಧ್ರ ಪ್ರದೇಶಕ್ಕೆ ಹೋಗುತ್ತವೆ. ನಮ್ಮ ದಕ್ಷಿಣ ಭಾರತದಲ್ಲಿ ಕರ್ನಾಟಕ ಉದ್ದಿಮೆಗಳಿಗೆ ಅತ್ಯುತ್ತಮ ಜಾಗ. ನಮ್ಮಲ್ಲಿರುವ ವಾತಾವರಣ, ಕಾನೂನು ಸೇರಿದಂತೆ ಉದ್ದಿಮೆ ಸ್ನೇಹಿ ನೀತಿಗಳಿಂದ ಅಂತಾರಾಷ್ಟ್ರೀಯ ಉದ್ಯಮಗಳು ನಮ್ಮಲ್ಲಿ ಬರುತ್ತಿರುವುದು ಹೆಮ್ಮೆಯ ವಿಚಾರ ಎಂದು ಬಣ್ಣಿಸಿದರು.

ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಕಾಲವದು. ಆಗ ಅಮೇರಿಕಾದ ಟ್ವಿನ್‌ ಟವರ್‌ ಸ್ಫೋಟ ಆದ ಸಂದರ್ಭದಲ್ಲಿ ಅನೇಕ ಕಂಪೆನಿಗಳು ಭಾರತದತ್ತ ಮುಖ ಮಾಡಿದವು. ಆಗ ಅನೇಕ ದೇಶದ ಪ್ರತಿನಿಧಿಗಳು ಹೇಳಿದ ಮಾತು ಕೇಳಿದರೆ ನಮ್ಮ ರಾಜ್ಯದ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದರು.

ಇಲ್ಲಿ ಕೋಮು ಸಂಘರ್ಷಗಳು ಕಡಿಮೆ ಎನ್ನುವ ಕಾರಣಕ್ಕೆ. ಗಲಭೆಗಳು ನಡೆಯುವುದಿಲ್ಲ, ಅತ್ಯುತ್ತಮ ವಾತಾವರಣವಿದೆ, ಇಲ್ಲಿರುವ ಜ್ಞಾನ, ಸಂಪತ್ತು, ಮಾನವ ಸಂಪನ್ಮೂಲ ಹೆಚ್ಚು ಅನುಕೂಲಕರವಾಗಿದೆ ಎಂದು ವಿದೇಶಿ ಪ್ರತಿನಿಧಿಗಳು ಮಾತನಾಡಿದ್ದರು. ಅಲ್ಲಿಂದ ಆರಂಭವಾದ ನಮ್ಮ ಕೈಗಾರಿಕಾ ಬೆಳವಣಿಗೆ ಇಂದು ಉತ್ತುಂಗಕ್ಕೆ ಬಂದು ನಿಂತಿದೆ. ಇಂದು ನಮ್ಮ ರಾಜ್ಯ ರಫ್ತಿನಲ್ಲಿ 2 ನೇ ಸ್ಥಾನದಲ್ಲಿದೆ, IT ಕ್ಷೇತ್ರದಲ್ಲಿ ಈಗಲೂ ಮೊದಲನೇ ಸ್ಥಾನದಲ್ಲಿ ಇದ್ದೇವೆ ಎಂದು ಹೇಳಿದರು.

ನಮ್ಮ ಪ್ರಣಾಳಿಕೆಯಲ್ಲಿ ಒಂದು ವಿಷಯ ಹೇಳಿದ್ದೇವೆ. ಉದ್ಯೋಗ ಸೃಷ್ಟಿಯಾಗಬೇಕು ಎಂಬುದು ನಮ್ಮ ಆಶಯ, ಉದ್ಯೋಗ ಸೃಷ್ಟಿಯಾಗಬೇಕು, ಎರಡನೇ ಮತ್ತು ಮೂರನೇ ಹಂತದ ನಗರಗಳಲ್ಲಿ ಹೆಚ್ಚಿನ ಔದ್ಯೋಗಿಕ ಬೆಳವಣಿಗೆಗೆ ಒತ್ತುಕೊಡುತ್ತೇವೆ. ಇಂತಹ ನಗರಗಳಲ್ಲಿ ಉದ್ದಿಮೆ ಪ್ರಾರಂಭ ಮಾಡುವವರಿಗೆ ಸರ್ಕಾರ ಹೆಚ್ಚಿನ ಅನುಕೂಲ ಹಾಗೂ ಸಹಾಯ ಮಾಡುತ್ತದೆ. ಇದನ್ನು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೇವೆ, ಇದನ್ನು ಮಾಡುತ್ತೇವೆ. ಈ ರೀತಿ ಮಾಡುವುದರಿಂದ ಸ್ಥಳೀಯವಾಗಿ ಉದ್ಯೋಗ ದೊರಕುತ್ತದೆ, ವಲಸೆ ಕಡಿಮೆಯಾಗುತ್ತದೆ, ಆರ್ಥಿಕ, ಪ್ರಾದೇಶಿಕ ಅಸಮಾನತೆ ಕಡಿಮೆಯಾಗುತ್ತದೆ ಎಂದರು.

Leave a Reply