ಕಾರ್ಮಿಕ ವರ್ಗದ ಮೇಲೆ ನಿರಂತರ ದಾಳಿ
ಮಂಗಳೂರು: ದೇಶದ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅಂದಿನ ಕಾರ್ಮಿಕ ವರ್ಗ ಇಂದು ಮತ್ತೆ ದೇಶವನ್ನು ಉಳಿಸಲು ಸನ್ನದ್ದವಾಗಬೇಕು ಎಂದು CITU ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಾರ್ಮಿಕರಿಗೆ ಕರೆ ನೀಡಿದರು.
- ಬೆಂಗಳೂರಿನಲ್ಲಿ ಕನ್ನಡ ಗಜಲ್ ಯಾತ್ರೆ 100ರ ಸಂಭ್ರಮ
- ನಕಲಿ ದೇಶಪ್ರೇಮಿಗಳ ಆಟ ಇನ್ನೂ ರಾಜ್ಯದಲ್ಲಿ ನಡೆಯಲ್ಲ: ಬಿ ಕೆ ಹರಿಪ್ರಸಾದ್
- ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರು ಪರ್ಸೆಂಟ್ ಗ್ಯಾರೆಂಟಿ: ಆರ್ ಅಶೋಕ್
- ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಸಚಿವ ಸ್ಥಾನ ನೀಡಿ
- ರಾಜಕೀಯ ಸಂತ ಶಾಂತವೇರಿ ಗೋಪಾಲಗೌಡ ಕೃತಿ ಲೋಕಾರ್ಪಣೆ
ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಉಳ್ಳಾಲ ಜಂಕ್ಷನ್ ನಲ್ಲಿ ಜರುಗಿದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಈ ಮಾತುಗಳನ್ನು ಹೇಳಿದರು. ಪ್ರಾರಂಭದಲ್ಲಿ ಉಳ್ಳಾಲ ಮಾಸ್ತಿಕಟ್ಟೆಯಿಂದ ಕಾರ್ಮಿಕರ ಆಕರ್ಷಕ ಮೆರವಣಿಗೆಯು ಜರುಗಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳ ಕಾಲ ದೇಶವನ್ನಾಳಿದ ನರೇಂದ್ರ ಮೋದಿ ಸರಕಾರ ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಿ ಸಂಹಿತೆಗಳನ್ನಾಗಿ ರೂಪಿಸುವ ಮೂಲಕ ಕಾರ್ಮಿಕರನ್ನು ಮತ್ತೆ ಗುಲಾಮಗಿರಿಯತ್ತ ತಳ್ಳುವ ಹುನ್ನಾರ ನಡೆಸುತ್ತಿದೆ ಎಂದರು.

ಮತ್ತೊಂದೆಡೆ ದೇಶದ ಐಕ್ಯತೆಯನ್ನು ಮುರಿದು ಜಾತಿ ಧರ್ಮದ ಹೆಸರಿನಲ್ಲಿ ಕಾರ್ಮಿಕ ವರ್ಗವನ್ನು ಒಡೆಯುವ ಪಿತೂರಿ ನಡೆಸುತ್ತಿದೆ.ದೇಶದ ಸ್ವಾತಂತ್ರ್ಯ ಸಮಗ್ರತೆ ಸಾರ್ವಭೌಮತ್ವಕ್ಕೆ ಅಪಾಯ ತಂದೊಡ್ಡುವ ಕಾರ್ಪೊರೇಟ್ ಕೋಮುವಾದಿಗಳ ಅಕ್ರಮ ಕೂಟದಿಂದ ದೇಶವನ್ನು ಮುಕ್ತಗೊಳಿಸಬೇಕಾಗಿದೆ ಎಂದು ಕರೆ ನೀಡಿದರು.

