ಸಿದ್ದರಾಮಯ್ಯ ಪ್ರಧಾನಿ ಮೋದಿಯವರನ್ನು ಸ್ವಾಗತಿಸಲಿಲ್ಲವೇ?

3 years ago

breaking, Siddaramaiah, welcome, PM, Modi, factcheck reality, fake, chandrayaan3,

ಚಂದ್ರಯಾನ-3 ಯಶಸ್ಸಿನ ನಂತರ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಲು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 26ರಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದರು. ಈ ಘಟನೆ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳಿಗೆ ಇಳಿದಿವೆ. ಇಲ್ಲಿದೆ ನಡೆದ ಘಟನೆಯ ಫ್ಯಾಕ್ಟ್ ಚೆಕ್ ವಿವರ…

ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಮೋದಿ ಅವರು ಕರ್ನಾಟಕದ ಮುಖ್ಯಮಂತ್ರಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸದಂತೆ ತಡೆದಿದ್ದಾರೆ ಮತ್ತು ಶಿಷ್ಟಾಚಾರಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪಿಸಿದೆ.

ಆಗಸ್ಟ್ 23 ರಂದು ಚಂದ್ರಯಾನ-3 ಚಂದ್ರನ ಮೇಲೆ ಯಶಸ್ವಿ ಲ್ಯಾಂಡಿಂಗ್ ಆದ ನಂತರ ಇಸ್ರೋ ವಿಜ್ಞಾನಿಗಳನ್ನು ಭೇಟಿ ಮಾಡಲು ನರೇಂದ್ರ ಮೋದಿ ಬೆಳಿಗ್ಗೆ ಬೆಂಗಳೂರಿಗೆ ಬಂದರು. ಆದರೆ, ಅವರನ್ನು ಸ್ವಾಗತಿಸಲು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿಮಾನ ನಿಲ್ದಾಣಕ್ಕೆ ಆಗಮಿಸಿರಲಿಲ್ಲ.

ಮೋದಿ ಅವರು ಮುಖ್ಯಮಂತ್ರಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸದಂತೆ “ಉದ್ದೇಶಪೂರ್ವಕವಾಗಿ ನಿರ್ಬಂಧಿಸಿದ್ದಾರೆ” ಎಂದು ಕಾಂಗ್ರೆಸ್ ಹೇಳಿಕೊಂಡಿದೆ, ಇದು ಶಿಷ್ಟಾಚಾರದ ಪ್ರಮುಖ ಉಲ್ಲಂಘನೆಯಾಗಿದೆ ಎಂಬುದು ಕಾಂಗ್ರೆಸ್ ಆರೋಪ.

ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ಮತ್ತು ಮಾಜಿ ಸಚಿವ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣಗಲ್ಲಿ ಪ್ರತಿಕ್ರಿಯೆ ನೀಡಿದ್ದು, “ತಮಗಿಂತ ಮೊದಲು ಇಸ್ರೋ ವಿಜ್ಞಾನಿಗಳನ್ನು ಸನ್ಮಾನಿಸಿದ್ದಕ್ಕಾಗಿ ಅವರು ಕರ್ನಾಟಕದ ಸಿಎಂ ಮತ್ತು ಉಪಮುಖ್ಯಮಂತ್ರಿಗಳ ಬಗ್ಗೆ ತುಂಬಾ ಸಿಟ್ಟಿಗೆದ್ದಿದ್ದಾರೆ, ಅವರು ಸಿಎಂ ಅವರನ್ನು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸದಂತೆ ನಿರ್ಬಂಧಿಸಿದ್ದಾರೆ” ಎಂದು ಹೇಳಿದ್ದಾರೆ.

“ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ ಚಂದ್ರಯಾನ-I ಯಶಸ್ವಿ ಉಡಾವಣೆಯ ನಂತರ ಅಕ್ಟೋಬರ್ 22, 2008 ರಂದು ಅಹಮದಾಬಾದ್ನ ಬಾಹ್ಯಾಕಾಶ ಕೇಂದ್ರಕ್ಕೆ ಸಿಎಂ ಮೋದಿ ಭೇಟಿ ನೀಡಿದ್ದನ್ನು ಪ್ರಧಾನಿ ಮೋದಿ ಮರೆತಿದ್ದಾರೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.

