ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರ ಸುಳ್ಳನ್ನು ಸೋಲಿಸಿ: ಸಿದ್ದರಾಮಯ್ಯ

2 years ago

ಬೆಂಗಳೂರು: ಬಿಜೆಪಿಯವರಿಗೆ ಜನಾದೇಶದ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದು ಹಣ ತಿನ್ನುವ ರುಚಿ ಹತ್ತಿದೆ. ಹೀಗಾಗಿ ಮತ್ತೆ ಮತ್ತೆ ಸರ್ಕಾರ ಬೀಳಿಸುವ ಪ್ರಯತ್ನಕ್ಕೆ ಕೈ ಹಾಕುತ್ತಲೇ ಇರುತ್ತಾರೆ ಎಂದು‌ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

ಅಲ್ಲದೆ ಬಿಜೆಪಿ ದುರಾಡಳಿತದಿಂದ ಹಣಕಾಸು ವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ದೂರಿದರು.

ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಆಡಳಿತದಲ್ಲಿದ್ದ ಬಿಜೆಪಿಯವರು ಚೆನ್ನಾಗಿ ತಿಂದು, ಸಾವಿರಾರು ಕೋಟಿ ಕೆಲಸ ಶುರು ಮಾಡಿಸಿ ಸುಮಾರು 40 ಸಾವಿರ ಕೋಟಿಗೂ ಹೆಚ್ಚು ಬಿಲ್ ಕೊಡದೆ, ಬಿಲ್ ಬಾಕಿ ಉಳಿಸಿ ಮನೆಗೆ ಹೋಗಿದ್ದಾರೆ. ಹೀಗೆ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿಟ್ಟಿದ್ದಾರೆ‌ ಎಂದು ಆಪಾದಿಸಿದರು.

ನೀರಾವರಿ ಇಲಾಖೆಯೊಂದರಲ್ಲೇ 13000  ಕೋಟಿಗೂ ಅಧಿಕ ಬಿಲ್ ಬಾಕಿ ಉಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲಿ 9000 ಕೋಟಿ ಬಿಲ್ ಬಾಕಿ ಉಳಿಸಿದ್ದಾರೆ,  ಸಣ್ಣನೀರಾವರಿ ಇಲಾಖೆಯಲ್ಲಿ  2000 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿದ್ದಾರೆ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 6000 ಕೋಟಿ ರೂಪಾಯಿ ಬಿಲ್ ಬಾಕಿ ಉಳಿಸಿದ್ದಾರೆ, ಬೆಂಗಳೂರು ನಗರದಲ್ಲೇ 5000 ಕೋಟಿ ಬಿಲ್ ಬಾಕಿ ಉಳಿಸಿದ್ದಾರೆ. ಹೀಗೆ ರಾಜ್ಯವನ್ನು ಹಾಳುಮಾಡಿ,  ರಾಜ್ಯದ ಆರ್ಥಿಕತೆಯನ್ನು ಎಕ್ಕುಡಿಸಿ ಹೋಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಷ್ಟಾದರೂ ನಾವು 59 ಸಾವಿರ ಕೋಟಿ ವಾರ್ಷಿಕ ವೆಚ್ಚ ಮಾಡಿ ಐದಕ್ಕೆ ಐದೂ ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದು ದೇಶದಲ್ಲೇ ಮೊದಲು. ಪ್ರತಿಯೊಬ್ಬ ಕಾರ್ಯಕರ್ತನೂ ಎದೆ ಎತ್ತಿ, ತಲೆ ಎತ್ತಿ ಹೇಳಿ ಎಂದು ಕರೆ ನೀಡಿದರು.

ರಾಜ್ಯದ 4 ಕೋಟಿ 30 ಲಕ್ಷ ಕನ್ನಡಿಗರಿಗೆ ಸರ್ಕಾರದ ಗ್ಯಾರಂಟಿಯ ಫಲ ಪ್ರತೀ ದಿನ-ಪ್ರತೀ ತಿಂಗಳು ತಲುಪುತ್ತಿದೆ. ಈ ಫಲಾನುಭವಿಗಳಲ್ಲಿ BJPಯವರೇ ಹೆಚ್ಚಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ಅಣಕಿಸಿ ಈಗ ನಮ್ಮ ಗ್ಯಾರಂಟಿಗಳನ್ನೇ ಕಾಪಿ ಮಾಡಿ ಅದಕ್ಕೆ ಮೋದಿ ಗ್ಯಾರಂಟಿ ಎನ್ನುತ್ತಿದ್ದಾರೆ. ಬಿಜೆಪಿಯವರು ಅಷ್ಟು ನಿರ್ಲಜ್ಜರಾಗಿದ್ದಾರೆ ಎಂದು ಕಿಡಿಕಾರಿದರು.

ದಯವಿಟ್ಟು ನಿಮ್ಮ ಹೃದಯದ ಮಾತು ಕೇಳಿ. ಸರ್ಕಾರದ ಕೆಲಸಗಳನ್ನು ಪ್ರತಿ ಮನೆಗೆ ತಲುಪಿಸಿ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯವರ ಸುಳ್ಳನ್ನು ಸೋಲಿಸಿ ನಮ್ಮ ಸಾಧನೆಗಳನ್ನು ಎತ್ತಿ ಹಿಡಿಯುವ ಮೂಲಕ 28 ಲೋಕಸಭಾ ಸ್ಥಾನಗಳಲ್ಲಿ ಗೆಲ್ಲಿಸಿ ಎಂದು ಕಾರ್ಯಕರ್ತರಿಗೆ ಅವರು ಕೈ ಮುಗಿದು ಕರೆ ನೀಡಿದರು.

Leave a Reply