ಮಂಗಳೂರು: ಅಲ್ಪಸಂಖ್ಯಾತರ ಮೇಲಿನ ದಾಳಿ ಖಂಡಿಸಿ, ಸಂವಿಧಾನಬದ್ಧ ರಕ್ಷಣೆ ನೀಡಲು ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಒತ್ತಾಯಿಸಿ CPIM ಕೇಂದ್ರ ಸಮಿತಿ ಕರೆಯ ಮೇರೆಗೆ ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.
ನೂರಾರು ಸಂಖ್ಯೆಯಲ್ಲಿ ಸೇರಿದ್ದ CPIM ಕಾರ್ಯಕರ್ತರು, ಬಿಜೆಪಿ ಮತ್ತು ಸಂಘಪರಿವಾರ ಕೋಮುದ್ವೇಷ ಹಬ್ಬಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ, ಸಂಘಪರಿವಾರದ ವಿರುದ್ದ ಆಕ್ರೋಶಭರಿತರಾಗಿ ಘೋಷಣೆಗಳನ್ನು ಮೊಳಗಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ CPIM ದ.ಕ. ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ, ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲೇ ಕೋಮುದ್ವೇಷವನ್ನು ಹಬ್ಬಿಸಿ ತನ್ನ ನೀಚ ರಾಜಕೀಯವನ್ನು ಪ್ರದರ್ಶಿಸಿದ RSSಗೆ ದೇಶದ ಜನತೆ ಅಂದೇ ಸರಿಯಾದ ಪಾಠವನ್ನು ಕಲಿಸಿದ್ದರೂ ದೇಶ ವಿಭಜನೆಗೊಳ್ಳುವಲ್ಲಿ RSSನ ಕುತಂತ್ರವೂ ಅಡಗಿದೆ ಎಂದರು.
ಕಳೆದ 3 ದಶಕಗಳಿಂದ ಸಂಘಪರಿವಾರ ವ್ಯವಸ್ಥಿತ ಸಂಘಟನಾ ಜಾಲದಿಂದಾಗಿ ದೇಶದ ಜಾತ್ಯತೀತ ತತ್ವಕ್ಕೆ ತಿಲಾಂಜಲಿಯನ್ನಿಡಲು ಹೊರಟಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲುಗೊಳಿಸಿ ಸರ್ವಾಧಿಕಾರಿ ಫ್ಯಾಸಿಸ್ಟ್ ನಡೆಯತ್ತ ದೇಶ ಹೋಗುತ್ತಿರುವುದು ತೀರಾ ಗಂಭೀರ ಅಂಶವಾಗಿದೆ ಎಂದರು.
ದೇಶದ ಪ್ರತಿಯೊಂದು ಸಮಸ್ಯೆಗಳಿಗೆ ಅಲ್ಪಸಂಖ್ಯಾತರೇ ಕಾರಣವೆಂಬ ಸುಳ್ಳನ್ನು ಸಾವಿರ ಸಾವಿರ ಬಾರಿ ಹೇಳಿ, ಕೋಮುಭಾವನೆ ಕೆರಳಿಸಿ, ಅಲ್ಪಸಂಖ್ಯಾತರ ಮೇಲೆ ಅವ್ಯಾಹತವಾಗಿ ದಾಳಿ, ದಬ್ಬಾಳಿಕೆ, ಹತ್ಯೆಗಳನ್ನು ನಡೆಸಲಾಗುತ್ತಿದೆ. ಇಂತಹ ದುಷ್ಕೃತ್ಯಗಳನ್ನು ತಡೆಯಲು ದೇಶದ ಜನತೆ ಒಂದಾಗಬೇಕಾಗಿದೆ ಎಂದು ಕರೆ ನೀಡಿದರು.
CPIM ದ.ಕ.ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ ಮಾತಾಡಿ, ಮತಾಂತರದ ನೆಪ ಒಡ್ಡಿ, ಕೈಸ್ತರ ಧಾರ್ಮಿಕ ಅರಾಧನಾ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ, ಈ ದಾಳಿಗಳಲ್ಲಿ ಹಿಂಸೆಗೆ ಒಳಗಾದ ಬಹುತೇಕ ಜನ, ಆದಿವಾಸಿಗಳು ಮತ್ತು ದಲಿತರಾಗಿದ್ದಾರೆ ಎಂದರು.
