ಚಿತ್ರದುರ್ಗ: ನಿಧಿ ಸಿಗಲಿದ್ದು ಒಂದು ವೇಳೆ ಅದನ್ನು ನೀವು ಪಡೆಯದಿದ್ದರೆ ಮರಣ ಸಂಭವಿಸುತ್ತದೆ ಎಂದು ಬೆದರಿಸಿ, ಪೂಜೆ- ಪುನಸ್ಕಾರದ ಹೆಸರದಲ್ಲಿ ಲಕ್ಷಾಂತರ ರೂ.ಗಳನ್ನು ವಂಚಿಸಿದ್ದ ಖತರ್ನಾಕ್ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮುದ್ದುರಂಗಪ್ಪ ಹವಾಲ್ದಾರ್(52) ಮಧುಮತಿ(38) ಬಂಧಿತ ದಂಪತಿಯಾಗಿದ್ದು, ಅವರಿಂದ 2.98 ಲಕ್ಷ ರೂ. ಮೌಲ್ಯದ ನಗದು ಹಾಗೂ ಕಾರೊಂದನ್ನು ವಶಪಡಿಸಿಕೊಂಡಿದ್ದಾರೆ.
ಚಳ್ಳಕೆರೆ ಅಶ್ವಿನಿ ಹೊಟೇಲ್ ಮಾಲೀಕ ಶಂಕರಪ್ಪ ಅವರ ಹೊಟೇಲ್‌ಗೆ ದಂಪತಿ ಮೇ 23ರಂದು ಊಟಕ್ಕೆಂದು ಹೋಗಿದ್ದ ವೇಳೆ ಮಧುಮತಿ ದೇವರು ಮೈ ಮೇಲೆ ಬಂದಂತೆ ನಟಿಸಿ, ನಿಮಗೆ ನಿಧಿ ಸಿಗುತ್ತದೆ, ನೀವು ನಿಧಿ ಪಡೆಯದಿದ್ದರೆ ನಿಮಗೆ ಅಥವಾ ನಿಮ್ಮ ಮಗನ ಮರಣವಾಗುತ್ತದೆ ಎಂದು ಬೆದರಿಸಿ, ಪರಿಹಾರವಾಗಿ 21 ದಿನಗಳ ಕಾಲ ಪೂಜೆ ಮಾಡಬೇಕೆಂದು ಹೇಳಿ 1.80 ಲಕ್ಷ ರೂ.ಪಡೆದಿದ್ದರು.
ಬಳಿಕ ವಜ್ರದ ಹರಳುಗಳು ಸಿಕ್ಕಿದ್ದು, ಅವನ್ನು ಮಾರಾಟ ಮಾರಾಟ ಮಾಡಬೇಕೆಂದು ಹಾಗೂ ಹರಳು ಜೋಡಿಸಲು ಬಂಗಾರ ಕೊಡಿ ಎಂದು ಹೇಳಿ 15 ಗ್ರಾಂ.ಬಂಗಾರ, 10 ತೊಲ ಬೆಳ್ಳಿ ಮತ್ತು ಮೊಬೈಲ್‌ನೊಂದಿಗೆ ಮತ್ತೆ ಹಂತಹಂತವಾಗಿ 1.43ಲಕ್ಷ ರೂ.ಪಡೆದು ವಂಚಿಸಿರುತ್ತಾರೆ ಎಂದು ಶಂಕರಪ್ಪ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ್ದ ಚಳ್ಳಕೆರೆ ಪೊಲೀಸರು ಚಿತ್ರದುರ್ಗ ತಾಲೂಕು ಮದಕರಿಪುರ ನಿವಾಸಿಗಳಾದ ದಂಪತಿಯನ್ನು ಬಂಧಿಸಿ, ಅವರಿಂದ 10 ಗ್ರಾಂ. ಬಂಗಾರದ ಸರ, 71 ಗ್ರಾಂ ಬೆಳ್ಳಿ ಆಭರಣ, 1 ಲಕ್ಷ ರೂ. ನಗದು ಹಾಗೂ ಕಾರೊಂದನ್ನು ವಶಕ್ಕೆ ಪಡೆದಿದ್ದಾರೆ.
ಸಾರ್ವಜನಿಕರು ಈ ರೀತಿ ವಂಚನೆಗೆ ಒಳಗಾಗದೇ ಜಾಗೃತರಾಗಿರಲು ಹಾಗೂ ವಂಚನೆಗೊಳಗಾಗಿದ್ದರೆ ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.




