ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುವಂತಹ 350 ಸಾಧನಗಳು ರಾಜ್ಯದಲ್ಲೇ ತಯಾರಾಗುತ್ತಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದರು.
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
- ಅಂಬೇಡ್ಕರ್ ಸಂವಿಧಾನ ಸಮಿತಿಯಲ್ಲಿ ಇರದೇ ಇದ್ದರೆ ಸಂವಿಧಾನ ಸರ್ವವ್ಯಾಪಕವಾಗುತ್ತಿರಲಿಲ್ಲ: ಬೊಮ್ಮಾಯಿ
ನಗರದ ಹೊರವಲಯದ ವೈಟ್ ಫೀಲ್ಡಿನಲ್ಲಿ ಏರ್ಪಾಡಾಗಿರುವ ಅಖಿಲ ಭಾರತ ಲೇಸರ್ ಚಿಕಿತ್ಸೆ ಮತ್ತು ಸರ್ಜರಿ ಸಮಾವೇಶವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ನವೋದ್ಯಮ ಕ್ಷೇತ್ರದಲ್ಲಿ ವೈದ್ಯಕೀಯ ಮತ್ತು ಔಷಧ ತಯಾರಿಕೆ ವಲಯದ ನೂರಾರು ಕಂಪನಿಗಳು ಕರ್ನಾಟಕದಲ್ಲಿ ನೆಲೆಯೂರಿವೆ. ಚರ್ಮಶಾಸ್ತ್ರ ಮತ್ತು ಸೌಂದರ್ಯವರ್ಧಕ ವೈದ್ಯಕೀಯ ಚಿಕಿತ್ಸಾ ವಲಯದ ಹೂಡಿಕೆದಾರರಿಗೆ ಕ್ವಿನ್ ಸಿಟಿ ಯೋಜನೆ ಸೇರಿದಂತೆ ಹಲವೆಡೆ ಹೇರಳ ಅವಕಾಶಗಳಿವೆ. ಉದ್ಯಮಿಗಳು ನಮ್ಮಲ್ಲಿ ಹೂಡಿಕೆಗೆ ಮುಂದೆ ಬಂದರೆ ಅವರಿಗೆ ಸಂಪೂರ್ಣ ಸಹಕಾರ ಕೊಡಲಾಗುವುದು ಎಂದರು.
ಚರ್ಮಕ್ಕೆ ಸಂಬಂಧಿಸಿದ ಚಿಕಿತ್ಸೆಗಳಲ್ಲಿ ಲೇಸರ್ ಮೆಡಿಸಿನ್ ಮಹತ್ತ್ವದ ಪಾತ್ರ ವಹಿಸುತ್ತಿದೆ. ಮೆಡ್-ಟೆಕ್ ಕ್ಷೇತ್ರದಲ್ಲಿ ಕರ್ನಾಟಕ ಅತ್ಯುತ್ತಮ ಕಾರ್ಯಪರಿಸರ ಹೊಂದಿದ್ದು, ಕ್ಷಿಪ್ರ ಬೆಳವಣಿಗೆ ಕಾಣುತ್ತಿದೆ. ದೇಶದ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕ್ಷೇತ್ರಕ್ಕೆ ಅತ್ಯಗತ್ಯವಾಗಿರುವ ಸಾಧನಗಳ ಉತ್ಪಾದನೆಯಲ್ಲಿ ಕರ್ನಾಟಕದ ಪಾಲು ಶೇಕಡ 25ರಷ್ಟಿದೆ. ಇದರ ಜತೆಗೆ ದೇಶದ ಬಯೋಟೆಕ್ ಕಂಪನಿಗಳಲ್ಲಿ ಶೇಕಡ 60 ನಮ್ಮಲ್ಲೇ ಇದ್ದು, ದೇಶದ ಔಷಧ ರಫ್ತು ವಹಿವಾಟಿನಲ್ಲಿ ನಮ್ಮ ಪಾಲು ಶೇಕಡ 40ರಷ್ಟಿದೆ ಎಂದರು.
ಮೆಡಿಕಲ್ ಐಟಿ, ಪಿಸಿಆರ್ ಯಂತ್ರಗಳು, ಹೃದಯದ ಚಿಕಿತ್ಸೆಗೆ ಬೇಕಾಗುವ ಸ್ಟೆಂಟ್, ಇನ್ಸುಲಿನ್ ಪೆನ್ ಮುಂತಾದವುಗಳ ತಯಾರಿಕೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಮುಂಬರುವ ದಿನಗಳಲ್ಲಿ ವೈದ್ಯಕೀಯ ಸಾಧನಗಳು, ಡಿಜಿಟಲ್ ಆರೋಗ್ಯ, ರೋಗ ಪತ್ತೆ ಮುಂತಾದವು ಹೊಸ ದಾರಿ ತುಳಿಯಲಿವೆ. ಅಂತಹ ತಂತ್ರಜ್ಞಾನವು ರಾಜ್ಯದಲ್ಲಿರುವ ಕಂಪನಿಗಳಿಂದ ಅಭಿವೃದ್ಧಿಯಾಗುತ್ತಿದೆ. ಲೇಸರ್ ಚಿಕಿತ್ಸೆ ವಲಯದಲ್ಲಿರುವವರು ಇದನ್ನು ಗಮನಿಸಬೇಕು ಎಂದರು.
ದೇಶದ ಆರೋಗ್ಯ ಸೇವೆ ಮತ್ತು ಹೂಡಿಕೆ ಎರಡರಲ್ಲೂ ರಾಜ್ಯ ಅಗ್ರಸ್ಥಾನದಲ್ಲಿದೆ. ರಾಜ್ಯದಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜುಗಳ ಜಾಲವೇ ಇದ್ದು, ಇವುಗಳನ್ನು ನಾವು ಜನರ ಸಬಲೀಕರಣಕ್ಕೆ ಬಳಸಿಕೊಳ್ಳಬೇಕು. ಕೈಗೆಟುಕುವ ದರದಲ್ಲಿ ಮತ್ತು ಕ್ಷಿಪ್ರ ಗತಿಯಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆತರೆ ಮಾತ್ರ ವಿಶ್ವಾಸಾರ್ಹತೆ ಬೆಳೆಯುತ್ತದೆ. ಇವುಗಳ ಜತೆಗೆ ಸಂಶೋಧನೆ ಮತ್ತು ನಾವೀನ್ಯತೆ ಹಾಗೂ ಅವುಗಳ ವಾಣಿಜ್ಯ ಬಳಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಡಾ.ಅರುಣ್ ಇನಾಂದಾರ್, ಡಾ.ಬಿ.ಎಸ್.ಚಂದ್ರಶೇಖರ್, ಸೊಲ್ಲಾಪುರದ ಸ್ಬಪ್ನಿಲ್ ಶಾ, ಹೈದರಾಬಾದ್ ಸಂಜೀವ್ ಔರಂಗಾಬಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.