ಗೋರಕ್ಷಣೆ, ಲವ್ ಜಿಹಾದ್ ಗಳೆಂಬ ದುಷ್ಕೃತ್ಯದ ಹೆಸರಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಮೇಲಿನ ಹಿಂಸಾಚಾರ ಪ್ರಕರಣಗಳು ಮುಂದುವರಿಯುತ್ತಿವೆ. ಮಸೀದಿಗಳನ್ನು ಹಾಳುಗೆಡವುತ್ತಿದ್ದಾರೆ, ಬೀದಿ ಬದಿ ವ್ಯಾಪಾರಿಗಳನ್ನು ಬೆದರಿಸಲಾಗುತ್ತಿದೆ, ಶಿಕ್ಷಣ ಸಂಸ್ಥೆಗಳಲ್ಲಿ ಸಹ ಹೊಸ, ಹೊಸ ಸಮಸ್ಯೆಗಳನ್ನು ಬೇಕೆಂದೇ ಸೃಷ್ಟಿಸಲಾಗುತ್ತಿದೆ ಎಂದರು.
ಅಲ್ಲದೇ ಸೌರ್ಹಾರ್ದತೆಯ ಕೇಂದ್ರಗಳಾಗಬೇಕಾದ ಇವುಗಳನ್ನು ಕೋಮು ವಿಭಜನೆ ತರುವ, ಪರಸ್ಪರ ನಂಬಿಕೆ, ವಿಶ್ವಾಸಗಳು ಇಲ್ಲದಂತೆ ಪರಿವರ್ತಿಸಿ ನಿರ್ಮಾಣಮಾಡುವ ಕೇಂದ್ರಗಳನ್ನಾಗಿಸುತ್ತಿವೆ. ಇಂತಹ ಪ್ರಯತ್ನಗಳನ್ನು ಸರ್ಕಾರ ನಿರ್ದಾಕ್ಷಿಣ್ಯವಾಗಿ ತಡೆಯಬೇಕಾಗಿದೆ ಎಂದರು.
CPIM ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತಾಡಿ, ದ.ಕ.ಜಿಲ್ಲೆಯಲ್ಲಿ ಸಂಘ ಪರಿವಾರವು ಕಳೆದ ಕೆಲವು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಕೊಮು ರಾಜಕೀಯವನ್ನು ಹಾಗೂ ಅಲ್ಪಸಂಖ್ಯಾತರ ಮೇಲಿನ ದಾಳಿಯನ್ನು ಖಂಡಿಸಿದರು. ಕೋಮು ರಾಜಕಾರಣಕ್ಕೆ ಎದುರಾಗಿ ರಾಜಕೀಯವನ್ನು ಬೆಳೆಸಬೇಕಾಗಿದೆ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ CPIM ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್, ಅಲ್ಪಸಂಖ್ಯಾತರ ಮೇಲಿನ ದಾಳಿಗೆ ಕುಮ್ಮಕ್ಕು ನೀಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೋಮು ರಾಜಕಾರಣವನ್ನು ಪ್ರಸ್ತಾಪಿಸಿ, ಅಲ್ಪಸಂಖ್ಯಾತರ ಸಂವಿಧಾನಬದ್ದ ಹಕ್ಕುಗಳ ರಕ್ಷಣೆಗಾಗಿ ಕಟಿಬದ್ದರಾಗಬೇಕೆಂದು ಕರೆನೀಡಿದರು.
ಪ್ರತಿಭಟನೆಯಲ್ಲಿ CPIM ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಸಮಿತಿಗಳ ಮುಖಂಡರಾದ ಬಶೀರ್ ಅಹಮ್ಮದ್, ದಯಾನಂದ ಶೆಟ್ಟಿ, ಬಿ.ಕೆ.ಇಮ್ತಿಯಾಜ್, ನವೀನ್ ಕೊಂಚಾಡಿ, ಅಶೋಕ್ ಶ್ರೀಯಾನ್, ಕೃಷ್ಣ ತಣ್ಣೀರುಬಾವಿ, ಪ್ರಮೀಳಾ ಶಕ್ತಿನಗರ, ಶ್ರೀನಾಥ್ ಕಾಟಿಪಳ್ಳ, ದಿನೇಶ್ ಶೆಟ್ಟಿ, ಭಾರತಿ ಬೋಳಾರ, ಮುಸ್ಥಾಫ, ಇಕ್ಬಾಲ್, ಸಾಮಾಜಿಕ ಹೋರಾಟಗಾರರಾದ ಜೆರಾಲ್ಡ್ ಟವರ್ ಮುಂತಾದವರು ಭಾಗವಹಿಸಿದ್ದರು.




