ಬೆಂಗಳೂರು: ಆನೇಕಲ್ ಪುರಸಭೆಗೆ ರೌಡಿ ಶೀಟರ್ ಒಬ್ಬನನ್ನು ಸರ್ಕಾರ ಸದಸ್ಯನಾಗಿ ನಾಮನಿರ್ದೇಶನ ಮಾಡಿದೆ. ಈ ಸರ್ಕಾರ ರೌಡಿಗಳ ಅಡ್ಡಾ ತೆರೆಯುತ್ತಿದೆಯೇ? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಆನೇಕಲ್ ಪುರಸಭೆ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಮಂಜುನಾಥ್ ನನ್ನು ಸರ್ಕಾರ ನಾಮನಿರ್ದೇಶನ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ದಿನೇಶ್ ಗುಂಡೂರಾವ್, ಮೋಸ್ಟ್ ವಾಂಟೆಡ್ ರೌಡಿಗಳು, ಪಾತಕಿಗಳು BJP ಪಾಳಯ ಸೇರಿಕೊಳ್ಳುತ್ತಿದ್ದಾರೆ. ಶಾಂತಿಯ ನಾಡಾದ ರಾಜ್ಯದಲ್ಲಿ ರೌಡಿಗಳ ಮೂಲಕ ರಕ್ತ ರಾಜಕಾರಣ ಮಾಡಲು ಮುಂದಾಗಿದೆಯೇ ಈ ಸರ್ಕಾರ? ಎಂದು ಪ್ರಶ್ನಿಸಿದ್ದಾರೆ.
ವಾಂಟೆಡ್ ಲಿಸ್ಟ್‌ನಲ್ಲಿರೋ ರೌಡಿಗಳು ಹಾಗೂ ಪಾತಕಿಗಳು BJP ಪಡಸಾಲೆಯಲ್ಲಿ ಅಡ್ಡಾಡುತ್ತಿದ್ದಾರೆ. ಕೆಲವು ರೌಡಿಶೀಟರ್‌ಗಳನ್ನು ಸರ್ಕಾರವೇ ಆಯಕಟ್ಟಿನ ಹುದ್ದೆಗೆ ನೇಮಕ ಮಾಡುತ್ತಿದೆ. ಈ ಮೂಲಕ ಸರ್ಕಾರ ಏನು ಸಂದೇಶ ಕೊಡಲು ಹೊರಟಿದೆ? ಕರ್ನಾಟಕವನ್ನು ಗೂಂಡಾರಾಜ್ಯ ಮಾಡುವುದು BJP ನಾಯಕರ ಉದ್ದೇಶವೆ? ಎಂದು ಪ್ರಶ್ನಿಸಿದ್ದಾರೆ.
ಪಾತಕಿಗಳ ಅಡ್ಡೆಯಾಗುತ್ತಿರುವ ಮಲ್ಲೇಶ್ವರದ BJP ಕಚೇರಿ ‘ಪಾಪಿಗಳ ಲೋಕ’ವಾಗಿದೆ. ಬಾಯಲ್ಲಿ ರಾಮ ಜಪ ಮಾಡುವ BJPಯವರು ರೌಡಿಗಳ ಸಂಗ ಮಾಡಿ ಹಾಳಾಗಿ ಹೋಗಿದ್ದಾರೆ. BJPಯವರಿಗೆ ಮರ್ಯಾದೆ ಇದ್ದರೆ ಇನ್ನಾದರೂ ಆದರ್ಶ ಪುರುಷ ರಾಮನ ಹೆಸರು ಹೇಳುವುದನ್ನು ನಿಲ್ಲಿಸಲಿ. ಕರ್ನಾಟಕವನ್ನು ರೌಡಿ ರಾಜ್ಯ ಮಾಡುವುದಾಗಿ ಬಹಿರಂಗವಾಗಿ ಒಪ್ಪಿಕೊಳ್ಳಲಿ ಎಂದಿದ್ದಾರೆ.



