ಭಾರತದ ಪ್ರಗತಿಗೆ ಸಂಕಲ್ಪ ಮಾಡಿಕೊಳ್ಳುವ ದಿನ: ಬಸವರಾಜ ಬೊಮ್ಮಾಯಿ

3 years ago

ಬೆಂಗಳೂರು: ಜಗತ್ತಿನಲ್ಲಿ ಭಾರತದ ಭವ್ಯ ಪರಂಪರೆ ಸದಾ ಕಾಲ ಪ್ರತ್ಯೇಕವಾಗಿ, ವಿಭಿನ್ನವಾಗಿದೆ. ಆಧುನಿಕ, ಪ್ರಗತಿಪರವಾದ ಭಾರತ. ಮಾನವೀಯತೆಯ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಣ್ ಎಂಬ ಧ್ಯೇಯ ನುಡಿಯಿಂದ ಮುನ್ನಡೆಯುತ್ತಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ನ್ಯಾಷನಲ್ ಮಿಲಿಟರಿ ವಾರ್ ಮೆಮೋರಿಯಲ್ ಬಳಿ ಹುತಾತ್ಮ ಯೋಧರಿಗೆ ಗೌರವ ಸಮರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಗಣರಾಜ್ಯೋತ್ಸವ ದಿನದಂದು ನಮ್ಮನ್ನು ಸಂವಿಧಾನಕ್ಕೆ ಸಮರ್ಪಣೆ ಮಾಡಿಕೊಂಡು ಸಂವಿಧಾನಬದ್ಧವಾಗಿ ನಡೆದು ಭಾರತದ ಪ್ರಗತಿಗೆ ಸಂಕಲ್ಪ ಮಾಡಿಕೊಳ್ಳುವ ದಿನ. ನಾವೆಲ್ಲರೂ ಆ ಸಂಕಲ್ಪ ಮಾಡೋಣ ಎಂದರು.

ಈ ಬಾರಿ ರಾಜ್ಯದ ಹಿರಿಯ ರಾಜಕಾರಣಿ ಎಸ್.ಎಂ.ಕೃಷ್ಣ ಅವರಿಗೆ ಪದ್ಮವಿಭೂಷಣ, ಸುಧಾಮೂರ್ತಿ, ಎಸ್.ಎಲ್ ಭೈರಪ್ಪ ಸೇರಿದಂತೆ ಒಟ್ಟು ಎಂಟು ಜನರಿಗೆ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ. ಕಳೆದ ಹಲವಾರು ವರ್ಷಗಳಿಂದ ಪ್ರಧಾನಮಂತ್ರಿಗಳು, ಅವರವರ ವೃತ್ತಿಯಲ್ಲಿ ಶ್ರೇಷ್ಠತೆ ಕಂಡುಕೊಂಡವರು, ದೇಶಕ್ಕೆ ಕೊಡುಗೆ ನೀಡಿದವರು, ಯಾವ ಅಪೇಕ್ಷೆಯೂ ಇಲ್ಲದೆ ಎಲೆಮರೆಕಾಯಿಯಾಗಿ ಕೆಲಸ ಮಾಡಿದವರನ್ನು ಗುರುತಿಸಿ ಪದ್ಮ ಪ್ರಶಸ್ತಿ ನೀಡುವ ವಿನೂತನ ಪದ್ಧತಿ ಅಳವಡಿಸಿದ್ದಾರೆ. ಇದು ಅವರ ಕಾರ್ಯವೈಖರಿ. ಗುಣಾತ್ಮಕ ಕಾರ್ಯಕ್ಕೆ ಬೆಲೆ ನೀಡಿದ್ದಾರೆ ಎಂದರು.

ಕರ್ನಾಟಕಕ್ಕೆ ಎಂಟು ಪ್ರಶಸ್ತಿ ದೊರೆತಿರುವುದು ನಮ್ಮ ಹೆಮ್ಮೆ. ಕರ್ನಾಟಕದ ವಿಫುಲ ಮಾನವ ಪ್ರತಿಭೆಯನ್ನು ತೋರಿದಂತಾಗಿದೆ. ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆ ಸಲ್ಲಿಸಬಯಸುತ್ತೇನೆ. ಅವರಿಂದ ಇನ್ನಷ್ಟು ಜನರಿಗೆ ಪ್ರೇರಣೆ ದೊರೆಯುವ ಆಶಾಭಾವನೆ ಇದೆ ಎಂದರು.

ಮುಂದಿನ 25 ವರ್ಷಗಳ ಅಮೃತ ಕಾಲ ನಮ್ಮ ದೇಶವನ್ನು ಪ್ರಪಂಚದ ಕಿರೀಟ ಪ್ರಾಯವಾಗಿರುವ ಕರ್ತವ್ಯ ಕಾಲವಾಗಿದೆ. ಸಾರ್ವಜನಿಕ ಜೀವನದಲ್ಲಿ ಸಕ್ರಿಯ ಪಾತ್ರ ನಿಭಾಯಿಸುವ ಜೊತೆಗೆ ರಾಷ್ಟ್ರದ ಪ್ರಗತಿಗೆ ಎಲ್ಲರೂ ತಮ್ಮ ಕೊಡುಗೆ ನೀಡಲು ಪ್ರೇರೇಪಣೆ ನೀಡುವ ವಿಶ್ವಾಸ ವ್ಯಕ್ತಪಡಿಸಿದರು.

ನಾವೆಲ್ಲರೂ ಸೇರಿ ಕರ್ನಾಟಕ ರಾಜ್ಯವನ್ನು ಸ್ವಾಸ್ಥ್ಯ, ಸಮೃದ್ಧವಾಗಿಸೋಣ ಮತ್ತು ದೇಶದ ಏಕತೆ ಮತ್ತು ಅಖಂಡತೆಯನ್ನು ಬಲಿಷ್ಠಗೊಳಿಸುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.

Leave a Reply