ಆದರೆ, ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ, “ನಾನು ಬೆಂಗಳೂರಿಗೆ ಯಾವಾಗ ತಲುಪುತ್ತೇನೆ ಎಂದು ನನಗೆ ತಿಳಿದಿಲ್ಲದ ಕಾರಣ, ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಇಷ್ಟು ಬೇಗ ಆಗಮಿಸಿ ನನ್ನನ್ನು ಸ್ವಾಗತಿಸುವ ತೊಂದರೆ ತೆಗೆದುಕೊಳ್ಳಬೇಡಿ ಎಂದು ವಿನಂತಿಸಿದೆ” ಎಂದು ಶನಿವಾರ ಬೆಂಗಳೂರಿನ ಎಚ್ಎಎಲ್ ವಿಮಾನ ನಿಲ್ದಾಣದ ಹೊರಗೆ ಜನರನ್ನುದ್ದೇಶಿಸಿ ಮಾತನಾಡಿದ ವೇಳೆ ಸ್ಪಷ್ಟೀಕರಣ ನೀಡಿದರು.

“ವಿಜ್ಞಾನಿಗಳನ್ನು ಭೇಟಿ ಮಾಡಿದ ನಂತರ ನಾನು ಹೋಗುತ್ತೇನೆ ಏಕೆಂದರೆ ಅವರು ಬರಬಾರದು ಎಂದು ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ನಾನೇ ಹೇಳಿದ್ದೆ. ನಾನು ಬೆಂಗಳೂರಿಗೆ ಯಾವಾಗ ತಲುಪುತ್ತೇನೆ ಎಂದು ನನಗೆ ತಿಳಿದಿಲ್ಲದ ಕಾರಣ ಪ್ರೋಟೋಕಾಲ್ ಅನ್ನು ಅನುಸರಿಸದಂತೆ ನಾನು ಮನವಿ ಮಾಡಿದ್ದೆ” ಎಂದು ಸ್ವತಃ ಮೋದಿಯವರು ಹೇಳಿದ್ದಾರೆ.

ಆದರೆ, ಖುದ್ದು ಪ್ರಧಾನಿ ನರೇಂದ್ರ ಮೋದಿ ಈ ಹೇಳಿಕೆ ನೀಡಿದ ನಂತರ ಕೂಡ ಬಿಜೆಪಿಯ ಮಾಜಿ ಸಚಿವ ಆರ್.ಅಶೋಕ್ ಸೇರಿದಂತೆ ಇತರ ನಾಯಕರು, ಚಂದ್ರಯಾನ ಯಶಸ್ವಿ ಪ್ರಯೋಗ ನಡೆಸಿರುವ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ ವೇಳೆ ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ ಸೇರಿದಂತೆ ರಾಜ್ಯದ ಯಾರಾದರೂ ಪ್ರಭಾವಿಗಳು ಅವರನ್ನು ಸ್ವಾಗತಿಸಬೇಕು. ಆದರೆ ಈ ಬಾರಿ ಇಂತಹ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆಧಾರ ರಹಿತವಾಗಿ ಆರೋಪಿಸಿದ್ದಾರೆ.

ಪ್ರಧಾನಿ ಆಗಮಿಸಿದ ವೇಳೆ ರಾಜ್ಯ ಸರ್ಕಾರದ ಯಾವುದೇ ಪ್ರತಿನಿಧಿ ಅವರನ್ನು ಸ್ವಾಗತಿಸಿಲ್ಲ. ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿರುವ ನಾಯಕರು ಪ್ರಧಾನಿ ಅವರನ್ನು ಸ್ವಾಗತಿಸುವ ವಿಷಯದಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ.

