ಹೊಸ ಉದ್ಯಮಿಗಳಿಗೆ ವಾರ್ಷಿಕ 4ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ
ನಿಗಮದಿಂದ 1 ಲಕ್ಷದ ವರೆಗೆ ಸಾಲ, 20,000 ಸಬ್ಸಿಡಿ
500 ಫಲಾನುಭವಿಗಳಿಗೆ 5 ಕೋಟಿ ರೂ. ಡಿಬಿಟಿ ಸಾಧನೆ
ರಾಜ್ಯದಲ್ಲೇ ಡಿಬಿಟಿ ಪ್ರಕ್ರಿಯೆ ಪೂರ್ಣಗೊಳಿಸಿದ ಮೊದಲ ನಿಗಮ
ಬೆಂಗಳೂರು: ಹೊಸ ಉದ್ಯಮಿಗಳಿಗೆ ಹಾಗೂ ಬಡವರಿಗೆ ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ಆರ್ಯ ವೈಶ್ಯ ನಿಗಮವು ಗಮನಾರ್ಹವಾದ ಕೆಲಸ ನಿರ್ವಹಿಸುತ್ತಿದೆ. ಒಂದು ಲಕ್ಷದ ವರೆಗೆ ವಾರ್ಷಿಕ 4ರ ಕಡಿಮೆ ಬಡ್ಡಿ ದರದಲ್ಲಿ ಹಣ ನೀಡಲಾಗುತ್ತಿದ್ದು, ಎಲ್ಲರೂ ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಮನವಿ ಮಾಡಿದರು.
ಬುಧವಾರ ವಿಕಾಸಸೌಧದ ಕಚೇರಿಯಲ್ಲಿ ಆರ್ಯ ವೈಶ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ದೀಪಾಶ್ರೀ. ಕೆ ಅವರೊಂದಿಗೆ ಕೃಷ್ಣ ಬೈರೇಗೌಡ ಅವರು ಆರ್ಯ ವೈಶ್ಯ ನಿಗಮದ ಡಿಬಿಟಿ ಪ್ರಕ್ರಿಯನ್ನು ಪೂರ್ಣಗೊಳಿಸಿದರು. ಈ ಮೂಲಕ ಸ್ವಯಂ-ಉದ್ಯೋಗ ನೇರ ಸಾಲ ಯೋಜನೆಯಡಿಯಲ್ಲಿ 500 ಫಲಾನುಭವಿಗಳಿಗೆ ರೂ.5.00ಕೋಟಿ ಸಾಲ-ಸಹಾಯಧನವನ್ನು ನೇರ ನಗದು ವರ್ಗಾವಣೆ ಮೂಲಕ ವರ್ಗಾವಣೆ ಮಾಡಿದರು.
ನಂತರ ಮಾತನಾಡಿದ ಅವರು, ಆರ್ಯ ವೈಶ್ಯ ನಿಗಮವು 2023-24ನೇ ಸಾಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ (ನಿ)ಕ್ಕೆ ಬಿಡುಗಡೆಯಾದ ರೂ.10.00ಕೋಟಿ ಅನುದಾನದಲ್ಲಿ ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ ಹಾಗೂ ವಾಸವಿ ಜಲಶಕ್ತಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಸಮಿತಿ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ನವ ಉದ್ಯಮಿಗಳಿಗೆ ಸಹಾಯ ಹಸ್ತ ಚಾಚುವ ಗಮನಾರ್ಹ ಕೆಲಸಕ್ಕೆ ನಿಗಮವು ಮುಂದಾಗಿದೆ ಎಂದರು.
ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ತಲಾ ರೂ.20,000/-ಸಹಾಯಧನ ಹಾಗೂ ರೂ.80,000/-ಸಾಲ ಬಿಡುಗಡೆ ಮಾಡಿದ್ದು, ಫಲಾನುಭವಿಯು ಸಾಲವನ್ನು ಶೇ.4ರಷ್ಟು ಬಡ್ಡಿ ದರದಲ್ಲಿ ಮರುಪಾವತಿಯನ್ನು KACDC ಆಪ್ ಮೂಲಕ ಮರುಪಾವತಿಸಲು ಅವಕಾಶವಿರುತ್ತದೆ. ಆರ್ಯ ವೈಶ್ಯ ಈ ಸೌಲಭ್ಯವನ್ನು ನೀಡುತ್ತಿರುವ ಏಕೈಕ ನಿಗಮವಾಗಿದ್ದು, ಎಲ್ಲಾ ಫಲಾನುಭವಿಗಳು ತಮ್ಮ ಈ-ಮೇಲ್ ನಲ್ಲಿ ಸ್ವಯಂ ಚಾಲಿತ ಸಾಲ ಮಂಜೂರಾತಿ ಆದೇಶ ಪತ್ರವನ್ನು ಪಡೆಯಬಹುದಾಗಿರುತ್ತದೆ ಎಂದರು.
ಇಲ್ಲಿಯವರೆಗೂ ನಿಗಮಕ್ಕೆ ರೂ.4.57ಕೋಟಿ ಮರುಪಾವತಿ ಮೊತ್ತ ಸ್ವೀಕೃತಿಯಾಗಿದ್ದು, ಎಲ್ಲಾ ಫಲಾನುಭವಿಗಳಿಗೆ ನನ್ನ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಹಾಗೂ ಸಾಲ ಪಡೆದಂತಹ ಎಲ್ಲಾ ಫಲಾನುಭವಿಗಳು ಸಾಲವನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದು ಕೋರುತ್ತೇನೆ ಎಂದು ಮನವಿ ಮಾಡಿದರು.
ಆರ್ಯ ವೈಶ್ಯ ನಿಗಮವು ರಾಜ್ಯದಲ್ಲೇ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ ಡಿಬಿಟಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಮೊದಲ ನಿಗಮವಾಗಿದೆ ಎಂದರು.
ನಿಗಮ ಸಂಪೂರ್ಣವಾಗಿ ಗಣಕೀಕರಣಗೊಂಡಿರುವುದರಿಂದ ಸಕಾಲದಲ್ಲಿ ಎಲ್ಲಾ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲು ಸಾಧ್ಯವಾಗಿರುವುದು ಪ್ರಶಂಸನೀಯ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮೆಚ್ಚುಗೆ ಸೂಚಿಸಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾದ ದೀಪಶ್ರೀ .ಕೆ ಮಾತನಾಡಿ, ಆಹಾರ ವಾಹಿನಿ ಯೋಜನೆಯಡಿಯಲ್ಲಿ ಆಯ್ಕೆಯಾದ 40 ಫಲಾನುಭವಿಗಳಿಗೆ ಹಾಗೂ ವಾಸವಿ ಜಲಶಕ್ತಿ ಯೋಜನೆಯಡಿಯಲ್ಲಿ ಆಯ್ಕೆಯಾದ 36 ಫಲಾನುಭವಿಗಳಿಗೆ ಶೀಘ್ರದಲ್ಲಿ ಸಾಲ-ಸಹಾಯಧನದ ಮೊತ್ತವನ್ನು ಬಿಡುಗಡೆ ಮಾಡಲಾಗುವುದು ಎಂದರು.