CITU ಜಿಲ್ಲಾ ಉಪಾಧ್ಯಕ್ಷ ಸುಕುಮಾರ್ ತೊಕ್ಕೋಟುರವರು ಮಾತನಾಡಿ, ಜಗತ್ತಿನ ದುಡಿಯುವ ವರ್ಗ ಸದಾ ಒಂದಾಗಿ ಇರಬೇಕೆನ್ನುವ ಈ ಮೇ ದಿನಾಚರಣೆಯ ಸಂದರ್ಭದಲ್ಲಿ ಪ್ಯಾಲೆಸ್ತೀನ್ ನ ಜನತೆ ತಮ್ಮ ತಾಯ್ನಾಡಿಗಾಗಿ ಜೀವದ ಹಂಗು ತೊರೆದು ಹೋರಾಡುತ್ತಿದ್ದು, ಜಗತ್ತಿನ ಕಾರ್ಮಿಕ ವರ್ಗ ಸಂಪೂರ್ಣ ಬೆಂಬಲ ಘೋಷಿಸಿದ್ದರೂ, ಅಮೇರಿಕಾ ಮಾತ್ರ ಇಸ್ರೇಲ್ ಗೆ ಬೆಂಗಾವಲಾಗಿ ನಿಂತು ಸಾವಿರಾರು ಮುಗ್ಧ ಮಕ್ಕಳು ಮಹಿಳೆಯರ ಮಾರಣಹೋಮವನ್ನೇ ನಡೆಸಿದೆ ಎಂದರು.
ಮಾತ್ರವಲ್ಲದೆ ಜಗತ್ತಿನೆಲ್ಲೆಡೆ ಯುದ್ದದ ಕಾರ್ಮೋಡ ಕವಿಯುವಂತೆ ಯುದ್ದಪಿಪಾಸು ರಾಷ್ಟ್ರ ಅಮೇರಿಕಾ ಹುನ್ನಾರ ನಡೆಸುತ್ತಿದೆ. ಇಂತಹ ಸಾಮ್ಯಾಜ್ಯಶಾಹಿ ಶಕ್ತಿಗಳ ಹಾಗೂ ಬಂಡವಾಳಶಾಹಿ ವರ್ಗದ ಜೀವ ವಿರೋಧಿ ನಿಲುವುಗಳ ವಿರುದ್ದ ದುಡಿಯುವ ಜನತೆ ಒಂದಾಗಿ ಪ್ರಬಲ ಪ್ರತಿರೋಧ ಒಡ್ಡಬೇಕಾಗಿದೆ ಎಂದರು.
CITU ಜಿಲ್ಲಾ ನಾಯಕ ಜಯಂತ ನಾಯಕ್ ಮಾತನಾಡಿ, ಮೇ ದಿನದ ಮಹತ್ವವನ್ನು ವಿವರಿಸುತ್ತಾ, 139 ವರ್ಷಗಳ ಹಿಂದೆ ಸಮರಶೀಲ ಹೋರಾಟಗಳ ಮೂಲಕ ಪಡೆದಂತಹ 8 ಗಂಟೆಗಳ ದುಡಿಮೆಯ ಹಕ್ಕನ್ನು ಮತ್ತೆ ಆಳುವ ವರ್ಗಗಳು ತಮ್ಮ ಕೈವಶ ಮಾಡಲು ಹುನ್ನಾರವನ್ನು ನಡೆಸುತ್ತಿವೆ ಎಂದರು.
ರೈತ ಸಂಘಟನೆಯ ಮುಖಂಡ ಕೃಷ್ಣಪ್ಪ ಸಾಲಿಯಾನ್ ಮೇ ದಿನಾಚರಣೆಗೆ ಶುಭ ಕೋರಿ ಮಾತನಾಡುತ್ತಾ, ದೇಶದಲ್ಲಿ ರೈತ ಕಾರ್ಮಿಕರ ಸಖ್ಯತೆ ಇನ್ನಷ್ಟು ಬಲಗೊಳ್ಳಬೇಕೆಂದು ಆಶಯ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು CITU ಉಳ್ಳಾಲ ತಾಲೂಕು ಅಧ್ಯಕ್ಷರಾದ ಸುಂದರ ಕುಂಪಲ ವಹಿಸಿದ್ದರು. ವೇದಿಕೆಯಲ್ಲಿ CITU ಜಿಲ್ಲಾ ನಾಯಕರಾದ ಪದ್ಮಾವತಿ ಶೆಟ್ಟಿ, ಜನಾರ್ದನ ಕುತ್ತಾರ್, ರೋಹಿದಾಸ್ ಭಟ್ನಾಗರ, ವಿಲಾಸಿನಿ ತೊಕ್ಕೋಟು, ರತ್ನಮಾಲಾ, ಚಂದ್ರಹಾಸ ಪಿಲಾರ್ ಮುಂತಾದವರು ಇದ್ದರು.