ಈ ವಿವಾದದ ಕುರಿತು ಸ್ಪಷ್ಟೀಕರಣ ನೀಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಗಮನದ ವೇಳೆ ಅವರನ್ನು ಸ್ವಾಗತಿಸಲು ಅಥವಾ ಭೇಟಿ ಮಾಡಲು ಮುಖ್ಯಮಂತ್ರಿಯಾದಿಯಾಗಿ ಯಾರೂ ಬರಬಾರದು ಎಂದು ಪ್ರಧಾನಮಂತ್ರಿ ಕಚೇರಿಯಿಂದಲೇ ಅಧಿಕೃತವಾದ ಅಧಿಸೂಚನೆ ಇತ್ತು ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಬೇರೆ ರಾಜ್ಯದವರಂತಲ್ಲ. ಪ್ರಧಾನಮಂತ್ರಿ ವೈಯಕ್ತಿಕ ವಿಚಾರ ಅಲ್ಲ, ಅವರು ದೇಶದ ಸಾಂವಿಧಾನಿಕ ಹುದ್ದೆಯಲ್ಲಿರುವವರು. ಅವರಿಗೆ ಶಿಷ್ಟಾಚಾರದ ಪ್ರಕಾರ ಹೇಗೆ ಗೌರವಿಸಬೇಕೆಂಬುದು ನಮಗೆ ಬಿಜೆಪಿಯವರಿಗಿಂತ ಚೆನ್ನಾಗಿ ತಿಳಿದಿದೆ ಎಂದು ಹೇಳಿದ್ದಾರೆ.

ರಾಜಕೀಯ ಪ್ರಜ್ಞೆ, ಶಿಷ್ಟಾಚಾರ, ಸಮಯಪ್ರಜ್ಞೆಗಳ ಬಗ್ಗೆ ಬಿಜೆಪಿಯವರಿಂದ ನಾವು ಪಾಠ ಕಲಿಯಬೇಕಿಲ್ಲ. ಮಾಜಿ ಸಚಿವ ಆರ್.ಅಶೋಕ್ ಅವರ ಹೇಳಿಕೆಗಳು ಅವರ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತವೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರ ರಚನೆಯಾದ ಬಳಿಕ ಪ್ರಧಾನಮಂತ್ರಿಯವರು ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇಸ್ರೋ ವಿಜ್ಞಾನಿಗಳ ಸಾಧನೆ ಐತಿಹಾಸಿಕವಾಗಿದೆ. ಈ ಸಂದರ್ಭದಲ್ಲಿ ಪ್ರಧಾನಿ ಆಗಮನದ ವೇಳೆ ವಿಮಾನ ನಿಲ್ದಾಣದಲ್ಲಿ ಅವರನ್ನು ಬರಮಾಡಿಕೊಳ್ಳಲು ಮುಖ್ಯಮಂತ್ರಿಯವರು ಸಿದ್ಧವಾಗಿದ್ದರು. ಆದರೆ ಪ್ರಧಾನಮಂತ್ರಿಯವರ ಕಚೇರಿಯಿಂದ ಅನಧಿಕೃತವಾಗಿ ಸಂದೇಶ ರವಾನೆಯಾಗಿತ್ತು. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ರಾಜ್ಯಪಾಲರು ಸೇರಿದಂತೆ ಯಾರೂ ಕೂಡ ಪ್ರಧಾನಿಯವರನ್ನು ಬರಮಾಡಿಕೊಳ್ಳಲು ವಿಮಾನನಿಲ್ದಾಣಕ್ಕೆ ಬರುವುದು ಬೇಡ ಎಂದು ಸೂಚನೆ ನೀಡಲಾಗಿತ್ತು ಎಂದಿದ್ದಾರೆ.

ಈ ಬಗ್ಗೆ ಅಧಿಕೃತವಾದ ಲಿಖಿತ ಮಾಹಿತಿ ನೀಡುವಂತೆ ನಾವು ಮನವಿ ಮಾಡಿದ್ದೆವು. ಅವರು ರಾಜ್ಯಪಾಲರ ಮುಖಾಂತರ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತವಾಗಿಯೇ ಯಾರೂ ಬರುವುದು ಬೇಡ ಎಂಬ ಸೂಚನೆ ನೀಡಿ ಸಂದೇಶ ಕಳುಹಿಸಿದ್ದಾರೆ. ಈ ಕುರಿತ ಅಧಿಕೃತ ಮಾಹಿತಿ ತಮ್ಮ ಬಳಿ ಇದೆ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply